

ರಾಷ್ಟ್ರೀಯತೆ,ದೇಶಪ್ರೇಮದ ಸೋಗಿನ ಮತಾಂಧ ಅಧಿಕಾರದಾಹಿಗಳು ಸುಳ್ಳು- ಬ್ರಷ್ಟ ತೆಯಿಂದಲೇ ಸಾಂವಿಧಾನಿಕ ಹುದ್ದೆಗಳನ್ನು ಅಲಂಕರಿಸಿ ಸುಳ್ಳುಪ್ರಚಾರ ಮಾಡುತ್ತಿರುವ ಈ ದಿನಗಳಲ್ಲಿ ದೇವರು-ಧರ್ಮದ ಹೆಸರಿನಲ್ಲಿ ಜನರನ್ನು ಒಡೆಯುತ್ತಿರುವ ಧರ್ಮಾಂಧರ ವಿರುದ್ಧ ಎದೆಯುಬ್ಬಿಸಿ ಪ್ರತಿಭಟಿಸದಿದ್ದರೆ ಚಂಪಾ, ಲಂಕೇಶ್ ರಿಗೆ ಸಲ್ಲಿಸುವ ಶೃದ್ಧಾಂಜಲಿ,ನುಡಿನಮನಗಳು ಕ್ಲೀಷೆಯಾಗುತ್ತವೆ ಎಂದು ಪತ್ರಕರ್ತ ಕನ್ನೇಶ್ ನಾಯ್ಕ ಕೋಲಶಿರ್ಸಿ ಹೇಳಿದರು.
ಸಮಾನಮನಸ್ಕರು ಕ.ಸಾ.ಪ. ಆಯೋಜನೆಯಲ್ಲಿ ನಡೆಸಿದ ಚಂದ್ರಶೇಖರ್ ಪಾಟೀಲರ ನುಡಿ ನಮನ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ಸುಳ್ಳನ್ನೇ ಸತ್ಯವೆನ್ನುವ ಸನಾತನ ಪರಂಪರೆಯ ಪರಿವಾರ ಎಲ್ಲಾ ಕಾಲದಲ್ಲೂ ಅಸ್ಥಿತ್ವದಲ್ಲಿದೆ. ಈಗ ಅದರ ಉಪಟಳ ಹೆಚ್ಚಾಗಿದೆ. ಜಾತ್ಯಾಂಧತೆ, ಧರ್ಮಾಂಧತೆ ವಿರೋಧಿಸುತ್ತಾ ಬದುಕು ಸವೆಸಿದವರ ಸ್ಮರಣೆ ಮಾಡಿ ಸುಳ್ಳು ಪರಿವಾರವನ್ನು ಪ್ರತ್ಯಕ್ಷವಾಗಿ, ಪರೋಕ್ಷವಾಗಿ ಬೆಂಬಲಿಸಿದರೆ ಮೃತರ ಆತ್ಮಗಳಿಗೆ ಶಾಂತಿ ದೊರೆಯುವುದಿಲ್ಲ ಕನ್ನಡದ ಜಾತ್ಯಾತೀತ ಪರಂಪರೆಯ ಸಾಧಕರ ಆತ್ಮಗಳಿಗೆ ಶಾಂತಿ ದೊರೆಯಬೇಕಾದರೆ ಧರ್ಮಾಂಧ ಸುಳ್ಳುಕೋರ ಪರಿವಾರದ ವಿರುದ್ಧ ಹೋರಾಟ ಪ್ರಾರಂಭವಾಗಬೇಕು ಎಂದರು
ಚಂದ್ರಶೇಖರ್ ಪಾಟೀಲರ ಶಿಷ್ಯಂದಿರಾದ ಸುರೇಂದ್ರ ದಫೇದಾರ್,ಆರ್.ಎಂ. .ಹೆಗಡೆ ಬಾಳೇಸರ, ಎಂ.ಕೆ.ನಾಯ್ಕ ಹೊಸಳ್ಳಿ ಮತ್ತು ತಮ್ಮಣ್ಣ ಬೀಗಾರ್, ನಾಗರಾಜ್ ಮಾಳ್ಕೋಡು,ಶಿವಾನಂದ ಹೊನ್ನೆಗುಂಡಿ,ಜಿ.ಜಿ. ಹೆಗಡೆ ಬಾಳಗೋಡು ಸೇರಿದಂತೆ ಅನೇಕರು ನುಡಿನಮನ ಸಲ್ಲಿಸಿದರು. ಗೋಪಾಲನಾಯ್ಕ ಭಾಶಿ ನಿರೂಪಿಸಿದರು. ಪ್ರಶಾಂತ ಶೇಟ್ ವಂದಿಸಿದರು.
