

ಸಿದ್ದಾಪುರ: ನಾವು ಕನಸಿನ ಹಿಂದೆ ಬೀಳಬೇಕು ಛಲದೊಂದಿಗೆ ಕಲಿತು ಅದನ್ನು ಸಾಧಿಸುವ ಗುರಿ ಹೊಂದಿರಬೇಕು ಎಂದು ಖ್ಯಾತ ಉದ್ಯಮಿ ಉಪೇಂದ್ರ ಪೈ ಹೇಳಿದರು.
ಅವರು ಗುರುವಾರ ಪಟ್ಟಣದಲ್ಲಿ ಉಪೇಂದ್ರ ಫೈ ಸೇವಾ ಟ್ರಸ್ಟ್ ಹಾಗೂ ಇನ್ಸ್ಪೈರ್ ತರಬೇತಿ ಸಂಸ್ಥೆ ಸಹಯೋಗದಲ್ಲಿ ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗಾಗಿ ಆರಂಭಿಸಿರುವ ಉಚಿತ ತರಬೇತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು.
ಸಾವಿರಾರು ಪೆಟ್ಟುತಿಂದ ಕಲ್ಲು ಶಿಲ್ಪವಾಗಿ ಮಾರ್ಪಡಾಗುತ್ತದೆ. ಹಾಗೇನೆ ವಿದ್ಯಾರ್ಥಿಗಳು ಕಷ್ಟಪಟ್ಟು ಕಲಿಯುವ ಸಾಧಿಸುವ ಛಲವನ್ನು ಹೊಂದಿದ್ದರೆ ಮುಂದಿನ ದಿನಗಳಲ್ಲಿ ಸುಖದ ಜೀವನ ಸಿಗುತ್ತದೆ. ನೀವು ಗೆದ್ದಾಗ ಮಾತ್ರ ನಮ್ಮ ಪ್ರಯತ್ನಕ್ಕೆ ಫಲ ಸಿಗುತ್ತದೆ. ಮುಂದಿನ ದಿನಗಳಲ್ಲಿ ಐಎಎಸ್ ಕೆಎಎಸ್ ಕೋಚಿಂಗ್ ಸೆಂಟರ್ ಅನ್ನು ಪ್ರಾರಂಭಿಸಬೇಕೆಂಬ ಗುರಿಯನ್ನು ಹೊಂದಿದ್ದೇನೆ ಎಂದರು.
ಇನ್ಸ್ಪೈರ್ ಸಂಸ್ಥೆಯ ನಿರ್ದೇಶಕ ಗಣೇಶ ನಾಯ್ಕ ಪ್ರಸ್ತಾವಿಕವಾಗಿ ಮಾತನಾಡಿ ಪ್ರತಿಯೊಬ್ಬ ವಿದ್ಯಾರ್ಥಿಗಳಿಗೆ ತಮ್ಮದೆ ಆದ ಕನಸು ಇರುತ್ತದೆ. ಅದು ಸಾಕಾರಗೊಳ್ಳಬೇಕು. ವಿದ್ಯಾರ್ಥಿಗಳಿಗೆ ಗುರಿ ಇಲ್ಲಾ. ಮಾರ್ಗದರ್ಶನದ ಕೊರತೆ ಇದೆ. ನಾವು ಮೊದಲ ಹೆಜ್ಜೆಯಲ್ಲಿಯೇ ಎಡುವುತಿದ್ದೇವೆ. 8 ರಿಂದ10 ತಾಸು ಮೊಬೈಲ್ ನಲ್ಲಿ ಕಾಲಕಳೆಯುತ್ತೇವೆ. ಅದೇ ಸಮಯ ಓದಲು ಸದ್ಬಳಕೆ ಮಾಡಿಕೊಳ್ಳುವುದಿಲ್ಲಾ. ವ್ಯವಸ್ಥೆ ಬಲಾಗಬೇಕಾದರೆ ನಾವು ಬದಲಾಗಬೇಕು.
