ಸಿದ್ದಾಪುರ: ತಾಲೂಕಿನ ಹೆರವಳ್ಳಿಯ ಶ್ರೀ ಮಡಿವಾಳ ಮಾಚಿದೇವರ ೮ ನೇ ವರ್ಷದ ವಾರ್ಷಿಕೋತ್ಸವ ಕಾರ್ಯಕ್ರಮವು ಎಪ್ರಿಲ್ ೧೭ ಮತ್ತು ೧೮ ನಡೆಯಿತು. ೧೭ ರವಿವಾರದಂದು ಬೆಳಿಗ್ಗೆ ೧೦ ರಿಂದ ಗಂಗಾ ಪೂಜೆ, ದೇವರಿಗೆ ಅಭಿಷೇಕ, ಪಲ್ಲಕ್ಕಿ ಉತ್ಸವ, ರುದ್ರಹೋಮ, ಪೂರ್ಣಾವತಿ, ಮಹಾ ಮಂಗಳಾರತಿ ಪ್ರಸಾದ ವಿತರಣೆ, ಕಾರ್ಯಕ್ರಮಗಳು ನಡೆದವು. ೧೦ ರಂದು ರುದ್ರಾಭಿಷೇಕ, ಅಷ್ಟೋತ್ತರ, ಮಹಾಮಂಗಳಾರತಿ, ತೀರ್ಥಪ್ರಸಾದ ವಿನಿಯೋಗ ಹಾಗೂ ಅನ್ನ ಸಂತರ್ಪಣೆ ಕಾರ್ಯಕ್ರಮಗಳು ನಡೆದವು.ನಂತರ ನಡೆದ ಧರ್ಮ ಸಭೆಯ ದಿವ್ಯ ಸಾನಿಧ್ಯ ವಹಿಸಿ ಆಶೀರ್ವಚನ ನೀಡಿದ ಚಿತ್ರದುರ್ಗದ ಮಾಡಿವಾಳ ಮಾಚಿದೇವ ಮಠದ ಶ್ರೀ ಶ್ರೀ ಶ್ರೀ ಜಗದ್ಗುರು ಡಾ, ಬಸವ ಮಾಚಿದೇವ ಮಹಾಸ್ವಾಮಿಗಳು ನಮ್ಮಲ್ಲಿ ರುವ ಶಾರೀರಿಕ ಶಕ್ತಿಯಿಂದ ನಮ್ಮ ಕುಟುಂಬ, ಗ್ರಾಮದ ಶಕ್ತಿಯುತವಾಗಿ ಆಗಬಹುದು. ಒಂದಿಷ್ಟು ಗಳಿಸಬಹುದು. ಆದರೆ ಉಳಿಸಿಕೊಳ್ಳುವುದು ಕಡಿಮೆಯಾಗಿರುತ್ತದೆ. ಉಳಿಸುಕೊಳ್ಳುವ ಶಕ್ತಿ ಇರಬೇಕೆಂದರೆ ನಮ್ಮೋಳಗಿನ ಆಂತರಿಕ ಶಕ್ತಿ ಜಾಗೃತವಾಗಬೇಕು. ಪ್ರತಿದಿನ ಮಾಚೀದೇವರ ದರ್ಶನ ಮಾಡಿದರೆ ನಮ್ಮೊಳಗಿನ ಆಂತರಿಕ ಶಕ್ತಿ ಜಾಗೃತವಾಗುತ್ತದೆ. ನಮಗೆ ನೆಮ್ಮದಿ, ಸಮಾಧಾ ನ, ಸಂತೃಪ್ತಿ ಮಂದಿರದಲ್ಲಿ ಸಿಗುತ್ತವೆ. ಗುರುಗಳನ್ನು ನಂಬಿದರೆ ಗುರು ನಮ್ಮನ್ನು ಯಾವಾಗಲು ಕೈ ಬಿಡುವುದಿಲ್ಲ. ನಾವು ಗುರು ಗಳ ಮಾರ್ಗದರ್ಶನದಲ್ಲಿ ನಡೆದರೆ ನಾವು ಅಂದುಕೊಂಡದನ್ನು ಸುಲಭವಾಗಿ ಸಾಧಿಸಬಹುದು ಎಂದರು.
