

ಕಳೆದ ಶನಿವಾರ ತಡರಾತ್ರಿ ಸೋಷಿಯಲ್ ಮೀಡಿಯಾ ಪೋಸ್ಟ್ ನಿಂದ ತಮ್ಮ ಧಾರ್ಮಿಕ ಭಾವನೆಗಳಿಗೆ ಧಕ್ಕೆಯುಂಟಾಗಿದೆ ಎಂದು ಆರೋಪಿಸಿ ಹಳೆ ಹುಬ್ಬಳ್ಳಿ ಪೊಲೀಸ್ ಠಾಣೆ ಮೇಲೆ ನಡೆಸಿದ ಕಲ್ಲು ತೂರಾಟ ಹಿಂಸಾರೂಪಕ್ಕೆ ತಿರುಗಿದ ಘಟನೆಯಲ್ಲಿ 12 ಮಂದಿ ಪೊಲೀಸರಿಗೆ ಗಾಯಗಳಾಗಿವೆ. ಏಳು ಪೊಲೀಸ್ ವಾಹನಗಳು ಜಖಂ ಆಗಿವೆ.

ಹುಬ್ಬಳ್ಳಿ: ಕಳೆದ ಶನಿವಾರ ತಡರಾತ್ರಿ ಸೋಷಿಯಲ್ ಮೀಡಿಯಾ ಪೋಸ್ಟ್ ನಿಂದ ತಮ್ಮ ಧಾರ್ಮಿಕ ಭಾವನೆಗಳಿಗೆ ಧಕ್ಕೆಯುಂಟಾಗಿದೆ ಎಂದು ಆರೋಪಿಸಿ ಹಳೆ ಹುಬ್ಬಳ್ಳಿ ಪೊಲೀಸ್ ಠಾಣೆ ಮೇಲೆ ನಡೆಸಿದ ಕಲ್ಲು ತೂರಾಟ ಹಿಂಸಾರೂಪಕ್ಕೆ ತಿರುಗಿದ ಘಟನೆಯಲ್ಲಿ 12 ಮಂದಿ ಪೊಲೀಸರಿಗೆ ಗಾಯಗಳಾಗಿವೆ. ಏಳು ಪೊಲೀಸ್ ವಾಹನಗಳು ಜಖಂ ಆಗಿವೆ.
ಘಟನೆಗೆ ಸಂಬಂಧಪಟ್ಟಂತೆ ಇದುವರೆಗೆ 88 ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ. ಇನ್ನಷ್ಟು ಬಂಧನವಾಗುವ ಸಾಧ್ಯತೆ ಕೂಡ ಇದೆ. ಹುಬ್ಬಳ್ಳಿಯಾದ್ಯಂತ ಏಪ್ರಿಲ್ 20ವರೆಗೆ ಸೆಕ್ಷನ್ 144 ಹಾಕಲಾಗಿದ್ದು ಯಾವುದೇ ಅಹಿತಕರ ಘಟನೆ ನಡೆಯದಂತೆ ಹೆಚ್ಚುವರಿ ಪೊಲೀಸ್ ಪಡೆಗಳನ್ನು ನಿಯೋಜಿಸಲಾಗಿದೆ.
ಹುಬ್ಬಳ್ಳಿಯಲ್ಲಿ ಕಳೆದ ಶನಿವಾರ ತಡರಾತ್ರಿ ಏನಾಯ್ತು?: ಯಾವಾಗಲೂ ವ್ಯಾಪಾರ ವಹಿವಾಟುಗಳಿಂದ, ಜನರಿಂದ ತುಂಬಿ ತುಳುಕುತ್ತಿದ್ದ ಹುಬ್ಬಳ್ಳಿಯಲ್ಲಿ ಮೊನ್ನೆ ಶನಿವಾರ ತಡರಾತ್ರಿ ಪರಿಸ್ಥಿತಿ ಸಂಪೂರ್ಣ ಭಿನ್ನವಾಗಿತ್ತು. ಉದ್ರಿಕ್ತ ಗುಂಪು ರಾತ್ರೋರಾತ್ರಿ ಪೊಲೀಸರ ಮೇಲೆ ದಾಳಿ ಮಾಡಿತ್ತು. ಇದರಲ್ಲಿ ಪೊಲೀಸ್ ವಾಹನಗಳು, ಸಾರ್ವಜನಿಕ ವಾಹನಗಳು ಮತ್ತು ಖಾಸಗಿ ಆಸ್ತಿಪಾಸ್ತಿ ಕೂಡ ನಷ್ಟವಾಗಿದೆ. ಅಭಿಷೇಕ್ ಹೀರೇಮಠ್ ಎನ್ನುವ 24 ವರ್ಷದ ಯುವಕ ತನ್ನ ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ವೊಂದನ್ನು ಹಾಕಿದ್ದೇ ಇದಕ್ಕೆಲ್ಲಾ ನೆಪಕಾರಣ.
