ಉತ್ತರ ಕರ್ನಾಟಕ, ಹಳೆ ಮೈಸೂರು ಭಾಗದಲ್ಲಿ ವಿಫುಲವಾಗಿ ಬೆಳೆಯುವ ಕಬ್ಬು ಮಲೆನಾಡಿನಲ್ಲಿ ಕಾಣಸಿಗುವುದು ಅಪರೂಪವಾಗುತ್ತಿದೆ. ಕಾಡುಪ್ರಾಣಿಗಳ ಹಾವಳಿ ಪ್ರತಿಕೂಲ ವಾತಾವರಣದಿಂದಾಗಿ ಮಲೆನಾಡಿನ ರೈತರು ಕಬ್ಬು ಬೆಳೆಯುವುದನ್ನೇ ಬಿಡುತಿದ್ದಾರೆ. ಆದರೆ ಮಲೆನಾಡಿನಲ್ಲಿ ಬಾನೆತ್ತರ ಬೆಳೆಯುವ ಕಬ್ಬನ್ನು ಬೆಳೆದು ದಾಖಲೆ ಮಾಡಿದ ರೈತರೊಬ್ಬರು ಉತ್ತರ ಕನ್ನಡ ಜಿಲ್ಲೆಯ ಸಿದ್ಧಾಪುರದಲ್ಲಿದ್ದಾರೆ.
ಸಿದ್ಧಾಪುರ ತಾಲೂಕು ಹಳದೋಟದ ವಿನಾಯಕ ಹೆಗಡೆ ಯುವ ಕೃಷಿಕ, ಅಡಿಕೆ ಬೆಳೆಯನ್ನು ಪ್ರಧಾನವಾಗಿ ಬೆಳೆಯುವ ಈ ಯುವ ಕೃಷಿಕರಿಗೆ ಕಬ್ಬು ಬೆಳೆ ವಿರಳವಾಗುತ್ತಿರುವ ಬಗ್ಗೆ ಹುಟ್ಟಿದ ಕಳವಳವೇ ಕತೂಹಲವಾಗಿ ಯೂಟ್ಯೂಬ್ ನಲ್ಲಿ ಕಬ್ಬು ಬೆಳೆಯುವ ವಿನೂತನ ವಿಧಾನಗಳನ್ನು ಹುಡುಕುತ್ತಾರೆ. ಇದರ ಪರಿಣಾಮ ಕಡಿಮೆ ಪ್ರದೇಶದಲ್ಲಿ ಹೆಚ್ಚಿನ ಇಳುವರಿ ನೀಡುವ ಕಬ್ಬಿನ ಕುಳಿ ಪದ್ಧತಿಗೆ ಮೊರೆಹೋಗುತ್ತಾರೆ.
ವಿನಾಯಕ ಹೆಗಡೆಯವರ ಪ್ರಯೋಗಶೀಲತೆಯ ಫಲಶೃತಿಯಾಗಿ ಹಳದೋಟದ ತಮ್ಮ ಪುಟ್ಟ ಜಮೀನಿನಲ್ಲಿ ಕುಳಿ ಪದ್ಧತಿಯಲ್ಲಿ ಕಬ್ಬು ನಾಟಿ ಮಾಡಿದ ಪರಿಣಾಮ ಕಬ್ಬು ಆಳೆತ್ತರ ದಾಟಿ ಅಡಿಕೆ ಮರದಂತೆ ಎತ್ತರಕ್ಕೆ ಬೆಳೆದು ನಿಂತಿದೆ.
ಕಳೆದ ಮೂರು ವರ್ಷಗಳ ಹಿಂದೆ ಪ್ರಾರಂಭಿಸಿದ ಕುಳಿ ಪದ್ಧತಿಯ ಕಬ್ಬಿನ ಬೆಳೆಗೆ ವಿಶೇಶ ತಳಿಯನ್ನೇನೂ ತಂದಿಲ್ಲ. ಆಳೆತ್ತರ ಬೆಳೆಯುವ ಸ್ಥಳಿಯ ತಳಿಗಳಾದ ಕೋಣನಕಟ್ಟೆ, ಬೂದು ಕಬ್ಬು, ಹಸಿರು ಕಬ್ಬು ಗಳನ್ನೇ ವೃತ್ತಾ ಕಾರವಾಗಿ ನಾಟಿ ಮಾಡಿದ ಇವರಿಗೆ ಕಬ್ಬಿನ ಎತ್ತರ ಹಿಂಡು ನೋಡಿ ಆಶ್ಚರ್ಯವಾಯಿತು. ಕಳೆದ ಮೂರು ವರ್ಷಗಳ ಹಿಂದೆ ನಾಟಿ ಮಾಡಿದ ಈ ಕಬ್ಬು ಆಕಾಶದೆತ್ತರಕ್ಕೆ ಬೆಳೆದು ಈಗ ಮೂರನೇ ವರ್ಷ ಮೂರನೇ ಬೆಳೆ ನೀಡಿದೆ.
ವರ್ಷದಿಂದ ವರ್ಷಕ್ಕೆ ಕಬ್ಬಿನ ಎತ್ತರ ಕಡಿಮೆಯಾಗುತ್ತಿದೆ ಎನ್ನುವ ವಿನಾಯಕ ಹೆಗಡೆ ಈ ಕುಳಿ ಪದ್ಧತಿ ಕಬ್ಬು ತನ್ನ ಎತ್ತರದ ಭಾರಕ್ಕೆ ಬೀಳಬಾರದೆಂದು ಬಿದಿರಿನ ತಡೆಯ ರಕ್ಷಣಾ ಬೇಲಿ ನಿರ್ಮಿಸಿದ್ದಾರೆ. ಆರೆಂಟು ಅಡಿ ಎತ್ತರ ಬೆಳೆಯುತಿದ್ದ ಮಲೆನಾಡಿನ ಸಾಂಪ್ರದಾಯಿಕ ಕಬ್ಬು ದುಪ್ಪಟ್ಟು ಬೆಳೆದು ಡಬ್ಬಲ್ ಇಳುವರಿಯನ್ನೂ ನೀಡುತ್ತಿದೆ.
ಮಲೆನಾಡಿನ ವಿಶಿಷ್ಟ ಪ್ರಯೋಗವಾದ ಈ ಕಬ್ಬಿನ ಕುಳಿ ಪದ್ಧತಿ ಈಗ ಆಕರ್ಷಣೆಯ ಕೇಂದ್ರವೂ ಆಗಿದೆ. ಕಡಿಮೆ ಪ್ರದೇಶದಲ್ಲಿ ಹೆಚ್ಚಿನ ಇಳುವರಿ ಪಡೆದು ಕುಳಿ ಪದ್ಧತಿಯಲ್ಲಿ ಕಬ್ಬಿನ ಬೆಳೆಯ ಲಾಭ ಹೆಚ್ಚಿಸಿಕೊಳ್ಳಬಹುದೆನ್ನುವ ಪ್ರಯೋಗ ಮಾಡಿದ ವಿನಾಯಕ ಹೆಗಡೆ ಪ್ರಯತ್ನಕ್ಕೆ ವ್ಯಾಪಕ ಪ್ರಶಂಸೆಯೂ ವ್ಯಕ್ತವಾಗಿದೆ.ಕುಳಿ ಪದ್ಧತಿಯ ಕಬ್ಬಿನ ಬೆಳೆ ಮಲೆನಾಡಿನ ರೈತರಿಗೆ ಸಿಹಿಯಾಗಿ ಹಿತವಾಗುತ್ತಿದೆ.