ಮಾಡುವ ಕೆಲಸವನ್ನು ಶೃದ್ಧೆಯಿಂದ ಮಾಡಬೇಕು. ನಿಮ್ಮ ಕನಸುಗಳಿಗೆ ನಾವು ನೀರೇರೆಯುವ ಕೆಲಸಮಾಡುತ್ತೇವೆ. ನಮ್ಮ ಸಂಸ್ಥೆಯ ವಿದ್ಯಾರ್ಥಿಗಳು ಪ್ರತಿಯೊಂದು ಇಲಾಖೆಯಲ್ಲಿ ಕೆಲಸ ಮಾಡಬೇಕು ಎನ್ನುವುದು ನಮ್ಮ ಸಂಸ್ಥೆಯ ಕನಸಾಗಿದೆ ಎಂದರು.
ಉದ್ಯಮಿ ಆರ್ ಎಮ್ ಹೆಗಡೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.
ಪಿಎಸ್ಐ ಮಹಂತಪ್ಪ ಕುಂಬಾರ್, ಪಟ್ಟಣ ಪಂಚಾಯತ್ ಸ್ಥಾಯಿ ಸಮಿತಿಯ ಅಧ್ಯಕ್ಷ ವಿನಯ್ ಹೊನ್ನೆಗುಂಡಿ, ಉದ್ಯಮಿ ಆರ್ ಬಿ ನಾಯ್ಕ ಬಾಲಿಕೊಪ್ಪ, ಸಿವಿಲ್ ಹಾಗೂ ಪಿಡಬ್ಲ್ಯುಡಿ ಗುತ್ತಿಗೆದಾರ ಮಾರುತಿ ಬಾಲಿ ಕೊಪ್ಪ ಉಪಸ್ಥಿತರಿದ್ದರು. ವಿದ್ಯಾರ್ಥಿಗಳಾದ ಅರ್ಪಿತ ಮತ್ತು ಸ್ವಾತಿ ಪ್ರಾರ್ಥಿಸಿದರು. ಜಯಶ್ರೀ ನಿರೂಪಿಸಿದರು. ಸಂಸ್ಥೆಯ ನಿರ್ದೇಶಕ ಪ್ರಕಾಶ್ ಬಿ ಮಡಿವಾಳ ವಂದಿಸಿದರು.


ಕಾಡೇ ಊರು..ಅಂಬಾಸಿಡರ್ ಕಾರೇ ಸೂರು.. ಚಂದ್ರನ ಬಾಳಲ್ಲಿ ಕಗ್ಗತ್ತಲು..!
ದಕ್ಷಿಣ ಕನ್ನಡದ ಸುಳ್ಯದಲ್ಲಿ ವೃದ್ಧನೊಬ್ಬ ಬ್ಯಾಂಕ್‌ನವರು ಮೋಸ ಮಾಡಿದರು ಎಂದು ಮನನೊಂದು ನಾಡು ತೊರೆದು ಕಾಡಲ್ಲಿ ವಾಸಿಸುತ್ತಿದ್ದಾರೆ.
ದಕ್ಷಿಣ ಕನ್ನಡ: ಸರಿ ಸುಮಾರು 17 ವರ್ಷಗಳ ಹಿಂದೆ ತಾನು ಸಾಲ ತೆಗೆದುಕೊಂಡ ಸಹಕಾರಿ ಬ್ಯಾಂಕ್ ನವರು ಮೋಸ ಮಾಡಿದರು ಎಂಬ ಕಾರಣಕ್ಕಾಗಿ ಬೇಸರದಿಂದ ನಾಡನ್ನೇ ತೊರೆದು ಕಾಡು ಸೇರಿದ ಈ ವ್ಯಕ್ತಿ ಇಂದಿಗೂ ದಟ್ಟರಾಣ್ಯದಲ್ಲಿ ತನ್ನ ನೆಚ್ಚಿನ ಕಾರಿನೊಂದಿಗೆ ವಾಸಿಸುತ್ತಿರುವ ಘಟನೆ ಸುಳ್ಯದಲ್ಲಿ ಬೆಳಕಿಗೆ ಬಂದಿದೆ.