ಸಮುದಾಯವೊಂದರ ಸದಸ್ಯರು ಕೂಡಲೇ ದೂರು ದಾಖಲಿಸಿ, ಪೊಲೀಸರು ಅಭಿಷೇಕ್ ನನ್ನು ಆನಂದ್ ನಗರದಲ್ಲಿರುವ ಆತನ ನಿವಾಸದಿಂದ ಬಂಧಿಸಿ ಕರೆದುಕೊಂಡು ಹೋಗಿ ಹಳೆ ಹುಬ್ಬಳ್ಳಿ ಪೊಲೀಸ್ ಠಾಣೆಗೆ ಕರೆದುಕೊಂಡು ಬಂದರು. ಕೂಡಲೇ ಪೊಲೀಸ್ ಠಾಣೆಯ ಹೊರಗೆ ಜನರ ಗುಂಪು ದೊಡ್ಡ ಸಂಖ್ಯೆಯಲ್ಲಿ ಸೇರಿ ಪೊಲೀಸರು ಆರೋಪಿಯನ್ನು ತಮ್ಮ ಮುಂದೆ ಕರೆತರಬೇಕೆಂದು ಒತ್ತಾಯಿಸಿದ್ದರು.
ಕಾನೂನು ಪ್ರಕಾರ ನಾವು ಕ್ರಮ ಕೈಗೊಳ್ಳುತ್ತೇವೆ ಎಂದು ಪೊಲೀಸರು ಹೇಳಿದಾಗ ಕೇಳದೆ ಪ್ರತಿಭಟನಾಕಾರರು ಮುನ್ನುಗ್ಗಿ ಮನಬಂದಂತೆ ಪೊಲೀಸ್ ಠಾಣೆ ಮೇಲೆ ಕಲ್ಲೆಸೆದರು. ಪೊಲೀಸ್ ವಾಹನಗಳನ್ನು ಧ್ವಂಸ ಮಾಡಿದರು. ಬೀದಿದೀಪಗಳನ್ನು ಕೂಡ ನಾಶ ಮಾಡಿದರು, ಒಟ್ಟಿನಲ್ಲಿ ಪೊಲೀಸ್ ಠಾಣೆ ಮುಂದೆ ಪರಿಸ್ಥಿತಿ ಉದ್ವಿಗ್ನಗೊಂಡಿತ್ತು.
ಪೊಲೀಸ್ ಠಾಣೆ ಹತ್ತಿರವಿರುವ ಧಾರ್ಮಿಕ ಕೇಂದ್ರ ಮತ್ತು ಆಸ್ಪತ್ರೆಯೊಂದನ್ನು ಕೂಡ ಧ್ವಂಸ ಮಾಡಿದ್ದಾರೆ. ವಿವಿಧ ಸ್ಥಳಗಳಿಂದ ಪೊಲೀಸ್ ಠಾಣೆ ಮೇಲೆ ದಾಳಿ ನಡೆಸಿದ್ದಾರೆ. ಹಿಂಸಾಚಾರಪೀಡಿತ ಗುಂಪನ್ನು ಚದುರಿಸಲು ಪೊಲೀಸರು 9 ಬಾರಿ ಗಾಳಿಯಲ್ಲಿ ಗುಂಡು ಹಾರಿಸಿದ್ದರು. ಆಶ್ರುವಾಯು ಸಿಡಿಸಿದರು. ರಬ್ಬರ್ ಬುಲೆಟ್ ಗಳನ್ನು ಕೂಡ ಸಿಡಿಸಿ ಪರಿಸ್ಥಿತಿ ನಿಯಂತ್ರಣಕ್ಕೆ ತರಲು ಹರಸಾಹಸಪಟ್ಟಿದ್ದರು.
