

ಸಾಲು ಸಾಲು ಸರಣಿ ಪ್ರತಿಭಟನೆ: ಬಿಜೆಪಿ ಸರ್ಕಾರದ ಆಡಳಿತ ವಿರೋಧಿ ಅಲೆಯ ಸಂಕೇತವೇ?
2023 ರ ವಿಧಾನಸಭೆ ಚುನಾವಣೆ ಸಮೀಪಿಸುತ್ತಿದ್ದಂತೆ ಬಿಜೆಪಿ ಸರ್ಕಾರ ಹಲವು ಸಮಸ್ಯೆಗಳನ್ನು ಎದುರಿಸುತ್ತಿದೆ, ಸರ್ಕಾದ ಕೆಲವು ನೀತಿ ನಿಯಮಗಳ ವಿರುದ್ಧ ಹಲವು ಪ್ರತಿಭಟನೆಗಳು ನಡೆಯುತ್ತಿದ್ದು ಆಡಳಿತ ವಿರೋಧಿ ಅಲೆ ಎಂದು ಹೇಳಲಾಗುತ್ತಿದೆ.

ಬೆಂಗಳೂರು: 2023 ರ ವಿಧಾನಸಭೆ ಚುನಾವಣೆ ಸಮೀಪಿಸುತ್ತಿದ್ದಂತೆ ಬಿಜೆಪಿ ಸರ್ಕಾರ ಹಲವು ಸಮಸ್ಯೆಗಳನ್ನು ಎದುರಿಸುತ್ತಿದೆ, ಸರ್ಕಾದ ಕೆಲವು ನೀತಿ ನಿಯಮಗಳ ವಿರುದ್ಧ ಹಲವು ಪ್ರತಿಭಟನೆಗಳು ನಡೆಯುತ್ತಿದ್ದು ಆಡಳಿತ ವಿರೋಧಿ ಅಲೆ ಎಂದು ಹೇಳಲಾಗುತ್ತಿದೆ.
ಗುತ್ತಿಗೆದಾರರಿಂದ 40 ಪರ್ಸೆಂಟ್ ಕಮಿಷನ್ ಪಡೆಯುತ್ತಿರುವ ಸರ್ಕಾರ ಆರೋಪದ ವಿಚಾರಕ್ಕೆ ಸಂಬಂಧಿಸಿದಂತೆ ಕರ್ನಾಟಕ ರಾಜ್ಯ ಕಂಟ್ರಾಕ್ಟರ್ ಅಸೋಸಿಯೇಷನ್ ಅಧ್ಯಕ್ಷ ಡಿ ಕೆಂಪಣ್ಣ ಪ್ರಧಾನಿ ನರೇಂದ್ರ ಮೋದಿ ಮತ್ತು ರಾಜ್ಯಪಾಲ ತಾವರ್ ಚಂದ್ರ ಗೆಹ್ಲೋಟ್ ಅವರಿಗೆ ಪತ್ರ ಬರೆದಿದ್ದರು. ಶೇ. 40 ಪರ್ಸೆಂಟ್ ಕಮಿಷನ್ ತೆಗೆದುಕೊಳ್ಳುತ್ತಿರುವುದನ್ನು ವಿರೋಧಿಸಿ ಜನವರಿ 3 ರಂದು ಬೆಂಗಳೂರು ಮತ್ತು ಕಲಬುರಗಿಯಲ್ಲಿ ಮೆಗಾ ರ್ಯಾಲಿ ನಡೆಸಲಿದೆ.
ಗುತ್ತಿಗೆದಾರರ ಸಂಘ ಕರೆ ನೀಡಿರುವ ಪ್ರತಿಭಟನೆ ಕಾಂಗ್ರೆಸ್ ಪ್ರಾಯೋಜಿತ ಕಾರ್ಯಕ್ರಮ ಎಂದುಸೇಡಂ ಶಾಸಕ ಹಾಗೂ ರಾಜ್ಯ ಬಿಜೆಪಿ ವಕ್ತಾರ ರಾಜ್ ಕುಮಾರ್ ಪಾಟೀಲ್ ತೆಲ್ಕೂರು ಆರೋಪಿಸಿದ್ದಾರೆ.
ರಾಜ್ಯದ 440 ಪ್ರಥಮ ದರ್ಜೆ ಕಾಲೇಜುಗಳಲ್ಲಿ ಅತಿಥಿ ಉಪನ್ಯಾಸಕರಾಗಿ ಕೆಲಸ ಮಾಡುತ್ತಿರುವ 14,183 ಉಪನ್ಯಾಸಕರು ಹಲವು ದಿನಗಳಿಂದ ತರಗತಿಗಳನ್ನು ಬಹಿಷ್ಕರಿಸಿ ಪ್ರತಿಭಟನೆ ಮಾಡುತ್ತಿದ್ದಾರೆ. ಅತಿಥಿ ಉಪನ್ಯಾಸಕರು ಸರ್ಕಾರಕ್ಕೆ ಇಟ್ಟಿರುವ ಬೇಡಿಕೆಗಳು ದುಬಾರಿಯಾದುವೇನಲ್ಲ. ಅವರು ಕೇಳುತ್ತಿರುವುದಿಷ್ಟೆ, ತಾವು ಮಾಡುತ್ತಿರುವ ಸೇವೆಗೆ ಕನಿಷ್ಟ ಭದ್ರತೆ ನೀಡಿ, ವರ್ಷದ ಎಲ್ಲ ತಿಂಗಳು ಸಂಬಳ ನೀಡಿ ಮತ್ತು ನೀಡುತ್ತಿರುವ ಸಂಬಳವನ್ನು ಘನತೆಯಿಂದ ಬದುಕುವುದಕ್ಕೆ ಬೇಕಾಗುವಷ್ಟನ್ನು ಹೆಚ್ಚಿಸಿ ಎಂಬುದಷ್ಟೆ ಅವರ ಬೇಡಿಕೆ ಎಂದು ಮುಖ್ಯಮಂತ್ರಿಗಳು ಹಾಗೂ ಉನ್ನತ ಶಿಕ್ಷಣ ಸಚಿವರಿಗೆ ವಿಪಕ್ಷ ನಾಯಕ ಸಿದ್ದರಾಮಯ್ಯ ಪತ್ರ ಬರೆದು ಅತಿಥಿ ಉಪನ್ಯಾಸಕರ ಜೊತೆ ಮಾನವೀಯತೆಯಿಂದ ವರ್ತಿಸುವಂತೆ ಒತ್ತಾಯಿಸಿದ್ದಾರೆ.
