

ದಲಿತ ಮುಖ್ಯಮಂತ್ರಿ ಮಾಡುವ ಸಂದರ್ಭ ಬಂದ್ರೇ_____.. ಕುಮಾರಸ್ವಾಮಿ ಇಷ್ಟೇ ಹೇಳಿದರು..
ಯಾರೋ ಸ್ವಾಮೀಜಿಗಳು ಪ್ರಶ್ನೆ ಮಾಡಿದ್ದರು ದಲಿತರಿಗೆ ಮುಖ್ಯಮಂತ್ರಿ ಸ್ಥಾನ ನೀಡುತ್ತಿರಾ ಎಂದು, ಖಂಡಿತ ನೀಡುತ್ತೇನೆ. ಕುಟುಂಬ ರಾಜಕಾರಣ ಬಯಸುವುದಿಲ್ಲ. ಪ್ರಧಾನಿ ಹುದ್ದೆಯನ್ನೇ ಬಿಟ್ಟು ಬಂದವರು ದೇವೇಗೌಡರು ಇನ್ನು ಅಧಿಕಾರದ ಆಸೆ ಇಲ್ಲ ಎಂಬುದಕ್ಕೆ ಸಾಕ್ಷಿ ಬೇಕೇ..
ಬೆಂಗಳೂರು : ಜೆಡಿಎಸ್ ಪಕ್ಷಕ್ಕೆ 5 ವರ್ಷಗಳ ಪೂರ್ಣ ಪ್ರಮಾಣ ಸರ್ಕಾರ ಕೊಡಿ. ರಾಜ್ಯದಲ್ಲಿ ನೆನಗುದಿಗೆ ಬಿದ್ದಿರುವ ಎಲ್ಲ ನೀರಾವರಿ ಯೋಜನೆಗಳನ್ನು ಪೂರ್ಣ ಮಾಡುತ್ತೇನೆ. ಈ ಮಾತಿಗೆ ತಪ್ಪಿದರೆ ನಮ್ಮ ಪಕ್ಷವನ್ನೇ ವಿಸರ್ಜನೆ ಮಾಡುತ್ತೇನೆ ಎಂದು ಮಾಜಿ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ಘೋಷಿಸಿದ್ದಾರೆ.
ನಗರದ ಕೊಂಡಜ್ಜಿ ಬಸಪ್ಪ ಸಭಾಂಗಣದಲ್ಲಿ ಹಸಿರು ಸೇನೆ ಇಂದು ಏರ್ಪಡಿಸಿದ್ದ ‘ಉಳುವ ಯೋಗಿಯ ನೋಡಲ್ಲಿ’ ಕೃಷಿಕನ ಕಷ್ಟಗಳು ಮತ್ತು ಪರಿಹಾರ ಕುರಿತ ಸಂವಾದ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಈ ಒಂದು ಬಾರಿ ನಮ್ಮ ಪಕ್ಷಕ್ಕೆ ಅವಕಾಶ ಕೊಡಿ. ಯಾವುದೇ ಅನ್ಯ ಪಕ್ಷದ ಹಂಗಿಲ್ಲದೆ ಐದು ವರ್ಷಗಳ ಸಂಪೂರ್ಣ ಅವಧಿಗೆ ನಮ್ಮನ್ನು ಆಯ್ಕೆ ಮಾಡಿ. ಇಡೀ ರಾಜ್ಯದಲ್ಲಿ ಬಾಕಿ ಬಿದ್ದಿರುವ ಎಲ್ಲ ನೀರಾವರಿ ಯೋಜನೆಗಳನ್ನು ಕಾರ್ಯಗತ ಮಾಡುತ್ತೇನೆ. ಅದಕ್ಕೆ ನಮ್ಮ ಪಕ್ಷ ಬದ್ಧವಾಗಿದೆ ಎಂದರು.
