ಅಕ್ರಮ ಮದ್ಯ ಮಾರಾಟಕ್ಕೆ ಗುರಿ ನಿಗದಿಯೇ ಕಾರಣ, ಜನರ ಆರೋಗ್ಯಕ್ಕಿಂತ ಆದಾಯ ದೊಡ್ಡದಲ್ಲ: ಸ್ಪೀಕರ್ ಕಾಗೇರಿ
ಮದ್ಯ ಮಾರಾಟಕ್ಕೆ ಸಂಬಂಧಿಸಿದಂತೆ ಅಬಕಾರಿ ಇಲಾಖೆಗೆ ಹಣಕಾಸು ಇಲಾಖೆ ಗುರಿ ನಿಗದಿಪಡಿಸಿರುವುದರಿಂದ ಗ್ರಾಮೀಣ ಪ್ರದೇಶದಲ್ಲಿ ಆಗುತ್ತಿರುವ ಸಮಸ್ಯೆಗಳ ಬಗ್ಗೆ ಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು ತಮ್ಮ ದನಿಯೆತ್ತಿದ…
ಬೆಳಗಾವಿ: ಮದ್ಯ ಮಾರಾಟಕ್ಕೆ ಸಂಬಂಧಿಸಿದಂತೆ ಅಬಕಾರಿ ಇಲಾಖೆಗೆ ಹಣಕಾಸು ಇಲಾಖೆ ಗುರಿ ನಿಗದಿಪಡಿಸಿರುವುದರಿಂದ ಗ್ರಾಮೀಣ ಪ್ರದೇಶದಲ್ಲಿ ಆಗುತ್ತಿರುವ ಸಮಸ್ಯೆಗಳ ಬಗ್ಗೆ ಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು ತಮ್ಮ ದನಿಯೆತ್ತಿದ ಪ್ರಸಂಗಕ್ಕೆ ಸದನ ಮಂಗಳವಾರ ಸಾಕ್ಷಿಯಾಯಿತು.
ಅಕ್ರಮ ಮದ್ಯ ಮಾರಾಟದ ಬಗ್ಗೆ ಕಾಂಗ್ರೆಸ್ ಶಾಸಕ ತುಕರಾಮ್ ಪ್ರಸ್ತಾಪ ಮಾಡಿದರು. ಈ ಸಂದರ್ಭದಲ್ಲಿ ಮಾತನಾಡಿದ ಸ್ಪೀಕರ್ ಕಾಗೇರಿ ಅವರು ಮದ್ಯ ಮಾರಾಟದಿಂದ ರಾಜ್ಯ ಸರ್ಕಾರಕ್ಕೆ ಆದಾಯವಿದೆ ನಿಜ. ಆದರೆ ಆದಾಯದ ಹೆಚ್ಚಳಕ್ಕಾಗಿ ಹಣಕಾಸು ಇಲಾಖೆ ಹೆಚ್ಚು ಮದ್ಯ ಮಾರಾಟದ ಗುರಿಯನ್ನು ನಿಗದಿಪಡಿಸುವುದರಿಂದಲೂ ಗ್ರಾಮೀಣ ಪ್ರದೇಶದಲ್ಲಿ ಅಕ್ರಮ ಮದ್ಯ ಮಾರಾಟವಾಗಲು ಕಾರಣವಾಗಿದೆ ಎಂದು ಸಮಸ್ಯೆ ಬಗ್ಗೆ ಹೆಚ್ಚಿನ ಬೆಳಕು ಚೆಲ್ಲಿದರು.
ಮದ್ಯ ಮಾರಾಟದಿಂದಾಗಿ ದಿನೇದಿನೇ ಗ್ರಾಮೀಣ ಪ್ರದೇಶದಲ್ಲಿ ಸಮಸ್ಯೆಗಳು ಹೆಚ್ಚಾಗುತ್ತಿವೆ. ಸಂಬಂಧಿಸಿದ ಹಿರಿಯ ಅಧಿಕಾರಿಗಳನ್ನು ಗ್ರಾಮೀಣ ಪ್ರದೇಶಗಳಿಗೆ ಕಳಿಸಿದರೆ ಅವರಿಗೆ ಸಮಸ್ಯೆಯ ಅರಿವಾಗುತ್ತದೆ. ಗ್ರಾಮೀಣ ಪ್ರದೇಶದಲ್ಲಿ ಅಕ್ರಮ ಮದ್ಯ ಮಾರಾಟ ನಿಲ್ಲಬೇಕೆಂದರೆ ಹಣಕಾಸು ಇಲಾಖೆಯವರು ಅಬಕಾರಿ ಇಲಾಖೆಗೆ ಗುರಿ ನಿಗದಿಪಡಿಸುವುದನ್ನು ಬಿಡಬೇಕು ಎಂದು ಅವರು ಅಭಿಪ್ರಾಯಪಟ್ಟರು.
