ವಿಮಾ ಸಂಸ್ಥೆಗಳಿಗೆ 2 ಸಾವಿರ ಕೋಟಿ ರೂ ಲಾಭ: ಪ್ರಧಾನ ಮಂತ್ರಿ ಫಸಲ್ ಭೀಮಾ ಯೋಜನೆಯಿಂದ ವಿಮಾ ಕಂಪನಿಗಳು ರೈತರ ಹಣವನ್ನು ಲೂಟಿ ಮಾಡುತ್ತಿವೆ: ಕಾಂಗ್ರೆಸ್
ಪ್ರಧಾನ ಮಂತ್ರಿ ಫಸಲ್ ಭೀಮಾ ಯೋಜನೆ(PMFBY)ಯಿಂದ ವಿಮಾ ಕಂಪನಿಗಳು ರೈತರ ಹಣವನ್ನು ಲೂಟಿ ಮಾಡುತ್ತಿದ್ದು, 2 ಸಾವಿರ ಕೋಟಿ ರೂ ಲಾಭ ಮಾಡಿವೆ ಎಂದು ಕಾಂಗ್ರೆಸ್ ಆರೋಪಿಸಿದೆ.
ಬೆಳಗಾವಿ: ಪ್ರಧಾನ ಮಂತ್ರಿ ಫಸಲ್ ಭೀಮಾ ಯೋಜನೆ(PMFBY)ಯಿಂದ ವಿಮಾ ಕಂಪನಿಗಳು ರೈತರ ಹಣವನ್ನು ಲೂಟಿ ಮಾಡುತ್ತಿದ್ದು, 2 ಸಾವಿರ ಕೋಟಿ ರೂ ಲಾಭ ಮಾಡಿವೆ ಎಂದು ಕಾಂಗ್ರೆಸ್ ಆರೋಪಿಸಿದೆ.
ಬೆಳಗಾವಿಯ ಸುವರ್ಣ ಸೌಧದಲ್ಲಿ ನಡೆಯುತ್ತಿರುವ ಚಳಿಗಾಲದ ಅಧಿವೇಶನದಲ್ಲಿ ಮಾತನಾಡಿದ ಭಾಲ್ಕಿಯ ಕಾಂಗ್ರೆಸ್ ಶಾಸಕ ಈಶ್ವರ್ ಖಂಡ್ರೆ, ರಾಜ್ಯದ ರೈತರು ಫಸಲ್ ಭೀಮಾ ಯೋಜನೆಯಡಿಯಲ್ಲಿ ಕಟ್ಟಿದ ಕಂತಿನಲ್ಲಿ ವಿಮಾ ಕಂಪನಿಗಳು 2 ಸಾವಿರ ಕೋಟಿ ರೂಪಾಯಿ ಲಾಭ ಕಂಡಿವೆ. ಪ್ರಧಾನ ಮಂತ್ರಿ ಫಸಲ್ ಭೀಮಾ ಯೋಜನೆಯಿಂದ ವಿಮಾ ಕಂಪನಿಗಳು ರೈತರ ಹಣವನ್ನು ಲೂಟಿ ಮಾಡುತ್ತಿವೆ ಎಂದು ಆರೋಪಿಸಿದರು.
‘ಪ್ರಧಾನ ಮಂತ್ರಿ ಫಸಲ್ ಭಿಮಾ ಯೋಜನೆಯಡಿ 2016 ರಿಂದ 2021ರವರೆಗೆ ರೈತರು ಕಂತು ಹಾಗೂ ಕೇಂದ್ರ ಮತ್ತು ರಾಜ್ಯ ಸರ್ಕಾರದ ಸೇರಿ ಕಟ್ಟಿರುವ ಹಣ 7,992 ಕೋಟಿ ರೂಪಾಯಿ. ಆದರೆ, ವಿಮೆಯಡಿ ಕೃಷಿಕರಿಗೆ ದೊರೆತಿದ್ದು 5,992 ಕೋಟಿ ರೂಪಾಯಿ. 5 ವರ್ಷಗಳಲ್ಲಿ ವಿಮಾ ಕಂಪನಿಗಳಾದ ಸೋಂಪೊ, ಜಿಐಸಿ, ಟಾಟಾ ಬರೋಬ್ಬರಿ 2 ಸಾವಿರ ಕೋಟಿ ರೂಪಾಯಿ ಲಾಭ ಗಳಿಸಿವೆ. ಫಸಲ್ ಭಿಮಾ ಯೋಜನೆ ಕೇವಲ ಉದ್ಯೋಗಪತಿಗಳಿಗೆ ಲಾಭ ಮಾಡಿ ಕೊಡುವ ಸ್ಕೀಮ್ ಆಗಿದೆ ಎಂದು ಖಂಡ್ರೆ ಆಪಾದಿಸಿದರು.