ಕಾಡಿನಲ್ಲಿ ವಾಸಿಸುತ್ತಿರುವ ಚಂದ್ರಶೇಖರ್
ಕಾಡೇ ಊರು.. ಕಾರೇ ಮನೆ
ಸುಳ್ಯ ತಾಲೂಕಿನಿಂದ ಸುಮಾರು 15 ಕಿ.ಮೀ ದೂರದಲ್ಲಿರುವ ಅರಂತೋಡು ಗ್ರಾಮದ ಅಡ್ತಲೆ – ನೆಕ್ಕರೆ ಪ್ರದೇಶದ ದಟ್ಟ ಅರಣ್ಯದ ನಡುವೆ ಸಾಗಿದರೆ ನಮಗೆ ಒಂದು ಸಣ್ಣ ಪ್ಲಾಸ್ಟಿಕ್ ಹೊದಿಕೆಯುಳ್ಳ ಗುಡಿಸಲು ಕಾಣ ಸಿಗುತ್ತದೆ. ಈ ಗುಡಿಸಲಿನ ಒಳಗಡೆ ಹಳೆಯ ಅಂಬಾಸಿಡರ್ ಕಾರು ಹಾಗೂ ಕಾರಿನ ಮೇಲೊಂದು ಹಳೇ ರೇಡಿಯೋ ಇದೆ. ಕಾರಿನ ಎದುರಲ್ಲಿ ಹಳೆಯ ಸೈಕಲ್, ಆಗ ತಾನೇ ಮಾಡಿದ ಕಾಡುಬಳ್ಳಿಯಿಂದ ತಯಾರಾದ ಒಂದೆರಡು ಬುಟ್ಟಿಗಳು. ಈ ಹೊಗೆಯ ನಡುವೆ ಕುರುಚಲು ಗಡ್ಡ, ಹರಿದ ಅಂಗಿ, ಹವಾಯಿ ಚಪ್ಪಲಿ ಧರಿಸಿರುವ ವೃದ್ಧಾಪ್ಯದ ಕಡೆಗೆ ಮುಖ ಮಾಡಿ ಜೀವನ ನಡೆಸುತ್ತಿರುವ ವ್ಯಕ್ತಿಯ ಹೆಸರು ಚಂದ್ರಶೇಖರ್.

ನೆಚ್ಚಿನ ಅಂಬಾಸಿಡರ್ ಕಾರಿನೊಂದಿಗೆ ಕಾಡಲ್ಲಿ ವಾಸ
‘ಜೀವ’ನಕ್ಕೆ ಮುಳುವಾದ ಬ್ಯಾಂಕ್ ಸಾಲ
ಅಂದ ಹಾಗೇ ಈ ಚಂದ್ರಶೇಖರ್ ಕಾಡಿನಲ್ಲಿ ತನ್ನ ಹಳೆಯ ಅಂಬಾಸಿಡರ್ ಕಾರಿನಲ್ಲಿ ಹೀಗೆ ವಾಸವಾಗಿರುವುದಕ್ಕೆ ಒಂದು ಕಾರಣವಿದೆ. ಇವರು ಮೂಲತಃ ಸುಳ್ಯ ತಾಲೂಕಿನ ನೆಕ್ರಾಲ್ ಕೆಮ್ರಾಜೆ ಗ್ರಾಮದವರು. 2003ರ ವರೆಗೆ ಚಂದ್ರಶೇಖರ್ ಜೀವನ ಸರಿಯಾದ ಹಾದಿಯಲ್ಲಿಯೇ ಇತ್ತು. ಸುಮಾರು ಒಂದೂವರೆ ಎಕರೆ ಪ್ರದೇಶದಲ್ಲಿ ಅಡಿಕೆ ಕೃಷಿ ಹೊಂದಿದ ಚಂದ್ರಶೇಖರ್ ಒಳ್ಳೆಯ ಜೀವನವನ್ನೂ ನಡೆಸುತ್ತಿದ್ದರು. ಇವರು ಎಲಿಮಲೆ ಸಹಕಾರಿ ಬ್ಯಾಂಕ್ನಿಂದ 40 ಸಾವಿರ ಸಾಲ ಪಡೆದುಕೊಂಡಿರುವುದು ಇವರ ಈ ದುರಂತ ಜೀವನಕ್ಕೆ ಕಾರಣ ಎನ್ನಲಾಗಿದೆ.
