ಶಿರಸಿ ಕ್ಷೇತ್ರದಲ್ಲಿ ಶಾಸಕ ವಿಶ್ವೇಶ್ವರ ಹೆಗಡೆ ಕಾಗೇರಿಯವರ ಮತೀಯವಾದಿ ದಬ್ಬಾಳಿಕೆ ವಿರುದ್ಧ ಒಂದಾಗಿರುವ ಬಿ.ಜೆ.ಪಿ. ಮತ್ತು ಕಾಂಗ್ರೆಸ್ ಪ್ರಮುಖರು ಇಲ್ಲಿಯ ಅಧಿಕಾರಶಾಹಿ ಹಿಂಸೆಯ ವಿರುದ್ಧ ಇತರ ಪಕ್ಷಗಳನ್ನೂ ಸೇರಿಸಿಕೊಂಡು ಪಕ್ಷಾತೀತವಾಗಿ ಸಾರ್ವಜನಿಕ ಪ್ರತಿಭಟನೆಗೆ ಮುಂದಾಗಿರುವ ಬಗ್ಗೆ ಮಾಹಿತಿ ದೊರೆತಿದೆ.
ರಾಜ್ಯ ವಿಧಾನಸಭಾ ಅಧ್ಯಕ್ಷ ವಿಶ್ವೇಶ್ವರ ಹೆಗಡೆ ಪ್ರತಿನಿಧಿಸುವ ಶಿರಸಿ ಕ್ಷೇತ್ರದಲ್ಲಿ ಪೊಲೀಸ್ ದಬ್ಬಾಳಿಕೆ ಪ್ರಾರಂಭವಾಗಿರುವ ಬಗ್ಗೆ ಸಾರ್ವಜನಿಕರಿಂದ ವಿರೋಧ ವ್ಯಕ್ತವಾಗಿದೆ. ತಮಗೆ ಬೇಕಾದ ಅಧಿಕಾರಿಗಳನ್ನು ಕ್ಷೇತ್ರಕ್ಕೆ ಕರೆತರುವ ಶಾಸಕರು ಮೇಲ್ನೋಟಕ್ಕೆ ಅಧಿಕಾರಿಗಳಿಗೆ ತೊಂದರೆ ಕೊಡದೆ ಸಭ್ಯರಂತೆ ವರ್ತಿಸಿ ಹಿಂದಿನಿಂದ ಪೊಲೀಸ್ ರಾಜ್, ವಸೂಲಿ ರಾಜ್ ವ್ಯವಸ್ಥೆ ಪೋಶಿಸುತಿದ್ದಾರೆ ಎಂದು ಶಿರಸಿ-ಸಿದ್ಧಾಪುರದ ಜನ ಚರ್ಚಿಸುವಂತಾಗಿದೆ. ನಾಲ್ಕೈದು ವರ್ಷದ ಹಿಂದೆ ಕಾಗೇರಿಯ ಆಪ್ತ ಪೊಲೀಸ್ ಇನ್ಸಪೆಕ್ಟರ್ ಒಬ್ಬರು ಅಮಾಯಕ ಹವ್ಯಕರ ಕೊಲೆ ಕೇಸಿನಲ್ಲಿ ನಾಟಕ ಆಡಿದ್ದರು. ಈ ಅಧಿಕಾರಿಯ ಹಿಂದೆ ಬಿದ್ದ ವಕೀಲರೊಬ್ಬರು ಪೊಲೀಸ್ ಇನ್ಸಫೆಕ್ಟರ್ ರನ್ನು ಅಮಾನತು ಮಾಡಿಸಿ ಶಾಸಕರ ವಸೂಲಿ ದಂಧೆಗೆ ಬಿಸಿ ಮುಟ್ಟಿಸಿದ್ದರು. ಇದಾದ ನಂತರ ಶಿರಸಿ ಕ್ಷೇತ್ರದಲ್ಲಿ ಅಧಿಕಾರಿಗಳು ವಸೂಲಿಗೆ,ಅಧಿಕಾರ ದುರುಪಯೋಗಕ್ಕೆ ಹೆದರುವಂತಾಗಿತ್ತು. ಆದರೆ ಈಗ ಶಿರಸಿ-ಸಿದ್ಧಾಪುರಗಳಲ್ಲಿ ಅಧಿಕಾರಿಗಳ ಅಂಧಾದರ್ಬಾರ್ ನಿಂದಾಗಿ ಜನಸಾಮಾನ್ಯರು ಗೋಳಾಡುವಂತಾಗಿರುವ ಬಗ್ಗೆ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸುತಿದ್ದಾರೆ.
