

ಕೆಲವು ಗಾಳಿ ಸುದ್ದಿಗಳು ಗಾಳಿಯಲ್ಲಿ ತೇಲಿ ಹೋದರೆ ಇನ್ನು ಕೆಲವು ಸತ್ಯದ ಅಲೆಗಳನ್ನು ಬಡಿದು ಎಬ್ಬಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ.
ಕಳೆದ ವಾರ ಸಿದ್ಧಾಪುರದಲ್ಲಿ ಎರಡು ದುರಂತಗಳಾದವು. ಮೊದಲನೆಯದು ಶಿರಳಗಿಯ ವಿದ್ಯಾರ್ಥಿಯೊಬ್ಬನ ನಾಪತ್ತೆ ಮತ್ತು ಆರೆಸ್ಸೆಸ್ ಪ್ರಮುಖ ಎನ್ನುವವರೊಬ್ಬರ ಅಪಘಾತದ ಸಾವು.
ಈ ಎರಡೂ ಪ್ರಕರಣಗಳು ಉತ್ತರ ಕನ್ನಡ ಜಿಲ್ಲೆಯ ಪೊಲೀಸರಿಗೆ ಸವಾಲಿನ ಪ್ರಕರಣಗಳು. ಮೊದಲ ಪ್ರಕರಣ ಶಿರಳಗಿ ಹೈಸ್ಕೂಲ್ ವಿದ್ಯಾರ್ಥಿ ನವೀನ್ ವೀ ರಭದ್ರ ನಾಯ್ಕ ನಾಪತ್ತೆಯಾಗಿರುವುದು. ಶಿರಳಗಿ ಸರ್ಕಾರಿ ಪ್ರೌಢಶಾಲೆಯ ವಿದ್ಯಾರ್ಥಿ ನವೀನ್ ನಾಯ್ಕ ಮನೆಯಿಂದ ಸೈಕಲ್ ಚಲಾಯಿಸಿಕೊಂಡು ಹೊರಟವನು ಮರಳಿ ಮನೆಗೆ ಬರಲಿಲ್ಲ. ಈ ವಿದ್ಯಾರ್ಥಿ ಮೊಬೈಲ್ ನೋಡುವ ಚಟ ಅಂಟಿಸಿಕೊಂಡಿದ್ದ ಎನ್ನುವುದನ್ನು ಬಿಟ್ಟರೆ ಅವನ ಮೇಲೆ ಬೇರೆ ಆರೋಪಗಳಿಲ್ಲ. ಆದರೆ ಈಗ ಎದ್ದಿರುವ ಗಾಳಿಸುದ್ದಿ ಎಂದರೆ… ಶಿರಳಗಿ ಪ್ರೌಢಶಾಲೆಯ ಇಬ್ಬರು ಶಿಕ್ಷಕಿಯರು ಈ ಹುಡುಗನಿಗೆ ಹೆದರಿಸಿ, ಶಿಕ್ಷಿಸಿದ್ದೇ ಈತನ ಪರಾರಿಗೆ ಕಾರಣ ಎನ್ನುವ ಸುದ್ದಿ.
೮ ನೇ ತರಗತಿಯ ಈ ಬಡ ವಿದ್ಯಾರ್ಥಿ ಶಿಕ್ಷಕಿಯರ ಕಿರುಕುಳಕ್ಕೆ ಒಳಗಾಗಿದ್ದೇ ಸತ್ಯವಾಗಿದ್ದರೆ ತನಿಖೆಯಾಗಿ ಈ ವಿದ್ಯಾರ್ಥಿ ಮತ್ತು ಅವರ ಪಾಲಕರಿಗೆ ನ್ಯಾಯ ಸಿಗಬೇಕು. ಶಿಕ್ಷಣ ಇಲಾಖೆ ಮತ್ತು ಪೊಲೀಸ್ ಇಲಾಖೆಗಳು ಈ ವಿದ್ಯಾರ್ಥಿಯ ಶೋಧಕ್ಕೆ ಪ್ರಯತ್ನಿಸಬೇಕು.ಈ ವಿದ್ಯಾರ್ಥಿ, ಪಾಲಕರಿಗೆ ನ್ಯಾಯ ಸಿಗುವ ಜೊತೆಗೆ ಈ ಇಲಾಖೆಗಳ ಮೇಲೆ ಸಾರ್ವಜನಿಕರ ವಿಶ್ವಾಸವೂ ಹೆಚ್ಚಬೇಕು.
ಕೋಲಶಿರ್ಸಿ ಬಳಿ ಅಪಘಾತದಿಂದ ಮೃತರಾದ ಸಂಘದ ಪ್ರಮುಖನ ಸಾವಿನ ಹಿನ್ನೆಲೆ- ಕಳೆದ ಎರಡು ವರ್ಷಗಳ ಕೆಳಗೆ ಸಿದ್ಧಾಪುರ ಸರ್ಕಾರಿ ಮಹಾವಿದ್ಯಾಲಯದ ವಿದ್ಯಾರ್ಥಿಯೊಬ್ಬನ ಆತ್ಮಹತ್ಯೆಯ ಹಿಂದೆ ಡ್ರಗ್ಸ್ ಜಾಲ ಮತ್ತು ಕೆಲವು ಸಂಘಟನೆಗಳ ಹುಡುಗರ ಕೈವಾಡದ ಶಂಕೆ ವ್ಯಕ್ತವಾಗಿತ್ತು. ಈ ಪ್ರಕರಣದಲ್ಲಿ ಬಚಾವಾದ ವ್ಯವಸ್ಥಿತ ಗುಂಪು ತನ್ನ ಜಾಲವನ್ನೂ ಇನ್ನೂ ಜೀವಂತ ಇಟ್ಟುಕೊಂಡಿದೆ ಎನ್ನುವ ಆರೋಪಗಳ ನಡುವೆ ಆರೆಸ್ಸೆಸ್ ಪ್ರಮುಖ ಆದಿತ್ಯ ಹೆಗಡೆ ಸಾವಿನ ಬಗ್ಗೆ ಕೂಡಾ ಕೆಲವು ವದಂತಿ, ಗಾಳಿಸುದ್ದಿಗಳು ಹರಿದಾಡತೊಡಗಿವೆ.
