
ಚಿತ್ರರಂಗದಲ್ಲಿ ಗಾಡ್ ಫಾದರ್ ಹೆಲ್ಪ್ ತುಂಬಾ ದಿನ ನಡಿಯಲ್ಲ, ನಮ್ಮಲ್ಲೂ ಕಂಟೆಂಟ್ ಇರ್ಬೇಕು: ‘ಡೊಳ್ಳು’ ನಿರ್ದೇಶಕ ಸಾಗರ್ ಪುರಾಣಿಕ್
ಕರುನಾಡ ನೆಲದ ಸೊಗಡಿನ ‘ಡೊಳ್ಳು ಸಿನಿಮಾ ನೇಪಾಳ ಚಿತ್ರೋತ್ಸವಕ್ಕೆ ಆಯ್ಕೆಯಾಗಿದೆ. ದೇಶ ವಿದೇಶದ ಪ್ರತಿಷ್ಟಿತ ಅಂತಾರಾಷ್ಟ್ರೀಯ ಚಿತ್ರೋತ್ಸವಗಳಿಗೆ ಆಯ್ಕೆಯಾಗಿ ಕರುನಾಡ ಪತಾಕೆ ಹಾರಿಸುತ್ತಿರುವ ‘ಡೊಳ್ಳು’ ಸಿನಿಮಾದ ನಿರ್ದೇಶಕ ಯುವಪ್ರತಿಭೆ ಸಾಗರ್ ಪುರಾಣಿಕ್. ಸ್ಯಾಂಡಲ್ ವುಡ್ ನಲ್ಲಿ ತಮ್ಮದೇ ಹೆಜ್ಜೆ ಮೂಡಿಸಲು ಬಂದಿರುವ ನಟ, ನಿರ್ದೇಶಕ ಸಾಗರ್ ಸಂದರ್ಶನ ಇಲ್ಲಿದೆ.

ಕರ್ನಾಟಕ ನೆಲದ ಸೊಗಡಿನ ‘ಡೊಳ್ಳು ಸಿನಿಮಾ ನೇಪಾಳ ಚಿತ್ರೋತ್ಸವಕ್ಕೆ ಆಯ್ಕೆಯಾಗಿದೆ. ಗೋವಾ, ಚೆನ್ನೈ, ಅಮೆರಿಕ ಸೇರಿದಂತೆ ದೇಶ ವಿದೇಶದ ಪ್ರತಿಷ್ಟಿತ ಅಂತಾರಾಷ್ಟ್ರೀಯ ಚಿತ್ರೋತ್ಸವಗಳಿಗೆ ಆಯ್ಕೆಯಾಗಿ ಕರುನಾಡ ಪತಾಕೆ ಹಾರಿಸುತ್ತಿರುವ ‘ಡೊಳ್ಳು’ ಸಿನಿಮಾವನ್ನು ಯುವಪ್ರತಿಭೆ ಸಾಗರ್ ಪುರಾಣಿಕ್ ನಿರ್ದೇಶಿಸಿದ್ದಾರೆ. ಹಿರಿಯ ಕಲಾವಿದ, ರಾಜ್ಯ ಚಲನಚಿತ್ರ ಮಂಡಳಿ ಅಧ್ಯಕ್ಷ ಸುನಿಲ್ ಪುರಾಣಿಕ್, ಸಾಗರ್ ತಂದೆ ಎನ್ನುವುದು ಗಮನಾರ್ಹ. ಓವರ್ ಟು ಸಾಗರ್ ಪುರಾಣಿಕ್.
