

ಯಲ್ಲಾಪುರ : ರಾಸಾಯನಿಕ ತುಂಬಿದ ಟ್ಯಾಂಕರ್ ಪಲ್ಟಿ, ಹಳ್ಳಕ್ಕೆ ಹೊತ್ತಿಕೊಂಡ ಬೆಂಕಿ!
ಕಾರವಾರ : ರಾಸಾಯನಿಕ ತುಂಬಿದ ಟ್ಯಾಂಕರ್ ಒಂದು ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರ ತಾಲೂಕಿನ ಆರತಿಬೈಲ್ ಕ್ರಾಸ್ ಬಳಿ ಇಂದು ಮುಂಜಾನೆ ಮುಗುಚಿ ಬಿದ್ದಿದೆ.ಇದರಿಂದ ಸೋರಿದ ಕೆಮಿಕಲ್ ಹಳ್ಳದಲ್ಲಿ ಹರಿದು ಅಲ್ಲಿರುವ ರೈತರ ಗದ್ದೆ ಮತ್ತು ತೋಟಗಳಿಗೆ ಅಪಾರ ಪ್ರಮಾಣದ ಹಾನಿಯಾಗಿದೆ.
ಪೇಂಟ್ ಗೆ ಬಳಸುವ “ಪೆಂಜಾನ್”ಮಂಗಳೂರಿನಿಂದ ಮುಂಬಯಿಗೆ ಟ್ಯಾಂಕರ್ ಮೂಲಕ ಕಳುಹಿಸಲಾಗುತ್ತಿತ್ತು.ಕಡಿದಾದ ತಿರುವಿನಲ್ಲಿ ಟ್ಯಾಂಕರ್ ಪಲ್ಟಿಯಾಗಿ ಸೋರಿದ ರಾಸಾಯನಿಕವು ಪಕ್ಕದ ಹಳ್ಳ ಹಾಗೂ ಕಾಲುವೆಗಳಲ್ಲಿ ಹರಿದಿದೆ.ಇದಕ್ಕೆ ಬೆಂಕಿ ತಗುಲಿದ್ದು,ಹಳ್ಳ ಹೊತ್ತಿ ಉರಿದಿದೆ.ಬೆಂಕಿ ಟ್ಯಾಂಕರ್ ಗೂ ತಗುಲಿದೆ.ಹಳ್ಳದ ಭತ್ತದ ಗದ್ದೆ, ಪಂಪ್ ಸೆಟ್ ಸುಟ್ಟು ಕರಕಲಾಗಿದೆ.ತೋಟದಲ್ಲಿದ್ದ ಗಿಡಗಳಿಗೆ ಬೆಂಕಿ ತಗುಲಿ ಹಾನಿಯಾಗಿದೆ.ಟ್ಯಾಂಕರ್ ಚಾಲಕ ಮತ್ತು ಕ್ಲೀನರ್ ಸಣ್ಣಪುಟ್ಟ ಗಾಯಗಳೊಂದಿಗೆ ಬಚಾವಾಗಿದ್ಧಾರೆ.
ಟ್ಯಾಂಕರ್ ಅಪಘಾತವಾಗುತ್ತಿದ್ದಂತೆ ಸೋರಿದ ರಾಸಾಯನಿಕಕ್ಕೂ ಬೆಂಕಿ ತಗುಲಿದ್ದು,ಸದ್ದು ಎರಡು ಕಿ.ಮೀ.ವರೆಗೂ ಕೇಳಿಸಿದೆ. ಮನೆಗಳಲ್ಲಿದ್ದ ಜನರು ಗಾಬರಿಯಿಂದ ಹೊರಗಡೆ ಓಡಿ ಬಂದಿದ್ದಾರೆ.ಆಗ ಹಳ್ಳ ಹೊತ್ತಿ ಉರಿಯುತ್ತಿರುವ ದೃಶ್ಯ ಕಂಡುಬಂದಿದೆ.
ಬಾಳೆಗದ್ದೆ ದೇಗುಲದ ಪಕ್ಕದಲ್ಲಿರುವ ನಿವಾಸಿ ಎಸ್.ಎಸ್.ಭಟ್ಟ ಅವರ ಐದು ಗುಂಟೆ ಭತ್ತದ ಗದ್ದೆ ಯಾವುದೇ ಅವಶೇಷ ಇಲ್ಲದಂತೆ ಸುಟ್ಟು ಹೋಗಿದೆ.ಬಾವಿಗೆ ಹಾಕಿದ ಪಂಪ್ ಸೆಟ್ ಸುಟ್ಟು ಕರಕಲಾಗಿದೆ.ತೋಟದಲ್ಲಿದ್ದ ಅಡಿಕೆ ಮರ,ತೆಂಗಿಮರ, ಮಾವಿನ ಮರ,ಹಲಸಿನ ಮರ ಸೇರಿದಂತೆ ಮುಂತಾದ ಮರಗಳಿಗೆ ಬೆಂಕಿ ತಗುಲಿದೆ. ಮನೆಯ ಒಂದು ಪಾರ್ಶ್ವಕ್ಕೂ ಬೆಂಕಿ ತಗುಲಿದೆ.
ಇದೇ ರೀತಿ ಮಂಜುನಾಥ ಗೌಡ, ನಾರಾಯಣ ಭಟ್ಟ,ವಿಶ್ವನಾಥ ಭಟ್ಟ ಮುಂತಾದವರ ತೋಟ,ಗದ್ದೆಗಳಿಗೂ ಹಾನಿಯಾಗಿದೆ.ಕಾಲುವೆಯಲ್ಲಿ ಸುಮಾರು 20 ಅಡಿ ಹಳ್ಳದಲ್ಲಿ 50 ಅಡಿ ಎತ್ತರಕ್ಕೂ ಬೆಂಕಿ ಕೆನ್ನಾಲಿಗೆ ಹೊತ್ತಿ ಉರಿಯುವ ದೃಶ್ಯ ಕಂಡುಬಂದಿದೆ.ಅಪಘಾತವಾದ ಕಾರಣಕ್ಕೆ ರಾಷ್ಟ್ರೀಯ ಹೆದ್ದಾರಿ 63 ರಲ್ಲಿ ಮೂರು ಗಂಟೆಗೂ ಅಧಿಕ ಕಾಲ ರಸ್ತೆ ಸಂಚಾರ ಸ್ಥಗಿತಗೊಳಿಸಲಾಗಿತ್ತು.ಯಲ್ಲಾಪುರ, ಮುಂಡಗೋಡ,ಶಿರಸಿಯಿಂದ ಬಂದ ಅಗ್ನಿಶಾಮಕದಳ ಹರಸಾಹಸಪಟ್ಟು ಬೆಂಕಿ ನಂದಿಸಿದರು.ಅಪಘಾತ ಸ್ಥಳಕ್ಕೆ ಶಿರಸಿ ಡಿ.ವೈ.ಎಸ್.ಪಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.ಈ ಕುರಿತು ಯಲ್ಲಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
