

ಉತ್ತರ ಪ್ರದೇಶ: ಸ್ವಾಮಿ ಪ್ರಸಾದ್ ಮೌರ್ಯ ಸೇರಿದಂತೆ ಹಲವು ಬಿಜೆಪಿ ಬಂಡಾಯ ಶಾಸಕರು ಸಮಾಜವಾದಿ ಪಕ್ಷಕ್ಕೆ ಸೇರ್ಪಡೆ!
ಉತ್ತರ ಪ್ರದೇಶ ವಿಧಾನಸಭೆ ಚುನಾವಣೆಗೆ ದಿನಗಣನೆ ಆರಂಭವಾಗಿರುವಂತೆಯೇ ಪಕ್ಷಾಂತರ ಪರ್ವ ಕೂಡ ಜೋರಾಗಿದ್ದು, ಈ ಹಿಂದೆ ಬಿಜೆಪಿ ಪಕ್ಷವನ್ನು ತ್ಯಜಿಸಿದ್ದ ಸಚಿವರು ಇದೀಗ ತಮ್ಮ ಅನುಯಾಯಿಗಳೊಂದಿಗೆ ಅಧಿಕೃತವಾಗಿ ಇಂದು ಸಮಾಜವಾದಿ ಪಕ್ಷಕ್ಕೆ ಸೇರ್ಪಡೆಯಾಗಿದ್ದಾರೆ.

ಲಖನೌ: ಉತ್ತರ ಪ್ರದೇಶ ವಿಧಾನಸಭೆ ಚುನಾವಣೆಗೆ ದಿನಗಣನೆ ಆರಂಭವಾಗಿರುವಂತೆಯೇ ಪಕ್ಷಾಂತರ ಪರ್ವ ಕೂಡ ಜೋರಾಗಿದ್ದು, ಈ ಹಿಂದೆ ಬಿಜೆಪಿ ಪಕ್ಷವನ್ನು ತ್ಯಜಿಸಿದ್ದ ಸಚಿವರು ಇದೀಗ ತಮ್ಮ ಅನುಯಾಯಿಗಳೊಂದಿಗೆ ಅಧಿಕೃತವಾಗಿ ಇಂದು ಸಮಾಜವಾದಿ ಪಕ್ಷಕ್ಕೆ ಸೇರ್ಪಡೆಯಾಗಿದ್ದಾರೆ.
ಉತ್ತರ ಪ್ರದೇಶದ ಬಿಜೆಪಿ ಸರ್ಕಾರದ ಮಾಜಿ ಸಚಿವ ಹಾಗೂ ರಾಜ್ಯದ ಪ್ರಮುಖ ಓಬಿಸಿ ನಾಯಕ ಸ್ವಾಮಿ ಪ್ರಸಾದ್ ಮೌರ್ಯ ಹಾಗೂ ಮತ್ತೊಬ್ಬ ಬಂಡಾಯ ಸಚಿವ ಧರಂ ಸಿಂಗ್ ಸೈನಿ ಅವರೊಂದಿಗೆ ಸಮಾಜವಾದಿ ಪಕ್ಷಕ್ಕೆ ಶುಕ್ರವಾರ ಸೇರ್ಪಡೆಯಾದರು. ಅಲ್ಲದೆ ಐವರು ಬಿಜೆಪಿ ಶಾಸಕರು ಮತ್ತು ಅಪ್ನಾ ದಳ (ಸೋನೆಲಾಲ್) ಶಾಸಕ ಅಮರ್ ಸಿಂಗ್ ಚೌಧರಿ ಕೂಡ ಅಖಿಲೇಶ್ ಯಾದವ್ ಸಮ್ಮುಖದಲ್ಲಿ ಎಸ್‌ಪಿಗೆ ಸೇರ್ಪಡೆಗೊಂಡರು.
ಭಗವತಿ ಸಾಗರ್ (ಕಾನ್ಪುರದ ಬಿಲ್ಹೌರ್), ರೋಷನ್‌ಲಾಲ್ ವರ್ಮಾ (ಶಹಜಹಾನ್‌ಪುರದ ತಿಲ್ಹಾರ್), ವಿನಯ್ ಶಾಕ್ಯಾ (ಔರೈಯಾದ ಬಿಧುನಾ), ಬ್ರಿಜೇಶ್ ಪ್ರಜಾಪತಿ (ಬಹ್ರೈಚ್‌ನಲ್ಲಿ ತಿಂಡವಾರಿ) ಮತ್ತು ಮುಖೇಶ್ ವರ್ಮಾ (ಫಿರೋಜಾಬಾದ್‌ನ ಶಿಕೋಹಾಬಾದ್) ಎಸ್‌ಪಿಗೆ ಸೇರ್ಪಡೆಯಾದ ಐವರು ಬಿಜೆಪಿ ಶಾಸಕರಾಗಿದ್ದಾರೆ.
ಚೌಧರಿ ಶೋಹರತ್‌ಗಢದ ಶಾಸಕರಾಗಿದ್ದು, ಇಲ್ಲಿನ ಕಚೇರಿಯಲ್ಲಿ ಅವರಿಗೆ ಎಸ್‌ಪಿ ಸದಸ್ಯತ್ವ ನೀಡಲಾಯಿತು. ರಾಜ್ಯ ಕಾರ್ಮಿಕ ಸಚಿವರಾಗಿದ್ದ ಮೌರ್ಯ ಅವರ ರಾಜೀನಾಮೆ ಉತ್ತರ ಪ್ರದೇಶದಲ್ಲಿ ಆಡಳಿತಾರೂಢ ಬಿಜೆಪಿಗೆ ಭಾರಿ ಆಘಾತವನ್ನುಂಟು ಮಾಡಿದೆ.
ಉತ್ತರ ಪ್ರದೇಶದಲ್ಲಿ ಫೆಬ್ರವರಿ 10 ರಿಂದ ಏಳು ಹಂತಗಳ ಚುನಾವಣೆ ನಡೆಯಲಿದೆ. (kpc)