ಫೇಮ್ ಮನೆಬಾಗಿಲ ಹೊರಗೆ
ನಮ್ಮದು ಮಿಡಲ್ ಕ್ಲಾಸ್ ಕುಟುಂಬ. ಅಪ್ಪ ಕಿರುತೆರೆಯಲ್ಲಿ ನಟಿಸಿ ಹೆಸರು ಮಾಡಿದ್ದ ದಿನಗಳಲ್ಲೂ ಅಪ್ಪ ಆಗಲಿ, ನಮ್ಮ ಕುಟುಂಬವಾಗಲಿ ಸಿಂಪ್ಲಿಸಿಟಿ ಬಿಟ್ಟವರಲ್ಲ. ಅದು ಅಪ್ಪನ ಪಾಠ. ಯಾವತ್ತೂ ಫೇಮ್ ಅವರ ತಲೆಗೆ ಏರಿದ್ದೇ ಇಲ್ಲ. ಅಪ್ಪ ತಮ್ಮ ಜನಪ್ರಿಯತೆಯನ್ನು ಮನೆ ತನಕ ತಂದವರೇ ಅಲ್ಲ. ಬಾಗಿಲ ಹೊರಗಿಟ್ಟು ಬರುತ್ತಿದ್ದರು. ನಾರ್ಮಲ್ ಬಾಲ್ಯವನ್ನು ಪಡೆಯಲು ಇದು ತುಂಬಾ ಹೆಲ್ಪ್ ಆಯ್ತು.

ದಾರಿಯುದ್ದಕ್ಕೂ ಅಳು
ಮೊತ್ತಮೊದಲ ಬಾರಿ ಕ್ಯಾಮೆರಾ ಮುಂದೆ ನಟಿಸೋವಾಗ ತಳಮಳಗೊಂಡಿದ್ದೆ. ಏನು ಮಾಡಿದರೂ ಶಾಟ್ ಓಕೆ ಆಗುತ್ತಿರಲಿಲ್ಲ. ಅದರಿಂದಾಗಿ ಅವಮಾನ ಆಗೋ ಹಾಗೆ ಬೈಸಿಕೊಂಡಿದ್ದೆ. ದುಃಖ ತಡೆಯಲಾರದೆ ಅಳು ಬಂದು ಬಿಟ್ಟಿತು. ಆ ದಿನ ಬೈಕಿನಲ್ಲಿ ಮನೆಗೆ ಹೋಗುವಾಗ ದಾರಿಯುದ್ದಕ್ಕೂ ಅತ್ತುಕೊಂಡು ಹೋಗಿದ್ದೆ.
ನಟನೆಯಿಂದ ನಿರ್ದೇಶನದೆಡೆ
ನಿರ್ದೇಶಕರು ನಟನೆಗಿಳಿದಾಗ ಅವರಿಗೆ ಕೆಲ ಉಪಯೋಗಗಳಿರುವಂತೆಯೇ, ಕಲಾವಿದರು ನಿರ್ದೇಶಕಕ್ಕಿಳಿಯುವುದರಿಂದ ಹಲವು ಪ್ರಯೋಜನಗಳಿವೆ. ಶಾಟ್ ತೆಗೆಯುವುದರಿಂದ ಹಿಡಿದು, ಕಲಾವಿದರಿಂದ ಹೇಗೆ ನಟನೆ ಪಡೆದುಕೊಳ್ಳಬೇಕು ಎನ್ನುವುದರ ಬಗ್ಗೆ ಸ್ಪಷ್ಟತೆ ಇರುತ್ತದೆ.
ಕಪಾಳಮೋಕ್ಷ ಮಾಡಿದ ಲೈಫು
ನನಗೆ ಮುಖ್ಯವಾಹಿನಿ ಸಿನಿಮಾದಲ್ಲಿ ಸಿಕ್ಕ ಮೊದಲ ಅವಕಾಶ ‘ರಿಂಗ್ ರೋಡ್ ಶುಭಾ’. ಆ ಸಿನಿಮಾದ ಪೋಸ್ಟರ್ ನಲ್ಲಿ ನಾನೂ ಇದ್ದೆ. ಇನ್ನು ನನಗೆ ಸಿನಿಮಾರಂಗದಲ್ಲಿ ಅವಕಾಶಗಳು ಸಾಕೆನ್ನುವಷ್ಟು ಸಿಗುತ್ತಾ ಹೋಗುತ್ತವೆ, ನನ್ನ ಲೈಫು ಇನ್ನುಮುಂದೆ ಫುಲ್ ಚೇಂಜ್ ಆಗುತ್ತೆ ಅಂತ ಅಂದುಕೊಂಡೆ. ಆದರೆ ಹಾಗಾಗಲಿಲ್ಲ. ಸಿನಿಮಾ ಓಡಲಿಲ್ಲ. ತುಂಬಾ ಸಮಯ ಯಾವ ಅವಕಾಶವೂ ಹುಡುಕಿಕೊಂಡು ಬರಲಿಲ್ಲ. ಲೈಫು ನನಗೆ ಕಪಾಳ ಮೋಕ್ಷ ಮಾಡಿತ್ತು. ಲೈಫು ಪಾಠ ಕಲಿಸುವ ಪರಿ ವಿಚಿತ್ರ.
