


ಸಿದ್ದಾಪುರ: ತಾಲೂಕಾ ಕೆ.ಎಸ್.ಆರ್.ಟಿ.ಸಿ ನಾಮಧಾರಿ ನೌಕರರ ಸಂಘದ ವಾರ್ಷಿಕ ಸ್ನೇಹ ಸಮ್ಮೇಳನ, ಪ್ರತಿಭಾ ಪುರಸ್ಕಾರ ಹಾಗೂ ಸನ್ಮಾನ ಕಾರ್ಯಕ್ರಮ ಭಾನುವಾರ ಪಟ್ಟಣದ ಬಾಲಭವನದ ಪುನೀತ್ ರಾಜಕುಮಾರ ವೇದಿಕೆಯಲ್ಲಿ ಜರುಗಿತು.
ಕಾರ್ಯಕ್ರಮ ಉದ್ಘಾಟಿಸಿದ ಸಿದ್ದಾಪುರ ಪಟ್ಟಣ ಪಂಚಾಯತ ಮುಖ್ಯಾಧಿಕಾರಿ ಕುಮಾರ ನಾಯ್ಕ ಮಾತನಾಡಿ, ತಮ್ಮ ಕೌಟುಂಬಿಕ ಕಷ್ಟ, ನೋವಿನ ನಡುವೆಯೂ ಪ್ರಯಾಣಿಕರನ್ನು ಸುರಕ್ಷಿತವಾಗಿ ಸರಿಯಾದ ಸ್ಥಳಕ್ಕೆ ತಲುಪಿಸುವ ಸಾರಿಗೆ ಸಂಸ್ಥೆಯಲ್ಲಿ ಕಾರ್ಯನಿರ್ವಹಿಸುವ ನೌಕರರಿಗೆ ಅಭಿನಂದನೆ ಸಲ್ಲಿಸುತ್ತೇನೆ. ಶಿಕ್ಷಣ ಹಾಗೂ ಸಂಘಟನೆಯ ಮೂಲಕ ಸಮಾಜವನ್ನು ಕಟ್ಟುವ ಕೆಲಸವಾಗಬೇಕು. ಕಷ್ಟಪಟ್ಟು ದುಡಿಯುತ್ತಿರುವ ಪಾಲಕರ ಶ್ರಮಕ್ಕೆ ಮಕ್ಕಳು ತಕ್ಕ ಪ್ರತಿಫಲ ನೀಡಬೇಕು. ಸಂಘದ ಮೂಲಕ ಒಳ್ಳೆಯ ಕೆಲಸಗಳಾಗಲಿ ಎಂದು ಶುಭ ಹಾರೈಸಿದರು.

ಪತ್ರಕರ್ತ ಕನ್ನೇಶ್ ಕೋಲಶಿರ್ಸಿ ಮಾತನಾಡಿ, ನಾಮಧಾರಿಗಳಿಗೆ ಸಾಮರ್ಥ್ಯವಿದೆ ಆದರೆ ಕೀಳರಿಮೆ ಹಾಗೂ ಮೇಲರಿಮೆಯಿಂದ ಹೊರಬರಬೇಕು. ಐಎಎಸ್, ಐ.ಎಫ್.ಎಸ್ ಮಾಡುವ ಸಾಮರ್ಥ್ಯವಿರುವ ನಾವುಗಳು ಸಂಘಟಿರಾಗಿ ಒಟ್ಟಾಗುವಲ್ಲಿ ಹಿಂದಿದ್ದೇವೆ. ಎಲ್ಲಾ ಕ್ಷೇತ್ರದಲ್ಲಿ ನಮಗೆ ಅನ್ಯಾಯವಾಗುತ್ತಿದೆ. ಧರ್ಮ ಹಾಗೂ ಹಿಂದುತ್ವದ ಹೆಸರಿನಲ್ಲಿ ನಾಮಧಾರಿಗಳನ್ನು ಬಳಸಿಕೊಳ್ಳಲಾಗುತ್ತಿದೆ. ರಾಜ್ಯಕ್ಕೆ ಮುಖ್ಯಮಂತ್ರಿ, ಭಾರತೀಯ ಚಿತ್ರರಂಗಕ್ಕೆ ಡಾ. ರಾಜಕುಮಾರ, ಪುನೀತ್ ರಾಜಕುಮಾರಂತಹ ಶ್ರೇಷ್ಠ ನಟರನ್ನು ನೀಡಿದ ಸಮುದಾಯ ನಮ್ಮದಾಗಿದೆ. ಯಾರ್ಯಾರದ್ದೋ ಹಿತಾಸಕ್ತಿಗೆ ಯುವಕರು ಬಲಿಯಾಗಬೇಡಿ. ನಮ್ಮಲ್ಲಿ ಏನು ತಪ್ಪಾಗುತ್ತಿದೆ ಎಂದು ಆತ್ಮಾವಲೋಕನ ಮಾಡಿಕೊಳ್ಳಬೇಕು ಎಂದರು.