ದಲಿತ ಮುಖ್ಯಮಂತ್ರಿ ಬಗ್ಗೆ ಹೆಚ್‌ಡಿಕೆ ಮಾತು : ಮೊನ್ನೆ ಯಾರೋ ಸ್ವಾಮೀಜಿಯೊಬ್ಬರು ನಂಗೆ ಸವಾಲು ಹಾಕಿದ್ದಾರೆ. ಅವರು ಸ್ವಾಮೀಜಿ ಹೌದೋ, ಅಲ್ಲವೋ ಗೊತ್ತಿಲ್ಲ. ನಿಮ್ಮ ಪಕ್ಷದಿಂದ ದಲಿತರನ್ನೋ, ಮುಸಲ್ಮಾನರನ್ನೋ ಮುಖ್ಯಮಂತ್ರಿ ಮಾಡ್ತೀರಾ ಅಂತಾ ಅಂದಿದ್ದಾರೆ. ನಾನು ಈಗಾಗಲೇ ಸಿಎಂ ಆಗಿದ್ದೇನೆ. ಅಂತಹ ಸಂದರ್ಭ ಬಂದರೆ ದಲಿತರನ್ನೇ ನಮ್ಮ ಪಕ್ಷದಿಂದ ಮುಖ್ಯಮಂತ್ರಿ ಮಾಡುತ್ತೇನೆ. ನಮ್ಮ ಕುಟುಂಬದವರೇ ಅಧಿಕಾರದಲ್ಲಿ ಇರಬೇಕು ಅಂತೇನೂ ಇಲ್ಲ. ಇಡೀ ರಾಜ್ಯವೇ ನಮ್ಮ ಕುಟುಂಬ ಇದ್ದಂತೆ ಎಂದು ಕಾಳಿಸ್ವಾಮಿ ಸವಾಲಿಗೆ ತಿರುಗೇಟು ನೀಡಿದರು.
ಐದು ವರ್ಷಗಳಲ್ಲಿ ನೀರಾವರಿ ಯೋಜನೆಗಳ ಅನುಷ್ಠಾನ
ಪ್ರಧಾನಮಂತ್ರಿ ಹುದ್ದೆಯನ್ನೇ ಬಿಟ್ಟು ಬಂದ ಕುಟುಂಬ ನಮ್ಮದು : ಪ್ರಧಾನಮಂತ್ರಿ ಸ್ಥಾನವನ್ನೇ ತ್ಯಜಿಸಿ ಬಂದ ಕುಟುಂಬ ನಮ್ಮದು. ಪ್ರಧಾನಮಂತ್ರಿ ಸ್ಥಾನವನ್ನೇ ದೇವೇಗೌಡರು ಬಿಟ್ಟು ಬಂದರು. ಬಿಜೆಪಿ ಬೆಂಬಲ ನೀಡಲು ಮುಂದಕ್ಕೆ ಬಂದರೂ ಅವರು ಪಡೆಯಲಿಲ್ಲ. ಅಂತಹ ಹಿನ್ನೆಲೆ ಹಿಂದಿರುವ ನಮ್ಮ ಕುಟುಂಬ ಸಿಎಂ ಸ್ಥಾನ ಇಟ್ಟುಕೊಂಡು ಕೂರಬೇಕಾ? ಎಂದು ಹೇಳಿದರು.
ರಾಜಕೀಯ ನಿವೃತ್ತಿ ತೆಗೆದುಕೊಳ್ಳಲು ನಿರ್ಧರಿಸಿದ್ದೆ: ನಾನು ಯಾವಾಗಲೋ ರಾಜಕೀಯ ನಿವೃತ್ತಿ ತೆಗೆದುಕೊಳ್ಳುವ ಉದ್ದೇಶ ಮಾಡಿದ್ದೆ. ಎರಡನೇ ಬಾರಿ ಸಿಎಂ ಆಗುವ ಸಂದರ್ಭದಲ್ಲಿಯೇ ರಾಜಕಾರಣದಿಂದ ನಿವೃತ್ತಿ ತೆಗೆದುಕೊಳ್ಳಲು ಬಯಸಿದ್ದೆ. ಆದರೆ, ಜನರ ಕಷ್ಟದ ಪರಿಸ್ಥಿತಿ ನೋಡಿ ಇನ್ನೂ ರಾಜಕೀಯದಲ್ಲಿ ಇದ್ದೇನೆ. ಕೊರೊನಾ ಸಮಯದಲ್ಲಿ ನಾನು ಫೀಲ್ಡ್ಗೆ ಇಳಿಯಲಿಲ್ಲ. ಜನರಿಗಾಗಿ ನಾನು ಸುಮ್ಮನಿದ್ದೆ. ಆದರೆ, ಈಗ ಫೀಲ್ಡ್ಗೆ ಇಳಿದಿದ್ದೇನೆ ಎಂದರು.
