

ಪ್ರಕೃತಿಯ ವಿಸ್ಮಯಗಳಿಗೆ ಕೊನೆಇಲ್ಲ, ಸಕಾಲದಲ್ಲಿ ಎಲ್ಲವನ್ನೂ ಕರುಣಿಸುವ ಪರಿಸರ ಕೆಲವೊಮ್ಮೆ ಅಕಾಲದಲ್ಲಿ ಆಶ್ಚರ್ಯ ಹುಟ್ಟಿಸಿಬಿಡುತ್ತದೆ. ಇಂಥದ್ದೊಂದು ಸಕೇದಾಶ್ಚರ್ಯದ ಘಟನೆಯೊಂದು ಉತ್ತರ ಕನ್ನಡದಲ್ಲಿ ಕಂಡಿದೆ. ಉತ್ತರ ಕನ್ನಡ, ಶಿವಮೊಗ್ಗಗಳ ಮಲೆನಾಡ ಕಾಡಂಚುಗಳಲ್ಲಿ ಎಷ್ಟೊಂದು ವಿಸ್ಮಯಗಳಿವೆ. ಅಂಥ ವಿಶೇಶಗಳು ಎಲ್ಲರಿಗೂ ಕಾಣಲಾರವು. ಉತ್ತರ ಕನ್ನಡ ಜಿಲ್ಲೆ ಸಿದ್ಧಾಪುರದಲ್ಲಿ ತ್ಯಾರ್ಸಿ ಎನ್ನುವ ಗ್ರಾಮವೊಂ ದಿದೆ ಅದಕ್ಕೆ ತಾಕಿಕೊಂಡ ಹಳ್ಳಿಯೇ ಕಡಕೇರಿ, ಈ ತ್ಯಾರ್ಸಿ ಸಮೀಪದ ಕಡಕೇರಿ ಗ್ರಾಮದ ರಸ್ತೆಯ ಬಳಿ ೨೦ ವರ್ಷಗಳ ಹಲಸಿನ ಮರವೊಂದಿದೆ. ಇದು ಮಲೆನಾಡಿನ ಇತರ ಹಲಸಿನ ಮರಗಳಂತೆ ಎಂದುಕೊಂಡು ಈ ಮಾರ್ಗದಲ್ಲಿ ಸಾಗಿದರೆ ನಿಮಗೆ ವಿಶ್ವದ ವಿರಳ ವಿಸ್ಮಯ ಹಲಸಿನ ಮರದ ಬಗ್ಗೆ ತಿಳಿಯುವುದಿಲ್ಲ.
ಒಂದೆರಡು ಬಾರಿ ಬೇರೆ ಬೇರೆ ಕಾಲಗಳಲ್ಲಿ ಈ ಮಾರ್ಗದಲ್ಲಿ ಸಾಗಿದರೆ ನಿಮಗೆ ಈ ಹಲಸಿನ ಮರದಲ್ಲಿ ವರ್ಷವಿಡೀ ಹಲಸಿನ ಕಾಯಿ ನೇತುಕೊಂಡಿರುವುದು ಕಾಣುತ್ತದೆ.
ಹೌದು ವಿಚಿತ್ರ-ವಿಸ್ಮಯವೆನಿಸಿದರೂ ಇದು ವಾಸ್ತವ ಈ ಹಲಸಿನ ಮರದಲ್ಲಿ ವರ್ಷವಿಡೀ ಹಲಸಿನ ಕಾಯಿ ಬಿಡುತ್ತದೆ. ಬೇಸಿಗೆ-ಮಳೆಗಾಲದ ಪ್ರಾರಂಭದ ದಿನಗಳನ್ನು ಹೊರತುಪಡಿಸಿ ವರ್ಷದ ಮೂರ್ನಾಲ್ಕು ತಿಂಗಳು ಹೆಚ್ಚೆಂದರೆ ಆರು ತಿಂಗಳ ವರೆಗೆ ಫಲ ನೀಡುವ ಹಲಸು ಇಲ್ಲಿ ವರ್ಷವಿಡೀ ಕಾಯಿ ಬಿಡುತ್ತದೆ ಎಂದರೆ ಆಶ್ಚರ್ಯದ ಜೊತೆಗೆ ಅನುಮಾನವೂ ಮೂಡುತ್ತದೆ.
