ಅರಣ್ಯಭೂಮಿ ಅತಿಕ್ರಮಣಕ್ಕೆ ಸಂಬಂಧಿಸಿದಂತೆ ಅರೆಂದೂರಿನ ಮೊಸಿನ್ ಸೈಯದ್ ಎನ್ನುವ ವ್ಯಕ್ತಿಯ ಮೇಲೆ ಹಲ್ಲೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದ ಒಬ್ಬ ವಲಯ ಅರಣ್ಯಾಧಿಕಾರಿ ಮತ್ತು ೬ ಜನ ಅರಣ್ಯ ಇಲಾಖೆ ಸಿಬ್ಬಂದಿಗಳ ಮೇಲೆ ಕೂಡಲೇ ಎಫ್. ಆಯ್. ಆರ್. ದಾಖಲಿಸಲು ಸಿದ್ಧಾಪುರ ಕಿರಿಯ ಸಿವಿಲ್ ನ್ಯಾಯಾಲಯ ಆದೇಶಿಸಿದೆ.
ಅರೆಂದೂರಿನ ಅರಣ್ಯಭೂಮಿ ಅತಿಕ್ರಮಣ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ ಮೊಸಿನ್ ಸಾಬ್ ರನ್ನು ಅರಣ್ಯಾಧಿಕಾರಿಗಳು ಸಿದ್ಧಾಪುರ ಹೊಸೂರು ಬಳಿ ದಸ್ತಗಿರಿ ಮಾಡಿ ಹೊಸೂರಿನ ಉದ್ಯಾನವನದಲ್ಲಿ ಥಳಿಸಿದ್ದರು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ೨೦೨೦ ರಲ್ಲಿ ಸಿದ್ಧಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿ ಪೊಲೀಸರು ಅರಣ್ಯ ಇಲಾಖೆ ಸಿಬ್ಬಂದಿಗಳಿಗೆ ಕ್ಲೀನ್ ಚಿಟ್ ನ ಬಿ. ರಿಪೋರ್ಟ್ ಹಾಕಿದ್ದರು. ಈ ಬಗ್ಗೆ ನ್ಯಾಯಾಲಯದಲ್ಲಿ ಪ್ರಶ್ನಿಸಿದ ಮೊಸಿನ್ ಸಾಬ್ ಖಾಸಗಿ ದೂರು ದಾಖಲಿಸಿ ತಮಗಾದ ಅನ್ಯಾಯ ಸರಿಪಡಿಸಲು ಕೋರಿದ್ದರು.
ಈ ಬಗ್ಗೆ ಕೂಲಂಕುಶ ವಿಚಾರಣೆ ನಡೆಸಿ ಆದೇಶ ಮಾಡಿರುವ ಸ್ಥಳಿಯ ಸಿವಿಲ್ ಕಿರಿಯ ನ್ಯಾಯಾಧೀಶ ಸಿದ್ಧರಾಮ ಎಸ್. ಈ ಪ್ರಕರಣದ ಆರೋಪಿಗಳಾದ ಮಾರುತಿ ನಾಯ್ಕ, ಶಶಿಧರ ಮಡಿವಾಳ,ಶಿವಾನಂದ ಲಿಂಗಾಣಿ,ಮಂಜ ಗೊಂಡ, ಮಂಜ, ಆನಂದ ಶೇಟ್,ವಿನಾಯಕ ಎನ್ನುವ ೭ ಜನರ ಮೇಲೆ ಎಫ್.ಆಯ್. ಆರ್. ದಾಖಲಿಸಿ ವಿಚಾರಣೆ ನಡೆಸಲು ಆದೇಶಿಸಿದ್ದಾರೆ.