

ಡಿ.ಹತ್ತರಂದು ರಾಜ್ಯದ ವಿಧಾನಪರಿಷತ್ ಗೆ ನಡೆಯಲಿರುವ ಚುನಾವಣೆಯಲ್ಲಿ ಉತ್ತರ ಕನ್ನಡದಿಂದ ಯಾವ್ಯಾವ ಪಕ್ಷದಿಂದ ಯಾರು ಅಭ್ಯರ್ಥಿಗಳು ಎನ್ನುವ ಕುತೂಹಲ ಗರಿಗೆದರಿದೆ. ಕಾಂಗ್ರೆಸ್, ಬಿ.ಜೆ.ಪಿ ನಡುವೆ ನಡೆಯಲಿರುವ ನೇರ ಹಣಾಹಣಿ ಮಧ್ಯೆ ಕೆಲವರು ಸ್ಧರ್ಧಾಳುಗಳಾಗುವ ಸಾಧ್ಯತೆ ಇದ್ದರೂ ಎಲ್ಲರ ಗಮನ ಬಿ.ಜೆ.ಪಿ. ಮತ್ತು ಕಾಂಗ್ರೆಸ್ ಅಭ್ಯರ್ಥಿಗಳತ್ತ ನೆಟ್ಟಿದೆ.

ಕಾಂಗ್ರೆಸ್ ವಿಚಿತ್ರ ಸನ್ನಿವೇಶದಲ್ಲಿದೆ ಕಾಂಗ್ರೆಸ್ ನ ಪ್ರಮುಖ ನಾಯಕರಲ್ಲೊಬ್ಬರಾದ ಮಾಜಿ ಸಚಿವ, ಶಾಸಕ ಆರ್.ವಿ.ದೇಶಪಾಂಡೆ ವಿದೇಶದಲ್ಲಿದ್ದಾರೆ. ಕಾಂಗ್ರೆಸ್ ನಿಂದ ಅಭ್ಯರ್ಥಿಗಳಾಗಲು ಕರಾವಳಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ನಿವೇದಿತ್ ಆಳ್ವ ತುದಿಗಾಲ ಮೇಲೆ ನಿಂತಿದ್ದು ಅವರೊಂದಿಗೆ ಎ.ರವೀಂದ್ರ, ಸುಷ್ಮಾ ರಾಜ್ ಗೋಪಾಲರೆಡ್ಡಿ ಸೇರಿದಂತೆ ಕೆಲವರು ಉತ್ಸುಕರಾಗಿರುವ ವರ್ತಮಾನವಿದೆ.
ಕಾಂಗ್ರೆಸ್ ನ ನಿಕಟಪೂರ್ವ ವಿ.ಪ. ಸದಸ್ಯ ಎಸ್.ಎಲ್. ಘೊಟ್ನೇಕರ್ ತನಗೆ ವಿ.ಪ. ಟಿಕೇಟ್ ಬೇಡ, ಹಳಿಯಾಳದ ವಿಧಾನಸಭಾ ಕ್ಷೇತ್ರದ ಟಿಕೇಟ್ ನೀಡಿ ಎಂದು ಗುರುವಿನ ವಿರುದ್ಧವೇ ತಿರುಗಿ ಬಿದ್ದಿದ್ದಾರೆ. ಗೋಟ್ನೇಕರ್ ರನ್ನು ಗೆಲ್ಲಿಸಿ ವಿಧಾನಸಭಾ ಕ್ಷೇತ್ರದ ದಾರಿ ಸುಗಮ ಮಾಡಿಕೊಡುತಿದ್ದ ಶಾಸಕ ಆರ್.ವಿ. ದೇಶಪಾಂಡೆಯವರಿಗೆ ತಮ್ಮ ಪುತ್ರ ಪ್ರಶಾಂತ್ ದೇಶಪಾಂಡೆಯವರನ್ನು ಜೊತೆಗೇ ಶಿಷ್ಯ ಭೀಮಣ್ಣ ನಾಯ್ಕರನ್ನು ವಿಧಾನಸಭೆ ಅಥವಾ ವಿಧಾನ ಪರಿಷತ್ ನಲ್ಲಿ ನೋಡುವ ಆಸೆ ಇದೆಯಂತೆ! ಹೀಗೆ ಕಾಂಗ್ರೆಸ್ ನ ಉಮೇದುವಾರರಿಗೂ ಆಯ್ಕೆ ಮಾಡುವ ದೇಶಪಾಂಡೆಯವರಿಗೂ ಒಂದಕ್ಕೊಂದು ಸಂಬಂಧವಿಲ್ಲದ ವಿಚಿತ್ರ ವಿದ್ಯಮಾನದ ಗೊಂದಲ ಈವರೆಗೆ ತಿಳಿಯಾಗಿಲ್ಲ.
