ಸಿದ್ಧಾಪುರ ಪೇಟೆಯ ಹಲವು ಕಡೆ ಬೂರೆ ಕಾಯಿ ಒಡೆಯುವ ಕಾಯಿ ಹೊಡೆಯುವ ಆಟ ನಡೆಯುತ್ತಿದೆ. ಈ ಆಟದ ಕಾರಣದಿಂದ ತೆಂಗಿನಕಾಯಿ ಮಾರುವವರ ಜೇಬು ತುಂಬುತ್ತಿರುವುದು ವಿಶೇಶ.
- ಕಾಯಿ ಒಡೆಯುವ ಶೂರರು ನೂರಾರು ಕಾಯಿ ಗೆದ್ದು ಮನೆಗೆ ತೆರಳುತ್ತಾರೆ.
- ದೀಪಾವಳಿಯ ಈ ಕಾಯಿ ಒಡೆಯುವ ಆಟದಿಂದಾಗಿ ತೆಂಗಿನಕಾಯಿಗಳಿಗೆ ಹೆಚ್ಚಿನ ಬೆಲೆ ಬರುವುದೂ ಉಂಟು.
- ದೇವರಿಗೆ ಹತ್ತು ಕಾಯಿ- ಆಟಕ್ಕೆ ಹತ್ತು ಕಾಯಿ ಎಂದು ಬೂರೇ ಕಾಯಿ ಸಂಗ್ರಹಿಸುವುದೂ ಇಲ್ಲಿಯ ರೂಢಿ.
ಮಲೆನಾಡಿನ ಜನಜೀವನ,ಜಾನಪದ ಸಂಪ್ರದಾಯ ಆಚರಣೆಗಳೇ ಭಿನ್ನ. ಬೆಳಕಿನ ಹಬ್ಬ ಎಂದು ಆಚರಿಸುವ ದೀಪಾವಳಿಯಲ್ಲಿ ದೇವರಿಗೆ ತೆಂಗಿನಕಾಯಿ ಒಡೆದು ದೇವರನ್ನು ತೃಪ್ತಿ ಪಡಿಸುವುದು ಒಂದು ಸಾಂಪ್ರದಾಯಿಕ ರೂಢಿ.ಇಂಥ ದೇವರಿಗೆ ಒಡೆಯುವ ತೆಂಗಿನ ಕಾಯಿಗಳನ್ನು ಒಡೆಯುವ ಕಾಯಿ ಹೊಡೆಯುವ ಆಟವೊಂದು ಮಲೆನಾಡಿನಲ್ಲಿ ದೀಪಾವಳಿ ವಿಶೇಶ.
ಸುಲಿದ ತೆಂಗಿನ ಕಾಯಿಯನ್ನು ಬಿಗಿಯಾಗಿ ಹಿಡಿದು ಇದೇ ರೀತಿ ಕಾಯಿ ಹಿಡಿದ ಇನ್ನೊಂದು ವ್ಯಕ್ತಿಯ ಕಾಯಿಗೆ ಕಾಯಿಂದ ಹೊಡೆಯುವ ಈ ಕಾಯಿ ಒಡೆಯುವ ಆಟ.ಮಲೆನಾಡಿನಲ್ಲಿ ಲಾಗಾಯ್ತಿನಿಂದಲೂ ಆಚರಣೆಯಲ್ಲಿದೆ. ಇಬ್ಬರು ವ್ಯಕ್ತಿಗಳು ಬಿಗಿಯಾಗಿ ಹಿಡಿದ ಕಾಯಿಗಳಿಂದ ಪರಸ್ಫರ ಹೊಡೆದುಕೊಳ್ಳುತ್ತಾರೆ. ಹೀಗೆ ಕೈಯಲ್ಲಿದ್ದ ಕಾಯಿಗೆ ಹೊಡೆಯುವ ವ್ಯಕ್ತಿಗಳು ತೆಂಗಿನಕಾಯಿಯನ್ನು ಅರ್ಧದಷ್ಟು ಗಟ್ಟಿಯಾಗಿ ಹಿಡಿದು ಒಬ್ಬರು ಇನ್ನೊಬ್ಬರ ಕೈಯಲ್ಲಿರುವ ಕಾಯಿಯನ್ನು ಗುರಿಮಾಡಿ ಹೊಡೆಯಬೇಕು.
ಹೀಗೆ ಕಾಯಿಯಿಂದಲೇ ಕಾಯಿಯನ್ನು ಹೊಡೆದು ಒಡೆದ ಕಾಯಿಯನ್ನು ಒಡೆಯದ ಕಾಯಿ ಹಿಡಿದ ವ್ಯಕ್ತಿಗೆ ಕೊಡಬೇಕು.
