

ಕರ್ನಾಟಕ ರತ್ನ, ಯುವರತ್ನ ಪುನೀತ್ ರಾಜ್ ಕುಮಾರ್ ಬದುಕಿದ್ದಾಗ ನಾಯಕನಟನಾಗಿ ಪ್ರಸಿದ್ಧರಾಗಿದ್ದರು. ಅವರ ಸಾವಿನ ನಂತರ ಅವರು ನಿಜಜೀವನದ ಹೀರೋ ಆಗಿದ್ದಕ್ಕೆ ಅನೇಕ ದೃಷ್ಟಾಂತಗಳಿವೆ. ಉತ್ತರ ಕನ್ನಡ ಜಿಲ್ಲೆ ಎಂದರೆ ಪಂಚಪ್ರಾಣವಾಗಿದ್ದ ಅಪ್ಪು ಇಲ್ಲಿಗೆ ಬಂದು ಮರಳಿದ ನಂತರವೇ ಇಲ್ಲಿ ಸುದ್ದಿಯಾಗುತಿತ್ತು. ಈಗ ಪುನೀತ್ ನೆನಪಿಗೆ ಅವರ ಸಮಾಜಮುಖಿ ಬದುಕಿಗೆ ಸಮರ್ಪಣೆ ಎನ್ನುವ ವಿನೂತನ ಕಾರ್ಯಕ್ರಮ ಒಂದು ಸಿದ್ಧಾಪುರದಲ್ಲಿ ನಡೆಯಿತು.
ಸಿದ್ಧಾಪುರದ ಶಂಕರಮಠದಲ್ಲಿ ಪರಿವರ್ತನೆ ಟೀಮ್ ಮತ್ತು ರಾಜ್ಯ ಬಿ.ಎಸ್.ಎನ್. .ಡಿ.ಪಿ. ಗಳು ಸ್ಥಳಿಯರ ಜೊತೆಗೂಡಿ ಅಪ್ಪು ಸಮರ್ಪಣೆ ಕಾರ್ಯಕ್ರಮ ಸಂಘಟಿಸಿದ್ದರು. ಈ ಕಾರ್ಯಕ್ರಮದಲ್ಲಿ ಪುನೀತ್ ರಿಗೆ ನುಡಿ ನಮನ, ಗೀತ ನಮನಗಳು ನಡೆದವು.


ನೇತ್ರದಾನ,ರಕ್ತದಾನಗಳು ನಡೆದದ್ದು ಈ ಕಾರ್ಯಕ್ರಮದ ವೈಶಿಷ್ಟ್ಯ
ಮನುಷ್ಯ ಬದುಕಿ ಹೋಗುವುದು ಸಾಮಾನ್ಯ ಆದರೆ ಪುನೀತ್ ರಾಜ್ ಕುಮಾರರಂತೆ ಮಾನವೀಯವಾಗಿ ಬದುಕಿ ಬಾಳುವುದು ಸುಲಭವಲ್ಲ. ಈ ಸಂದೇಶದ ಹಿನ್ನೆಲೆಯಲ್ಲಿ ನಡೆದ ಸಮರ್ಪಣೆಯಲ್ಲಿ ಸೇರಿದ ಅಭಿಮಾನಿಗಳು ಪುನೀತ್ ರನ್ನು ನೆನಪಿಸಿ,ಅವರ ಸಾಧನೆ,ಸೇವೆಗಳನ್ನು ಕೊಂಡಾಡಿದರು.
ದೊಡ್ಡ ಕಟೌಟ್ ಗಳನ್ನು ಹಾಕಿ, ಅನ್ನಸಂತರ್ಪಣೆ ನಡೆಸಿದ ಈ ವಿನೂತನ ಕಾರ್ಯಕ್ರಮದಲ್ಲಿ ಪುನೀತ್ ಬದುಕು ಇತರರಿಗೆ ಮಾದರಿಯಾಗಬೇಕೆಂದು ಆಶಿಸಲಾಯಿತು.
ಈ ಕಾರ್ಯಕ್ರಮದ ಮೊದಲು ಸ್ಥಳೀಯ ಆಡಳಿತಕ್ಕೆ ಸಿದ್ಧಾಪುರದ ಮುಖ್ಯ ರಸ್ತೆಗೆ ಪುನೀತ್ ರಾಜ್ ಕುಮಾರ ರಸ್ತೆ ಎಂದು ನಾಮಕರಣ ಮಾಡಲು ಮನವಿ ನೀಡಿ ಒತ್ತಾಯಿಸಲಾಯಿತು.
ಸ್ವಯಂ ಪ್ರೇರಣೆಯಿಂದ ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ ಅನೇಕರು ಪುನೀತ್ ಸ್ಮರಿಸಿ,ಗೌರವ ಸೂಚಿಸಿದರು. ಬದುಕಿದ್ದಾಗ ಸುದ್ದಿ ಮಾಡದೆ ಬಂದು ತೆರಳುತಿದ್ದ ಪುನೀತ್ ಈಗ ಈ ಊರಿಗೆ ಬರದೆ ಸುದ್ದಿಮಾಡಿದ್ದು ವಿಶೇಶವೆನಿಸಿತು. ಪುನೀತ್ ರಾಜ್ ಕುಮಾರರ ಚಿತ್ರಪಟಗಳನ್ನು ಹಾಕಿ ಶ್ರದ್ಧಾಂಜಲಿ ಅರ್ಪಿಸಿದ್ದು ಮಲೆನಾಡ ಸಿದ್ಧಾಪುರದಲ್ಲಿ ಪುನೀತ್ ಬಗ್ಗೆ ಹೊಂದಿದ ಅಭಿಮಾನಕ್ಕೆ ಸಾಕ್ಷಿ ಒದಗಿಸಿದಂತಿತ್ತು.ಪುನೀತ್ ಸಾವಿನ ನಂತರ ಇಲ್ಲಿಯ ಪ್ರಚಲಿತ ಅನಾಥಾಶ್ರಮವನ್ನು ಪುನೀತ್ ರಾಜ್ ಕುಮಾರ್ ಅನಾಥಾಶ್ರಮ ಎಂದು ನಾಮಕರಣ ಮಾಡಿದ್ದು ಕೂಡಾ ಈ ಕಾರ್ಯಕ್ರಮದ ಒಂದು ಭಾಗ ಎನ್ನುವುದು ವಿಶೇಶ.

ಪುನೀತ್ ಬದುಕಿನಿಂದ ಪ್ರೇರಣೆ ಪಡೆದು ಸಮಾಜದ ಪರವಾಗಿ ಕೆಲಸಮಾಡಲು ಈ ಸಮರ್ಪಣೆ ಅರ್ಪಣೆ. ಪುನೀತ್ ರ ಬದುಕು, ಸೇವೆಯ ಬಗ್ಗೆ ತಿಳಿದಷ್ಟೂ ಅವರ ಮೇಲೆ ಹೆಚ್ಚಿನ ಅಭಿಮಾನ ಉಕ್ಕುತ್ತದೆ. ಬದುಕಿದರೆ ಇವರಂತೆ ಬದುಕಿ ಎನ್ನುವುದನ್ನು ಹೇಳುವುದೇ ಈ ಕಾರ್ಯಕ್ರಮದ ಹಿಂದಿನ ಉದ್ದೇಶ.-ಹಿತೇಂದ್ರ ನಾಯ್ಕ




