ಚಿಕ್ಕ ವಯಸ್ಸಿನಲ್ಲೇ ಅಡಕೆ ಮರ ಏರುವ ಬಾಲಕ: ಸಾಹಸಿ ಕೆಲಸಕ್ಕೆ ಪಾಲಕರು ಸಾಥ್
ಅಡಕೆ ತೋಟದಲ್ಲಿ ಕೊನೆ ಕೊಯ್ಯುವುದು ಅಂದ್ರೆ ಅದು ಸಾಹಸದ ಕೆಲಸ. ಹತ್ತಾರು ಅಡಿ ಎತ್ತರಕ್ಕೆ ಮರ ಹತ್ತಿ ಕೊನೆ ಇಳಿಸೋದು ಅಷ್ಟು ಸುಲಭದ ಮಾತಲ್ಲ. ಹೀಗಿರುವಾಗ 13 ವರ್ಷದ ಬಾಲಕನೋರ್ವ ಅಡಿಕೆ ಮರ ಏರಿ ಕೊನೆ ಕೊಯ್ಯುತ್ತಾನೆ.
ಕಾರವಾರ: ಆತ 13 ವರ್ಷದ ಪುಟ್ಟ ಬಾಲಕ. ಕೈಯಲ್ಲಿ ಬ್ಯಾಟ್ ಬಾಲ್ ಹಿಡಿದು ಆಟ ಆಡಬೇಕಾದ ಪೋರ, ಇದೀಗ ಸಾಹಸಿ ಕೆಲಸವೊಂದರಲ್ಲಿ ತೊಡಗಿಕೊಳ್ಳುತ್ತಿದ್ದಾನೆ. ಶಾಲಾ ರಜಾ ಅವಧಿಗಳಲ್ಲಿ ಮನೆಯವರ ನೆರವಿಗೆ ನಿಲ್ಲುವ ಈ ಬಾಲಕ ಇದೀಗ ಎಲ್ಲರ ಗಮನ ಸೆಳೆದಿದ್ದಾನೆ.
ಒಂದು ಕೈಯಲ್ಲಿ ಕತ್ತಿ ಹಿಡಿದು ಮತ್ತೊಂದು ಕೈಯಲ್ಲಿ ಹಗ್ಗ ಹಿಡಿದು ತೋಟದಲ್ಲಿರುವ ಮೂವತ್ತು ಅಡಿಗೂ ಎತ್ತರದ ಅಡಕೆ ಮರ ಏರಿ ಕೊನೆ ಕೊಯ್ಯುತ್ತಾ ಒಂದು ಮರದಿಂದ ಮತ್ತೊಂದು ಮರಕ್ಕೆ ದಾಟುವ ಈ ಬಾಲಕನ ಹೆಸರು ಸಚೇತ ದಿವಸ್ಪತಿ ಹೆಗಡೆ. ಯಲ್ಲಾಪುರ ತಾಲೂಕಿನ ಉಮ್ಮಚಗಿಯ ನಿವಾಸಿಯಾಗಿರುವ ಈತ, ಸಣ್ಣ ವಯಸ್ಸಿನಲ್ಲಿಯೇ ಅಡಿಕೆ ಮರ ಏರಿ ಕೊನೆ ಕೊಯ್ಯುವುದನ್ನು ರೂಢಿ ಮಾಡಿಕೊಂಡಿದ್ದಾನೆ.
6ಕೊನೆ ಕೊಯ್ಯುವ ಕಾಯಕದಲ್ಲಿ 13 ವರ್ಷದ ಸಚೇತ ಹೆಗಡೆ
ಸದ್ಯ ಕೊರೊನಾ, ಲಾಕ್ ಡೌನ್ ಹೀಗೆ ಹತ್ತು ಹಲವು ಸಮಸ್ಯೆಗಳಿಂದಾಗಿ ಮಲೆನಾಡಿನಲ್ಲಿ ಅಡಕೆ ಕೊನೆ ಕೊಯ್ಯುವವರಿಲ್ಲದೇ ಅಡಕೆ ಬೆಳೆಗಾರರು ಸಂಕಷ್ಟ ಅನುಭವಿಸುವಂತಾಗಿದೆ. ಹೀಗಿರುವಾಗ ತಮ್ಮ ತೋಟದಲ್ಲಿ ಈ ಹಿಂದೆ ಕೊನೆಗೌಡರು ಮರ ಏರುವುದನ್ನು ನೋಡಿ ಅವರಿಂದ ಒಂದಿಷ್ಟು ತರಬೇತಿ ಪಡೆದಿದ್ದ ಸಚೇತ, ಇದೀಗ ತಾನೇ ಸ್ವತಃ ಅಡಿಕೆ ಮರ ಏರುತ್ತಿದ್ದಾನೆ.