ಕಾಯಿ ಹೊಡೆಯುವ ನೈಪುಣ್ಯ ಇರುವವರು ಕೆಲವು ಕಾಯಿಗಳಿಂದ ನೂರಾರು ಕಾಯಿಗಳನ್ನು ಗೆಲ್ಲುತ್ತಾರೆ. ತನ್ನ ತೆಂಗಿನಕಾಯಿಯಿಂದ ಎದುರಾಳಿಯ ತೆಂಗಿನಕಾಯಿ ಒಡೆಯಲು ಪ್ರಯತ್ನಿಸುವ ಈ ಕಾಯಿ ಒಡೆಯುವ ಆಟದಲ್ಲಿ ಒಡೆಯುವ ಕಾಯಿ ಹಿಡಿದ ವ್ಯಕ್ತಿ ಒಡೆಯದ ಕಾಯಿ ಮಾಲಿಕನಿಗೆ ಒಡೆದ ಕಾಯಿಯನ್ನು ಕೊಡಬೇಕು. ತೆಂಗಿನ ಕಾಯಿ ಗಟ್ಟಿಯಾಗಿರುತ್ತೋ? ಕಾಯಿ ಒಡೆಯುವ ಸ್ಫರ್ಧಿ ಜಟ್ಟಿಯಾಗಿರುತ್ತಾನೋ ಎನ್ನುವುದು ಪ್ರಮುಖವಲ್ಲ ಆದರೆ ಎದುರಾಳಿಯ ತೆಂಗಿನ ಕಾಯಿ ಒಡೆಯುವವನಿಗೆ ಒಡೆದ ತೆಂಗಿನಕಾಯಯನ್ನು ಕೊಡಬೇಕು ಎನ್ನುವುದು ನಿಯಮ.
ದೀಪಾವಳಿಯಲ್ಲಿ ಸ್ಫರ್ಧೆ-ಮನೋರಂಜನೆಯಾಗಿ ರೂಢಿಗತವಾಗಿ ಆಡುವ ಈ ಕಾಯಿಹೊಡೆಯುವ ಆಟ ದೀಪಾವಳಿ ಕೆಲವು ದಿವಸ ಮಾತ್ರ ಆಡಲಾಗುತ್ತದೆ. ಹಗಲುರಾತ್ರಿ ಎನ್ನದೆ ಸಾಮೂಹಿಕವಾಗಿ ಕಾಯಿ ಒಡೆಯುವ ಆಟದ ದೀಪಾವಳಿಯ ಈ ಸ್ಫರ್ಧೆ ಉತ್ತರ ಕನ್ನಡ ಮತ್ತು ಶಿವಮೊಗ್ಗ ಜಿಲ್ಲೆಯ ಕೆಲವು ಕಡೆ ಸಾಂಪ್ರದಾಯಿಕ ಕ್ರೀಡೆ.
ಯುವಕರು ಗ್ರಾಮೀಣ ಪ್ರದೇಶ, ನಗರಗಳಲ್ಲಿ ಗುಂಪು ಕಟ್ಟಿಕೊಂಡು ಆಡುವ ಕಾಯಿ ಹೊಡೆಯುವ ಆಟವನ್ನು ನೋಡಲು ಕೂಡಾ ಜನ ಸೇರುತ್ತಾರೆ. ದೀಪಾವಳಿಯ ಆಸು-ಪಾಸು ಮುಸ್ಸಂಜೆಯ ಬಿಡುವಿನ ವೇಳೆಯಲ್ಲಿ ಹೆಚ್ಚಾಗಿ ಉಳಿದ ಸಮಯದಲ್ಲಿ ವಿರಳವಾಗಿ ಆಡುವ ಕಾಯಿ ಒಡೆಯುವ ಆಟ ಈಗ ಶಿರಸಿ-ಸಿದ್ಧಾಪುರಗಳಲ್ಲಿ ಈ ವಾರಪೂರ್ತಿ ಕಾಣಸಿಗಲಿದೆ.
ಮಲೆನಾಡಿನ ದೇವರ ಪ್ರೀತಿಯ ತೆಂಗಿನ ಕಾಯಿ ದೇವರಿಗೆ ಒಡೆಯಲು, ಖಾದ್ಯ ತಯಾರಿಸಲು, ಸ್ಫರ್ಧೆಯಲ್ಲಿ ಗೆಲ್ಲಲು ಎಲ್ಲದಕ್ಕೂ ಬಳಕೆ ಆಗುವುದರಿಂದ ತೆಂಗಿನ ಕಾಯಿಯ ಮೌಲ್ಯವರ್ಧನೆ ಕೂಡಾ ನಡೆಯುತ್ತದೆ. ದೀಪಾವಳಿಯ ಈ ಕಾಯಿ ಒಡೆಯುವ ಆಟ ಕೆಲವೇ ಪ್ರದೇಶ, ಪ್ರಾದೇಶಿಕತೆಗಳಿಗೆ ಸೀಮಿತವಾಗಿರುವುದೇ ಈ ಆಟದ ಅನನ್ಯತೆ. ಕಾಯಿ ಒಡೆಯುವ ಆತುರದಲ್ಲಿ ತೆಂಗಿನ ಕಾಯಿಯ ಗರಟೆ ಕೈಗೆ ಪೆಟ್ಟು ಮಾಡಿದರೆ ಆ ಪೆಟ್ಟನ್ನೂ ಕ್ರೀಡಾಮನೋಭಾವದಿಂದಲೇ ಸ್ವೀಕರಿಸಬೇಕು. ಪುರುಷಪ್ರಧಾನ ವ್ಯವಸ್ಥೆಯ ದೀಪಾವಳಿ ಕ್ರೀಡೆಯಾದ ಕಾಯಿ ಒಡೆಯುವ ಆಟವನ್ನು ಸ್ತ್ರೀಯರು ಕೂಡಾ ಆಡುತ್ತಿರುವುದು ಇತ್ತೀಚಿನ ಟ್ರೆಂಡ್. – ಕನ್ನೇಶ್ವರ ನಾಯ್ಕ, ಕೋಲಶಿರ್ಸಿ