ವಿ.ಪ. ಸದಸ್ಯತ್ವವೆಂದರೆ ಉಚಿತ ಸರ್ಕಾರಿ ಕುರ್ಚಿ ಈ ಕುರ್ಚಿ ಕುಳಿತವರಿಗೆ ಕಿರಿಕಿರಿಯಾದರೆ ಆಸಕ್ತರಿಗೆ ಕನಸಿನ ಗೋಪುರ. ವಿ.ಪ.ಸದಸ್ಯತ್ವಕ್ಕೆ ಅತಿಸೂಕ್ಷ್ಮ ಜಾತಿಯ ಹುರಿಯಾಳುವಿನ ಆಯ್ಕೆ ನ್ಯಾಯ ಸಮ್ಮತ ಆದರೆ ಇತ್ತೀಚಿನ ವರ್ಷಗಳಲ್ಲಿ ಸೂಕ್ಷ್ಮ ಅತಿಸೂಕ್ಷ್ಮ ಮೈನಾರಿಟಿಗಳು ಹಣಬಲದಿಂದ ವಿಧಾನ ಸಭೆ ಸೇರುತ್ತಿರುವುದರಿಂದ ಈ ಅಲಂಕಾರಿಕ ಹುದ್ದೆಯನ್ನು ಬಹುಸಂಖ್ಯಾತ ಪ್ರತಿನಿಧಿಗಳಿಗೆ ನೀಡುವ ಅನಿವಾರ್ಯತೆ ಎದುರಾಗಿದೆ. ಈ ಸಮೀಕರಣದ ಹಿನ್ನೆಲೆಯಲ್ಲಿ ಈ ಬಾರಿ ಜಿಲ್ಲೆಯ ಬಹುಸಂಖ್ಯಾತರಿಗೆ ವಿ.ಪ. ಟಿಕೇಟ್ ನೀಡಬೇಕು ಎನ್ನುವ ಕೂಗಿಗೆ ಬೆಲೆ ಬಂದಿದ್ದು ಶಿರಸಿಯ ಎ. ರವೀಂದ್ರ, ಅಥವಾ ಭೀಮಣ್ಣ ನಾಯ್ಕ ಇವರಲ್ಲದಿದ್ದರೆ ಕರಾವಳಿಯ ಯಾವುದಾದರೂ ಹೊಸ ಮುಖ ಕಾಂಗ್ರೆಸ್ ವಿ.ಪ. ಅಭ್ಯರ್ಥಿಯಾಗುವ ಬಗ್ಗೆ ಸಾಧ್ಯತೆಗಳ ಗಾಳಿಸುದ್ದಿ ರಭಸವಾಗೇ ಬೀಸಲಾರಂಭಿ ಸಿದೆ . ಗೊಂಬೆ ಆಡ್ಸೋರು ಮೇಲಿರುವುದರಿಂದ ಕಾಂಗ್ರೆಸ್ ನ ಒಗಟಿನ ವಿದ್ಯಮಾನ ಈಗಲೂ ಮುಂದುವರಿದಿದೆ.