ಇದೇ ತಿಂಗಳ ಪ್ರಾರಂಭದಲ್ಲಿ ಸಿದ್ಧಾಪುರ ಬಿಳಗಿಯಲ್ಲಿ ನಡೆದ ದನದ ವ್ಯಾಪಾರಿಯೊಬ್ಬರ ಹಲ್ಲೆಯ ವಿಚಾರದಲ್ಲಿ ಪೊಲೀಸರು ಆಡಳಿತ ಪಕ್ಷ ಮತ್ತು ಶಾಸಕರ ಪರವಾಗಿ ಕೆಲಸ ಮಾಡಿ ಗೋವಿಂದ ಗೌಡರಿಗೆ ಅನ್ಯಾಯ ಮಾಡಿದ್ದಾರೆ ಎಂದು ದೂರಲಾಗಿತ್ತು. ಈ ಪ್ರಕರಣದ ಆರೋಪಿಗಳ ರಕ್ಷಣೆ ಮಾಡುತ್ತಿರುವ ಸ್ಥಳೀಯ ಪೊಲೀಸರ ಅನ್ಯಾಯ ನಿಯಂತ್ರಿಸಬೇಕೆಂದು ಸಮಾಜವಾದಿ ಪಕ್ಷ ರಾಜ್ಯಪಾಲರಿಗೆ ದೂರು ನೀಡಿತ್ತು.
ಈ ಪ್ರಕರಣದಲ್ಲಿ ಪೊಲೀಸರ ಎದುರೇ ಗೂಂಡಾಗಿರಿ ಪ್ರದರ್ಶಿಸಿದ ವಿಧಾನಸಭಾ ಅಧ್ಯಕ್ಷ ಕಾಗೇರಿಯವರ ಆಪ್ತರ ಮೇಲೆ ನಾಮಕಾವಸ್ಥೆ ದೂರು ದಾಖಲಿಸಿ ಕೋಮುವಾದಿಗಳನ್ನು ರಕ್ಷಣೆ ಮಾಡಿರುವ ಬಗ್ಗೆ ಸಿದ್ಧಾಪುರ ಪೊಲೀಸರ ವಿರುದ್ಧ ಜಿಲ್ಲೆಯಾದ್ಯಂತ ವಿರೋಧ ವ್ಯಕ್ತವಾಗಿತ್ತು. ಇದಾಗಿ ಸರಿಯಾಗಿ ಎರಡು ವಾರ ಕಳೆದಿಲ್ಲ. ಸಾಮಾನ್ಯ ಅಪಘಾತದ ಪ್ರಕರಣವನ್ನು ಜಾತಿ ನಿಂದನೆ ಎಂದು ದೂರು ದಾಖಲಿಸಿ ಶಾಸಕರ ವಿರೋಧಿಸಿಗಳನ್ನು ಬಂಧಿಸಿರುವ ಬಗ್ಗೆ ಉಗ್ರರಾಗಿರುವ ಸ್ಥಳೀಯ ನಾಯಕರು ಪೊಲೀಸರ ವರ್ತನೆ ಖಂಡಿಸಿ ಪೊಲೀಸ್ ಠಾಣೆಗೆ ಮುತ್ತಿಗೆ ಹಾಕಿದ್ದರು. ಹೀಗೆ ಶಾಸಕರು, ಸಂಸದರಿಗೆ ಬೇಕಾದವರಿಗೆ ಒಂದು ನ್ಯಾಯ, ಅನ್ಯರಿಗೇ ಒಂದು ನ್ಯಾಯ ಮಾಡುತ್ತಿರುವ ಬಗ್ಗೆ ಸಾರ್ವಜನಿಕರ ವಿರೋಧ ವ್ಯಕ್ತವಾಗಿದೆ.
ಶಿರಸಿ-ಸಿದ್ಧಾಪುರದ ರಾಜಕೀಯ ಬೆಳವಣಿಗೆಯಿಂದ ಕಂಗೆಟ್ಟು ಹತಾಶರಾಗಿರುವ ಸ್ಫೀಕರ್ ಕಾಗೇರಿ ಅಧಿಕಾರಿಗಳ ಮೂಲಕ ಬಹುಸಂಖ್ಯಾತರು, ಜನಸಾಮಾನ್ಯರನ್ನು ಹಿಂಸಿಸುತಿದ್ದಾರೆ. ಈ ರಾಜಕೀಯ ದ್ವೇಶಕ್ಕೆ ಅಧಿಕಾರಿಗಳು ದಾಳವಾಗುತಿದ್ದಾರೆ ಎನ್ನುವ ಅರೋಪ ಸಾರ್ವಜನಿಕ ವಲಯದಿಂದ ಕೇಳಿಬಂದಿದೆ.