ಲಿಂಗಾಯತ ಪಂಚಮಶಾಲಿಗಳು 2ಎ ವರ್ಗದ ಮೀಸಲಾತಿ ನೀಡುವಂತೆ ಒತ್ತಾಯಿಸುತ್ತಿದೆ, ಆದರೆ ಇದನ್ನು ಹಿಂದುಳಿದ ವರ್ಗಗಳ ಮುಖಂಡರು ತೀವ್ರವಾಗಿ ವಿರೋಧಿಸಿದ್ದಾರೆ. ‘ಹಿಂದುಳಿದ ವರ್ಗದವರಿಗೆ ಅನ್ಯಾಯ ಮಾಡಿದರೇ, ಸಿಎಂ ಅವರ ಬೇಡಿಕೆಗೆ ಮನ್ನಣೆ ನೀಡಿದರೆ ಬೆಂಗಳೂರಿನಲ್ಲಿರುವ ಸಿಎಂ ನಿವಾಸದ ಮುಂದೆಯೇ ಜೀವನ ಅಂತ್ಯಗೊಳಿಸುತ್ತೇವೆ’ ಎಂದು ಸಿದ್ದರಾಮಯ್ಯ ಅವರ ಆಪ್ತ ಚಾಮರಾಜನಗರ ಶಾಸಕ ಸಿ.ಪುಟ್ಟರಂಗಶೆಟ್ಟಿ ಎಚ್ಚರಿಸಿದ್ದಾರೆ.
2013ರಲ್ಲಿ ಬೆಳಗಾವಿಯಲ್ಲಿ ನಡೆದ ಚಳಿಗಾಲದ ಅಧಿವೇಶನದಲ್ಲಿ ಎಸ್‌ಸಿ ಕೋಟಾ ವರ್ಗೀಕರಣಕ್ಕೆ ಆಗ್ರಹಿಸಿ ಎಸ್‌ಸಿ ಮಾದಿಗ ಸಮುದಾಯದವರು ಸುವರ್ಣ ವಿಧಾನಸೌಧಕ್ಕೆ ಮುತ್ತಿಗೆ ಹಾಕಿ, ಅಂತಿಮವಾಗಿ ಪೊಲೀಸರಿಂದ ಲಾಠಿ ಪ್ರಹಾರ ಮಾಡಿದ್ದನ್ನು ಇಲ್ಲಿ ಸ್ಮರಿಸಬಹುದು.
ಸದ್ಯ ಮಾದಿಗ ಸಮುದಾಯವು ಹೊಸ ಹೋರಾಟವನ್ನು ಪ್ರಾರಂಭಿಸುವ ಸೂಚನೆಯಿದೆ ಎಂದು ಮೂಲಗಳು ಹೇಳುತ್ತವೆ. ಇದರ ಜೊತೆಗೆ ಬೊಮ್ಮಾಯಿ ಅವರು ಆಡಳಿತ ವಿರೋಧಿತನವನ್ನು ಹೋಗಲಾಡಿಸುವ ಪ್ರಯತ್ನಗಳನ್ನು ಮಾಡುತ್ತಿದ್ದಾರೆ.
ಗೋಮಾಳ ಜಮೀನುಗಳನ್ನು (ಮೇಯುವ ಹುಲ್ಲುಗಾವಲು) ಕ್ರಮಬದ್ಧಗೊಳಿಸುವ ನಿರ್ಧಾರವನ್ನು ಮಾಡಿದರು ಮತ್ತು ಡೀಮ್ಡ್ ಅರಣ್ಯಗಳನ್ನು ಮರುವ್ಯಾಖ್ಯಾನಿಸಿದರು. ಇದರಿಂದ ರೈತರಿಗೆ ಸಹಾಯವಗಲಿದೆ.
ಬಿಜೆಪಿ ಸರ್ಕಾರವು ಆಡಳಿತ ವಿರೋಧಿ ಅಂಶವನ್ನು ನಿಭಾಯಿಸಲು ಬೊಮ್ಮಾಯಿ ಅವರ ಅಂತಿಮ ಬಜೆಟ್‌ನಲ್ಲಿ ಹಲವು ಬದಲಾವಣೆ ಸಾಧ್ಯತೆಯಿದೆ, ಕ್ಯಾಬಿನೆಟ್ ಪುನರಾಚನೆಯನ್ನು ನಡೆಸುವ ಸಾಧ್ಯತೆಯಿದೆ, ಇದರ ಜೊತೆಗೆಪ್ರತಿಪಕ್ಷ ಕಾಂಗ್ರೆಸ್ ಅಧಿಕಾರಕ್ಕೆ ಮರಳಲು ಪ್ರಯತ್ನಿಸುತ್ತಿದೆ ಎಂದು ಹೇಳಲಾಗಿದೆ. (kpc)