ಬಿ.ಜೆ.ಪಿ- ಉತ್ತರ ಕನ್ನಡ ಜಿಲ್ಲೆಯಲ್ಲಿ ಗ್ರಾಮೀಣ ಪ್ರದೇಶದಲ್ಲಿ ಗಟ್ಟಿಯಾಗಿರುವ ಕಾಂಗ್ರೆಸ್ ಗೆ ಯಾವಾಗಲೂ ಪ್ರತಿಸ್ಫರ್ಧಿ ಬಿ.ಜೆ.ಪಿ.ಯೇ. ಆದರೆ ಬಿ.ಜೆ.ಪಿ.ಯಲ್ಲಿ ಮೇಲ್ಜಾತಿ ತುಷ್ಟೀಕರಣದ ವಿಪರೀತತೆಯ ಪರಿಣಾಮ ಜಿಲ್ಲೆಯ ಬಹುಸಂಖ್ಯಾತರು, ಅಲ್ಪಸಂಖ್ಯಾತರು ಒಟ್ಟಾಗಿ ಬಿ.ಜೆ.ಪಿ.ಯನ್ನು ವಿರೋಧಿಸುವ ಪರಿಸ್ಥಿತಿ ಇದೆ. ಬಿ.ಜೆ.ಪಿ. ಯ ಆಂತರಿಕ ಸಂಘರ್ಷದ ದೋಷದ ನಡುವೆ ಬಿ.ಜೆ.ಪಿ. ಆ ಪಕ್ಷದ ಪ್ರಬಲ ಆಕಾಂಕ್ಷಿ ಸಿದ್ದಾಪುರದ ಕೆ.ಜಿ.ನಾಯ್ಕರನ್ನು ಮಣಿಸುವ ತಂತ್ರವಾಗಿ ಘಟ್ಟದ ಮೇಲಿನವರಿಗಿಲ್ಲ ವಿ.ಪ. ಟಿಕೇಟ್ ಎಂದು ತೀರ್ಮಾನಿಸಿದೆಯಂತೆ. ಈ ತೀರ್ಮಾನದಿಂದಾಗಿ ಮೇಲ್ನೋಟಕ್ಕೆ ಬಿ.ಜೆ.ಪಿ. ರಾಜ್ಯ ಕಾರ್ಯಕಾರಿಣಿ ಸದಸ್ಯ ಕೆ.ಜಿ.ನಾಯ್ಕ ಮತ್ತು ನಾಮಧಾರಿಗಳಿಗೆ ಒಟ್ಟೊಟ್ಟಿಗೇ ನಾಮಹಾಕಿದೆ ಎನ್ನುವ ಅಭಿಪ್ರಾಯ ಸಾರ್ವತ್ರಿಕವಾಗಿದೆ.
ಈ ವಿಚಿತ್ರ ಸನ್ನಿವೇಶದಲ್ಲಿ ಬಿ.ಜೆ.ಪಿ. ಕಾರವಾರದ ಗಣಪತಿ ಉಳ್ವೇಕರ್ ಮತ್ತು ಕುಮಟಾದ ನಾಗರಾಜ್ ನಾಯಕ ತೊರ್ಕೆಯವರ ಹೆಸರನ್ನು ಮುಂಚೂಣಿಗೆ ತಂದಿದ್ದು ಸಂಸದ ಅನಂತಕುಮಾರ ಹೆಗಡೆ ಗಣಪತಿ ಉಳ್ವೇಕರ್ ಪರವಾಗಿ ವಕಾಲತ್ತು ವಹಿಸಿದಂತೆ ಮಾಡಿ ನಾಗರಾಜ್ ನಾಯಕ ತೊರ್ಕೆ ಪರ ಬ್ಯಾಟಿಂಗ್ ಮಾಡುತಿದ್ದಾರಂತೆ! ಗಣಪತಿ ಉಳ್ವೇಕರ್ ರ ಫೋನ್ ಕರೆಗೆ ಕೂಡಾ ಉತ್ತರಿಸದ ಸ್ಪೀಕರ್ ಕಾಗೇರಿ ಧನಬಲದ ನಾಗರಾಜ್ ತೊರ್ಕೆ ಪರ ಲಾಬಿ ಮಾಡಿದ್ದಾರಂತೆ! ಉಸ್ತುವಾರಿ ಸಚಿವ ಶಿವರಾಮ ಹೆಬ್ಬಾರ್ ಕೂಡಾ ನಾಗರಾಜ್ ನಾಯಕ ತೊರ್ಕೆ ಪರ ಇದ್ದಾರೆ ಎನ್ನುವುದು ಬಹಿರಂಗ ಗುಟ್ಟು.