ಸಾಹಿತಿ ಗೋಪಾಲ ನಾಯ್ಕ ಭಾಶಿ ಮಾತನಾಡಿ, ಈ ನಾಡನ್ನು ಕಟ್ಟಿದ್ದ ಕದಂಬ ವಂಶದ ಮಯೂರವರ್ಮನನ್ನು ನೀಡಿದ ಸಮುದಾಯ ಸಂಘಟಿತವಾಗಿ ಒಂದಾಗಬೇಕಿದೆ. ಶ್ರಮಿಕರು ಹಾಗೂ ಸ್ವಾಭಿಮಾನಿಗಳಾದವರಿಗೆ ಸ್ವಲ್ಪ ಕೋಪ ಹೆಚ್ಚಿರುತ್ತದೆ. ನಾವು ಮೌಢ್ಯ ತೆಯಿಂದ ಮೊದಲು ಹೊರ ಬರಬೇಕು. ನಮ್ಮಲ್ಲಿ ಪ್ರಜ್ಞೆ ಮೂಡಬೇಕು. ನಾವು ಸರಿಯಾಗಿದ್ದುಕೊಂಡು ಮಕ್ಕಳಲ್ಲಿ ಜಾಗೃತಿ ಮೂಡಿಸಬೇಕು ಎಂದರು.
ಇದೇ ವೇಳೆ ಸಂಘದ ವತಿಯಿಂದ ನಿವೃತ್ತ ಸಹಾಯಕ ಸಂಚಾರ ನಿರೀಕ್ಷಕ ಎನ್.ಆರ್.ನಾಯ್ಕ ಹಾಗೂ ನಿವೃತ್ತ ಸೈನಿಕರಾದ ಎಂ.ಆರ್.ನಾಯ್ಕ ಇವರನ್ನು ಹೃದಯಸ್ಪರ್ಷಿಯಾಗಿ ಸನ್ಮಾನಿಸಲಾಯಿತು. ಪಿಯುಸಿಯಲ್ಲಿ ಅತಿ ಹೆಚ್ಚು ಅಂಕ ಗಳಿಸಿದ ಅವರಗುಪ್ಪಾದ ಕೆ.ಪಿ.ವಿದ್ಯಾ ಇವರನ್ನು ಪುರಸ್ಕರಿಸಲಾಯಿತು.
ಸಂಘದ ಅಧ್ಯಕ್ಷ ಆರ್.ಟಿ.ನಾಯ್ಕ ಅವರಗುಪ್ಪ ಅಧ್ಯಕ್ಷತೆ ವಹಿಸಿದ್ದರು. ಈ ವೇಳೆ ಕೆ.ಎಸ್.ಆರ್.ಟಿ.ಸಿ ಸ್ಟಾಫ್ & ವರ್ಕರ್ಸ್ ಫೆ ಡರೇಶನ್ ಮಾಜಿ ಪ್ರಧಾನ ಕಾರ್ಯದರ್ಶಿ ಶಾಂತಾರಾಮ ನಾಯ್ಕ, ಬನವಾಸಿ ಸರ್ಕಾರಿ ಪಿಯು ಕಾಲೇಜು ಪ್ರಾಚಾರ್ಯ ಎಂ.ಕೆ.ನಾಯ್ಕ, ಸಂಘದ ಸಂಚಾಲಕ ಆರ್.ಟಿ.ನಾಯ್ಕ ಬೇಡ್ಕಣಿ ಉಪಸ್ಥಿತರಿದ್ದರು. ಸಂಘದ ಸಹ ಕಾರ್ಯದರ್ಶಿ ಎಂ.ಡಿ.ನಾಯ್ಕ ಸ್ವಾಗತಿಸಿದರು. ಸಂಘದ ಪ್ರಧಾನ ಕಾರ್ಯದರ್ಶಿ ಎಂ.ಎನ್.ನಾಯ್ಕ ಮನ್ಮನೆ ಕಾರ್ಯಕ್ರಮ ನಿರೂಪಿಸಿದರು.

