ಅದು ಮೂಲಭೂತ ಸೌಲಭ್ಯ ವಂಚಿತ ಕುಗ್ರಾಮ. ಕಳೆದೆರಡು ವರ್ಷದ ಹಿಂದೆ ಜಿಲ್ಲಾಧಿಕಾರಿ ತೆರಳಿ ಕನಿಷ್ಠ ಸೌಲಭ್ಯಕ್ಕೂ ಪರದಾಡುತ್ತಿದ್ದ ಜನರ ಸಮಸ್ಯೆ ಆಲಿಸಿದ್ದರು. ಈ ವೇಳೆ ಒಂದಿಷ್ಟು ಸಣ್ಣಪುಟ್ಟ ಸಮಸ್ಯೆ ಬಗೆಹರಿದಿತ್ತಾದರೂ ಅತಿ ಅವಶ್ಯಕವಾಗಿದ್ದ ರಸ್ತೆ ಸೇರಿದಂತೆ ಇನ್ನಿತರೆ ಸಮಸ್ಯೆಗಳು ಜ್ವಲಂತವಾಗಿದ್ದವು. ಇದೀಗ ಮತ್ತೆ ಅದೇ ಗ್ರಾಮಕ್ಕೆ ಡಿಸಿ ಮುಲ್ಲೈ ಮುಗಿಲನ್ ತೆರಳಿ ಗ್ರಾಮಸ್ಥರ ಸಮಸ್ಯೆ ಆಲಿಸಿದ್ದಾರೆ.
ಕಾರವಾರ: ಹಚ್ಚಹಸಿರಿನ ದಟ್ಟ ಕಾನನದ ನಡುವೆ ಸಂಕಷ್ಟದ ಬದುಕು ನಡೆಸುತ್ತಿರುವ ಮೇದಿನಿ ಗ್ರಾಮಕ್ಕೆ ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಹಾಗೂ ವಿವಿಧ ಇಲಾಖೆ ಅಧಿಕಾರಿಗಳ ತಂಡ ನಿನ್ನೆ ಭೇಟಿ ನೀಡಿ, ಜನರ ಸಮಸ್ಯೆಗೆ ಕಿವಿಯಾದರು.
ಬೃಹತ್ ಆಲದಮರದ ಹಸಿರ ಚಪ್ಪರದಡಿ ಆಯೋಜಿಸಿದ್ದ ‘ಜಿಲ್ಲಾಧಿಕಾರಿ ನಡೆ ಹಳ್ಳಿ ಕಡೆ’ ಕಾರ್ಯಕ್ರಮದಲ್ಲಿ ಗ್ರಾಮಸ್ಥರ ಅಹವಾಲು ಸ್ವೀಕರಿಸಲಾಯಿತು. ಈ ವೇಳೆ ಸಮಸ್ಯೆ ಹೇಳಿಕೊಂಡ ಗ್ರಾಮಸ್ಥರು, ಊರಿಗೆ ವಿದ್ಯುತ್ ಸಂಪರ್ಕವಿಲ್ಲ. ವರ್ಷದಲ್ಲಿ ಮೂರು ತಿಂಗಳು ಮಾತ್ರ ವಿದ್ಯುತ್ ಪೂರೈಕೆಯಾಗುತ್ತಿದೆ ಎಂದು ಸಂಕಷ್ಟ ತೋಡಿಕೊಂಡರು.
ಕುಡಿಯುವ ನೀರಿನ ವ್ಯವಸ್ಥೆ, ಅಂಗನವಾಡಿ ಜೊತೆಗೆ ದುರಸ್ತಿಗೆ ತಲುಪಿದ ಶಾಲೆಗೆ ಹೊಸ ಕಟ್ಟಡ ನಿರ್ಮಿಸುವಂತೆಯೂ ಅವರು ಮನವಿ ಮಾಡಿದರು. ಇದಲ್ಲದೇ, ಗ್ರಾಮಕ್ಕೆ ಅತಿ ಮುಖ್ಯವಾಗಿ ರಸ್ತೆ ಸಂಪರ್ಕವೇ ಇಲ್ಲದಂತಾಗಿದೆ. ಈ ಹಿಂದೆ ಜಿಲ್ಲಾಧಿಕಾರಿ ಬಂದಾಗಲೂ ಮನವಿ ಮಾಡಲಾಗಿತ್ತು. ಆದರೆ ಈವರೆಗೂ ಯಾವುದೇ ಪ್ರಯೋಜನವಾಗಿಲ್ಲ. ಗ್ರಾಮದ ಎಲ್ಲ ಸಮಸ್ಯೆಗಳಿಗೂ ಮೂಲ ರಸ್ತೆಯೇ ಆಗಿದ್ದು, ಅದನ್ನು ಬಗೆಹರಿಸಲು ಈಗಲಾದರೂ ಕ್ರಮ ಕೈಗೊಳ್ಳಬೇಕು ಒತ್ತಾಯಿಸಿದರು.