ಅಪ್ಪನ ಬದುಕೇ ಸ್ಪೂರ್ತಿ
ಅಪ್ಪ ತಮ್ಮ 18ನೇ ವಯಸ್ಸಿನಲ್ಲಿ ಧಾರವಾಡ ಬಿಟ್ಟು ಗುರುತು ಪರಿಚಯವೇ ಇಲ್ಲದ ಬೆಂಗಳೂರಿಗೆ ಬಂದಿದ್ದರು. ಬಂದು ಇಲ್ಲಿ ನೆಲೆಯೂರಿ ತಮ್ಮದೊಂದು ಅಸ್ತಿತ್ವ ಸೃಷ್ಟಿಸಿಕೊಂಡಿದ್ದರು. ಕಲಾವಿದರಾಗಿ ಹೆಸರು ಮಾಡಿದರು. ಇದು ನನ್ನನ್ನು ಕೊರೆಯುತ್ತಲೇ ಇತ್ತು. ಅವರ ಮಗನಾಗಿ ಅವರ ಮಟ್ಟಕ್ಕೆ ಏರಲಾಗದಿದ್ದರೂ ನನ್ನದೇ ಆದ ಮಾರ್ಕ್ ಅನ್ನಂತೂ ಮಾಡಬೇಕು ಅನ್ನೋ ಹಪಾಹಪಿ ಬಂದುಬಿಟ್ಟಿತು.

ಗಾಡ್ ಫಾದರ್ ಹೆಲ್ಪ್ ನಡಿಯಲ್ಲ
ಚಿತ್ರರಂಗದಲ್ಲಿ ಗಾಡ್ ಫಾದರ್ ಇದ್ದರೆ ಎಂಟ್ರಿ ಸಿಗುತ್ತೆ. ಆದರೆ ಇಲ್ಲಿ ಉಳಿಯಬೇಕು ಅಂದರೆ ಸ್ವಂತ ಸಾಮರ್ಥ್ಯ ಮತ್ತು ಪ್ರತಿಭೆ ಇದ್ದರೆ ಮಾತ್ರ ಸಾಧ್ಯ. ನಟನೆಯ ಪ್ರಾರಂಭದ ದಿನಗಳಲ್ಲಿ ನಟ, ನಿರ್ಮಾಪಕ ಬಿ.ಸುರೇಶ್ ಅವರು ನನಗೆ ನ್ಯೂಸ್ ಪೇಪರ್ ಓದೋ ವ್ಯಾಯಾಮ ಮಾಡಿಸುತ್ತಿದ್ದರು. ಅದರಿಂದ ಸ್ಪಷ್ಟ ಉಚ್ಛಾರಣೆ ಮತ್ತು ದನಿ ಇಂಪ್ರೂವ್ ಆಗುತ್ತೆ. ಈಗ ನಾನು ಮನಸ್ಸಿಗೆ ತೋಚಿದ ಕಥೆಗಳನ್ನು ಬರೆಯುತ್ತಾ ಇರುತ್ತೇನೆ. ನಿರ್ಮಾಪಕರ ಕರೆ ಮಾಡಿ ಕಥೆ ಇದೆಯಾ ಕೇಳಿದಾಗ ಇಲ್ಲ ಎಂದು ಯಾವತ್ತೂ ಹೇಳಲ್ಲ.