ಆದರೆ ಇದು ಸತ್ಯ ನಮ್ಮ ಪ್ರತಿನಿಧಿ ಸೇರಿ ಹಲವು ಜನ ಗಮನಿಸಿರುವ ನಿತ್ಯ ಹಲಸಿನ ಕಾಯಿಯ ಮರ ಕಲ್ಪವೃಕ್ಷದಂತಿದೆ.
ಎಂಟುವರ್ಷದ ಗಿಡವಾಗಿದ್ದಾಗಿನಿಂದ ವರ್ಷಪೂರ್ತಿ ಫಲ ನೀಡುವ ಈ ಹಲಸಿನ ಮರದಲ್ಲಿ ಈಗಲೂ ಬಲಿತ ಹಲಸಿನ ಕಾಯಿಗಳಿವೆ ಮತ್ತೂ ಯಾವಾಗಳೂ ನೇತಾಡುತ್ತಿರುತ್ತವೆ. ಈ ಹಲಸಿನ ವೈಶಿಷ್ಟ್ಯತೆ,ಅನನ್ಯತೆಯ ಬಗ್ಗೆ ಸ್ಥಳಿಯರಿಗೆ ಅಷ್ಟಾಗಿ ತಿಳಿದಿಲ್ಲ. ಈ ಬಗ್ಗೆ ಅಧ್ಯಯನ ನಡೆಸುವ ಪರಿಸರ ತಜ್ಞ ಎಂ.ಬಿ.ನಾಯ್ಕ ಕಡಕೇರಿ ʼಇಂಥ ವಿರಳ ಸಸ್ಯಗಳಿವೆ. ಕೆಲವೊಮ್ಮೆ ವಾತಾವರಣ ಬದಲಾವಣೆಯಿಂದ ಅಕಾಲ, ಎಲ್ಲಾ ಕಾಲಗಳಲ್ಲಿ ಫಲ ನೀಡುತ್ತವೆ. ಆದರೆ ಪಶ್ಚಿಮಘಟ್ಟದ ಬಹುತೇಕ ಜೀವವೈವಿಧ್ಯಗಳ ಬಗ್ಗೆ ಅಧ್ಯಯನ ಮಾಡಿರುವ ನನಗೆ ನಿತ್ಯ ಫಲ ನೀಡುವ ಹಲಸು ಕಂಡಿದ್ದಿಲ್ಲ ಆದರೆ ಅತಿ ವಿರಳವಾಗಿ ಕೋಟಿಗೊಂದು, ಕೋಟಿಗೊಮ್ಮೆ ಎನ್ನುವಂತೆ ಇಂಥ ವಿಶೇಶಗಳಿರುತ್ತವೆ. ಈ ಬಗ್ಗೆ ಅಧ್ಯಯನಕ್ಕೆ ಹೊಸ ವಿಷಯ ಸಿಕ್ಕಂತಾಗಿದೆ ಎಂದಿದ್ದಾರೆ.
ರುಚಿ, ಆರೋಗ್ಯ ವರ್ಧಕವಾದ ಸಿದ್ದು ಹಲಸು ಸದ್ದು ಮಾಡಿದ ದಿನಗಳಲ್ಲೇ ವರ್ಷವಿಡೀ ಫಲ ನೀಡುವ ನಿತ್ಯಫಲದ ಹಲಸು ಸುದ್ದಿಯಾಗಿರುವುದು ವಿಶೇಶ ವಾಗಿದೆ.
( -ಕನ್ನೇಶ್ವರ ನಾಯ್ಕ ಕೋಲಶಿರ್ಸಿ)





