ಬಗರ್ ಹುಕುಂ ರೈತರಿಗಾಗಿ ಅರಣ್ಯ ಕಾಯ್ದೆಗೆ ತಿದ್ದುಪಡಿ ತನ್ನಿ.. ಸಂಸದರಿಗೆ ಮಧು ಬಂಗಾರಪ್ಪ ಒತ್ತಾಯ
ಬಗರ್ ಹುಕಂ ರೈತರ ಪರವಾಗಿ ಮಾತನಾಡಿ, ಅರಣ್ಯ ಇಲಾಖೆಯ ಭೂಮಿಯನ್ನು ಒತ್ತುವರಿ ಮಾಡಿದರೆ, ಒಂದು ಎಕರೆ ಅರಣ್ಯ ಇಲಾಖೆಗೆ ವಶಪಡಿಸಿಕೊಂಡು ಉಳಿದ ಭೂಮಿಯನ್ನು ರೈತರಿಗೆ ನೀಡಿ ಎಂದು ನಮ್ಮ ತಂದೆ ಬಂಗಾರಪ್ಪನವರು ಅಂದೇ ತಿಳಿಸಿದ್ದರು. ಇದರಿಂದ ಅವರಿಗೆ ರೈತರ ಪರ ಎಷ್ಟು ಕಾಳಜಿ ಇದೆ ಎಂದು ತಿಳಿದು ಬರುತ್ತದೆ ಎಂದು ಮಧು ಬಂಗಾರಪ್ಪ ಹೇಳಿದರು.
ಶಿವಮೊಗ್ಗ: ನಮ್ಮ ತಂದೆ ಬಂಗಾರಪ್ಪ ಬಗರ್ ಹುಕುಂ ರೈತರ ಪರವಾಗಿ ಇದ್ದವರು, ನೀವು ಸಂಸತ್ನಲ್ಲಿ ಬಗರ್ ಹುಕುಂ ರೈತರ ಪರ ಏನು ಮಾತನಾಡಿದ್ದಿರಿ ಎಂಬುದರ ಬಗ್ಗೆ ದಾಖಲೆ ನೀಡಿ ಎಂದು ಸಂಸದ ಬಿ ವೈ ರಾಘವೇಂದ್ರ ಅವರಿಗೆ ಕಾಂಗ್ರೆಸ್ ಮುಖಂಡ ಮಧು ಬಂಗಾರಪ್ಪ ಸವಾಲು ಹಾಕಿದ್ದಾರೆ.
ಕಾಂಗ್ರೆಸ್ ಮುಖಂಡ ಮಧು ಬಂಗಾರಪ್ಪ ಮಾಧ್ಯಮಗೋಷ್ಟಿ-
ನಗರದಲ್ಲಿಂದು ಮಾಧ್ಯಮಗೋಷ್ಟಿಯಲ್ಲಿ ಮಾತನಾಡಿದ ಅವರು, ಅರಣ್ಯ ಕಾಯ್ದೆಯ ಬಗ್ಗೆ ವಾಜಪೇಯಿ ಸರ್ಕಾರ ಇದ್ದಾಗ ಸದನದಲ್ಲಿ ರೈತರ ಪರ ನಮ್ಮ ತಂದೆ ಮಾತನಾಡಿದ್ದರು. ಅವರು ಬಗರ್ ಹುಕಂ ರೈತರ ಪರವಾಗಿ ಮಾತನಾಡಿ, ಅರಣ್ಯ ಇಲಾಖೆಯ ಭೂಮಿಯನ್ನು ಒತ್ತುವರಿ ಮಾಡಿದರೆ, ಒಂದು ಎಕರೆ ಅರಣ್ಯ ಇಲಾಖೆಗೆ ವಶಪಡಿಸಿಕೊಂಡು ಉಳಿದ ಭೂಮಿಯನ್ನು ರೈತರಿಗೆ ನೀಡಿ ಎಂದು ಅಂದೇ ತಿಳಿಸಿದ್ದರು. ಇದರಿಂದ ಅವರಿಗೆ ರೈತರ ಪರ ಎಷ್ಟು ಕಾಳಜಿ ಇತ್ತು ಅನ್ನೋದು ತಿಳಿಯುತ್ತೆ. ಆದರೆ ನೀವು ಬಗರ್ ಹುಕುಂ ರೈತರ ಪರ ಎಷ್ಟು ಸಲ ಸದನದಲ್ಲಿ ಮಾತನಾಡಿದ್ದಿರಿ ಎಂದು ದಾಖಲೆ ನೀಡಿ ಎಂದು ಒತ್ತಾಯಿಸಿದರು.
