ರಸ್ತೆ ಅಪಘಾತದಲ್ಲಿ ಬಾಲಕಿ ಸಮನ್ವಿ ಸಾವು: ರಿಯಾಲಿಟಿ ಶೋ ತೀರ್ಪುಗಾರರಾದ ತಾರಾ ಅನುರಾಧ, ಸೃಜನ್ ಲೋಕೇಶ್ ಕಂಬನಿ
ನಗರದ ಕೋಣನಕುಂಟೆ ಬಳಿ ಟಿಪ್ಪರ್ ಡಿಕ್ಕಿ ಹೊಡೆದು ಮೃತಪಟ್ಟ ಕನ್ನಡ ಮನರಂಜನಾ ವಾಹಿನಿಯ ರಿಯಾಲಿಟಿ ಶೋದ ಸ್ಪರ್ಧಿಯಾಗಿದ್ದ ಆರು ವರ್ಷದ ಬಾಲಕಿ ಸಮನ್ವಿಯ ಸಾವು ಎಲ್ಲರನ್ನೂ ಶೋಕಸಾಗರದಲ್ಲಿ ಮುಳುಗಿಸಿದೆ.
ಬೆಂಗಳೂರು: ನಗರದ ಕೋಣನಕುಂಟೆ ಬಳಿ ಟಿಪ್ಪರ್ ಡಿಕ್ಕಿ ಹೊಡೆದು ಮೃತಪಟ್ಟ ಕನ್ನಡ ಮನರಂಜನಾ ವಾಹಿನಿಯ ರಿಯಾಲಿಟಿ ಶೋದ ಸ್ಪರ್ಧಿಯಾಗಿದ್ದ ಆರು ವರ್ಷದ ಬಾಲಕಿ ಸಮನ್ವಿಯ ಸಾವು ಎಲ್ಲರನ್ನೂ ಶೋಕಸಾಗರದಲ್ಲಿ ಮುಳುಗಿಸಿದೆ.
ನನ್ನಮ್ಮ ಸೂಪರ್ ಸ್ಟಾರ್ ರಿಯಾಲಿಟಿ ಶೋನ ಸ್ಪರ್ಧಿಯಾಗಿದ್ದ ಹರಿಕಥಾ ಕಲಾವಿದ ಗುರುರಾಜ್ ನಾಯ್ಡು ಮಗಳು ಅಮೃತಾ ನಾಯ್ಡು ಮತ್ತು ಮೊಮ್ಮಗಳು ಸಮನ್ವಿ ನಿನ್ನೆ ಸಾಯಂಕಾಲ ಶಾಪಿಂಗ್ ಮುಗಿಸಿ ಸ್ಕೂಟರ್ ನಲ್ಲಿ ಮನೆಗೆ ವಾಪಸ್ಸಾಗುತ್ತಿದ್ದ ವೇಳೆ ಹಿಂದಿನಿಂದ ಬಂದ ಟಿಪ್ಪರ್ ಡಿಕ್ಕಿ ಹೊಡೆದು ಸಮನ್ವಿ ಸ್ಥಳದಲ್ಲಿಯೇ ಮೃತಪಟ್ಟಿದ್ದಾಳೆ. ತಾಯಿ ಅಮೃತಾ ನಾಯ್ಡು ಸಣ್ಣಪುಟ್ಟ ಗಾಯಗೊಂಡು ಚಿಕಿತ್ಸೆ ಪಡೆದು ಇಂದು ಮನೆಗೆ ವಾಪಸ್ಸಾಗಿದ್ದಾರೆ.