ಗ್ರಾಮೀಣ ಜನತೆಯ ಹಿತದೃಷ್ಟಿಯಿಂದ ವರ್ಷದಿಂದ ವರ್ಷಕ್ಕೆ ಹಣಕಾಸು ಇಲಾಖೆಯವರು ಅಬಕಾರಿ ಇಲಾಖೆಗೆ ಗುರಿ ನಿಗದಿ ಮಾಡುವುದನ್ನು ಕಡಿಮೆ ಮಾಡುತ್ತಾ ಬರಬೇಕು. ಜನರ ಆರೋಗ್ಯಕ್ಕಿಂತ ಮದ್ಯ ಮಾರಾಟದಿಂದ ಬರುವ ಆದಾಯ ದೊಡ್ಡದಲ್ಲ. ಹಣಕಾಸು ಸಚಿವರೂ ಆಗಿರುವ ಮುಖ್ಯಮಂತ್ರಿ ಅವರು ಈ ಸಮಸ್ಯೆ ಬಗ್ಗೆ ಗಮನ ಹರಿಸಬೇಕೆಂದು ಸ್ಪೀಕರ್ ಸಲಹೆ ಮಾಡಿದರು.
ಮದ್ಯ ಮಾರಾಟದಲ್ಲಿ ಟಾರ್ಗೆಟ್ ಫಿಕ್ಸ್ ಮಾಡಿ ಹಣ ಗಳಿಸೋದು ಸರಿಯಲ್ಲ ಎಂದು ಶಾಸಕ ತುಕಾರಾಂ ಅಭಿಪ್ರಾಯಪಟ್ಟರು. ಇವರ ಪ್ರಶ್ನೆಗೆ ಉತ್ತರ ನೀಡಿದ ಅಬಕಾರಿ ಸಚಿವ ಕೆ. ಗೋಪಾಲಯ್ಯ, ಸಂಡೂರು ತಾಲ್ಲೂಕಿನಲ್ಲಿ ಅಕ್ರಮವಾಗಿ ಮದ್ಯ ಮಾರಾಟ ಮಾಡ್ತಿದ್ರು. ನಮ್ಮ ಇಲಾಖೆಯ ಆಧಿಕಾರಿಗಳು ರೇಡ್ ಮಾಡಿದ್ದಾರೆ. ಮದ್ಯದ ಜೊತೆಗೆ ಅಕ್ರಮ ವಾಹನಗಳನ್ನು ವಶ ಪಡಿಸಿಕೊಂಡಿದ್ದಾರೆ. ನಾಳೆ ಸಂಜೆ ಉತ್ತರ ಕನ್ನಡ ಜಿಲ್ಲೆಯ ಅಧಿಕಾರಿಗಳ ಸಭೆ ಕರೆದಿದ್ದೇನೆ. ಅಕ್ರಮ ಮದ್ಯ ಮಾರಾಟ ಕಡಿವಾಣದ ಬಗ್ಗೆ ಸೂಚನೆ ಕೊಡ್ತೇನೆ ಎಂದರು.
ಅಬಕಾರಿ ಸಚಿವರ ಉತ್ತರ ವಿಧಾನಸಭೆ ಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಅವರಿಗಾಗಲಿ, ಶಾಸಕ ತುಕಾರಾಂ ಅವರಿಗಾಗಲಿ ಸಮಾಧಾನ ನೀಡಲಿಲ್ಲ. ಹೆಚ್ಚು ಮದ್ಯ ಮಾರಾಟ ಮಾಡಿ ಎಂದು ಹಣಕಾಸು ಇಲಾಖೆ ಗುರಿ ನಿಗದಿ ಮಾಡದಿದ್ದಾಗ ಮಾತ್ರ ಗೋಪಾಲಯ್ಯ ಅವರು ಸಮಂಜಸವಾದ ಉತ್ತರ ಕೊಡಲು ಸಾಧ್ಯವಾಗುತ್ತದೆ ಎಂದು ಸ್ಪೀಕರ್ ಕಾಗೇರಿ ಹೇಳಿದರು.