ಆದಿತ್ಯ ಹೆಗಡೆ ರಾತ್ರಿ ವೇಳೆ ಅಪಘಾತಕ್ಕೀಡಾಗುವ ಮೊದಲು ಯಾವ ಅಂಗಡಿಯಲ್ಲಿ ಏನು ಮಾಡುತಿದ್ದ? ಆ ಅಂಗಡಿಯಲ್ಲಿ ಮಾದಕ ವಸ್ತುಗಳ ಮಾರಾಟ ನಡೆಯುತ್ತಿತ್ತೆ? ಸಾವಿರಾರು ಜನ ದಿನಂಪ್ರತಿ ಓಡಾಡುವ ಕೋಲಶಿರ್ಸಿ ಸಿದ್ಧಾಪುರ ರಸ್ತೆಯಲ್ಲಿ ರಾತ್ರಿ ಕಂಡ ಬಾವಿಗೆ ಹಗಲು ಬೀಳುವಂತೆ ಅಪಘಾತ ಮಾಡಿಕೊಂಡ ನತದೃಷ್ಟ ಆದಿತ್ಯ ಹೆಗಡೆ ನಿಜಕ್ಕೂ ಯಾವ ವ್ಯವಹಾರ ಮಾಡುತಿದ್ದ? ಸಂಘದ ಹುದ್ದೆ,ಅವಕಾಶ ಬಳಸಿಕೊಂಡು ಮತ್ತೇನನ್ನಾದರೂ ಮಾಡುತ್ತಿದ್ದ ಬಗ್ಗೆ ಸತ್ಯ ಶೋಧನೆ ಆಗಬಹುದೆ?
ಸ್ವಯಂ ಸಂಘಿಗಳು, ಅವರ ಸಹೋದರ ಸಂಘಟನೆಯ ಕಾರ್ಯಕರ್ತರು ಆಗಾಗ ಇಂಥ ಪ್ರಕರಣಗಳ ಗಹನತೆಯ ಮೇಲೆ ನೆರಳು ಬೀರುವುದೇಕೆ? ಇಂಥ ಯುವಕರಿಗೆ ಮಾದಕ ವಸ್ತುಗಳನ್ನು ಪೂರೈಸಿ ಲಾಭ ಮಾಡಿಕೊಳ್ಳುವ ಅಗೋಚರ ಜಾಲ ಸಿದ್ಧಾಪುರದಲ್ಲಿರುವುದು ಸತ್ಯವೆ? ಈ ಅಂಶಗಳ ಆಧಾರದಲ್ಲಿ ತನಿಖೆಯಾದರೆ ಆದಿತ್ಯನ ಅಕಾಲದ ಅಗಲುವಿಕೆಯ ಹಿಂದಿನ ರಹಸ್ಯ ಬಯಲಾಗಬಹುದು. ಹೈಸ್ಕೂಲು ಕಾಲೇಜು ಆವರಣಗಳ ಸುತ್ತ ಮುತ್ತ ನಡೆಯುತ್ತಿರುವ ಮಾದಕ ವಸ್ತು ಮಾರಾಟ ಜಾಲದ ಹಿಂದಿನ ಕಾಣದ ಕೈಗಳನ್ನು ಪೊಲೀಸರು ಹುಡುಕಿದರೆ ಸಿದ್ಧಾಪುರಕ್ಕೆ ಅನುಕೂಲ ಜೊತೆಗೆ ಬಾಧಿತರಾದ ಅಮಾಯಕ ತಂದೆ ತಾಯಿಗಳಿಗೂ!
ಆದಿತ್ಯ ಹೆಗಡೆಯ ಅಪಘಾತದ ಸಾವು ನಿರೀಕ್ಷಿತ ಅವಗಢ ತಪ್ಪಿಸಲು ನೆರವಾದರೆ ಅವರ ಆತ್ಮಕ್ಕೆ ಶಾಂತಿ ಇಲ್ಲದಿದ್ದರೆ ಅವರೊಂದಿಗೆ ಅನೇಕರ ಜೀವಂತ ದಿವ್ಯಾತ್ಮಗಳಿಗೂ ಅಶಾಂತಿ. ಆದಿತ್ಯ ಹೆಗಡೆ ಅಪಘಾತ, ಶಿರಳಗಿ ನವೀನ್ ನಾಪತ್ತೆ ಇವುಗಳ ಹಿಂದಿನ ದುಷ್ಟಶಕ್ತಿಗಳಿಗೆ ಶಿಕ್ಷೆಯಾಗದಿದ್ದರೆ ಸಿದ್ಧಾಪುರಕ್ಕೆ ಕೆಡುಕಾಗುವ ಸಾಧ್ಯತೆಗಳಂತೂ ಹೆಚ್ಚು. ಈ ಪ್ರಕರಣಗಳ ಬಾಧಿತರಿಗೆ ನ್ಯಾಯ ಸಿಗಬೇಕೆಂಬುದು ಮಾತ್ರ ಸಮಾಜಮುಖಿ ಕಾಳಜಿ.