ಕಾಡೇ ಊರು.. ಅಂಬಾಸಿಡರ್ ಕಾರೇ ಸೂರು
ಕೇವಲ 40 ಸಾವಿರ ರೂ.ಗೆ ಆಸ್ತಿ ಹರಾಜಿಗಿಟ್ಟ ಬ್ಯಾಂಕ್
ಸಾಲ ಕಟ್ಟಲಾಗದ ಸ್ಥಿತಿ ಬಂದಾಗ ಬ್ಯಾಂಕ್‌ನವರು ಚಂದ್ರಶೇಖರ್ ಅವರ ಆಸ್ತಿಯನ್ನು ಹರಾಜಿಗಿಟ್ಟರು. ಬ್ಯಾಂಕ್‌ನವರು ಸಣ್ಣ ಮೊತ್ತಕ್ಕೆ ಅವರ ಜಮೀನನ್ನು ಹರಾಜಿಗಿಟ್ಟಿದ್ದಕ್ಕೆ ಅವರು ಮಾನಸಿಕವಾಗಿ ಕುಗ್ಗಿ ಹೋದರು. ಈ ಸಮಯದಲ್ಲಿ ತನ್ನಲ್ಲಿ ಉಳಿದ ಏಕೈಕ ಆಸ್ತಿ ಅಂಬಾಸಿಡರ್ ಕಾರಿನೊಂದಿಗೆ ತನ್ನ ಅಕ್ಕನ ಮನೆಯಾದ ಅರಂತೋಡು ಗ್ರಾಮದ ಅಡ್ತಲೆಗೆ ಬಂದಿದ್ದಾರೆ. ಆದರೆ, ಕಾಲಕ್ರಮೇಣ ಅಕ್ಕನ ಮನೆಯಲ್ಲೂ ಮನಸ್ತಾಪ ಉಂಟಾಗಿ ಕೊನೆಗೆ ಚಂದ್ರಶೇಖರ್ ಒಬ್ಬಂಟಿಯಾಗಿ ಉಳಿಯುವ ನಿರ್ಧಾರಕ್ಕೆ ಬಂದಿದ್ದಾರೆ.

ಚಂದ್ರಶೇಖರ್
ಹಳೆಯ ಅಂಬಾಸಿಡರ್ ಕಾರೇ ಪ್ರಪಂಚ
ಕಾಡಿನ ಮಧ್ಯೆ ತನ್ನ ಕಾರನ್ನು ಇರಿಸಿ, ಕಾರಿನ ಮೇಲ್ಭಾಗಕ್ಕೆ ಪ್ಲಾಸ್ಟಿಕ್ ಹೊದಿಕೆ ಹಾಕಿ ಚಂದ್ರಶೇಖರ್ ಜೀವನ ನಡೆಸಲು ಆರಂಭಿಸುವ ಮೂಲಕ ಕಾನೂನು ಹೋರಾಟಕ್ಕೂ ಮುಂದಾದರು. ಇದೀಗ ಚಂದ್ರಶೇಖರ್ ಕಾಡಿನಲ್ಲಿ ಯಾವುದೇ ಮೂಲಸೌಕರ್ಯಗಳಿಲ್ಲದೇ ಏಕಾಂಗಿಯಾಗಿ, ಯಾರ ಸಹಾಯವೂ ಇಲ್ಲದೇ ಏಕಾಂತ ಜೀವನ ನಡೆಸುತ್ತಿದ್ದಾರೆ.
