

ಮುರುಡೇಶ್ವರದ ಮೂರ್ತಿಯ ವಿಚಾರವಿರಲಿ ರಾಜ್ಯದ ಕಾನೂನು ಸು ವ್ಯವಸ್ಥೆಯ ವಿಷಯವಿರಲಿ ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆಗೆ ಭಂಗ ತರುವುದನ್ನು ಸಹಿಸುವುದಿಲ್ಲ ಎಂದು ದೃಢಪಡಿಸಿರುವ ರಾಜ್ಯ ಗೃಹ ಸಚಿವ ಅರಗ ಜ್ಞಾನೇಂದ್ರ ಐಸಿಸ್ ಅಥವಾ ಆಂತರಿಕ ಸವಾಲುಗಳ ಬಗ್ಗೆ ನಿಗಾ ಇಡಲು ಕರಾವಳಿ ಕಾವಲು ಪಡೆ ಜೊತೆಗೆ ಇತರ ವಿಭಾಗಗಳನ್ನು ಬಲಪಡಿಸಲಾಗಿದೆ ಎಂದು ತಿಳಿಸಿದ್ದಾರೆ.
ಉತ್ತರ ಕನ್ನಡ ಜಿಲ್ಲೆಗೆ ಖಾಸಗಿ ಕಾರ್ಯಕ್ರಮಕ್ಕೆ ಆಗಮಿಸಿದ್ದ ಅರಗಜ್ಞಾನೇಂದ್ರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿ ರಾಜ್ಯದಲ್ಲಿ ಸರ್ಕಾರ ಅಸ್ಥಿರಗೊಳಿಸುವ ಜೊತೆಗೆ ಆಂತರಿಕ ಕ್ಷೋಭೆ ಹುಟ್ಟಿಸಲು ಕೆಲವು ಹಿತಾಸಕ್ತಿಗಳು ಪ್ರಯತ್ನಿಸುತ್ತಿವೆ. ಅಂತಹ ಪ್ರಯತ್ನ ತಡೆಯಲು ಸರ್ಕಾರ ಸಮರ್ಥವಾಗಿದ್ದು ರಾಜ್ಯದ ಜನರ ಹಿತಾಸಕ್ತಿ, ಶಾಂತಿ-ಸುವ್ಯವಸ್ಥೆ ವಿಚಾರದಲ್ಲಿ ಯಾರೊಂದಿಗೂ ರಾಜಿ ಇಲ್ಲ ಎಂದರು.
ಮುರುಡೇಶ್ವರದಲ್ಲಿ ಶಿವ ಪ್ರತಿಮೆ ಧ್ವಂಸದ ಬಗ್ಗೆ ಐಸಿಸ್ ಪತ್ರಿಕೆಯಲ್ಲಿ ಬಂದ ಚಿತ್ರ-ವರ್ತಮಾನಗಳ ಹಿನ್ನೆಲೆಯಲ್ಲಿ ಉತ್ತರ ಕನ್ನಡ ಜಿಲ್ಲೆಯಲ್ಲಿ ಚರ್ಚೆಗಳು ನಡೆಯುತ್ತಿವೆ. ಈ ವೈರಲ್ ವಿಷಯದ ಬಗ್ಗೆ ಮಾತನಾಡಿಡುವ ಗೃಹ ಸಚಿವ ಅರಗಜ್ಞಾನೇಂದ್ರ ಎಲ್ಲಾ ವಿಚಾರಗಳ ಬಗ್ಗೆ ಮಾಹಿತಿ ಸಂಗ್ರಹಿಸುತಿದ್ದೇವೆ. ರಾಷ್ಟ್ರೀಯವಾದಿಗಳ ವಿರುದ್ಧ ಷಡ್ಯಂತ್ರ ನಡೆಯುತ್ತಿದೆ. ಇದರ ಪರಿಣಾಮವಾಗಿ ಅನುಚಿತ ಕೆಲಸಗಳು ನಡೆಯುತ್ತಿವೆ. ಇದಕ್ಕೆಲ್ಲಾ ಬೆದರುವ ನಾಯಕತ್ವ ನಮ್ಮದಲ್ಲ ಎಲ್ಲಾ ತಂತ್ರಗಳಿಗೆ ಪ್ರತಿತಂತ್ರ ರೂಪಿಸಲು ನಾವು ಸಿದ್ಧರಿದ್ದೇವೆ ಎಂದರು.
ಇದೇ ಸಂದರ್ಭದಲ್ಲಿ ರಾಜ್ಯ ವಿಧಾನಸಭಾ ಅಧ್ಯಕ್ಷ ವಿಶ್ವೇಶ್ವರ ಹೆಗಡೆಯವರಿಗೆ ರಾಜಮಾನ್ಯ ಪ್ರಶಸ್ತಿ ಪ್ರಧಾನ ಮಾಡಿ ಮಾತನಾಡಿದ ಸಚಿವರು ವಿಶ್ವೇಶ್ವರ ಹೆಗಡೆ ಕಾಗೇರಿ ತಮ್ಮ ಸಚ್ಚಾರಿತ್ರ್ಯದಿಂದ ಮಾದರಿ ಸಭಾಪತಿಯಾಗಿ ಹೆಸರುಮಾಡಿದ್ದಾರೆ ಎಂದು ಶ್ಲಾಘಿಸಿದರು. ಒಕ್ಕಲಿಗ ಸಮಾಜದ ಸನ್ಮಾನ ಸ್ವೀಕರಿಸಿದ ಸಚಿವ ಅರಗಜ್ಞಾನೇಂದ್ರ ಮತ್ತು ವಿಧಾನಸಭಾ ಅಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಹಳೆಮೈಸೂರು ಭಾಗ ಬಿಟ್ಟರೆ ಇತರೆಡೆ ಒಕ್ಕಲಿಗರಿಗೆ ನ್ಯಾಯ ಸಿಕ್ಕಿಲ್ಲ ಎಂದು ಪ್ರತಿಪಾದಿಸಿದರು..