ತಾಲೂಕ ಮಡಿವಾಳ ಸಮಾಜದ ಅಧ್ಯಕ್ಷ ಪಿ ಬಿ ಹೊಸುರು ಮಾತನಾಡಿ ಕೊರೋನಾ ಕಾರಣದಿಂದ ಇಂದು ಮಾನವೀಯತೆಯಿಂದ ಇತರರೊಂದಿಗೆ ಉತ್ತಮ ಸಂಬಂಧದೊಂದಿಗೆ ಜೀವನ ನಡೆಸುವುದನ್ನು ಕಲಿತ್ತಿದ್ದೇವೆ. ಮಠದ ಅಭಿವೃದ್ಧಿಗೆ ಎಲ್ಲರೂ ಶ್ರಮಿಸಬೇಕು. ನಮ್ಮ ಮಠ ಎಂಬ ಭಾವನೆ ಎಲ್ಲರಲ್ಲೂ ಬರಬೇಕು. ಗುರುಗಳ ಮಾರ್ಗದರ್ಶನ ಇದ್ದರೆ ನಮ್ಮ ಎಲ್ಲಾ ಸಮಸ್ಯೆ ಗಳನ್ನು ಸುಲಭವಾಗಿ ಬಗೆಹರಿಸಿಕೊಳ್ಳಬಹುದು ಎಂದರು.ಇದೇ ಸಂದರ್ಭದಲ್ಲಿ 17 ವರ್ಷ ಸೈನ್ಯ ದಲ್ಲಿ ಸೇವೆ ಸಲ್ಲಿಸಿ ನಿವೃತ್ತರಾದ ವಿನಾಯಕ ಶಿವಾ ಮಡಿವಾಳ ಹೆರವಳ್ಳಿ ಹಾಗೂ, ಎಂ ಡಿ ಆಯುರ್ವೇದ (ಜನರಲ್ ಮೆಡಿಸಿನ್) ದಲ್ಲಿ ಗದಗ ಕಾಲೇಜಿಗೆ ಪ್ರಥಮ ಬಂದು ಈಗ ಸಿದ್ದಾಪುರ ದ ಧನ್ವಂತರಿ ಆಯುರ್ವೇದ ಕಾಲೇಜಿನಲ್ಲಿ ಉಪನ್ಯಾಸಕರಾಗಿರುವ ಚೈತ್ರಿಕಾ ಬಿ ಹೊಸೂರ ರವರನ್ನು ಗ್ರಾಮದ ಪರವಾಗಿ ಸನ್ಮಾನಿಸಲಾಯಿತು.
ಶ್ರೀ ಅನಂತ ಯಕ್ಷಕಲಾ ಪ್ರತಿಷ್ಠಾನ, ಕನ್ನಡ ಸಂಸ್ಕೃತಿ ಇಲಾಖೆ ಬೆಂಗಳೂರ ಸಹಯೋಗದಲ್ಲಿ ಶರಸೇತು ಬಂಧನ ಯಕ್ಷಗಾನ ಪ್ರದರ್ಶನ ನಡೆಯಿತು.ಗ್ರಾಮ ಕಮೀಟಿ ಯ ಅಧ್ಯಕ್ಷ ಕೃಷ್ಣ ಮಡಿವಾಳ ರವರ ನೇತೃತ್ವದಲ್ಲಿ ಕಾರ್ಯ ಕ್ರಮ ಯಶಸ್ವಿಯಾಗಿ ನಡೆಯಿತು.ಸದಾನಂದ ಗೌಡ ಸ್ವಾಗತಿಸಿ ನಿರೂಪಿಸಿದರು.