ಬೆಂಗಳೂರಿನಲ್ಲಿ ಕೆರೆ ಮುಚ್ಚಿ ಲೇಔಟ್ ಮಾಡುವವರಿಗೂ, ಜೀವನಕ್ಕಾಗಿ ಉಳುಮೆ ಮಾಡುವವರನ್ನ ಒಂದೇ ಮಾಡಲಾಗಿದೆ. ಕೆರೆ ತೆರವು ಮಾಡಿಸಲು ಆಗದೆ ಸುಮ್ಮೆನೆ ಕುಳಿತುಕೊಂಡಿದ್ದಾರೆ ಎಂದು ಕಿಡಿಕಾರಿದರು.
ಸೊರಬ ಕ್ಷೇತ್ರ ಒಂದರಲ್ಲಿಯೇ 11 ಸಾವಿರ ಕುಟುಂಬಗಳಿಗೆ ಅರಣ್ಯ ಒತ್ತುವರಿಯ ನೋಟಿಸ್ ನೀಡಲಾಗಿದೆ. ಈಗ ರೈತರು ಭಯದಿಂದ ಕೋರ್ಟ್ ನಿಂದ ಬೇಲ್ ಪಡೆಯುವಂತಾಗಿದೆ. ರೈತರು ಏನ್ ಕಳ್ಳರೆ, ಭಯದಲ್ಲಿ ಬೇಲ್ ಪಡೆಯಲು ಎಂದು ಪ್ರಶ್ನಿಸಿದ ಅವರು, ರಾಜ್ಯ ಸರ್ಕಾರ ಕೇಂದ್ರಕ್ಕೆ ಶಿಫಾರಸು ಮಾಡಿ ಅರಣ್ಯ ಕಾಯ್ದೆ ತಿದ್ದುಪಡಿ ಮಾಡಿಸಬೇಕೆಂದು ಮಧು ಬಂಗಾರಪ್ಪ ಆಗ್ರಹಿಸಿದರು.
ಯಡಿಯೂರಪ್ಪನವರು ಸದನದಲ್ಲಿ ಅವರೇ ಒಪ್ಪಿಕೊಂಡಿದ್ದಾರೆ. 2012 ರ ಕಾನೂನಿನಿಂದ ಅನ್ಯಾಯ ಆಗಿದೆ, ಸರಿಪಡಿಸಬೇಕಿದೆ ಎಂದು ತಿಳಿಸಿದ್ದಾರೆ. ಇದಕ್ಕೆ ಧನ್ಯವಾದ ತಿಳಿಸುತ್ತೇನೆ. ಈಗ ನೀವು ಸಿಎಂ ಬಸವರಾಜ ಬೊಮ್ಮಾಯಿ ಅವರಿಗೆ ಹೇಳಿ ಕಾನೂನಿನಲ್ಲಿ ಬದಲಾವಣೆಯನ್ನು ತನ್ನಿ ಎಂದರು. ಈಗ ರೈತರು ಕೋರ್ಟ್ ಗೆ ಅಲೆಯುವಂತೆ ಮಾಡಿರುವುದು ಸೊರಬ ಶಾಸಕ ಕುಮಾರ ಬಂಗಾರಪ್ಪನವರೆ ಹೊರತು ಬೇರೆ ಯಾರೂ ಅಲ್ಲ ಎಂದು ಆರೋಪಿಸಿದರು.
ನಾನು ಶಾಸಕನಾದಾಗ ಕುಮಾರಸ್ವಾಮಿ ಅವರಿಗೆ ಒತ್ತಡ ಹಾಕಿ, ಸೊರಬ ಹಾಗೂ ಶಿಕಾರಿಪುರದ ನೀರಾವರಿಗೆ ಚಾಲನೆ ನೀಡಿಸಿದ್ದೆ. ಆದರೆ ಈಗ ಇರುವ ಏತ ನೀರಾವರಿಗೆ ಹಣ ಬಿಡುಗಡೆ ಮಾಡಿಸಿದ್ದೆ. ಈಗ ಅದರ ಕ್ರೆಡಿಟ್ ಅನ್ನು ಬೇರೆ ಯಾರೋ ತೆಗೆದುಕೊಳ್ಳುತ್ತಿದ್ದಾರೆ ಎಂದರು. (etbk)