ಬೆಳಗ್ಗೆ ಎದ್ದು ಕಾಡಿನಲ್ಲಿ ಹರಿಯುವ ಹೊಳೆಯಲ್ಲಿ ಸ್ನಾನ ನಿತ್ಯಕರ್ಮಗಳನ್ನು ಮುಗಿಸಿ, ಕಾಡಿನಲ್ಲಿ ಸಿಗುವ ಬಳ್ಳಿಗಳಿಂದ ಬುಟ್ಟಿಯನ್ನು ತಯಾರಿಸಿ ಅಂಗಡಿಗಳಲ್ಲಿ ಇದನ್ನು ಮಾರಿ ಆಹಾರ ಸಾಮಗ್ರಿಗಳನ್ನು ಖರೀದಿಸಿ ಜೀವನ ಸಾಗಿಸುತ್ತಿದ್ದಾರೆ. ಚಂದ್ರಶೇಖರ್‌ಗೆ ಕಾಡಿನ ಮಧ್ಯದಲ್ಲಿರುವ ತನ್ನ ಹಳೆಯ ಕಾರೇ ಪ್ರಪಂಚ. ತನ್ನ ಜಮೀನನ್ನು ಮೋಸದಿಂದ ಹರಾಜು ಮಾಡಿದವರಿಗೆ ಶಿಕ್ಷೆಯಾಗಿ ಮತ್ತೆ ಆ ಜಮೀನು ತನಗೆ ಸಿಗಬೇಕು ಅನ್ನೋದೇ ಚಂದ್ರಶೇಖರ್ ಬದುಕಿನ ಆಸೆ.

ಅಂಬಾಸಿಡರ್ ಕಾರು
ಕೂಗಳತೆ ದೂರದಲ್ಲೇ ಪ್ರಾಣಿಗಳ ವಾಸ
ಹೀಗೆ ಚಂದ್ರಶೇಖರ್ ಕಾರಿನಲ್ಲಿ, ದಟ್ಟಾರಣ್ಯದಲ್ಲಿರುವ ಬಗ್ಗೆ ಮಾಹಿತಿ ತಿಳಿದ, ಹಿಂದಿನ ದಕ್ಷಿಣ ಕನ್ನಡ ಜಿಲ್ಲಾಧಿಕಾರಿಯಾಗಿದ್ದ ಎ.ಬಿ ಇಬ್ರಾಹಿಂ, ಚಂದ್ರಶೇಖರನ್ನು ಭೇಟಿಯಾಗಿ ಬೇರೊಂದು ಕಡೆ ಜಾಗ ಗುರುತಿಸಿ ಮನೆ ನಿರ್ಮಿಸಿಕೊಡುವ ಬಗ್ಗೆ ಭರವಸೆ ನೀಡಿದರು.
ಜಿಲ್ಲಾಧಿಕಾರಿಗಳು ತನ್ನ ಮಾತಿನಂತೇ ನಡೆದರೂ, ಅಧಿಕಾರಿಗಳು ಚಂದ್ರಶೇಖರ್‌ಗೆ ನೀಡಿದ ಜಾಗ ರಬ್ಬರ್ ಕಾಡಾಗಿದ್ದ ಕಾರಣ ಜಾಗ ಹಿಡಿಸದ ಚಂದ್ರಶೇಖರ್ ಮತ್ತೆ ಕಾಡಿಗೆ ಮರಳಿದ್ದಾರೆ. ಚಂದ್ರಶೇಖರ್ ಇರುವ ಕಡೆ ಕಾಡಾನೆಗಳು, ಕಡವೆ, ಚಿರತೆ, ಕಾಡು ಹಂದಿ, ಕಾಡುಕೋಣಗಳೂ ಕಣ್ಣಳತೆ ದೂರದಲ್ಲೇ ಹಾದು ಹೋಗುತ್ತವೆ. ವಿಷಜಂತುಗಳೂ ಇವೆ. ಆದರೂ, ಕಾಡು ಬಿಡಲು ಚಂದ್ರಶೇಖರ್ ಮುಂದಾಗುತ್ತಿಲ್ಲ.