ಇಂದಿನ ದಿನಗಳಲ್ಲಿ ಕೂಡ ವೈಚಾರಿಕತೆಯ ಹೆಸರಿನಲ್ಲಿ ಇನ್ನಿತರ ವಿಷಯಗಳಲ್ಲಿ ಮಾನವೀಯ ಸಂಬಂಧಗಳನ್ನು ಹಾಳು ಮಾಡುವಂತ ಷಡ್ಯಂತ್ರಗಳು ನಡೆಯುತ್ತಲಿವೆ. ಯುವಕರು ಸಂಘಟನೆಯ ಮೂಲಕ ಸಮಾಜವನ್ನು ಪರಿವರ್ತನೆ ಮಾಡುವ ಅವಶ್ಯಕತೆ ಇದೆ. ಈ ಹಿಂದಿನ ಎಲ್ಲಾ ಪರಿವರ್ತನೆಗಳಲ್ಲಿ ಯುವಕರು ಇರುವುದನ್ನು ಕಾಣುತ್ತೇವೆ.- ವಿಶ್ವೇಶ್ವರ ಹೆಗಡೆ ಕಾಗೇರಿ, ಸ್ಪೀಕರ್
ಸಿದ್ದಾಪುರ: ವಿವೇಕಾನಂದರು ಯುವಕರಿಗೆ ಮಾದರಿಯಾಗಿದ್ದಾರೆ. ಭಾರತೀಯ ಹಾಗೂ ಯುವಸಮೂಹದ ಒಗ್ಗಟ್ಟನ್ನು ವಿಶ್ವಕ್ಕೆ ಸಾರಿ ಹೇಳಿದ್ದಾರೆ. ಭಾರತೀಯ ಸಂಸ್ಕೃ ತಿ ಹಾಗೂ ಆಧ್ಯಾತ್ಮಿಕತೆಯನ್ನು ಅಳವಡಿಸಿಕೊಂಡು ಇಂದಿಗೂ ಸ್ವಾಮಿ ವಿವೇಕಾನಂದರು ಯುವ ಜನತೆಗೆ ಆದರ್ಶವಾಗಿದ್ದಾರೆ.ಮುಂದಿನ ತಲೆಮಾರಿಗೆ ವಿವೇಕಾನಂದರ ಬಗ್ಗೆ ತಿಳುವಳಿಕೆ ಮೂಡಿಸುವ ಕಾರ್ಯವಾಗಬೇಕಿದೆ ಎಂದು ವಿಧಾನಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಹೇಳಿದರು.
ಅವರು ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಸಿದ್ದಾಪುರ ಹಾಗೂ ಸ್ಥಳೀಯ ಆಧಾರ ಸಂಸ್ಥೆಯ ಸಹಯೋಗದಲ್ಲಿ ಸ್ವಾಮಿ ವಿವೇಕಾನಂದರ 159 ನೇ ಜನ್ಮದಿನೋತ್ಸ ‘ರಾಷ್ಟ್ರೀಯ ಯುವದಿನ’ ಅಂಗವಾಗಿ ಪುರಸ್ಕಾರ- ಉಪನ್ಯಾಸ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಕಾರ್ಯಕ್ರಮವನ್ನು ಉದ್ಘಾಟಿಸಿದ ಶಿರಳಗಿ ಶ್ರೀ ಚೈತನ್ಯ ರಾಜಾರಾಮ ಕ್ಷೇತ್ರದ ಶ್ರೀ ಬ್ರಹ್ಮಾನಂದ ಭಾರತಿ ಸ್ವಾಮಿಜಿ ಉಪನ್ಯಾಸ ನೀಡಿ ನಮ್ಮೊಳಗೆ ನಂಬಿಕೆಗಳಿದ್ದರೆ ಎಲ್ಲವನ್ನು ಸಾಧಿಸುವುದಕ್ಕೆ ಸಾಧ್ಯವಾಗಲಿದೆ. ಸ್ವಾಮಿ ವಿವೇಕಾನಂದರು ಅನೇಕ ಸಾಧಕರಿಗೆ ಪ್ರೇರಣೆಯಾಗಿದ್ದಾರೆ. ಕೋಟ್ಯಾಂತರ ಜನರ ಬದುಕಿನಲ್ಲಿ ಸ್ವಾಮಿ ವಿವೇಕಾನಂದರು ಪ್ರೇರಣೆಯಾಗಿದ್ದರು. ನಮ್ಮ ಮೇಲೆ ನಾವು ಎಂದೂ ಆತ್ಮವಿಶ್ವಾಸ ಕಳೆದುಕೊಳ್ಳಬಾರದು. ಅವರು ಇಂದಿಗೂ ಗೃಂಥಗಳ ಮೂಲಕ ನಮ್ಮ ನಡುವೆ ಜೀವಂತವಾಗಿದ್ದಾರೆ.ಅವರು ಮನುಷ್ಯರ ಹೃದಯದಲ್ಲಿ ಅಳಿಯದೆ ಉಳಿದಿದ್ದಾರೆ. ನಮ್ಮಲ್ಲಿಯ ಆತ್ಮವಿಶ್ವಾಸವನ್ನು ಹೆಚ್ಚಿಸಿಕೊಳ್ಳಬೇಕು.ವಿವೇಕಾನಂದರನ್ನು ಓದಿದರೆ ಸರ್ವವನ್ನು ತಿಳಿದುಕೊಂಡಂತೆ ಆಗುತ್ತದೆ ಎಂದರು.
ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಚಾರ್ಯರಾದ ಜೆ.ಎಸ್.ಹೆಗಡೆ , ಫೇವಾರ್ಡ ಉತ್ತರ ಕನ್ನಡದ ಅಧ್ಯಕ್ಷರಾದ ನಾಗರಾಜ ನಾಯ್ಕ ಮಾಳ್ಕೋಡ ಮಾತನಾಡಿದರು.ವೇದಿಕೆಯಲ್ಲಿ ಕಾಲೇಜು ವಿದ್ಯಾರ್ಥಿ ಸಂಘದ ಕಾರ್ಯದರ್ಶಿಗಳಾದ ಮನೋಜ ಎಂ.ನಾಯ್ಕ, ಸಂದೇಶ,ಹೇಮಾವತಿ ಉಪಸ್ಥಿತರಿದ್ದರು.
ಕು. ವೀಣಾ ಜಿ.ನಾಯ್ಕ ಮತ್ತು ತಂಡದವರು ಪ್ರಾರ್ಥಿನೆ ಮತ್ತು ನಾಡಗೀತೆ ಹಾಡಿದರು. ಉಪನ್ಯಾಸಕ ಅರುಣಪ್ರಸಾದ್ ಎಂ.ಎಸ್ ಸ್ವಾಗತಿಸಿದರು. ಭಾರತ್ ಸ್ಕೌಟ್ಸ್ ಸಂಚಾಲಕರಾದ ಜೆ.ಎಸ್.ಶಾಸ್ತ್ರೀ ಯುವ ಪುರಸ್ಕಾರ ನಡೆಸಿಕೊಟ್ಟರು. ಡಾ.ರಶ್ಮಿ ಎನ್.ಕರ್ಕಿ ವಂದಿಸಿದರು. ಉಪನ್ಯಾಸಕಿ ಅನಿಜಾ.ಎಲ್ ಕಾರ್ಯಕ್ರಮ ನಿರ್ವಹಿಸಿದರು.
………………………
ಯುವ ಪುರಸ್ಕಾರ; ಭಾರತ ಸ್ಕೌಟ್ಸ್ ಮತ್ತು ಗೈಡ್ಸ್‍ನಲ್ಲಿ ಸಾಧನೆಯನ್ನು ಮಾಡಿ ರಾಜ್ಯಪಾಲರರಿಂದ ಪುರಸ್ಕಾರ ಪಡೆದ ಕು.ವೇದಾವತಿ ಕೆ.ನಾಯ್ಕ,ರಮ್ಯಾ ಕೆ.ನಾಯ್ಕ, ಸಿ.ಕೆ.ಸಿಂಧು, ಅಣ್ಣಪ್ಪ ರಾಯ್ಕರ ಇವರುಗಳನ್ನು ಪುರಸ್ಕಾರ ನೀಡಿ ಸನ್ಮಾನಿಸಿ ಗೌರವಿಸಲಾಯಿತು.
…………………
…………….

ಚಿಂತನೆಯ ಮೂಲಕ ವಿವೇಕಾನಂದರ ಸ್ಪರ್ಷ ಯಾರಲ್ಲಿರುತ್ತೋ ಅವರ ವ್ಯಕ್ತಿತ್ವ ವೃದ್ಧಿಯಾಗುತ್ತದೆ. ಬೌದ್ಧಿಕವಾಗಿ ವಿಚಾರವಂತರಾಗಿರಬೇಕು. ಭಾರತದ ದೊಡ್ಡ ಸಂಪನ್ಮೂಲವಾದ ಗ್ರಂಥಗಳನ್ನು ಓದಿ ಜ್ಞಾನ ವೃದ್ಧಿಸಿಕೊಳ್ಳಬೇಕು. ವಿವೇಕಾನಂದರ ಬಗ್ಗೆ ಓದಿದರೆ ಇಡಿ ಭಾರತದ ಚಿತ್ರಣ ಸಿಗುತ್ತದೆ.- ಬ್ರಹ್ಮಾನಂದ ಭಾರತಿ ಸ್ವಾಮಿಜಿ, ಶ್ರೀ ಚೈತನ್ಯ ರಾಜಾರಾಮ ಕ್ಷೇತ್ರ

