

ಉನ್ನತ ಕ್ರೀಡಾಪಟುತ್ವ ರೂಪಿಸಲು ಉತ್ತರ ಕನ್ನಡದ ಸಿದ್ದಿ ಸಮುದಾಯದ ಯುವಕರಿಗೆ ಕ್ರೀಡಾ ಇಲಾಖೆ ತರಬೇತಿ!
ಅತ್ಯುತ್ತಮ ಕ್ರೀಡಾಪಟುವಾಗಲು ಬೆಂಗಳೂರಿನಲ್ಲಿ ಉತ್ತರ ಕನ್ನಡದ ಸಿದ್ದಿ ಸಮುದಾಯದ 52 ಯುವಕರಿಗೆ ತರಬೇತಿ ನೀಡಲಾಗುತ್ತಿದೆ. ಮಂಗಳವಾರದಿಂದ ಆರಂಭವಾಗಲಿರುವ ತರಬೇತಿಯ ಹೊರತಾಗಿ ಅವರ ನಿತ್ಯದ ಶಿಕ್ಷಣವನ್ನು ಕ್ರೀಡಾ ಇಲಾಖೆ ನೋಡಿಕೊಳ್ಳಲಿದೆ.

ಬೆಂಗಳೂರು: ಅತ್ಯುತ್ತಮ ಕ್ರೀಡಾಪಟುವಾಗಲು ಬೆಂಗಳೂರಿನಲ್ಲಿ ಉತ್ತರ ಕನ್ನಡದ ಸಿದ್ದಿ ಸಮುದಾಯದ 52 ಯುವಕರಿಗೆ ತರಬೇತಿ ನೀಡಲಾಗುತ್ತಿದೆ. ಮಂಗಳವಾರದಿಂದ ಆರಂಭವಾಗಲಿರುವ ತರಬೇತಿಯ ಹೊರತಾಗಿ ಅವರ ನಿತ್ಯದ ಶಿಕ್ಷಣವನ್ನು ಕ್ರೀಡಾ ಇಲಾಖೆ ನೋಡಿಕೊಳ್ಳಲಿದೆ.
ಈ ಯುವಕರಲ್ಲಿ ದಸ್ತ್ ಗೀರ್ ಸಿದ್ದಿ ಕೂಡಾ ಒಬ್ಬರು. ಕಾರವಾರ ಸಮೀಪದ ಗುಂಜಾವತಿ ಗ್ರಾಮದ ದಸ್ತಗೀರ್ ಅಬ್ದುಲ್ ಸಿದ್ದಿ ಹತ್ತನೇ ತರಗತಿ ಓದುತ್ತಿದ್ದಾಗಲೇ ಸೇನೆಗೆ ಸೇರುವ ಕನಸು ಕಂಡಿದ್ದರು. ಪಡೆಗಳಿಗೆ ಆಯ್ಕೆಯಾಗಲು ವೇಗವಾಗಿ ಓಡಬೇಕು ಎಂದು ಯಾರೋ ಆತನಿಗೆ ಹೇಳಿದ್ರು. ಆದರೆ, ಅವರ ಹಳ್ಳಿಯ ಬಳಿ ಸರಿಯಾದ ಅಥ್ಲೆಟಿಕ್ ಟ್ರ್ಯಾಕ್ ಅಥವಾ ಮೈದಾನವಿಲ್ಲದ ಕಾರಣ, ತಮ್ಮ ಮನೆಯ ಸಮೀಪವಿರುವ ಕೆಲವು ಪೊದೆಗಳನ್ನು ತೆರವುಗೊಳಿಸಿ ಅಭ್ಯಾಸವನ್ನು ಪ್ರಾರಂಭಿಸಿದರು. ಕಾರವಾರದಲ್ಲಿ ಪ್ರಥಮ ಪಿಯು ಸೇರಿದಾಗಲೇ ಆತ ಅಥ್ಲೆಟಿಕ್ ಮೈದಾನಗಳನ್ನು ನೋಡಿದ್ದು, ಅಲ್ಲಿ ವಿದ್ಯಾರ್ಥಿಗಳು ತರಬೇತಿ ಪಡೆಯುತ್ತಿದ್ದರು.
