ಸಾಗರದಿಂದ ಜೋಗ್ ಗೆ ಹೋಗುವ ಬೆಂಗಳೂರು-ಹೊನ್ನಾವರ ರಸ್ತೆಯಲ್ಲಿ ಸಿರಿವಂತೆ ಎಂಬ ಪುಟ್ಟ ಊರಿದೆ. ಸಾಗರದಿಂದ ಕೇವಲ ಏಳು ಕೀ. ಮೀ. ಇಲ್ಲಿ ಸಾಗರದಿಂದ ಬರುವಾಗ ಎಡಕ್ಕೆ ನೋಟ ಹರಿಸಿದರೆ “ಚಿತ್ರ ಸಿರಿ” ನಾಮಫಲಕವಿರುವ ಪುಟ್ಟ ಕಟ್ಟಡ ಕಾಣಿಸುತ್ತದೆ. ಪಕ್ಕದಲ್ಲೇ ಮತ್ತೊಂದು ಕಟ್ಟಡದಲ್ಲಿ “ಕಣ್ತೆರೆಯುವ ಬುದ್ಧ” ನ ಪ್ರತಿಮೆಯನ್ನು ಸ್ಥಾಪನೆ ಮಾಡಲಾಗಿದೆ….ಇದು ಸಿರಿವಂತೆಯ ಚಂದ್ರಶೇಖರ ಎನ್. ಇವರ ಪರಿಕಲ್ಪನೆಯಲ್ಲಿ ಅನಾವರಣಗೊಂಡಿರುವ ಒಂದು ಸುಂದರ ತಾಣ. ಕಳೆದ ಮೂರು ದಶಕಗಳಿಂದ ಹಸೆಕಲೆಯಲ್ಲಿ ನೈಪುಣ್ಯ ಸಾಧಿಸಿರುವ ಚಂದ್ರಶೇಖರ ಹಾಗೂ ಅವರ ಮಡದಿ ತಯಾರಿಸುವ ಹಲವು ಹಸೆಕಲೆಯ ಚಿತ್ರಗಳು, ವಿವಿಧ ರೀತಿಯ ಭತ್ತದ ತೋರಣಗಳು, ಸುಂದರ ಚಿತ್ತಾರವಿರುವ ಕರಕುಶಲ ವಸ್ತುಗಳು ಇಲ್ಲಿ ಪ್ರದರ್ಶನ ಮತ್ತು ಮಾರಾಟಗೊಳ್ಳುತ್ತಿವೆ. ಸಾಂಪ್ರದಾಯಿಕ ಜಾನಪದ ಕಲೆಯನ್ನು ಉಳಿಸುವ, ಬೆಳೆಸುವ ನೆಲೆಯಲ್ಲಿ ಚಂದ್ರಶೇಖರ ಅವರ ಈ ಕಾರ್ಯ ಅಭಿನಂದನೀಯ…
“ಕಣ್ತೆರೆಯುವ ಬುದ್ಧ” ಈಗ ಒಂದು ವರ್ಷದ ಹಿಂದೆ ಸ್ಥಾಪನೆಯಾಗಿದ್ದು, ಇದು ಚಂದ್ರಶೇಖರ ಅವರ ಒಂದು ವಿಭಿನ್ನ ಪರಿಕಲ್ಪನೆ. ಬುದ್ಧ ಕಣ್ತೆರೆಯುವುದನ್ನು ನೋಡುವ ಮೊದಲು, ಚಂದ್ರಶೇಖರ ಹತ್ತು ನಿಮಿಷಗಳ ಕಾಲ ಪುಟ್ಟ ಉಪನ್ಯಾಸ ನೀಡುತ್ತಾರೆ. ಇದು ಅನೇಕ ವೈಚಾರಿಕ, ಮಾಹಿತಿಪೂರ್ಣ ವಿವರಗಳನ್ನು ಹೊಂದಿರುವುದು ವಿಶೇಷ. ಈ ಸರಳ, ಸುಂದರ ಉಪನ್ಯಾಸ ಕೇಳಿದ ನಂತರ ಬುದ್ಧ ಒಂದು ನಿಮಿಷ ಕಣ್ತೆರೆದು ಮುಚ್ಚಿದುದನ್ನು ನೋಡಿದಾಗ ನಮ್ಮೊಳಗೇ ಒಂದು ವಿಶಿಷ್ಟ ಅನುಭೂತಿ ಉಂಟಾಗುತ್ತದೆ…ಈ ಸಾಗರ-ಹೊನ್ನಾವರ ರಸ್ತೆಯಲ್ಲಿ ಸಾಗುವಾಗ ಕೆಲಕಾಲ ಇಲ್ಲಿ ವ್ಯಯಿಸಿದರೆ ಒಂದು ಸುಂದರ ಅನುಭವ ನಮ್ಮದಾಗುವುದರಲ್ಲಿ ಸಂದೇಹವಿಲ್ಲ. ಸರಳ, ಸಜ್ಜನ ಚಂದ್ರಶೇಖರ ಅವರ ಪರಿಚಯ ಕೂಡ ಸಂತೋಷ ನೀಡುವ ಸಂಗತಿ…ಗಜಾನನ ಮಹಾಲೆ.