ಒಮಿಕ್ರಾನ್ ಸಾಂಕ್ರಾಮಿಕದ ಹಿನ್ನೆಲೆಯಲ್ಲಿ ಇಂದಿನಿಂದಲೇ ರಾಜ್ಯದಾದ್ಯಂತ ರಾತ್ರಿ ಕರ್ಫ್ಯೂ ಪ್ರಾರಂಭವಾಗಿದೆ. ರಾತ್ರಿ ನಿಷೇಧಾಜ್ಞೆ ಹಿನ್ನೆಲೆಯಲ್ಲಿ ಸಾರ್ವಜನಿಕರ ಓಡಾಟ,ಮನೋರಂಜನಾ ಚಟುವಟಿಕೆಗಳಿಗೆ ಬ್ರೇಕ್ ಬಿದ್ದಿದೆ. ಮಲೆನಾಡು ಕರಾವಳಿ ಗಳಲ್ಲಿ ಈ ಅವಧಿಯಲ್ಲಿ ನಡೆಯುತಿದ್ದ ಮನೋರಂಜನಾ ಚಟುವಟಿಕೆಗಳಿಗೆ ರಾತ್ರಿ ನಿಷೇಧಾಜ್ಞೆ ತಡೆ ಒಡ್ಡಿದೆ. ಯಕ್ಷಗಾನ ಪ್ರದರ್ಶನಗಳು ನಿಗದಿತ ರಾತ್ರಿ ಸಮಯಕ್ಕೆ ಬದಲು ಹಗಲು ಪ್ರಾರಂಭವಾಗಿವೆ. ಈ ಸರ್ಕಾರದ ನಿಷೇಧಾಜ್ಞೆ ಪಾಲನೆಗೆ ಮನವಿ ಮಾಡಿರುವ ರಾಜ್ಯ ವಿಧಾನಸಭಾ ಅಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಮುಂಜಾಗೃತೆ ಮತ್ತು ಪೂರ್ವತಯಾರಿಯಿಂದ ಕರೋನಾ ಸಾಂಕ್ರಾಮಿಕ ತಡೆಯುವ ಜವಾಬ್ಧಾರಿ ಜನರ ಮೇಲಿದ್ದು ಸರ್ಕಾರದ ನೀತಿ-ನಿಯಮ ಪಾಲನೆಗೆ ಸಹಕರಿಸಲು ಮನವಿ ಮಾಡಿದ್ದಾರೆ.
ಹಿಂದಿನ ಮೊದಲ ಮತ್ತು ಎರಡನೇ ಕೋವಿಡ್ ಅಲೆ ಗೆಲ್ಲುವಲ್ಲಿ ಸಾರ್ವಜನಿಕರ ಸಹಕಾರ ಸಿಕ್ಕಿದ್ದು ಮೂರನೇ ಅಲೆ ಸಾಧ್ಯತೆ ಹಿನ್ನೆಲೆಯಲ್ಲಿ ಜಾಗೃತಿಯಿಂದ ಇರಬೇಕೆಂದು ಸಾರ್ವಜನಿಕರಿಗೆ ಕರೆ ನೀಡಿರುವ ಸ್ಫೀಕರ್ ಸರ್ಕಾರ ಸಾರ್ವಜನಿಕರ ಹಿತದೃಷ್ಟಿಯಿಂದಲೇ ನಿಯಮ,ಕಟ್ಟುಪಾಡುಗಳನ್ನು ಮಾಡುತ್ತದೆ ಅದಕ್ಕೆ ಸ್ಫಂದಿಸದೆ ಬೇರೆ ದಾರಿ ಇಲ್ಲ ಎಂದರು.
ಅಭಿವೃದ್ಧಿ ಕೆಲಸಗಳ ಜೊತೆ, ತುರ್ತು ಅನಿವಾರ್ಯತೆಗಳಿಗೆ ಸರ್ಕಾರ ಸ್ಫಂದಿಸುತ್ತಿದೆ. ಒಮಿಕ್ರಾನ್,ಕೋವಿಡ್ ಎದುರಿಸಲು ಆರೋಗ್ಯ ಕಾರ್ಯಕರ್ತರ ಪ್ರಯತ್ನ ಮುಖ್ಯ. ಆರೋಗ್ಯ ಇಲಾಖೆ, ಇಂಧನ ಇಲಾಖೆ ಸೇರಿದಂತೆ ಸರ್ಕಾರದ ನಾನಾ ಇಲಾಖೆಗಳು ಉತ್ತಮವಾಗಿ ಕೆಲಸಮಾಡುತ್ತಿವೆ ಎಂದು ಶ್ಲಾಘಿಸಿದರು.
ಮನೋರಂಜನಾ ಚಟುವಟಿಕೆ, ಖಾಸಗಿ, ಸಾರ್ವಜನಿಕ ಕಾರ್ಯಕ್ರಮಗಳ ವಿಚಾರದಲ್ಲಿ ಕೂಡಾ ಸಾರ್ವಜನಿಕರು ಸರ್ಕಾರದ ಆದೇಶಗಳನ್ನು ಪಾಲಿಸುವುದು ಬಿಟ್ಟು ಬೇರೆ ದಾರಿ ಇಲ್ಲ ಎಂದು ಸ್ಪಷ್ಟಪಡಿಸಿದರು.ಹೊಸವರ್ಷ, ಉತ್ಸವ, ಕಾರ್ಯಕ್ರಮಗಳು ಕೋವಿಡ್ ಪ್ರಸಾರಕ್ಕೆ ವೇದಿಕೆಗಳಾಗಬಾರದೆಂದು ಸರ್ಕಾರ ನಿಬಂಧನೆ ಹೇರಿದೆ. ಅದರಿಂದ ಜನರಿಗೆ ತೊಂದರೆಯಾದರೂ ಅದರಿಂದಾಗುವ ಅನುಕೂಲ ಹೆಚ್ಚು ಎಂದರು.