ರೈತ ಮುಖಂಡರಿಗೆ 10 ಕಡೆ ಟಿಕೆಟ್ : ರೈತ ಸಂಘಟನೆಗಳು ನೇರ ರಾಜಕಾರಣಕ್ಕೆ ಬರಬೇಕು ಎಂದು ಮುಕ್ತ ಕರೆ ನೀಡಿದ ಕುಮಾರಸ್ವಾಮಿ ಅವರು, ಚುನಾವಣೆಯಲ್ಲಿ ಸ್ಪರ್ಧೆ ಮಾಡಲು ಆಸಕ್ತಿ ಇರುವ ರೈತ ಮುಖಂಡರಿಗೆ ನಮ್ಮ ಪಕ್ಷದಿಂದ ಹತ್ತು ಕ್ಷೇತ್ರಗಳಲ್ಲಿ ಚುನಾವಣೆಯಲ್ಲಿ ಸ್ಪರ್ಧೆ ಮಾಡಲು ಟಿಕೆಟ್ ನೀಡುವೆ ಎಂದು ಘೋಷಣೆ ಮಾಡಿದರು. ನೀವು ಸ್ವಾತಂತ್ರ್ಯ ಉದ್ಯಾನವನದಲ್ಲಿ ಕೂರಬೇಕಾದವರಲ್ಲ. ವಿಧಾನಸಭೆಯ ಮೂರನೇ ಮಹಡಿಯಲ್ಲಿ ಕೂರಬೇಕಾದವರು. ನಿಮ್ಮಲ್ಲಿ ಅನೇಕರಿಗೆ ಶಕ್ತಿ ಇದೆ. ನಿಮ್ಮ ಜತೆ ನಾನು ಇದ್ದೇನೆ. ನಿಮಗೆ ಎಲ್ಲ ರೀತಿಯ ಶಕ್ತಿ ತುಂಬುವೆ ಎಂದು ಭರವಸೆ ನೀಡಿದರು.
ಹನುಮ ಜಯಂತಿ ದಿನ ಜಲಧಾರೆ ಆರಂಭ : ರಾಜ್ಯವು ಕಳೆದ 75 ವರ್ಷಗಳಿಂದ ಎದುರಿಸುವ ನೀರಾವರಿ ಅನ್ಯಾಯವನ್ನು ಸರಿ ಮಾಡುವ ಸಲುವಾಗಿ ಜೆಡಿಎಸ್ ಪಕ್ಷವು ಜನತಾ ಜಲಧಾರೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗುತ್ತಿದೆ. ಇದೇ ತಿಂಗಳ 16ರಂದು ಹನುಮ ಜಯಂತಿ ದಿನದಂದು ಚಾಲನೆ ನೀಡಲಾಗುವುದು ಎಂದು ಹೆಚ್‌ಡಿಕೆ ತಿಳಿಸಿದರು.