ಸಿದ್ದಿ ಸಮುದಾಯವ ಮೂಲತಃ ಆಗ್ನೇಯ ಆಫ್ರಿಕಾದವರು ಮತ್ತು ಶತಮಾನಗಳಿಂದ ಉತ್ತರ ಕನ್ನಡ ಜಿಲ್ಲೆಯ ಕೆಲವು ಭಾಗಗಳಲ್ಲಿ ನೆಲೆಸಿದ್ದಾರೆ. ಅನೇಕ ಯುವಕರು ಮೊದಲ ತಲೆಮಾರಿನವರಾಗಿ ಶಾಲೆಗೆ ಹೋಗುತ್ತಿದ್ದರೆ, ಅವರ ಪೋಷಕರು ದಿನಗೂಲಿಗಳಾಗಿ ಕೆಲಸ ಮಾಡುವುದನ್ನು ಮುಂದುವರೆಸಿದ್ದಾರೆ. ಕಾಲೇಜ್ ಅವಧಿ ಮುಗಿದ ನಂತರ ತರಬೇತುದಾರ ಪ್ರಕಾಶ್ ರೇವಣಕರ್ ಕೆಲ ವಿದ್ಯಾರ್ಥಿಗಳಿಗೆ ತರಬೇತಿ ನೀಡಿ, ಕಾಲೇಜ್ ಮೈದಾನದಲ್ಲಿಯೇ ಓಡಿಸುತ್ತಿದ್ದರು.
ಸುಮಾರು ಒಂದು ತಿಂಗಳ ಕಾಲ ಅಲ್ಲಿಯೇ ನಿಂತುಕೊಂಡು ತರಬೇತಿ ನೋಡುತ್ತಿದ್ದ ನನ್ನ ನ್ನು ನೋಡಿದ ತರಬೇತುದಾರರು ಒಂದು ದಿನ ನನ್ನ ಬಳಿಗೆ ಬಂದು ಕೇಳಿದಾಗ, ನನಗೆ ಓಟದಲ್ಲಿ ಆಸಕ್ತಿ ಇರುವುದನ್ನು ತಿಳಿದು ತಂಡಕ್ಕೆ ಸೇರಿಸಿಕೊಂಡಿದ್ದಾಗಿ ದಸ್ತಗೀರ್ ಹೇಳಿದರು.
ಪ್ರತಿಭಾವಂತ ಸಿದ್ದಿ ಹುಡುಗ ಹುಡುಗಿಯರನ್ನು ಗುರುತಿಸಲು ಇಲಾಖೆ ಆಯೋಜಿಸಿದ್ದ ಶಿಬಿರಕ್ಕೆ ಬಂದಿಳಿದಾಗ ದಸ್ತಗೀರ್ , ಕ್ರೀಡಾ ವೇದಿಕೆಗಾಗಿ ಹುಡುಕುತ್ತಿದ್ದರು, ಇಲಾಖೆಯು ಕಳೆದ ವರ್ಷ ಸೆಪ್ಟೆಂಬರ್‌ನಲ್ಲಿ 18 ವರ್ಷದೊಳಗಿನ 500 ಸಿದ್ದಿ ಸಮುದಾಯದ ಮಕ್ಕಳಿಗೆ 18 ವಿವಿಧ ಪರೀಕ್ಷೆಗಳನ್ನು ನಡೆಸಿತು. ಈ ಪೈಕಿ 100 ಮಂದಿ ಆಯ್ಕೆಯಾಗಿ, ನವೆಂಬರ್ ನಲ್ಲಿ ಒಂದು ತಿಂಗಳ ಕಾಲ ತರಬೇತಿ ನೀಡಲಾಗಿದೆ. ಇವರಲ್ಲಿ ಆಯ್ದ 52 ಮಂದಿಯನ್ನು ಬಾಕಿಂಗ್ಸ್, ಈಜು, ಅಥ್ಲೆಟಿಕ್ಸ್ ಮತ್ತಿತರ ಕ್ರೀಡೆಗಳಿಗೆ ತರಬೇತಿ ನೀಡಲು ಆಯ್ಕೆ ಮಾಡಲಾಗಿದೆ.