ಅಂಬಾಸಿಡರ್ ಕಾರಿನ ಜತೆ ಸೈಕಲ್ಅನ್ನೂ ಹೊಂದಿರುವ ವೃದ್ಧ
ಬುಟ್ಟಿ ಹೆಣೆಯುವುದೇ ಕಾಯಕ
ಇಷ್ಟೂ ವರ್ಷಗಳಿಂದ ಚಂದ್ರಶೇಖರ್ ಕಾಡಿನೊಳಗೆ ಇದ್ದರೂ ಪೃಕೃತಿಗೆ ಈ ತನಕ ತೊಂದರೆ ನೀಡಿಲ್ಲ. ಕಾಡಿನ ಒಂದು ಗಿಡವನ್ನಾಗಲಿ, ಮರವಾಗಲೀ ಇವರು ಕಡಿದಿಲ್ಲ. ಕಾಡು ಬಳ್ಳಿಯನ್ನು ಬಳಸಿ ಬುಟ್ಟಿ ತಯಾರಿಸಿ ಅದನ್ನು ಮಾರಿ ಬಂದ ಹಣದಿಂದ ತಮ್ಮ ಹೊಟ್ಟೆ ತುಂಬಿಸಿಕೊಳ್ಳುತ್ತಿದ್ದಾರೆ. ಕಾಡಿನಲ್ಲಿರುವ ಯಾವುದೇ ಅರಣ್ಯ ಉತ್ಪನ್ನಗಳನ್ನು ಮುಟ್ಟದ ಕಾರಣದಿಂದಾಗಿ ಅರಣ್ಯ ಇಲಾಖೆಯೂ ಇವರಿಗೆ ತೊಂದರೆ ನೀಡಿಲ್ಲ.
ಕೋವಿಡ್ ಸಮಯದಲ್ಲೂ ಕುಗ್ಗದ ‘ಚಂದ್ರ’
ಆಧಾರ್ ಕಾರ್ಡ್ ಇಲ್ಲದಿದ್ದರೂ, ಅರಂತೋಡು ಗ್ರಾಮ ಪಂಚಾಯಿತಿ ಅಧಿಕಾರಿಗಳು ಇವರಿಗೆ ಕೊರೊನಾ ಲಸಿಕೆ ನೀಡಿದ್ದಾರೆ. ಲಾಕ್‌ಡೌನ್ ಸಂದರ್ಭದಲ್ಲಿ ಆಹಾರಕ್ಕೆ ತುಂಬಾ ಕಷ್ಟವಾದ ಸಮಯದಲ್ಲಿ ನದಿ ನೀರು ಹಾಗೂ ಕಾಡಿನಲ್ಲಿ ಸಿಗುವ ಹಣ್ಣುಗಳನ್ನು ತಿಂದು ಇವರು ಬದುಕಿದ್ದಾರೆ. ಮಾನಸಿಕವಾಗಿ ಆಘಾತಕ್ಕೊಳಗಾಗಿರುವ ಚಂದ್ರಶೇಖರ್ ತಾನಾಯಿತು ತನ್ನ ಬದುಕಾಯಿತು ಎಂದು ಬದುಕುತ್ತಿದ್ದಾರೆ. ಇಂದಲ್ಲ, ನಾಳೆ ತಾನು ಕಳೆದುಕೊಂಡಿರುವ ಭೂಮಿ ಮರಳಿ ಸಿಗುವ ವಿಶ್ವಾಸದಿಂದ ಎಲ್ಲಾ ದಾಖಲೆಗಳನ್ನೂ ಭದ್ರವಾಗಿ ಕಾಪಾಡಿಕೊಂಡಿದ್ದಾರೆ.
ಇವರಿಗೆ ಸದ್ಯ ಬೇಕಾಗಿರೋದು ಇರುವುದಕ್ಕೊಂದು ಮನೆ ಹಾಗೂ ಘಾಸಿಯಾದ ಮನಸ್ಸಿಗೊಂದು ಚಿಕಿತ್ಸೆ. ಅದು ದೊರಕುವ ಮೂಲಕ ಇವರೂ ಮಾನವ ಸಮಾಜದೊಳಗೆ ಸದಾ ನೆಮ್ಮದಿಯಿಂದ ಬದುಕಲಿ ಎಂಬುದೇ ನಮ್ಮ ಆಶಯ. (etbk)
