


ಗುಪ್ತಚರ ಇಲಾಖೆ ನಿಶಕ್ತವಾಗಿದೆ, ಬಲಪಡಿಸದಿದ್ದರೆ ಅಪಾಯ ಕಟ್ಟಿಟ್ಟಬುತ್ತಿ: ಸ್ಪೀಕರ್ ಕಾಗೇರಿ ಆತಂಕ
ಗುಪ್ತಚರ ಇಲಾಖೆಯಲ್ಲಿ ಹೊಸಬರು ಇಲ್ಲ. ಇದ್ದವರು ಸೇವಾ ಅವಧಿ ಮುಗಿಯುವ ಹಂತದಲ್ಲಿದ್ದಾರೆ. ಟಿವಿಗಳ ಹೆಡ್‌ಲೈನ್ಸ್ ಅನ್ನು ಗುಪ್ತಚರ ಇಲಾಖೆಯವರು ಬ್ರೀಫಿಂಗ್ ಕೊಟ್ಟು ಬಿಡುವ ಸ್ಥಿತಿಯಲ್ಲಿದ್ದಾರೆ -ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ.

ಬೆಂಗಳೂರು: ರಾಜ್ಯದಲ್ಲಿ ಗುಪ್ತಚರ ಇಲಾಖೆ ನಿಶಕ್ತವಾಗಿದ್ದು, ಅದನ್ನು ಬಲಪಡಿಸದೇ ಹೋದರೆ ಅಪಾಯ ಕಟ್ಟಿಟ್ಟ ಬುತ್ತಿ ಎಂದು ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಆತಂಕ ವ್ಯಕ್ತಪಡಿಸಿದರು. ಹಿಜಾಬ್ ವಿಚಾರವಾಗಿ ನಿಯಮ 69 ಅಡಿಯಲ್ಲಿ ನಡೆದ ಚರ್ಚೆಯ ಸಂದರ್ಭದಲ್ಲಿ ಮಾತನಾಡಿದ ಅವರು, ರಾಜ್ಯದ ಗುಪ್ತಚರ ಇಲಾಖೆ ನಿಷ್ಕ್ರಿಯವಾಗಿದೆ. ಇದನ್ನು ಸಶಕ್ತಗೊಳಿಸಬೇಕು. ಇದರ ಬಗ್ಗೆ ನಾನು ಸಂಬಂಧಪಟ್ಟವರ ಜತೆ ಮಾತನಾಡಿದ್ದೇನೆ ಎಂದರು.
ಗುಪ್ತಚರ ಇಲಾಖೆಯಲ್ಲಿ ಹೊಸಬರು ಇಲ್ಲ. ಇದ್ದವರು ಸೇವಾ ಅವಧಿ ಮುಗಿಯುವ ಹಂತದಲ್ಲಿದ್ದಾರೆ. ಟಿವಿಗಳ ಹೆಡ್‌ಲೈನ್ಸ್ ಅನ್ನು ಗುಪ್ತಚರ ಇಲಾಖೆಯವರು ಬ್ರೀಫಿಂಗ್ ಕೊಟ್ಟು ಬಿಡುವ ಸ್ಥಿತಿಯಲ್ಲಿ ಇದ್ದಾರೆ. ಮಿಲಿಟರಿ ಇಂಟೆಲಿಜೆನ್ಸ್ ಮಾದರಿಯ ಇಂಟೆಲಿಜೆನ್ಸ್ ನಮ್ಮಲ್ಲಿ ಬೇಕು ಎಂದರು. ಇದಕ್ಕೂ ಮುನ್ನ ರಮೇಶ್ ಕುಮಾರ್ ಮಾತನಾಡಿ, ಹಿಜಾಬ್ ವಿಚಾರದ ಬೆಳವಣಿಗೆಯಲ್ಲಿ ಗುಪ್ತಚರ ಇಲಾಖೆ ವಿಫಲವಾಗಿದೆ.
ಮಕ್ಕಳ ಮೈಂಡ್ ವಾಶ್ ಮಾಡುವ ಇಂತಹ ಘಟನೆಗಳ ಬಗ್ಗೆ ಎಚ್ಚೆತ್ತಕೊಂಡಿದ್ದರೆ, ಇಂತಹ ಅನಾಹುತಗಳು ಆಗುತ್ತಿತ್ತಾ?. ಗುಪ್ತಚರ ಇಲಾಖೆಯವರು ಮುಖ್ಯಮಂತ್ರಿಗಳಿಗೆ ಸಲಹೆ ಕೊಟ್ಟು ಕೊಟ್ಟು ಸಿಎಂಗಳು ಸೋತು ಮನೆಗೆ ವಾಪಸ್ ಬಂದಿದ್ದಾರೆ. ಇಂಟೆಲಿಜೆನ್ಸ್ ನವರು ಸರಿ ಇದ್ದಿದ್ದರೆ ಸಿದ್ದರಾಮಯ್ಯ ಅವರು, ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಚುನಾವಣೆಯಲ್ಲಿ ನಿಲ್ಲುತ್ತಿದ್ದರಾ? ಇದೇ ಇಂಟಲಿಜೆನ್ಸ್ ನ ಪರಿಸ್ಥಿತಿ ಎಂದರು.