ಹೀಗೆ ಆಯ್ಕೆಗೊಂಡವರು ಬೆಂಗಳೂರಿನ ಚಿಕ್ಕಜಾಲ ಬಳಿಕ ಜಯಪ್ರಕಾಶ್ ನಾರಾಯಣ್ ರಾಷ್ಟ್ರೀಯ ಯುವ ತರಬೇತಿ ಕೇಂದ್ರದಲ್ಲಿ ತಂಗಿದ್ದಾರೆ. ಅವರ ಸದೃಢ ದೇಹಕ್ಕಾಗಿ ವಿಶೇಷ ಡಯಟ್ ವೊಂದನ್ನು ಕ್ರೀಡಾ ಇಲಾಖೆ ವ್ಯವಸ್ಥೆ ಮಾಡಿದೆ. ಅವರಿಗೆ ಬೆಳಗ್ಗೆ ಉಪಹಾರದೊಂದಿಗೆ ಎರಡು ಮೊಟ್ಟೆ ಮತ್ತು ಎರಡು ಬಾಳೆಹಣ್ಣು ನೀಡಲಾಗುತ್ತದೆ. ಮಧ್ಯಾಹ್ನದ ಊಟಕ್ಕೆ ಚಪಾತಿ, ಅನ್ನ, ಸಬ್ಜಿ ಮತ್ತು ಹಣ್ಣುಗಳನ್ನು ಕೊಡಲಾಗುತ್ತಿದೆ. ರಾತ್ರಿ ಊಟಕ್ಕೆ ಚಿಕ್ಕನ್ ಮತ್ತಿತರ ಪೌಷ್ಠಿಕಾಂಶ ಯುಕ್ತ ಆಹಾರ ಇರುತ್ತದೆ.
ನಾನು ನಮ್ಮ ಹಳ್ಳಿಯಲ್ಲಿದ್ದಾಗ ಇಂತಹ ಮಾಂಸಾಹಾರಿ ಊಟವನ್ನೇ ಮಾಡಿರಲಿಲ್ಲ , ಬೆಂಗಳೂರಿನಲ್ಲಿ ಇಂತಹ ಸ್ಥಳ ಸಿಗುತ್ತದೆ ಎಂದು ನಾನು ಅಂದುಕೊಂಡಿರಲಿಲ್ಲ. ಇಲ್ಲಿ ನಮ್ಮ ಕನಸು ನನಸು ಮಾಡಿಕೊಳ್ಳಬಹುದು ಎಂದು ಬಾಕ್ಸಿಂಗ್ ಕಡೆಗೆ ಗಮನ ಹರಿಸಿರುವ ಉಗ್ಗಿನಕೆರೆ ಗ್ರಾಮದ ಜೋಸೆಫ್ ಬಸ್ತ್ಯ ಸಿದ್ದಿ ಹೇಳಿದರು. ನಾನು ಈಜುವುದನ್ನು ಇಷ್ಟಪಡುತ್ತೇನೆ ಮತ್ತು 30 ಸೆಕೆಂಡುಗಳ ಕಾಲ ನನ್ನ ಉಸಿರನ್ನು ಹಿಡಿದಿಟ್ಟುಕೊಳ್ಳಬಲ್ಲೆ ಎಂದು ದಿನೇಶ್ ಶಂಕರ್ ಸಿದ್ದಿ ತಿಳಿಸಿದರು.
ಕ್ರೀಡಾ ಸಚಿವ ಕೆ.ಸಿ.ನಾರಾಯಣಗೌಡ ಮಾತನಾಡಿ, ಸಿದ್ದಿ ಸಮುದಾಯ ನಿರ್ಲಕ್ಷ್ಯಕ್ಕೊಳಗಾಗಿದ್ದು, ಹಿಂದುಳಿದ ಗ್ರಾಮೀಣ ಪ್ರದೇಶದಲ್ಲಿಯೇ ವಾಸಿಸುತ್ತಿದೆ. ಅವರಲ್ಲಿ ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಪ್ರಶಸ್ತಿಗಳನ್ನು ಗೆಲ್ಲುವ ಸಾಮರ್ಥ್ಯವಿದೆ ಎಂದು ಹೇಳಿದರು. (kpc)
