ಸಾಗರದ ಸಿರವಂತೆಯ ಚಿತ್ತಾರ ಕುಟಿರದ ಅಮ್ಮ ಗೌರಮ್ಮ ಇಂದು ನಿಧನರಾಗಿದ್ದಾರೆ. ಸಿರವಂತೆಯಲ್ಲಿ ಚಿತ್ತಾರದ ಪ್ರದರ್ಶನ, ತರಬೇತಿ ನಡೆಸುತ್ತ ಗ್ರಾಮೀಣ ಕಲೆ ಪೋಶಿಸುತ್ತಿರುವ ಚಂದ್ರಶೇಖರ್ ಸಿರವಂತೆಯವರ ಧರ್ಮಪತ್ನಿ ಗೌರಿ ಚಂದ್ರಶೇಖರ್ ರಿಗೆ ಸಹಧರ್ಮಿಣಿ,ವೃತ್ತಿಧರ್ಮಿಣಿಯಾಗಿ ಚಂದ್ರಶೇಖರ್ ರ ಸಾಹಸ, ಹವ್ಯಾಸಗಳಿಗೆ ಸಾಥಿಯಾಗಿದ್ದರು. ಇದೇ ವಾರ ಚಿಕ್ಕ ಅಪಘಾತಕ್ಕೀಡಾಗಿ ಪ್ರಜ್ಞಾಹೀನರಾಗಿ ಶಿವಮೊಗ್ಗದಲ್ಲಿ ಚಿಕಿತ್ಸೆ ಪಡೆಯುತಿದ್ದ ಇವರು ಇಂದು ನಿಧನರಾಗಿರುವುದು ತಿಳಿದುಬಂದಿದೆ.
ಜೋಗ,ಸಾಗರ ರಸ್ತೆಯ ತಮ್ಮ ಪುಟ್ಟ ಮನೆಯಲ್ಲಿ ಗಂಡನೊಂದಿಗೆ ಚಿತ್ತಾರ ಕುಟಿರ ಕಟ್ಟಿಕೊಂಡಿದ್ದ ಗೌರಿ ತಮ್ಮ ಮುಗ್ಧತೆ,ಆತಿಥ್ಯಗಳಿಂದ ಪರಿಚಿತರ ಆತ್ಮೀಯರಾಗಿದ್ದರು.ಮೃತರು ಗಂಡ ಚಂದ್ರಶೇಖರ್,ಇಬ್ಬರು ಮಕ್ಕಳು ಸೇರಿದಂತೆ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ. ಗೌರಮ್ಮನವರ ಸಾವಿಗೆ ದಿಗ್ ಭ್ರಾಂತರಾಗಿರುವ ಅನೇಕರಲ್ಲಿ ಡಾ. ಮಹೇಂದ್ರಕುಮಾರ್,ರಾಮಪ್ಪಡಿ,ಪರಿಸರತಜ್ಞ ಎಂ.ಬಿ.ನಾಯ್ಕ,ಹರ್ಷಕುಮಾರ ಕುಗ್ವೆ,ತೀ.ನಾ.ಶ್ರೀನಿವಾಸ್,ಶಿವರಾಮ ಪಡವಗೋಡು,ಹುಚ್ಚಪ್ಪ ಮಂಡಗಳಲೆ ಸೇರಿದಂತೆ ಕೆಲವರು ಸಂತಾಪ ಸೂಚಿಸಿದ್ದಾರೆ.