ಸಮಾಜದ ಶಾಂತಿ ಭಂಗ ಮಾಡುವವರನ್ನು ಪತ್ತೆ ಹಚ್ಚುಬೇಕು. ಹಾಗಾದಾಗ ಶಾಂತಿಯಿಂದ ಬದುಕಲು ಸಾಧ್ಯ. ಗುಪ್ತಚರ ಇಲಾಖೆಯ ಡಿಜಿ ಪ್ರತಿನಿತ್ಯ ಸಿಎಂಗೆ ಮಾಹಿತಿ ನೀಡುತ್ತಾರೆ. ಅವರಿಗೆ ಮಾಹಿತಿ ಕೊಡುವುದು ಅವರ ಕೆಳಗಿನ ಅಧಿಕಾರಿಗಳು. ನಮ್ಮೂರಲ್ಲಿ ಒಬ್ಬ ಇಂಟೆಲಿಜೆನ್ಸ್ ಇದ್ದಾರೆ. ಅವರು ನಿತ್ಯ ನನ್ನ ಕಾರು ಡ್ರೈವರ್ ಗೆ ಕರೆ ಮಾಡಿ ಸಾಹೇಬ್ರು ಎಲ್ಲಿ ಹೋಗ್ತಾರೆ ಎಂದು ವಿಚಾರಿಸುತ್ತಾರೆ. ನಾನು ಬೆಂಗಳೂರು ಬಿಟ್ಟರೆ ಮನೆಗೆ ಮನೆ ಬಿಟ್ಟರೆ ತೋಟಕ್ಕೆ ಹೋಗುತ್ತೇನೆ. ಅವನು ಕೊಡೋದೇ ಇಂಟೆಲಿಜೆನ್ಸ್ ಎಂದು ರಮೇಶ್ ಕುಮಾರ್ ವಿವರಿಸಿದರು.
ಈ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಗೃಹ ಸಚಿವ ಆರಗ ಜ್ಞಾನೇಂದ್ರ, ಗುಪ್ತಚರ ಇಲಾಖೆಗೆ ಪ್ರತ್ಯೇಕ ಕೇಡರ್ ನೇಮಕ ಮಾಡಬೇಕು ಎಂಬ ಚಿಂತನೆ ಇದೆ. ಅವರಿಗೆ ವಿಶೇಷ ತರಬೇತಿ ನೀಡಬೇಕು ಎಂಬ ಚಿಂತನೆ ನಡೆಯುತ್ತಿದೆ ಎಂದರು. (ಇಟಿಬಿಕೆ)
_______________________________________________________________
ಮಾನ್ಯರೆ, ನಮ್ಮ ಮಾಧ್ಯಮ ಕ್ಷೇತ್ರದ ಸಮಾಜಮುಖಿ ನಡೆ ಈಗ ಕಾಲು ಶತಮಾನ ದಾಟಿದೆ. ಈ ಪಯಣದಲ್ಲಿ samajamukhi.net ನ್ಯೂಸ್ ಪೋರ್ಟಲ್ samaajamukhi & samajamukhinews ಯೂಟ್ಯೂಬ್ ಚಾನೆಲ್ ಗಳು ಹಾಗೂ ಸಮಾಜಮುಖಿ & samaajamukhi.net ಫೇಸ್ಬುಕ್ ಪೇಜ್ ಗಳು ಸೇರಿವೆ. ಈ ಎಲ್ಲಾ ಘಟಕಗಳ ನಿರ್ವಹಣೆ & ನಿರಂತರತೆಗೆ ನಿಮ್ಮ ಸಹಕಾರ ಮುಖ್ಯ. ನಮ್ಮ ಸುದ್ದಿ, ವಿಡಿಯೋ, ಸ್ಟೋರಿ ಗಳನ್ನು like, share ಹಾಗೂ subscribe ಮಾಡಿ ಸಹಕರಿಸುತ್ತಾ ನಮ್ಮ ಈ ಮಾಧ್ಯಮ ಸಮೂಹದ ಸಿದ್ಧಾಪುರ ಕೆನರಾ ಬ್ಯಾಂಕ್ ಖಾತೆ samajamukhi 03082200081658 ಅಕೌಂಟ್‌ಗೆ ಮತ್ತು ನಮ್ಮ gpay & phone pay Acc No 9740598884 ಗೆ ಆರ್ಥಿಕ ನೆರವು ನೀಡುತ್ತಾ ನಮ್ಮ ಜೊತೆಯಾಗಲು ಕಳಕಳಿಯ ವಿನಂತಿ…….. ಇಂತಿ ನಿಮ್ಮ Kannesh Kolsirsi
_______________________________________________________________
