

ಪ್ರವಾದಿ ನಿಂದನೆಗೆ ಪ್ರತೀಕಾರ: ಭಜರಂಗದಳದ ಕಾರ್ಯಕರ್ತ ಹರ್ಷ ಹತ್ಯೆ ಸಮರ್ಥಿಸಿ ಪೋಸ್ಟ್, ವ್ಯಕ್ತಿ ವಿರುದ್ಧ ಎಫ್ಐಆರ್
ಶಿವಮೊಗ್ಗದಲ್ಲಿ ನಡೆದ ಭಜರಂಗದಳದ ಕಾರ್ಯಕರ್ತ ಹರ್ಷ ಅವರ ಹತ್ಯೆಯನ್ನು ಸಮರ್ಥಿಸಿ ಸಾಮಾಜಿಕ ಜಾಲತಾಣಗಳಲ್ಲಿ ಪ್ರಚೋದನಕಾರಿ ಪೋಸ್ಟ್ ಮಾಡಿದ್ದ ಅಪರಿಚಿತ ವ್ಯಕ್ತಿ ವಿರುದ್ಧ ಸಿಇಎನ್ ಠಾಣೆ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.

ಮಂಗಳೂರು: ಶಿವಮೊಗ್ಗದಲ್ಲಿ ನಡೆದ ಭಜರಂಗದಳದ ಕಾರ್ಯಕರ್ತ ಹರ್ಷ ಅವರ ಹತ್ಯೆಯನ್ನು ಸಮರ್ಥಿಸಿ ಸಾಮಾಜಿಕ ಜಾಲತಾಣಗಳಲ್ಲಿ ಪ್ರಚೋದನಕಾರಿ ಪೋಸ್ಟ್ ಮಾಡಿದ್ದ ಅಪರಿಚಿತ ವ್ಯಕ್ತಿ ವಿರುದ್ಧ ಸಿಇಎನ್(ಸೈಬರ್ ಎಕನಾಮಿಕ್ಸ್ ಮತ್ತು ನಾರ್ಕೋಟಿಕ್ ಕ್ರೈಮ್ಸ್) ಠಾಣೆ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.
‘ಮಂಗಳೂರು ಮುಸ್ಲಿಮ್ಸ್’ ಎಂಬ ಫೇಸ್ ಬುಕ್ ಪೇಜ್ ಹಾಗೂ ಮೊಹಮ್ಮದ್ ಶಫೀಕ್ ಮತ್ತಿತರರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. 2015ರಲ್ಲಿ ಪ್ರವಾದಿ ಮೊಹಮ್ಮದ್ ಅವರನ್ನು ನಿಂದಿಸಿದ ಆರೋಪದ ಪ್ರತೀಕಾರವಾಗಿ ಹರ್ಷನ ಹತ್ಯೆಯನ್ನು ನಡೆಸಲಾಗಿದೆ ಎಂದು ಆರೋಪಿಗಳು ಸಮರ್ಥಿಸಿಕೊಂಡಿದ್ದಾರೆ ಎಂದು ಎಫ್‌ಐಆರ್ ಹೇಳುತ್ತದೆ. ಅಲ್ಲದೆ, ಪ್ರವಾದಿಯನ್ನು ನಿಂದಿಸುವ ಯಾರನ್ನೂ ಅವರು ಎಷ್ಟೇ ಪ್ರಭಾವಿಗಳಾಗಿದ್ದರೂ ಬಿಡುವುದಿಲ್ಲ ಎಂದು ಪೋಸ್ಟ್‌ನಲ್ಲಿ ಹೇಳಲಾಗಿದೆ. ಹರ್ಷ ಹತ್ಯೆಗೆ ಆರ್‌ಡಿಪಿಆರ್ ಸಚಿವರೇ ಕಾರಣ ಎಂದು ಆರೋಪಿಸಿದೆ.
ಹಿಂದೂ-ಮುಸ್ಲಿಂರ ನಡುವೆ ದ್ವೇಷವನ್ನು ಹರಡುವ ಮತ್ತು ಹಿಂಸಾಚಾರಕ್ಕೆ ಪ್ರಚೋದಿಸುವ ಸಲುವಾಗಿ ಹಿಂದುತ್ವ ಸಂಘಟನೆಗಳು ಮತ್ತು ಹಿಂದೂ ರಾಜಕೀಯ ನಾಯಕರ ವಿರುದ್ಧ ಪದೇ ಪದೇ ಪ್ರಚೋದನಕಾರಿ ಪೋಸ್ಟ್‌ಗಳನ್ನು ಪೋಸ್ಟ್ ಮಾಡುತ್ತಿರುವುದು ಮಂಗಳೂರು ಮುಸ್ಲಿಂ ಪೇಜ್‌ನಲ್ಲಿ ಕಂಡುಬಂದಿದೆ ಎಂದು ಎಫ್‌ಐಆರ್ ಹೇಳಿದೆ.
ಎಫ್‌ಐಆರ್‌ನಲ್ಲಿ ಹೆಸರಿಸಲಾದ ಮೊಹಮ್ಮದ್ ಶಫೀದ್ ಸಾಮಾಜಿಕ ಮಾಧ್ಯಮದಲ್ಲಿ ಇತರ ಗುಂಪುಗಳೊಂದಿಗೆ ಪ್ರಚೋದನಕಾರಿ ಪೋಸ್ಟ್‌ಗಳನ್ನು ಹಂಚಿಕೊಂಡಿದ್ದಾರೆ. ಆರೋಪಿಗಳ ವಿರುದ್ಧ ಐಟಿ ಕಾಯ್ದೆಯ ವಿವಿಧ ವಿಭಾಗಗಳು ಮತ್ತು ಐಪಿಸಿಯ 153 (ಎ), 505 (1) (ಬಿ), 505 (1) (ಸಿ) ಮತ್ತು 507 ರ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ಏತನ್ಮಧ್ಯೆ, ಪ್ರಚೋದನಕಾರಿ ವಿಷಯಗಳನ್ನು ಪೋಸ್ಟ್ ಮಾಡುವ ಮತ್ತು ಹಂಚಿಕೊಳ್ಳುವ 1604 ಸಾಮಾಜಿಕ ಮಾಧ್ಯಮ ಖಾತೆಗಳ ಮೇಲೆ ತೀವ್ರ ನಿಗಾ ಇರಿಸಿದ್ದೇವೆ ಎಂದು ಮಂಗಳೂರು ನಗರ ಪೊಲೀಸ್ ಆಯುಕ್ತ ಎನ್ ಶಶಿಕುಮಾರ್ ಹೇಳಿದ್ದಾರೆ. ಅಂತಹ ವಿಷಯಗಳನ್ನು ಪೋಸ್ಟ್ ಮಾಡುವುದನ್ನು ತಡೆಯಲು ಅವರು ಜನರಿಗೆ ಮನವಿ ಮಾಡಿದರು. ಅದು ವಿಫಲವಾದರೆ ಅವರ ವಿರುದ್ಧ ಕಠಿಣ ಕ್ರಮ ಎಂದು ಅವರು ಎಚ್ಚರಿಸಿದರು. (ಕಪ್ರಡಾ)
