

ಡಿ.೧೦ ರಂದು ರಾಜ್ಯದ ೨೫ ವಿ.ಪ.ಕ್ಷೇತ್ರಗಳಿಂದ ನಡೆಯಲಿರುವ ಚುನಾವಣೆಯ ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಬಿ.ಜೆ.ಪಿ. ಬಿಡುಗಡೆ ಮಾಡಿದೆ. ಉತ್ತರ ಕನ್ನಡದಿಂದ ಕಾರವಾರದ ಗಣಪತಿ ಉಳ್ವೇಕರ್, ದ.ಕ. ದಿಂದ ಶ್ರೀನಿವಾಸ್ ಪೂಜಾರಿ ಸೇರಿ ಒಟ್ಟೂ ೨೦ ಜನರ ಹೆಸರನ್ನು ಪ್ರಕಟಿಸಿದೆ.

ಸಚಿವರಾಗಿರುವ ಶ್ರೀನಿವಾಸ್ ಪೂಜಾರಿ ಬಿ.ಜೆ.ಪಿ. ಟಿಕೇಟ್ ಪಡೆಯುವ ಬಗ್ಗೆ ಅನುಮಾನಗಳಿರಲಿಲ್ಲ. ಉತ್ತರ ಕನ್ನಡದಿಂದ ಪಕ್ಷಕ್ಕೆ ಸಲ್ಲಿಕೆಯಾದ ಒಟ್ಟೂ ೨೪ ಹೆಸರುಗಳಲ್ಲಿ ಗಣಪತಿ ಉಳ್ವೇಕರ್ ಹೆಸರು ಆಯ್ಕೆಯಾಗಿದೆ. ಅಣ್ಣ ಎಂದೇ ಕರೆಸಿಕೊಳ್ಳುವ ಕಾರವಾರದ ಗಣಪತಿ ಉಳ್ವೇಕರ್ ಕಾರವಾರದ ಹಿರಿಯ ರಾಜಕಾರಣಿಗಳಲ್ಲಿ ಒಬ್ಬರು. ವಸಂತ ಅಸ್ನೋಟಿಕರ್ ಅವಧಿಯಿಂದ ಈ ವರೆಗೆ ನಾಲ್ಕೈದು ಚುನಾವಣೆಗಳಲ್ಲಿ ಪಕ್ಷದ ಪರವಾಗಿ ಕೆಲಸ ಮಾಡಿದ್ದ ಗಣಪತಿ ಕಾರವಾರ ಶಾಸಕಿ ರೂಪಾಲಿ ನಾಯ್ಕರ ಆಪ್ತರಲ್ಲೊಬ್ಬರು.
ಮೀನುಗಾರರ ಮುಖಂಡರಾಗಿ, ಧಾರ್ಮಿಕ, ಸಾಮಾಜಿಕ ಮುಂದಾಳುವಾಗಿ ಉತ್ತರ ಕನ್ನಡದಲ್ಲಿ ಹೆಸರು ಮಾಡಿರುವ ಗಣಪತಿ ಈ ಹಿಂದಿನ ವಿ.ಪ. ಚುನಾವಣೆಯಲ್ಲಿ ಬಿ.ಜೆ.ಪಿ. ಅಭ್ಯರ್ಥಿಯಾಗಿ ೧೦೦೫ ಮತಗಳಿಸಿ ಪರಾಭವಗೊಂಡಿದ್ದರು. ಬದಲಾದ ಪರಿಸ್ಥಿತಿಯಲ್ಲಿ ಗಣಪತಿ ಉಳ್ವೇಕರ್ ರಿಗೆ ಬಿ.ಜೆ.ಪಿ. ಶಾಸಕರು, ಅರ್ಧದಷ್ಟಿರುವ ಬಿ.ಜೆ.ಪಿ. ಬೆಂಬಲಿತ ಮತದಾರರು ಕೈ ಹಿಡಿಯಬಹುದೆನ್ನುವ ನಂಬಿಕೆ ಇದೆ. ಜಿಲ್ಲಾ ಉಸ್ತುವಾರಿ ಸಚಿವ ಶಿವರಾಮ ಹೆಬ್ಬಾರ್, ವಿಧಾನಸಭಾ ಅಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ, ಸಂಸದ ಅನಂತಕುಮಾರ್ ಹೆಗಡೆ ಸೇರಿದಂತೆ ಪ್ರಮುಖರು ಜೊತೆಗೆ ನಿಲ್ಲದಿದ್ದರೂ ಸ್ವ ಸಾಮರ್ಥ್ಯ, ಉತ್ತಮ ಹೆಸರಿನಿಂದ ಬಿ.ಜೆ.ಪಿ. ಟಿಕೇಟ್ ಪಡೆದಿರುವ ಉಳ್ವೇಕರ್ ಟಿಕೇಟ್ ಪಡೆಯುವ ಸಾಹಸದಲ್ಲಿದ್ದ ಕೆ.ಜಿ.ನಾಯ್ಕ ಹಣಜಿಬೈಲ್,ಗೋವಿಂದ ನಾಯ್ಕ, ಸುನಿಲ್ ಹೆಗಡೆ,ನಾಗರಾಜ್ ನಾಯ್ಕ ತೊರಕೆ ಸೇರಿದ ಅನೇಕ ಘಟಾಘಟಿಗಳನ್ನು ಹಿಂದೆ ಸರಿಸಿ ಟಿಕೇಟ್ ಗಳಿಸಿದ್ದಾರೆ.
ಹಣಬಲದ ನಾಗರಾಜ್ ನಾಯ್ಕ ತೊರ್ಕೆ ಪರ ಶಿವರಾಮ್ ಹೆಬ್ಬಾರ್, ವಿಶ್ವೇಶ್ವರ ಹೆಗಡೆ ಕಾಗೇರಿ,ಅನಂತಕುಮಾರ ಹೆಗಡೆ ಲಾಬಿ ಮಾಡಿದ್ದರು ಎನ್ನುವುದು ಬಹಿರಂಗ ಗುಟ್ಟು. ಉತ್ತರ ಕನ್ನಡ ಜಿಲ್ಲೆಯಲ್ಲಿ ದೀವರನ್ನು ಬಿಟ್ಟರೆ ಜನಸಂಖ್ಯೆಯಲ್ಲಿ ಹೆಚ್ಚಿರುವ ಮೀನುಗಾರರ ಪ್ರತಿನಿಧಿಯಾಗಿರುವ ಗಣಪತಿ ಉಳ್ವೇಕರ್ ಸಜ್ಜನ,ಮಾನವೀಯ ವ್ಯಕ್ತಿ ಎಂದು ಗುರುತಿಸಿಲ್ಪಟ್ಟಿದ್ದಾರೆ. ಇವರ ವಿರುದ್ಧ ಕಾಂಗ್ರೆಸ್ ನ ಜಿಲ್ಲಾಧ್ಯಕ್ಷ ಭೀಮಣ್ಣ ನಾಯ್ಕ ಸ್ಫರ್ಧಿಯಾಗುವುದು ನಿಕ್ಕಿ ಎನ್ನಲಾಗಿದೆ.
