30 ವರ್ಷಗಳಿಂದ ಬಿ.ಜೆ.ಪಿ.ಯಲ್ಲಿದ್ದು ನಿರಂತರ ಸೇವೆ ಮಾಡಿದ್ದೇನೆ. ಈಗಿರುವ ಬಿ.ಜೆ.ಪಿ.ಯ ಒಂದು ಡಜನ್ ಆಕಾಂಕ್ಷಿಗಳಲ್ಲಿ ನನಗೆ ಮಾತ್ರ ಮತ ಚಲಾಯಿಸುವ ಹಕ್ಕಿದೆ.ಈ ಹಿಂದೆ ಹಲವು ಬಾರಿ ವಿ.ಪ.ಚುನಾವಣೆಯಲ್ಲಿ ಮತಚಲಾಯಿಸಿದ್ದೇನೆ. ವಯೋಮಿತಿ,ಸಂಘಟನೆಯ ರೀತಿ-ನೀತಿ ಸೇರಿದಂತೆ ಹಲವು ಕಾರಣಗಳಿಂದ ನಮಗೂ ಇನ್ನಷ್ಟು ಕಾಯುವ ತಾಳ್ಮೆ ಇಲ್ಲ ಹಾಗಾಗಿ ಪಕ್ಷ ನನ್ನನ್ನೂ ಪರಿಗಣಿಸುವ ವಿಶ್ವಾಸವಿದೆ. ಇಲ್ಲದಿದ್ದರೆ ಪಕ್ಷದ ತೀರ್ಮಾನಕ್ಕೆ ಒಪ್ಪಬೇಕಾದ ಅನಿವಾರ್ಯತೆಯೂ ಎದುರಾಗಬಹುದು ಹೀಗೆಂದು ಕಡಕ್ ಆಗಿ ತಮ್ಮ ಉಮೇದುವಾರಿಕೆ ಬಗ್ಗೆ ಹೇಳಿದವರು ಬಿ.ಜೆ.ಪಿ. ರಾಜ್ಯ ಕಾರ್ಯಕಾರಿಣಿ ಸದಸ್ಯ ಕೆ.ಜಿ. ನಾಯ್ಕ ಹಣಜಿಬೈಲ್
ಸಂದರ್ಭ- ಸಿದ್ಧಾಪುರದಲ್ಲಿ ತಾಲೂಕಾ ಬಿ.ಜೆ.ಪಿ. ಮಂಡಳ ಮತ್ತು ಹಿಂದುಳಿದ ವರ್ಗಗಳ ವಿಭಾಗ ಆಯೋಜಿಸುತ್ತಿರುವ ಬಿ.ಜೆ.ಪಿ. ಹಿಂದುಳಿದವರ್ಗಗಳ ಸಮಾವೇಶದ ಕುರಿತು ಮಾಹಿತಿ ನೀಡಲು ಕರೆದ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಕೆ.ಜಿ.ನಾಯ್ಕ ಮಾಧ್ಯಮಪ್ರತಿನಿಧಿಗಳ ಪ್ರಶ್ನೆಗಳಿಗೆ ಉತ್ತರಿಸುತ್ತಾ ಪಕ್ಷದ ಸಂಘಟನೆಗೆ ಶಕ್ತಿ ಇಲ್ಲದ ಸಂದರ್ಭದಿಂದ ನಿರಂತರ ಮೂರು ದಶಕ ಸೇವೆ ಸಲ್ಲಿಸಿದ್ದೇನೆ. ಮೀಸಲಾತಿ,ತಾಂತ್ರಿಕ ಅಡಚಣೆಗಳಿಲ್ಲದಿದ್ದರೆ ಸಿದ್ಧಾಪುರದ ಪ.ಪಂ. ನಲ್ಲಿ ಪಕ್ಷಾತೀತವಾಗಿ ನಿರಂತರ ಅಧ್ಯಕ್ಷರಾಗುವ ಅವಕಾಶವಿತ್ತು. ಈಗಲೂ ನನ್ನ ವೈಯಕ್ತಿಕ ಅನುಕೂಲಕ್ಕಾಗಿ ನನಗೆ ಯಾವ ಹುದ್ದೆಯ ಅಗತ್ಯವೂ ಇಲ್ಲ. ಅಧಿಕಾರ ಇದ್ದರೆ ಜನಸೇವೆ ಮಾಡುತ್ತೇವೆ. ಜನರಿಗೆ ನೆರವಾಗುವ ಅವಕಾಶದ ಅಧಿಕಾರ ಕೇಳುವ ಹಕ್ಕು ನಮಗಿದೆ. ಹಾಗಾಗಿ ಬರಲಿರುವ ವಿಧಾನ ಪರಿಷತ್ ಚುನಾವಣೆಗೆ ನನ್ನನ್ನು ಪರಿಗಣಿಸುವಂತೆ ಪಕ್ಷಕ್ಕೆ ವಿನಂತಿಸಿದ್ದೇನೆ ಎಂದರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು ಪಕ್ಷ ನಾನಾ ವಿಭಾಗಗಳ ಸಂಘಟನೆ, ಸಮಾವೇಶಕ್ಕೆ ಸೂಚಿಸಿದೆ. ಈ ಉದ್ದೇಶದಿಂದ ಸಿದ್ಧಾಪುರದಲ್ಲಿ ಅಕ್ಟೋಬರ್ 30 ರಂದು ಬಿ.ಜೆ.ಪಿ. ಹಿಂದುಳಿದ ವರ್ಗಗಳ ಸಮಾವೇಶ ನಡೆಯಲಿದೆ. ಅದರಲ್ಲಿ ರಾಜ್ಯಮಟ್ಟದ ಹಿಂದುಳಿದ ವರ್ಗಗಳ ನಾಯಕರು, ಸಚಿವರು,ಪ್ರಮುಖರು ಪಾಲ್ಗೊಳ್ಳಲಿದ್ದಾರೆ ಎಂದರು.
ಈ ಮಾಧ್ಯಮಗೋಷ್ಠಿಯಲ್ಲಿ ಹಿಂದುಳಿದ ವರ್ಗಗಳ ಬಹುತೇಕ ಪ್ರಮುಖರು ಹಾಜರಿದ್ದರು. ಹಿಂದುಳಿದ ವರ್ಗಗಳ ಮೋರ್ಚಾದ ತಾಲೂಕಾ ಅಧ್ಯಕ್ಷ ಬಲರಾಮ್ ನಾಮಧಾರಿ ವಿವರಣೆ ನೀಡಿದರು. ಪ.ಪಂ. ಅಧ್ಯಕ್ಷೆ ಚಂದ್ರಕಲಾ ನಾಯ್ಕ, ಸದಸ್ಯರಾದ ವಿನಯ್ ಹೊನ್ನೆಗುಂಡಿ, ವಿಜೇಂದ್ರ ಗೌಡರ್, ಜಿ.ಪಂ. ಸದಸ್ಯ ನಾಗರಾಜ್ ನಾಯ್ಕ, ಜಿ.ಪಂ.ಮಾಜಿ ಸದಸ್ಯ ಈಶ್ವರ ನಾಯ್ಕ ಮನಮನೆ, ಎಸ್.ಕೆ. ಮೇಸ್ತ ಸೇರಿದಂತೆ ಹಲವರಿದ್ದರು.