ಅಸಲಿಗೆ ನಾಗರಾಜ್ ನಾಯಕ ತೊರ್ಕೆ ಯಾವ ದೃಷ್ಟಿಯಿಂದಲೂ ಕೆ.ಜಿ.ನಾಯ್ಕ, ಗಣಪತಿ ಉಳ್ವೇಕರ್ ಮುಂದೆ ಸಮರ್ಥ ಅಭ್ಯರ್ಥಿಯಲ್ಲ ಆದರೆ ಬಿ.ಜೆ.ಪಿ. ಮೇಲ್ವರ್ಗದ ಮತೀಯವಾದಿ ರಾಜಕಾರಣಕ್ಕೆ ಬಹುಸಂಖ್ಯಾತರು ವರ್ಜ್ಯ. ಈ ಹಿನ್ನೆಲೆಯಲ್ಲಿ ಬಿ.ಜೆ.ಪಿ. ವಿ.ಪ. ಅಭ್ಯರ್ಥಿಯಾಗಲಿರುವ ನಾಗರಾಜ್ ನಾಯಕ ತೊರ್ಕೆ ಅನಂತಕುಮಾರ್ ಹೆಗಡೆ, ಶಿವರಾಮ ಹೆಬ್ಬಾರ್,ವಿಶ್ವೇಶ್ವರ ಹೆಗಡೆಗಳ ಒಲವು ಗಳಿಸಿರುವ ಹಿಂದೆ ಅವರ ಮೈನಿಂಗ್ ಕಾಂಚಾಣದ ಪ್ರಭಾವವೇ ಹೆಚ್ಚು ಎನ್ನಲಾಗುತ್ತಿದೆ. ಮತದಾರರು ಕೂಡಾ ಜೆ.ಡಿ.ಎಸ್. ಅಥವಾ ಸ್ವತಂತ್ರ ಅಭ್ಯರ್ಥಿಗಳಾದರೆ ೫ ಸಾವಿರ, ಕಾಂಗ್ರೆಸ್ ಆದರೆ ೧೦ ಸಾವಿರ ಆರೆಸ್ಸೆಸ್ ಪ್ರಣೀತ ಬಿ.ಜೆ.ಪಿ. ಅಭ್ಯರ್ಥಿಗಳಾದರೆ ೨೫ ಸಾವಿರ ಎಂದು ತಮ್ಮ ಬೆಲೆ ನಿಗದಿಮಾಡಿಕೊಂಡಿದ್ದಾರಂತೆ! ಹಾಗಾಗಿ ಕಾಂಗ್ರೆಸ್ ಅಭ್ಯರ್ಥಿಯ ರೊಟ್ಟಿ ತುಪ್ಪದಲ್ಲಿ ಜಾರುತ್ತಿರುವುದರಿಂದ ಘೊಟ್ನೇಕರ್ ಬಿಟ್ಟು ಕೊಟ್ಟ ಕಾಂಗ್ರೆಸ್ ಟಿಕೇಟ್ ಗೆ ಹೆಚ್ಚಿನ ಪರಾಮುಖ್ಯತೆ ಎನ್ನಲಾಗುತ್ತಿದೆ.



_______________________________________________________________
ಮಾನ್ಯರೆ, ನಮ್ಮ ಮಾಧ್ಯಮ ಕ್ಷೇತ್ರದ ಸಮಾಜಮುಖಿ ನಡೆ ಈಗ ಕಾಲು ಶತಮಾನ ದಾಟಿದೆ. ಈ ಪಯಣದಲ್ಲಿ samajamukhi.net ನ್ಯೂಸ್ ಪೋರ್ಟಲ್ samaajamukhi & samajamukhinews ಯೂಟ್ಯೂಬ್ ಚಾನೆಲ್ ಗಳು ಹಾಗೂ ಸಮಾಜಮುಖಿ & samaajamukhi.net ಫೇಸ್ಬುಕ್ ಪೇಜ್ ಗಳು ಸೇರಿವೆ. ಈ ಎಲ್ಲಾ ಘಟಕಗಳ ನಿರ್ವಹಣೆ & ನಿರಂತರತೆಗೆ ನಿಮ್ಮ ಸಹಕಾರ ಮುಖ್ಯ. ನಮ್ಮ ಸುದ್ದಿ, ವಿಡಿಯೋ, ಸ್ಟೋರಿ ಗಳನ್ನು like, share ಹಾಗೂ subscribe ಮಾಡಿ ಸಹಕರಿಸುತ್ತಾ ನಮ್ಮ ಈ ಮಾಧ್ಯಮ ಸಮೂಹದ ಸಿದ್ಧಾಪುರ ಕೆನರಾ ಬ್ಯಾಂಕ್ ಖಾತೆ samajamukhi 03082200081658 ಅಕೌಂಟ್‌ಗೆ ಮತ್ತು ನಮ್ಮ gpay & phone pay Acc No 9740598884 ಗೆ ಆರ್ಥಿಕ ನೆರವು ನೀಡುತ್ತಾ ನಮ್ಮ ಜೊತೆಯಾಗಲು ಕಳಕಳಿಯ ವಿನಂತಿ…….. ಇಂತಿ ನಿಮ್ಮ Kannesh Kolsirsi
_______________________________________________________________