ಘಟನೆಯ ಸುದ್ದಿ ಕೇಳಿದ ಹಿರಿಯ ನಟಿ ರಿಯಾಲಿಟಿ ಶೋ ತೀರ್ಪುಗಾರ್ತಿ ತಾರಾ ಅನುರಾಧ ದಿಗ್ಭ್ರಮೆ ವ್ಯಕ್ತಪಡಿಸಿದ್ದಾರೆ.ವಿಧಿ ಕ್ರೂರ ಎಂದು ಒಂದೊಂದು ಅನಿಸುತ್ತಿದೆ. ಕಳೆದ ಮೂರು ವರ್ಷಗಳಿಂದ ಬರೀ ಸಾವು-ನೋವು, ಕಷ್ಟಗಳನ್ನೇ ಅನುಭವಿಸುತ್ತಿದ್ದೇವೆ, ಕೇಳುತ್ತಿದ್ದೇವೆ. ನನಗೆ ನಂಬಲೂ ಆಗುತ್ತಿಲ್ಲ, ಅಮೃತಾನನ್ನು ನೋಡಿ ಸಮಾಧಾನ ಹೇಳಬೇಕಿದೆ. ಗುರುರಾಜ್ ನಾಯ್ಡು ಅವರ ಮಗಳು ಅಮೃತಾ ಅವರು ನಮ್ಮ ರಿಯಾಲಿಟಿ ಶೋಗೆ ಬಂದಾಗ ನಿಜಕ್ಕೂ ಖುಷಿಯಾಗಿತ್ತು. ಹಿರಿಯ ಹರಿಕಥಾ ವಿದ್ವಾಂಸರ ಮಗಳು ಹರಿಕಥೆ ಮಾಡುವುದನ್ನು ನಾನು ಸಾಕಷ್ಟು ಬಾರಿ ನೋಡಿದ್ದೆ. ಇಂದು ಅವರಿಗೆ ಹಾಗಾಗಿದ್ದು ನಿಜಕ್ಕೂ ನೋವಾಗುತ್ತಿದೆ, ಯಾವ ತಂದೆ-ತಾಯಿಗೂ ಈ ಪರಿಸ್ಥಿತಿ ಬರಬಾರದು ಎಂದು ಪ್ರತಿಕ್ರಿಯಿಸಿದ್ದಾರೆ.
‘ದೇವರು ನಿಜವಾಗಿಯೂ ದೇವರಾ? ಅಥವಾ ದೇವರು ಇದ್ದಾನಾ? ಇಲ್ಲ, ದೇವರನ್ನ ನಂಬಲೇಬೇಕಾ? ಈ ಪ್ರಶ್ನೆಗಳು ಆಗಾಗ ಮೂಡಿ ಬರುತ್ತಿವೆ. ಇವತ್ತು ಈ ಘಟನೆಯ ನಂತರ ನಿಜವಾಗಲೂ ದೇವರು ಇದ್ದಾನೋ ಇಲ್ಲವೋ ಅನ್ನೋ ಪ್ರಶ್ನೆ ಮನಸ್ಸಿಗೆ ತುಂಬಾ ಗಾಢವಾಗಿ ಕಾಡುತ್ತಿದೆ. ಅಪ್ಪು ಅವರ ನಿಧನ ಬಳಿಕ ದೇವರು ಇದ್ದಾರೆಯೇ ಇಲ್ಲವೇ ಎಂದು ಸಂಶಯ ಬಂದಿತ್ತು. ಇಂದು ಮತ್ತೆ ಅದೇ ಭಾವ ಕಾಡುತ್ತಿದೆ. ಪುಟ್ಟ ಕಂದ ಸಮನ್ವಿ ಮಿಸ್ ಯೂ. ನಿನ್ನ ಆತ್ಮಕ್ಕೆ ಶಾಂತಿ ಸಿಗಲಿ’ ಎಂದು ಸೃಜನ್ ಲೋಕೇಶ್ ಪೋಸ್ಟ್ ಮಾಡಿದ್ದಾರೆ.
ನನಗೆ ಮೊದಲೇ ಹೆಣ್ಣು ಮಗುವಿಲ್ಲ ಎಂಬ ಕೊರಗು ಇದೆ, ಇಂತಹ ಮುದ್ದು ಮುದ್ದಾದ ಪುಟ್ಟ ಹೆಣ್ಣು ಮಕ್ಕಳನ್ನು ನೋಡಿದಾಗ ನಿಜಕ್ಕೂ ಖುಷಿಯಾಗುತ್ತಿತ್ತು, ಜಗತ್ತನ್ನು ಇನ್ನೂ ನೋಡದ ಈ ಮಗು ಇಂದು ಇಲ್ಲ ಎಂದು ಹೇಳಲು ನಿಜಕ್ಕೂ ನೋವಾಗುತ್ತಿದೆ ಎಂದು ಸೃಜನ್ ಲೋಕೇಶ್ ಪ್ರತಿಕ್ರಿಯಿಸಿದ್ದಾರೆ. (kpc)