

ಆರು ವರ್ಷಗಳ ಹಿಂದೆಯೇ ಸ್ಥಳಾಂತರಗೊಂಡ ಕಾಲೇಜಿಗೆ ವಿದ್ಯಾರ್ಥಿನಿಯೊಬ್ಬರಿಗೆ ಸೀಟು ಹಂಚಿಕೆ ಮಾಡುವ ಮೂಲಕ ಕರ್ನಾಟಕ ರಾಜ್ಯ ನರ್ಸಿಂಗ್ ಡಿಪ್ಲೊಮಾ ಪರೀಕ್ಷಾ ಮಂಡಳಿ ಗೊಂದಲ ಸೃಷ್ಟಿಸಿದೆ.

ಕಾರವಾರ: ಆರು ವರ್ಷಗಳ ಹಿಂದೆಯೇ ಸ್ಥಳಾಂತರಗೊಂಡ ಕಾಲೇಜಿಗೆ ವಿದ್ಯಾರ್ಥಿನಿಯೊಬ್ಬರಿಗೆ ಸೀಟು ಹಂಚಿಕೆ ಮಾಡುವ ಮೂಲಕ ಕರ್ನಾಟಕ ರಾಜ್ಯ ನರ್ಸಿಂಗ್ ಡಿಪ್ಲೊಮಾ ಪರೀಕ್ಷಾ ಮಂಡಳಿ ಗೊಂದಲ ಸೃಷ್ಟಿಸಿದೆ.
ಜೋಯಿಡಾದ ಪ್ರವೀಣಾ ಶಶಿಕಾಂತ ಗಾವಡಾ ಅವರಿಗೆ ಕಾರವಾರದ ಅರ್ಪಿತಾ ಸ್ಕೂಲ್ ಆಫ್ ನರ್ಸಿಂಗ್ ಕಾಲೇಜಿನಲ್ಲಿ ಸೀಟು ನಿಗದಿಪಡಿಸಿದ್ದಾಗಿ ಮಂಡಳಿಯು ಪತ್ರ ನೀಡಿದೆ. ಈ ಪತ್ರದೊಂದಿಗೆ ಬಂದ ವಿದ್ಯಾರ್ಥಿನಿ ನಗರದಲ್ಲಿ ಹುಡುಕಾಟ ನಡೆಸಿದಾಗ ಆ ಹೆಸರಿನ ಸಂಸ್ಥೆಯೇ ಇಲ್ಲದಿರುವುದು ಬೆಳಕಿಗೆ ಬಂದಿದೆ. ಇದರಿಂದ ವಿದ್ಯಾರ್ಥಿನಿ ಮತ್ತು ಆಕೆಯ ಪಾಲಕರು ಕಂಗಾಲಾಗಿದ್ದಾರೆ.
ಇದು ಈ ಹಿಂದೆಯೂ ನಡೆದಿದ್ದು, ಯಾವಾಗಲೂ ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳೇ ತೊಂದರೆ ಅನುಭವಿಸುತ್ತಿದ್ದಾರೆ ಎಂದು ಇಲ್ಲಿನ ಸಾಮಾಜಿಕ ಕಾರ್ಯಕರ್ತ ಮಾಧವ್ ನಾಯ್ಕ್ ಪ್ರಶ್ನಿಸಿದ್ದಾರೆ.
ಸಾವಿರಾರು ರೂಪಾಯಿ ಖರ್ಚು ಮಾಡಿ ಬೆಂಗಳೂರಿಗೆ ಹೋಗಿ ಕೌನ್ಸೆಲಿಂಗ್ ಮುಗಿಸಿ ಬಂದಿದ್ದೇವೆ. ಇಲ್ಲದ ಕಾಲೇಜಿಗೆ ಸೀಟು ಹಂಚಿಕೆ ಮಾಡಿದ್ದರಿಂದ ಸಮಸ್ಯೆ ಆಗಿದೆ’ ಎಂದು ವಿದ್ಯಾರ್ಥಿನಿಯ ಪೋಷಕರು ಹೇಳಿದ್ದಾರೆ.
ಏಳು ವರ್ಷಗಳ ಹಿಂದೆಯೇ ಸಂಸ್ಥೆಯನ್ನು ಬೆಂಗಳೂರಿಗೆ ಸ್ಥಳಾಂತರಿಸಿದ್ದೇವೆ. ಈ ಬಗ್ಗೆ ಮಂಡಳಿಗೆ ಪತ್ರವನ್ನೂ ನೀಡಿದ್ದೇವೆ. ನಿರ್ದೇಶಕರಿಗೂ ಮಾಹಿತಿ ನೀಡಲಾಗಿದೆ. ಪಟ್ಟಿಯಿಂದ ಕೈಬಿಡದಿರುವುದು ಮಂಡಳಿಯವರ ತಪ್ಪು’ ಎಂದು ಅರ್ಪಿತಾ ನರ್ಸಿಂಗ್ ಕಾಲೇಜ್ ಅಧ್ಯಕ್ಷ ಎಸ್.ಆರ್.ದೇಸಾಯಿ ಹೇಳಿದ್ದಾರೆ. (kpc)
