

ನಮ್ಮ ನಡುವೆ ಮಾಧ್ಯಮಲೋಕ ಲೋಕವ್ಯಾಪಿ ವಿಸ್ತರಿಸಿಕೊಂಡಿದೆ. ಎಲ್ಲಾ ಕ್ಷೇತ್ರಗಳಂತೆ ಮಾಧ್ಯಮಕ್ಷೇತ್ರ ಕೂಡಾ ವ್ಯಾಪಾರಿಲೋಕ,ಬ್ರಷ್ಟತನಗಳಿಂದ ಮುಕ್ತವಲ್ಲ. ಆದರೆ ಮುಖ್ಯವಾಹಿನಿಯ ಪ್ರತಿಶತ ೨೦ ಕ್ಕಿಂತ ಕಡಿಮೆ ವ್ಯಾಪಾರಿಮನೋಭಾವದ ಬ್ರಷ್ಟ ಮಾಧ್ಯಮಗಳನ್ನು ಇಡೀ ಮಾಧ್ಯಮಲೋಕಕ್ಕೆ ವಿಸ್ತರಿಸುವುದು ತಪ್ಪು. ಇವೆಲ್ಲಾ ಚರ್ಚೆಯ ವಿಷಯಗಳು.
ಇಂಥ ಚರ್ಚೆಗಳ ನಡುವೆ ನಾವೆಲ್ಲಾ ಬದುಕಿದ್ದರೆ ಪುನೀತ್ ರಾಜ್ ಕುಮಾರ್ ರಂತೆ ಬದುಕಬೇಕೆಂದು ಪುನೀತ್ ಮಾದರಿಯನ್ನು ಮುಂದಿಡುತ್ತೇವೆ. ಪುನೀತ್ ಅಸೀಮವಾದ ಅಪ್ಪು ಮಾದರಿಯನ್ನು ಬಿಟ್ಟುಹೋಗಿದ್ದಾರೆ ಎನ್ನುವುದು ಸರ್ವವಿಧಿತ. ಆದರೆ ಬದುಕಿದ್ದಾಗ ಬಹಳಷ್ಟು ಸಂದರ್ಭಗಳಲ್ಲಿ ಸತ್ತ ನಂತರ ಕೂಡಾ ಪುನೀತ್ ರಿಗೆ ಸಿಕ್ಕ ಮಾನ್ಯತೆ, ಗೌರವ ದೊರೆಯದ ಸಂದರ್ಭಗಳು ಅನೇಕ.
ಸೆಲಿಬ್ರಿಟಿಯಲ್ಲದೆ, ಪ್ರಚಾರಕ್ಕೆ ಬಾರದೆ ನಿಜ ಸಂತರಂತೆ ಬದುಕಿದವರು ಅನೇಕ.
ನಾವು ೨೦೧೯ ರಿಂದ ೨೦೨೧ ರ ಅವಧಿಯಲ್ಲಿ ಕಳೆದ ಕೊಂಡ ಅಮೂಲ್ಯ ಜೀವಗಳು ಅನೇಕ. ಅವರಲ್ಲಿ ಡಾ. ವಿಠ್ಠಲ್ ಭಂಡಾರಿ, ರವೀಂದ್ರ ಭಟ್ ಸೇರಿದಂತೆ ಅನೇಕರಿದ್ದಾರೆ. ಪುನೀತ್ ರಿಗೆ ಸಿಕ್ಕಂತೆ ಬದುಕಿದ್ದಾಗ ಸಿಗದ ಮಹತ್ವ ಈ ಮಹನೀಯರಿಗೂ ಸಾವಿನ ನಂತರ ದೊರೆತದ್ದು ಸಮಾಧಾನದ ವಿಷಯ.