ಪ್ರತಿಭಟನೆ ವೇಳೆ ಇಷ್ಟೊಂದು ಕಲ್ಲುಗಳು ಹೇಗೆ ಸಂಗ್ರಹವಾದವು ಎಂಬ ಬಗ್ಗೆಯೂ ತನಿಖೆ ನಡೆಸುತ್ತಿದ್ದೇವೆ. ಇನ್ನಷ್ಟು ಬಂಧನವಾಗುವ ಸಾಧ್ಯತೆ ಇದೆ. ಖಾಸಗಿ ವಾಹನಗಳು ಹಾನಿಗೊಳಗಾದ ಮತ್ತು ಸಾರ್ವಜನಿಕರು ಗಾಯಗೊಂಡಿರುವ ವರದಿಗಳನ್ನು ಪಡೆಯುತ್ತೇವೆ ಎಂದು ಹುಬ್ಬಳ್ಳಿ ಪೊಲೀಸ್ ಆಯುಕ್ತ ಲಬು ರಾಮ್ ತಿಳಿಸಿದ್ದಾರೆ.
ಪೊಲೀಸರಿಂದ ಪಥ ಸಂಚಲನ: ಯಾವುದೇ ಘಟನೆಗಳು ನಡೆಯದಂತೆ ತಡೆಯಲು ಇತರ ಜಿಲ್ಲೆಗಳಿಂದ ಹೆಚ್ಚುವರಿ ಪೊಲೀಸ್ ಪಡೆಗಳನ್ನು ನಿಯೋಜಿಸಲಾಗಿದೆ. ನಿನ್ನೆ ಭಾನುವಾರ, ಆರ್‌ಎಎಫ್ ಮತ್ತು ಸಶಸ್ತ್ರ ಪೊಲೀಸ್ ಸಿಬ್ಬಂದಿಯ ತುಕಡಿಗಳು ನಗರದ ಸೂಕ್ಷ್ಮ ಪ್ರದೇಶಗಳಲ್ಲಿ ಮಾರ್ಗದಲ್ಲಿ ಪಥ ಸಂಚಲನ ನಡೆಸಿದರು. ಧಾರವಾಡ ಜಿಲ್ಲಾಧಿಕಾರಿ ನಿತೇಶ್ ಪಾಟೀಲ್ ಹಳೇ ಹುಬ್ಬಳ್ಳಿ ಪೊಲೀಸ್ ಠಾಣೆಗೆ ಭೇಟಿ ನೀಡಿ ಉನ್ನತ ಅಧಿಕಾರಿಗಳೊಂದಿಗೆ ಸಭೆ ನಡೆಸಿದರು.
ಸಿಸಿಟಿವಿ ದೃಶ್ಯಾವಳಿಗಳು ಮತ್ತು ಇತರ ಸಾಕ್ಷ್ಯಾಧಾರಗಳ ಆಧಾರದ ಮೇಲೆ ಆರೋಪಿಗಳನ್ನು ಬಂಧಿಸಲಾಗುತ್ತಿದೆ ಎಂದು ನಿತೇಶ್ ಪಾಟೀಲ್ ಹೇಳಿದರು. “ಪರಿಸ್ಥಿತಿ ನಿಯಂತ್ರಣದಲ್ಲಿದೆ, ಮುಂದಿನ ಆದೇಶದವರೆಗೆ ನಿಷೇಧಾಜ್ಞೆ ಜಾರಿಯಲ್ಲಿರುತ್ತದೆ ಎಂದು ಅವರು ಹೇಳಿದರು. (kpc)