ಸಮಸ್ಯೆ ಆಲಿಸಿದ ಬಳಿಕ ಊರಿನ ಯುವಕರ ಬೈಕ್ ಏರಿ ಮನೆ ಮನೆಗೆ ತೆರಳಿದ ಜಿಲ್ಲಾಧಿಕಾರಿ, ಮನೆಯಲ್ಲಿದ್ದವರಿಂದಲೂ ಸಮಸ್ಯೆ ಆಲಿಸಿದ್ರು. ಬಳಿಕ ರೇಷನ್ ಕಾರ್ಡ್, ಪಿಂಚಣಿ, ಅಂಗವಿಕಲ ಮಾಸಾಶನ ಪಡೆಯದರನ್ನು ಗುರುತಿಸಿ ಸೌಲಭ್ಯ ಒದಗಿಸುವಂತೆ ಅಧಿಕಾರಿಗಳಿಗೆ ಸೂಚಿಸಿದ್ರು. ವಿದ್ಯುತ್ ದುರಸ್ತಿ ಜೊತೆಗೆ ಶಾಶ್ವತ ಪರಿಹಾರಕ್ಕೆ ಸೂಚನೆ ನೀಡಿದ್ರು. ಕುಡಿಯುವ ನೀರು, ವಿದ್ಯಾರ್ಥಿಗಳಿಗೆ ಹಾಸ್ಟೆಲ್, ಶಾಲೆಗೆ ಕಟ್ಟಡ ಮಂಜೂರು ಮಾಡಿಸುವ ಭರವಸೆ ನೀಡಿದರು.
ಕಳೆದ ಬಾರಿ ಸಮ್ಮಿಶ್ರ ಸರ್ಕಾರದಲ್ಲಿ ಮುಖ್ಯಮಂತ್ರಿ ಕುಮಾರಸ್ವಾಮಿ ಗ್ರಾಮದಲ್ಲಿನ ಸಮಸ್ಯೆ ಅರಿತು ರಸ್ತೆ ಸಂಪರ್ಕಕ್ಕೆ ಪ್ರಸ್ತಾವನೆ ಸಲ್ಲಿಸಲು ಸೂಚಿಸಿದ್ದರು. ಅದರಂತೆ ಪ್ರಸ್ತಾವನೆ ಸಲ್ಲಿಸಿದ ಬಳಿಕ ಅಂದಿನ ಜಿಲ್ಲಾಧಿಕಾರಿ ಡಾ. ಹರೀಶ್ ಕುಮಾರ್ ನೇತೃತ್ವದ ತಂಡ ಮೇದಿನಿಗೆ ತೆರಳಿ ಗ್ರಾಮ ವಾಸ್ತವ್ಯ ಮಾಡಿತ್ತು. ಈ ವೇಳೆ ಒಂದಿಷ್ಟು ಸಮಸ್ಯೆ ಬಗೆಹರಿದಿತ್ತಾದರೂ ರಸ್ತೆ ಸಮಸ್ಯೆಗೆ ಪರಿಹಾರ ಸಿಕ್ಕಿರಲಿಲ್ಲ. ಇದೀಗ ಮತ್ತೆ ಜಿಲ್ಲಾಧಿಕಾರಿ ಗ್ರಾಮಕ್ಕೆ ಆಗಮಿಸಿದ್ದು, ಸಮಸ್ಯೆ ಹೇಳಿಕೊಂಡಿದ್ದೇವೆ. ನಮಗೆ ಮುಖ್ಯವಾಗಿ ರಸ್ತೆ ಸಮಸ್ಯೆ ಬಗೆಹರಿಯಬೇಕಿದೆ. ಈ ನಿಟ್ಟಿನಲ್ಲಿ ಡಿಸಿ ಪ್ರಯತ್ನ ನಡೆಸಬೇಕು ಎಂದು ಸ್ಥಳೀಯರು ಮನವಿ ಮಾಡಿದರು. (etbk)