

ದಾಂಡೇಲಿ ಸಮೀಪದ ಗಣೇಶಗುಡಿಯಲ್ಲಿ ದೋಣಿ ಮುಳುಗಿ ಕೆಲವೇ ಅಂತರದಲ್ಲಿ ಸಂಭವಿಸಬೇಕಿದ್ದ ದುರಂತವೊಂದನ್ನು ಪ್ರವಾಸಿ ನಿರ್ವಾಹಕರು ತಪ್ಪಿಸಿದ್ದಾರೆ. ಈ ಘಟನೆಯು ಸ್ಥಳದಲ್ಲಿ ನಡೆಯುತ್ತಿದ್ದ ನಿಯಮ ಉಲ್ಲಂಘನೆಗಳು ಬಹಿರಂಗಗೊಳ್ಳುವಂತೆ ಮಾಡಿದೆ.

ಗಣೇಶಗುಡಿ: ದಾಂಡೇಲಿ ಸಮೀಪದ ಗಣೇಶಗುಡಿಯಲ್ಲಿ ದೋಣಿ ಮುಳುಗಿ ಕೆಲವೇ ಅಂತರದಲ್ಲಿ ಸಂಭವಿಸಬೇಕಿದ್ದ ದುರಂತವೊಂದನ್ನು ಪ್ರವಾಸಿ ನಿರ್ವಾಹಕರು ತಪ್ಪಿಸಿದ್ದಾರೆ. ಈ ಘಟನೆಯು ಸ್ಥಳದಲ್ಲಿ ನಡೆಯುತ್ತಿದ್ದ ನಿಯಮ ಉಲ್ಲಂಘನೆಗಳು ಬಹಿರಂಗಗೊಳ್ಳುವಂತೆ ಮಾಡಿದೆ.
ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು, ವಿಡಿಯೋದಲ್ಲಿ ಜನರು ಸಹಾಯಕ್ಕಾಗಿ ಕಿರುಚಾಡುತ್ತಿರುವುದು, ಮಕ್ಕಳನ್ನು ಮೊದಲ ರಕ್ಷಣೆ ಮಾಡುವಂತೆ ಒತ್ತಾಯಿಸುತ್ತಿರುವುದು ಕಂಡು ಬಂದಿದೆ.
ಸಾಮರ್ಥ್ಯಕ್ಕೂ ಮೀರಿ ಹೆಚ್ಚಿನ ಜನರನ್ನು ದೋಣಿಯಲ್ಲಿ ಹತ್ತಿಸಿಕೊಂಡಿದ್ದು, ಘಟನೆಗೆ ಕಾರಣವಾಗಿದೆ ಎಂದು ಸ್ಥಳೀಯರು ಮಾಹಿತಿ ನೀಡಿದ್ದಾರೆ.
ಪ್ರತೀ ದೋಣಿಯಲ್ಲಿ 14ಕ್ಕೂ ಹೆಚ್ಚು ಜನರನ್ನು ಕರೆದೊಯ್ಯಲಾಗುತ್ತಿದೆ. ಅಲ್ಲದೆ, ಸುರಕ್ಷತಾ ಕ್ರಮಗಳನ್ನೂ ಕೈಗೊಳ್ಳುತ್ತಿಲ್ಲ. ಈ ಕುರಿತು ಯಾವುದೇ ಅಧಿಕಾರಿಗಳೂ ಪರಿಶೀಲನೆ ನಡೆಸುತ್ತಿಲ್ಲ ಎಂದು ತಿಳಿಸಿದ್ದಾರೆ.
ರೆಸಾರ್ಟ್ ಮಾಲೀಕರ ಮಾತನಾಡಿ, ಅಣೆಕಟ್ಟಿನಿಂದ ನೀರು ಬಿಡುಗಡೆ ಮಾಡುವುದರಿಂದ ನದಿಯು ಹರಿವು ತೀವ್ರವಾಗಿದೆ. ಈ ಸಂದರ್ಭದಲ್ಲಿ ಆಗುವ ಸಣ್ಣ ತಪ್ಪುಗಳೂ ಕೂಡ ಹಲವರು ಜೀವ ಕಳೆದುಕೊಳ್ಳುವಂತಾಗಲಿದೆ ಎಂದು ಹೇಳಿದ್ದಾರೆ.
ಉತ್ತರ ಕನ್ನಡ ಜಿಲ್ಲೆಯ ಜಿಲ್ಲಾಧಿಕಾರಿ ಮುಲ್ಲೈ ಮುಹಿಲನ್ ಅವರು ಮಾತನಾಡಿ, ನಿಮಯ ಉಲ್ಲಂಘನೆಗಳ ಬಗ್ಗೆ ಆಘಾತವನ್ನು ವ್ಯಕ್ತಪಡಿಸಿದ್ದಾರೆ. ಅಲ್ಲದೆ, ಪರಿಸ್ಥಿತಿಯನ್ನು ಮೇಲ್ವಿಚಾರಣೆ ಮಾಡುವುದಾಗಿ ಹಾಗೂ ಸಂಭವನೀಯ ದೋಣಿ ದುರಂತ ಕುರಿತು ಪರಿಶೀಲನೆ ನಡೆಸಲು ತಂಡವೊಂದನ್ನು ನಿಯೋಜಿಸುವುದಾಗಿ ಹೇಳಿದ್ದಾರೆ.
ಗಣೇಶಗುಡಿ ಪರಿಸರ ಪ್ರವಾಸೋದ್ಯಮವು ನಿಯಮ ಉಲ್ಲಂಘನೆ ಕಾರಣಕ್ಕೆ ಸುದ್ದಿಯಾಗುತ್ತಿರುವುದು ಇದು ಮೊದಲೇನಲ್ಲ. ಈ ಹಿಂದೆ ರೂಜ ಲೈಫ್ ಜಾಕೆಟ್‌ಗಳಂತಹ ಸುರಕ್ಷತಾ ಕ್ರಮ ಕೈಗೊಳ್ಳದೆ ಪ್ರವಾಸಿಗರನ್ನು ಕರೆದೊಯ್ಯುತ್ತಿದ್ದ ವಿಡಿಯೋಗಳು ಹರಿದಾಡಿದ್ದವು. ಇದು ಅಧಿಕಾರಿಗಳಿಗೆ ದೊಡ್ಡ ತಲೆನೋವಾಗಿ ಪರಿಣಮಿಸಿದೆ.