ಅಂತೆಯೇ, ‘2017ರಲ್ಲಿ ಬೀದರ್ ಜಿಲ್ಲೆಯೊಂದರಲ್ಲೇ ಸೋಂಪೋ ವಿಮಾ ಕಂಪನಿಗೆ 1 ಲಕ್ಷ 77 ಸಾವಿರ 563 ರೈತರು ನೋಂದಣಿ ಮಾಡಿಕೊಂಡಿದ್ದರು. 14 ಕೋಟಿ 30 ಲಕ್ಷ ರೂಪಾಯಿ ರೈತರು ಕಂತನ್ನು ಕಟ್ಟಿದ್ದರು. ಇದರಲ್ಲಿ ಕೇಂದ್ರ ಹಾಗೂ ರಾಜ್ಯದ ತಲಾ ಪಾಲು 86 ಕೋಟಿ 29 ಲಕ್ಷ ರೂಪಾಯಿ. ಈ ಎಲ್ಲ ಮೊತ್ತ ಬೀದರ್ ಜಿಲ್ಲೆಯೊಂದರಿಂದಲೇ ಸೋಂಪೊ ಕಂಪನಿಗೆ ಹೋಗಿದ್ದು ಬರೋಬ್ಬರಿ 186 ಕೋಟಿ 89 ಲಕ್ಷ. ಇದರಲ್ಲಿ ರೈತನಿಗೆ ಬೆಳೆ ವಿಮೆ ಹಣ ಪಾವತಿ ಮಾಡಿದ್ದು ಕೇವಲ 84 ಲಕ್ಷ ರೂಪಾಯಿ. ಇದರೊಂದಿಗೆ ಬೀದರ್ ಜಿಲ್ಲಯೊಂದರಿಂದಲೇ ಸೋಂಪೊ ಕಂಪನಿಗೆ ಆಗಿರುವ ಲಾಭ 186 ಕೋಟಿ ರೂಪಾಯಿ ಎಂದು ಖಂಡ್ರೆ ಹೇಳಿದರು.
ಪ್ರಸಕ್ತ ವರ್ಷದಲ್ಲಿ ಬೀದರ್ ನಲ್ಲಿ 2 ಲಕ್ಷ 9 ಸಾವಿರದ 812 ರೈತರು ನೋಂದಣಿ ಮಾಡಿ 9 ಕೋಟಿ ರೂಪಾಯಿ ಕಂತು ಕಟ್ಟಿದ್ದರು. ರಾಜ್ಯ ಹಾಗೂ ಕೇಂದ್ರ ಸರ್ಕಾರದಿಂದ 128 ರೂಪಾಯಿಯನ್ನು ವಿಮಾ ಕಂಪನಿಗೆ ಪಾವತಿಸಲಾಗಿದೆ. ಫಸಲ್ ಭಿಮಾ ಯೋಜನೆಯಡಿ ಸ್ಥಳೀಯ ವಿಪತ್ತು ನಿಯಮಾವಳಿ ಪ್ರಕಾರ ಒಂದೂವರೆ ತಿಂಗಳಲ್ಲಿ ರೈತರಿಗೆ ಪರಿಹಾರ ನೀಡಬೇಕು. ಅಲ್ಲದೆ ತೀವ್ರ ಪ್ರವಾಹವಾಗಿ ಬೆಳೆ ಹಾನಿಯಾದರೆ 3 ದಿನದೊಳಗೆ ರೈತರು ವಿಮಾ ಕಂಪನಿಯ ಟೋಲ್ ಫ್ರೀ ನಂಬರ್ ಗೆ ಕರೆ ನೀಡಿ ವಿಮಾ ಕಂಪನಿಗೆ ದೂರು ನೀಡಬೇಕು. ಆದರೆ, ರೈತರು ಕರೆ ಮಾಡಿದಾಗ ಟೋಲ್ ಫ್ರೀ ನಂಬರ್ ಹಾಗೂ ವೆಬ್ ಲಿಂಕ್ ಅನ್ನು ಬಂದ್ ಮಾಡಲಾಗಿತ್ತು. ರೈತರಿಗೆ ಒಟ್ಟು ವಿಮಾ ಭರವಸೆ ನೀಡಿದ್ದು 492 ಕೋಟಿ ರೂಪಾಯಿ ಇದೆ.
ನ್ಯಾಯಯುತವಾಗಿ ರೈತರಿಗೆ ಬರಬೇಕಾದ ವಿಮಾ ಮೊತ್ತ ಒಟ್ಟು 250 ಕೋಟಿ ರೂಪಾಯಿ. ಆದರೆ, ಕಂಪನಿ ಮತ್ತು ಅಧಿಕಾರಿಗಳು ಒಳ ಒಪ್ಪಂದ ಮಾಡಿಕೊಂಡು ರೈತರಿಗೆ ಸಿಗಬೇಕಾದ ಬೆಳೆ ವಿಮೆ ಸಿಗುತ್ತಿಲ್ಲ ಎಂದು ಆರೋಪಿಸಿದರು. ಕೇವಲ ಒಂದು ರಾಜ್ಯದಿಂದ 2 ಸಾವಿರ ಕೋಟಿ ರೂಪಾಯಿ ಲಾಭವನ್ನು ವಿಮಾನ ಕಂಪನಿಗಳು ಮಾಡಿಕೊಂಡಿವೆ. ಖಾಸಗಿ ಕಂಪನಿಗೆ ಕೊಡುವುದನ್ನು ಬಿಟ್ಟು ಈ ಹಿಂದಿನಂತೆ ರಾಜ್ಯ ಸರ್ಕಾರ ಹೊಣೆ ಹೊತ್ತುಕೊಳ್ಳಬೇಕು. ಕಂಪನಿಗಳಿಂದ ಮೋಸ, ವಂಚನೆಯಾಗುತ್ತಿದೆ. ಸರ್ಕಾರ ಮುತುವರ್ಜಿ ವಹಿಸಿ ಫಸಲ್ ಭಿಮಾ ಯೋಜನೆ ಪರಿಷ್ಕರಣೆ ಮಾಡಬೇಕು ಎಂದು ಖಂಡ್ರೆ ಆಗ್ರಹಿಸಿದರು.
(kpc)