ಈ ಕತೆಯ ಮುಕ್ತಾಯದ ಮೊದಲು ಈ ವರ್ಷ ನನಗೆ ಹೆಮ್ಮೆ ಹುಟ್ಟಿಸಿದ ಎರಡು ಪ್ರಸಂಗಗಳನ್ನೂ ಹೇಳಬೇಕು. ತೀರಾ ವೈಯಕ್ತಿಕ ಕಾರಣಕ್ಕೆ ನನ್ನ ವೃತ್ತಿ,ನನ್ನ ಸಂಪರ್ಕಗಳನ್ನು ಬಳಸಿಕೊಳ್ಳುವಲ್ಲಿ ನನಗಿರುವ ಹಿಂಜರಿಕೆ ದೊಡ್ಡದು. ಹಾಗಾಗಿ ನನಗೆ ನೇಮ್ ಪ್ಲೇಟ್ಗಳು,ವಿಸಿಟಿಂಗ್ ಕಾರ್ಡ್ಗಳಿಲ್ಲ. ಈ ಸಮಾಧಾನದ ನಡುವೆ ಹಿಂದಿನ ತಿಂಗಳು ಸಣ್ಣ ಕೆಲಸವೊಂದಕ್ಕೆ ನೋಟರಿಯಾಗಿರುವ ವಕೀಲರೊಬ್ಬರನ್ನು ಕಾಣುವ ಅನಿವಾರ್ಯತೆಯಾಯಿತು. ಒಂದೇ ನಿಮಿಷದಲ್ಲಿ ನನ್ನ ಕೆಲಸ ಮಾಡಿಕೊಟ್ಟ ವಕೀಲರಿಗೆ ಸರ್ ಎಷ್ಟು ಎಂದು ಫೀ ವಿಚಾರಿಸಿದೆ. ʼಇರಲಿ ಬಿಡ್ರಿ ನಿಮ್ಮಿಂದ ಹಣ ಪಡೆದರೆ ನಮಗೆ ಪಾಪ ಬರಲ್ಲೇನ್ರೀ ʼ ಎಂದು ಬಿಟ್ಟರು.
ಅರೆ ಕ್ಷಣ ನಾನು ಸತ್ತಿದ್ದೆ, ಅವರ ಮಾತು ನನ್ನಂಥವರನ್ನು ತುಸು ಚಿಗುರಿಸಿತೇನೋ ಎನ್ನುವ ವಿನಯ ಬಿಟ್ಟು ಅವರಿಗೆ ಹೇಳಲು,ನೀಡಲು ನನ್ನಲ್ಲೇನೂ ಇರಲಿಲ್ಲ.
ಇನ್ನೊಂದು ಘಟನೆ ಮತ್ತೆಂದಾದರೂ ಬರೆದೇನು. ಈಗ ವಿಷಯಕ್ಕೆ ಬರೋಣ……
ಇದೇ ತಿಂಗಳು ನಮ್ಮನ್ನಗಲಿದ ಸಿದ್ಧಾಪುರದ ಪ್ರಜಾವಾಣಿ ವರದಿಗಾರ ರವೀಂದ್ರ ಭಟ್ ಬಳಗುಳಿ ನಮಗೆಲ್ಲರಿಗೂ ಆತ್ಮೀಯರು, ಆಧರಣೀಯರೂ ಆಗಿದ್ದರು. ತುಸು ಸಂಕೋಚ, ನಾಚಿಕೆ, ಹಿಂಜರಿಕೆ ಸ್ವಾಭಾವದ ರವೀಂದ್ರರ ಕಠಿಣ ಬದ್ಧತೆ, ಶುದ್ಧತೆ ಅಪರೂಪ ಎನ್ನುವುದು ನನ್ನ ಅನುಭವ. ಕಳೆದ ಕೆಲವು ವರ್ಷಗಳ ಹಿಂದೆ ಜಯೋ ಮೊಬೈಲ್ ಭರಾಟೆ ಹೆಚ್ಚಾದಾಗ ನಮ್ಮಂಥ ಅನೇಕ ಬಿ.ಜೆ.ಪಿ. ವಿರೋಧಿಗಳು ಕೂಡಾ ಜಿಯೋ ಸಿಮ್ ಕೊಂಡದ್ದಿದೆ. ಬಹುತೇಕರಂತೆ ಜಿಯೋ ಆಮಿಷ, ಅನುಕೂಲಗಳಿಗೆ ಮರುಳಾಗದ ಭಟ್ಟರು ತಮ್ಮ ಬಿ.ಎಸ್. ಎನ್. ಎಲ್. ಸಿಮ್ ಬದಲಿಸಿರಲಿಲ್ಲ. ಸಿಗ್ನಲ್ ಅನುಕೂಲ,ಕಡಿಮೆ ಬೆಲೆ ಕಾರಣಕ್ಕೆ ನಾವು ಜಿಯೋ ಸಿಮ್ ಖರೀದಿಸಿದ್ದೇವೆ ಎಂದಾಗ ಬಂದ ರವೀಂದ್ರರ ಉತ್ತರ ನಮಗೆ ಕಪಾಲಿಗೆ ಹೊಡೆದಂತಿತ್ತು.