ಇದಕ್ಕಾಗಿ ಕೊನೆ ಕೊಯ್ಲಿಗೆ ಉಪಯೋಗಿಸುವ ವಸ್ತುಗಳನ್ನು ಸಿದ್ಧಪಡಿಸಿಕೊಂಡಿರುವ ಬಾಲಕ, 20 ರಿಂದ 50 ಅಡಿ ಎತ್ತರದ ಮರ ಏರಿ ಕೊನೆ ಕೊಯ್ದು ನೇಣು ಬಿಡುತ್ತಾನೆ. ಇದಕ್ಕೆ ಮನೆಯವರು ಕೂಡ ಬೆಂಬಲವಾಗಿ ನಿಂತಿದ್ದು, ಇದೀಗ ಈತ ಕ್ವಿಂಟಾಲ್ ಗಟ್ಟಲೇ ಅಡಕೆ ಕೊಯ್ಯುವ ಮೂಲಕ ಎಲ್ಲರ ಗಮನ ಸೆಳೆಯುತ್ತಿದ್ದಾನೆ.
ಯಲ್ಲಾಪುರದ ಜಾಜಿ ಮನೆಯ ದಿವಸ್ಪತಿ ಹೆಗಡೆರವರಿಗೆ ಮೂರು ಎಕರೆ ಅಡಕೆ ತೋಟವಿದೆ. ಜನವರಿ ಕೊನೆಯ ತಿಂಗಳಲ್ಲಿ ಫಸಲು ಬಲಿತು ಕೊಯ್ಲಿಗೆ ಬಂದಿತ್ತಾದರೂ ಅಡಿಕೆ ಕೊಯ್ಯಲು ಜನರಿಲ್ಲದ ಪರಿಸ್ಥಿತಿ ಎದುರಾಗುತಿತ್ತು. ಅಲ್ಲದೆ ಒಬ್ಬ ವ್ಯಕ್ತಿ 3 ಸಾವಿರ ದಿನಕ್ಕೆ ಕೂಲಿ ತೆಗೆದುಕೊಳ್ಳುತ್ತಾರೆ.
ದುಬಾರಿ ಕೂಲಿ ಕೊಟ್ಟರೂ ಕೊನೆ ಕೊಯ್ಯಲು ಕೆಲಸದವರು ಸಿಗುವುದಿಲ್ಲ. ಹೀಗಾಗಿ ಪ್ರತಿ ವರ್ಷ ಕೆಲಸದವರಿಗಾಗಿ ಕಾದು ನಷ್ಟ ಅನುಭವಿಸಬೇಕಾದ ಸ್ಥಿತಿ ಇತ್ತು. ಹೀಗಿರುವಾಗ ಮಗ ಸಣ್ಣ ಪುಟ್ಟ ಗಿಡಗಳ ಕೊನೆ ಕೊಯ್ಯುವುದಾಗಿ ಕೊಯ್ಲು ಮಾಡಲು ಶುರು ಮಾಡಿದ್ದ. ಇದೀಗ ಒಂದಿಷ್ಟು ಕೊನೆ ಕೊಯ್ಯುತ್ತಿರುವುದು ಮನೆಯವರಿಗೂ ಸಹಕಾರಿಯಾಗಿದೆ. ಮಗನ ಕಾಯಕ ನಮಗೂ ಖುಷಿ ನೀಡುತ್ತಿದ್ದು, ಆತನ ಕೃಷಿ ಬಗೆಗಿನ ಒಲವು ಹೆಮ್ಮೆಯಾಗಿದೆ ಎನ್ನುತ್ತಾರೆ ಆತನ ತಾಯಿ ಶ್ವೇತಾ ಹೆಗಡೆ.
ಕೊನೆ ಕೊಯ್ಯುವ ಕಾಯಕದಲ್ಲಿ 13 ವರ್ಷದ ಸಚೇತ ಹೆಗಡೆ
ಇಂದಿನ ತಲೆಮಾರಿನ ಜನ ಕೃಷಿಯಿಂದ ವಿಮುಖರಾಗುತ್ತಿರುವಾಗ ಈ ಪುಟ್ಟ ಬಾಲಕ ಕೃಷಿಯ ಬಗ್ಗೆ ಆಸಕ್ಕಿ ತೋರಿಸಿ ಕ್ಲಿಷ್ಟಕರವಾದ ಕೆಲಸ ಮಾಡುತ್ತಿರುವುದು ನಿಜವಾಗಿಯೂ ಶ್ಲಾಘನೀಯ. ಕೈ ಕೆಸರಾದರೇ ಬಾಯಿ ಮೊಸರು ಎನ್ನುವಂತೆ ಕಷ್ಟ ಪಟ್ಟರೇ ಎಂತದ್ದನ್ನು ಸಾಧಿಸಬಹುದು ಎನ್ನುವುದಕ್ಕೆ ಈ ಬಾಲಕ ಮಾದರಿಯಾಗಿದ್ದಾನೆ. (etbk)