ನಮ್ಮ ರಾಜ್ಯದಲ್ಲಿ ಸಾಕಷ್ಟು ನೀರಿದೆ. ಆದರೆ, ಪಕ್ಕದ ರಾಜ್ಯಗಳಲ್ಲಿ ಇಷ್ಟು ನೀರಿನ ಲಭ್ಯತೆ ಇಲ್ಲ. ಆದರೂ ನಾವು ನಮ್ಮಲ್ಲಿ ಇರುವ ಜಲ ಸಂಪತ್ತನ್ನು ಸಮರ್ಪಕವಾಗಿ ಬಳಕೆ ಮಾಡಿಕೊಳ್ಳುತ್ತಿಲ್ಲ. ಪ್ರತಿ ಭಾಗಕ್ಕೂ ಜಲ ಸಮಾನತೆ ಬೇಕು. ಇಡೀ ರಾಜ್ಯದಲ್ಲಿ ನೆನಗುದಿಗೆ ಬಿದ್ದಿರುವ ನೀರಾವರಿ ಯೋಜನೆಗಳನ್ನು ಐದು ವರ್ಷಗಳಲ್ಲಿ ಕಾರ್ಯಗತ ಮಾಡುವ ಬಗ್ಗೆ ಆ ಕಾರ್ಯಕ್ರಮದಲ್ಲಿ ಸಂಕಲ್ಪ ಮಾಡುತ್ತೇವೆ ಎಂದ ಅವರು, ಜಲಧಾರೆ ಕಾರ್ಯಕ್ರಮದಲ್ಲಿ ರೈತರು, ರೈತ ಮುಖಂಡರು ಸಕ್ರಿಯವಾಗಿ ಭಾಗಿಯಾಗಬೇಕು ಎಂದು ಮನವಿ ಮಾಡಿದರು.
ಬಿಜೆಪಿ ಬಗ್ಗೆ ಜನ ಎಚ್ಚೆತ್ತುಕೊಳ್ಳಬೇಕು : ಬಿಜೆಪಿ ದಿನಕ್ಕೊಂದು ಭಾವನಾತ್ಮಕ ವಿಷಯವನ್ನು ಇಟ್ಟುಕೊಂಡು ಜನರನ್ನು ಒಡೆಯುತ್ತದೆ. ಬಿಜೆಪಿ ಅದೇನು ಮೋಡಿ ಮಾಡಿದೆಯೋ ಜನರಿಗೆ. ಇನ್ನು ಐದು ವರ್ಷ ಇದೇ ಪರಿಸ್ಥಿತಿ ಮುಂದುವರೆದರೆ ಶ್ರೀಲಂಕಾದಲ್ಲಿ ಸೃಷ್ಟಿ ಆಗಿರುವ ದುಸ್ಥಿತಿಯೇ ಇಲ್ಲೂ ತಲೆ ಎತ್ತಲಿದೆ. ಈಗಲಾದರೂ ಜನ ಎಚ್ಚೆತ್ತುಕೊಳ್ಳಬೇಕು ಎಂದು ರೈತರಲ್ಲಿ ಮನವಿ ಮಾಡಿದರು.
ನಾನು ಮುಸಲ್ಮಾನ್ ಬಂಧುಗಳನ್ನು ಅಪ್ರೆಶಿಯೇಟ್ ಮಾಡ್ತೇನೆ. ಹಲಾಲ್, ಜಟ್ಕಾ ಏನೇನೋ ಆಗುತ್ತಿದೆ. ಈ ಹಿಂದೂ ಮಹಾಸಭಾ, ಭಜರಂಗದಳ ಏನೇನು ಮಾಡುತ್ತಿವೆ. ಆದರೂ ಮುಸಲ್ಮಾನರು ತಾಳ್ಮೆಯಿಂದ ಇದ್ದಾರೆ. ಅದನ್ನು ನಾವು ಪ್ರಶಂಸಿಸಬೇಕು. ನಮ್ಮದು ದೀಪ ಹಚ್ಚುವ ಸಂಸ್ಕೃತಿ, ಹೊರತು ದೀಪ ಆರಿಸುವ ಸಂಸ್ಕೃತಿ ಅಲ್ಲ. ಅವರು ದಿನಕ್ಕೆ ನಾಲ್ಕಾರು ಬಾರಿ ದೇವರನ್ನು ಸ್ಮರಿಸಲು ಲೌಡ್ ಸ್ಪೀಕರ್ ಹಾಕುತ್ತಾರೆ. ನಾವು ನಮ್ಮ ದೇವರನ್ನು ಸ್ಮರಿಸಲು ಲೌಡ್ ಸ್ಪೀಕರ್ ಹಾಕೋಣ. ನಾವೂ ಪ್ರಾರ್ಥನೆ ಮಾಡೋಣ, ನಮ್ಮ ಮಕ್ಕಳಿಗೆ ನಮ್ಮ ಸಂಸ್ಕಾರ ಕಲಿಸೋಣ ಎಂದು ಸಲಹೆ ನೀಡಿದರು. (etbk)