ಮೋದಿ, ಸಂಘ ಮುಂದಿಟ್ಟುಕೊಂಡು ಭಾರತವನ್ನು ಲೂಟಿ ಮಾಡುವ ಅಂಬಾನಿ, ಅದಾನಿಗಳಿಗೆ ನಮ್ಮ ಬೆಂಬಲ ಇಲ್ಲ ಅವರು ಕೊಡುವ ರಿಯಾಯತಿ, ಉಚಿತ ಸ್ಕೀಮುಗಳು ಪರೋಕ್ಷವಾಗಿ ಈ ದೇಶ, ಈ ದೇಶವಾಸಿ ಶ್ರಮಿಕರಿಗೆ ವಿರುದ್ಧ,,ಹಾನಿಕಾರಕ ಎನ್ನುವ ಅವರ ಕಠಿಣ ಬದ್ಧತೆ ಅವರಂಥ ಎಷ್ಟು ಜನರಿಗೆ ಸಾಧ್ಯ ಎಂದರೆ ಮತ್ತದೇ ಕಳ್ಳರು, ಬ್ರಷ್ಟರನ್ನು ಬಿಟ್ಟು ಉತ್ತಮರನ್ನೇ ಪ್ರಶ್ನೆ ಮಾಡುವ ಸಮಾಜದ ಮನಸ್ಥಿತಿಯ ನಡುವೆ ಪುನೀತ್, ಡಾ. ವಿಠ್ಠಲ್ ಭಂಡಾರಿ, ರವೀಂದ್ರ ಭಟ್ ರಂಥವರೆಲ್ಲಾ ಇದ್ದರಲ್ಲಾ ಎನ್ನುವುದೇ ನಮ್ಮ ಪುಣ್ಯ.
ಅಂದಹಾಗೆ ನೀವೆಷ್ಟು ಜನ ಮೋದಿ, ಅಂಬಾನಿ, ಅದಾನಿ ಕಾರಣಕ್ಕೆ ಜಿಯೋ ಗೆ ಮೊರೆಹೋಗಿದ್ದೀರಿ, ಮತ್ತು ಜಿಯೋ ತಿರಸ್ಕರಿಸಿದ್ದೀರಿ?. ರವೀಂದ್ರ ಭಟ್ಟರು ತಮ್ಮ ಅಂತ್ಯದ ವರೆಗೂ ಕೋಮುವಾದಿ ಮನಸ್ಥಿತಿ, ಕೋಮುವಾದಿ ಕಾರ್ಯಾಚರಣೆಯ ಧಾರ್ಮಿಕ ದಲ್ಲಾಳಿಯಾಗದೆ. ಮಘೇಗಾರಿನ ದೇವಸ್ಥಾನ ಒಂದರ ಮೊಕ್ತೇಸರರಾಗಿ ಸೇವೆ ಸಲ್ಲಿಸಿದ್ದರು ಎನ್ನುವುದು ಅವರ ಗಟ್ಟಿತನದ ಧ್ಯೋತಕವೆ.- ಕನ್ನೇಶ್.