ಪವನ್ ವಡೆಯರ್ ಕಾಲ್
ನನ್ನ ರಾಷ್ಟ್ರಪ್ರಶಸ್ತಿ ವಿಜೇತ ‘ಮಹಾನ್ ಹುತಾತ್ಮ’ ಶಾರ್ಟ್ ಫಿಲಂ ನೋಡಿ ಇಂಪ್ರೆಸ್ ಆಗಿದ್ದ ನಿರ್ದೇಶಕ ಪವನ್ ವಡೆಯರ್ ಕರೆ ಮಾಡಿ ಏನಾದರೂ ಕಥೆ ಇದೆಯಾ ಅಂತ ಕೇಳಿದರು. ನಾನು ಇದೆ ಅಂದೆ. ಮರುದಿನ ಹೋಗಿ ‘ಡೊಳ್ಳು’ ಸಿನಿಮಾದ ಕಥೆ ಪಿಚ್ ಮಾಡಿದೆ. ಗಾಂಧಿನಗರದಲ್ಲಿ ಒಂದೇ ಕಥೆಯನ್ನು ವರ್ಷಗಟ್ಟಲೆ ಹೇಳಿಕೊಂಡು ಏನೂ ಆಗದೆ ಒದ್ದಾಡುವವರನ್ನು ನೋಡಿದ್ದೆ. ಹೀಗಾಗಿ ಹೆಚ್ಚಿನ ನಿರೀಕ್ಷೆ ಇರಲಿಲ್ಲ. ಕಥೆ ಕೇಳಿದ ಕೆಲವೇ ದಿನಗಳಲ್ಲಿ ಡೊಳ್ಳು ಕಥೇನಾ ಸಿನಿಮಾ ನಿರ್ಮಾಣ ಮಾಡುವ ಬಗ್ಗೆ ಪವನ್ ವಡೆಯರ್ ಆಫರ್ ಕೊಟ್ರು. ನನಗೆ ಸ್ವರ್ಗಕ್ಕೆ ಮೂರೇ ಗೇಣು. ಆಮೇಲೆ ಕತೆಗಾರ ಶ್ರೀನಿಧಿ ಡಿ.ಎಸ್. ಜೊತೆ ಕುಳಿತು ಚಿತ್ರಕಥೆ ಸಿದ್ಧಪಡಿಸಿದೆ.
ಪ್ಯೂರ್ ಉದ್ದೇಶಕ್ಕೆ ಗಿಮಿಕ್ ಬೇಡ
ಇಂದು ನನ್ನ ನಿರ್ದೇಶನದ ಕರ್ನಾಟಕದ ಸೊಗಡಿರುವ ಡೊಳ್ಳು ಸಿನಿಮಾ ಅಂತಾರಾಷ್ಟ್ರೀಯ ಮಟ್ಟದಲ್ಲಿ ಹೆಸರು ಮಾಡುತ್ತಿದೆ. ಅದರ ಶ್ರೇಯ ಹೋಗಬೇಕಾಗಿರುವುದು ಕನ್ನಡನಾಡಿನ ಸಂಸ್ಕೃತಿಗೇ. ನಾವು ಕೇವಲ ನಿಮಿತ್ತ. ಸಿನಿಮಾ ಮಾಡುವಾಗಲೂ ನಾವು ಯಾವುದೇ ಗಿಮಿಕ್ ಮಾಡಬಾರದು ಎಂದು ನಿರ್ಧರಿಸಿಬಿಟ್ಟಿದ್ದೆವು. ಕರ್ನಾಟಕ ಸಂಸ್ಕೃತಿಯ ಕಥೆಯನ್ನು ಡೊಳ್ಳು ಕುಣಿತದ ಮೂಲಕ, ಆಧುನಿಕತೆಯ ಸ್ಪರ್ಶವಿಲ್ಲದಂತೆ ಹಳೆಯ ಕಾಲದ ಫಿಲಂ ತಂತ್ರಗಳನ್ನು ಬಳಸಿ ಹೇಳುವುದು ನಮ್ಮ ಉದ್ದೇಶವಾಗಿತ್ತು. ಅದೀಗ ಈಡೇರಿದೆ. (ಕಪ್ರಡಾ)