ಸಿರವಂತೆಯ ಅನಾಮಿಕ ಶಕ್ತಿ ಗೌರಮ್ಮ-
ಸಾಗರ ಜೋಗ ರಸ್ತೆಯ ಬಲಬದಿಗೆ ಸಿರವಂತೆಯಲ್ಲಿ ಇರುವ ಚಿತ್ರಸಿರಿ ಚಿತ್ತಾರ ಕುಟೀರದಲ್ಲಿ ಅನಾಮಿಕಳಂತೆ ಸದಾ ಚಟುವಟಿಕೆಯಿಂದ ಇರುತಿದ್ದ ಒಂದು ಜೀವದ ಹೆಸರು ಗೌರಿ,ಅಲ್ಲಿ ಬರುತಿದ್ದ ಅನೇಕರಿಗೆ ಚಂದ್ರಶೇಖರ್ ಸಿರವಂತೆ ಮಾತನಾಡಿಸುತ್ತಾರೆ,ಚರ್ಚಿಸುತ್ತಾರೆ,ಅವರದೇ ಕಲ್ಪನೆಯ ಕಣ್ಣು ತೆರೆಯುವ ಬುದ್ಧನ ಬಗ್ಗೆ ತಿಳಿಸಿ ಪ್ರವಾಸಿಗರ ಹೃದಯ ಅರಳಿಸುತ್ತಾರೆ. ಆದರೆ ಗೌರಿ ಅಕ್ಷರಶ: ಅನಾಮಿಕಳಂತೆ ಕೆಲಸ ಮಾಡುತ್ತಾ ಗಂಡನ ಸಂಜ್ಞೆ,ಸೂಚನೆ ಮೇರೆಗೆ ಆಯಾ ಸಮಯಕ್ಕೆ ತಕ್ಕಂತೆ ಟೀ,ಕಾಫಿ,ಕಷಾಯ ನೀಡಿ ಮುಗ್ಧತೆಯ ಮಾತಿನಿಂದ ಆತ್ಮೀಯರಾಗುತ್ತಾರೆ. ಈ ಸಂದರ್ಭಗಳಿಗೆ ಸಾಕ್ಷಿಯಾದ ನನ್ನಂತಹ ಅನೇಕರಿಗೆ ಚಿತ್ರಸಿರಿ,ಚಂದ್ರಣ್ಣ,ಗೌರಕ್ಕ ಅವರ ಕುಟುಂಬವೆಂದರೆ.. ಒಂಥರಾ ಆತ್ಮೀಯತೆ.
ಲೋಕದ ಕೊಂಕಿಗೆ ಕೂದಲನ್ನೂ ಕೊಂಕಿಸಿಕೊಳ್ಳದ ಈ ಜೋಡಿ ಸನ್ಮಾನಿಸಿದ ಸಾಧಕರೆಷ್ಟು,ನಾಡು, ದೇಶ-ವಿದೇಶಗಳಲ್ಲಿ ಪ್ರದರ್ಶನ ನೀಡಿ ಮಲೆನಾಡಿನ ಚಿತ್ತಾರ,ಭತ್ತದ ತೆನೆ ಸರ ಪರಿಚಯಿಸಿದ ಊರುಗಳೆಷ್ಟು ಲೆಕ್ಕವಿಟ್ಟವರ್ಯಾರು? ಈ ಸಾಧನೆಯ ಕೇಂದ್ರವ್ಯಕ್ತಿ ಚಂದ್ರಶೇಖರ್ ಆದರೆ ಚಂದ್ರಣ್ಣನವರಿಗೆ ಬೇಕಾದಾಗಲೆಲ್ಲಾ ಒದಗುವ ಎಡಗೈ, ಬಲಗೈ ಗೌರಮ್ಮ ಹೀಗಿರದಿದ್ದಿದ್ದರೆ ಚಂದ್ರಣ್ಣ ದೇಶ-ಕೋಶ ನುಗ್ಗುತ್ತಿರಲಿಲ್ಲ. ಸದಾ ಸಂಗಾತಿಯಾಗಿ ನೋವು-ನಲಿವಿನಲ್ಲಿ ಒಂದಾಗಿರುತಿದ್ದ ಗೌರಮ್ಮ ಇಲ್ಲದೆ ಚಂದ್ರಣ್ಣ ಅಪೂರ್ಣ. ನಾಡಿನ ಅನೇಕರ ಪ್ರೀತಿ ಪಾತ್ರ ಗೌರಮ್ಮ ಚಿಕ್ಕ ಅಪಘಾತಕ್ಕೊಳಗಾಗಿ ನಮ್ಮಿಂದ ದೂರವಾಗಿರುವುದು ನಮಗೆಲ್ಲರಿಗೆ ಬೇಸರ ನಾಡಿಗೆ ನಿಜಕ್ಕೂ ತುಂಬದ ಹಾನಿ. ಸಿರವಂತೆಯ ಚಿತ್ರಸಿರಿಯಲ್ಲಿ ಉಸಿರಾಗಿ,ಹೆಸರಾಗಿ ಹಿತವಾಗಿ ಮಿತವಾಗಿ ಬದುಕಿದ್ದ ಗೌರಮ್ಮನ ಸಾವು ನಮ್ಮೆಲ್ಲರ ಪಾಲಿಗೆ ನೋವು. -ಕನ್ನೇಶ್