ಕಳೂರನಲ್ಲಿ ಯಕ್ಷಗಾನ-
ಶ್ರೀ ಕೋಡಿಗದ್ದೆ ಮೂಕಾಂಬಿಕಾ ಯಕ್ಷಗಾನ ಕಲಾಸಂಘ ರಿ, ದೊಡ್ಮನೆ – ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬೆಂಗಳೂರು ಸಹಕಾರದೊಂದಿಗೆ ದಿನಾಂಕ : ೧೮-೦೪-೨೦೨೨ ರ ಸೋಮವಾರ ರಾತ್ರಿ ೧೦-೦೦ ರಿಂದ ಶ್ರೀ ಕಲ್ಲೇಶ್ವರ ದೇವಾಲಯ ಕಳೂರು ಬಯಲು ರಂಗಮಂದಿರದಲ್ಲಿ ಯಕ್ಷಗಾನ ಪ್ರದರ್ಶನಕ್ಕೆ ಕಲ್ಲೇಶ್ವರ ದೇವಾಲಯ ಕಮಿಟಿ ಕಳೂರು ಇದರ ಅಧ್ಯಕ್ಷರಾದ ಈಶ್ವರ ನಾಯ್ಕ, ಕಳೂರು ಇವರು ಚೆಂಡೆ ಬಾರಿಸುವುದರ ಮುಖೇನ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿ ಯಕ್ಷಗಾನವನ್ನು ಬೆಳೆಸಿ ಪೋಷಿಸುವ ಕಾರ್ಯವು ಪ್ರತಿ ಹಳ್ಳಿ-ಹಳ್ಳಿಗಳಲೂ ನಡೆಯಬೇಕೆಂದು ಕರೆ ನೀಡಿದರು.
ಸಂಚಾಲಕರಾದ ರಾಘವೇಂದ್ರ ಶರ್ಮ ವಾಜಗೋಡು ಮತ್ತು ಯಕ್ಷಗಾನ ಮಂಡಳಿ ಅಧ್ಯಕ್ಷರಾದ ಶಂಕರ ನಾರಾಯಣ ಹೆಗಡೆ ದಾನಮಾಂವ ಉಪಸ್ಥಿತರಿದ್ದರು. ಕಾರ್ಯದರ್ಶಿ ಕೇಶವ ಕಿಬ್ಳೆ ಕಾರ್ಯಕ್ರಮ ನಿರ್ವಹಿಸಿದರು. ನಂತರ ನಡೆದ ಚಕ್ರವ್ಯೂಹ ಯಕ್ಷಗಾನ ಪ್ರದರ್ಶನದಲ್ಲಿ ಹಿಮ್ಮೇಳದಲ್ಲಿ ಗಜಾನನ ಭಟ್ ತುಳಗೇರಿ, ಶ್ರೀಪತಿ ಹೆಗಡೆ ಕಂಚಿಮನೆ, ಗಣೇಶ ಭಟ್ ಕೆರೆಕೈ ಸಾಥ್ ನೀಡಿದರು. ಮುಮ್ಮೇಳದಲ್ಲಿ ಗಣಪತಿ ಭಟ್ ಮುದ್ದಿನಪಾಲು, ಮಾಬ್ಲೇಶ್ವರ ಭಟ್ ಇಟಗಿ, ಪ್ರವೀಣ ತಟ್ಟಿಸರ, ತಿಮ್ಮಪ್ಪ ಭಟ್ ದೊಡ್ಮನೆ, ಕೇಶವ ಹೆಗಡೆ ಕಿಬ್ಳೆ, ರಾಘವೇಂದ್ರ ಶರ್ಮ ವಾಜಗೋಡು, ಶಂಕರ ಹೆಗಡೆ ದಾನಮಾಂವ, ಗಣಪತಿ ಹೆಗಡೆ ಹೊನ್ನೆಕೈ, ಆನಂದ ಹೆಗಡೆ ಶಿಗೇಹಳ್ಳಿ, ಶ್ರೀಧರ ಭಟ್ ಗಡಿಹಿತ್ಲು, ಸುಬ್ರಹ್ಮಣ್ಯ ಭಟ್ ಗೋಳಿಕೈ, ವೆಂಕಟಗಿರಿ ಹೆಗಡೆ ಚಪ್ಪರಮನೆ, ಭರತ್ ಗೌಡ ಗೋಳಿಕೈ ಸಹಕರಿಸಿದರು. ಪ್ರಸಾದನ ವ್ಯವಸ್ಥೆಯಲ್ಲಿ ಎಂ.ಆರ್.ನಾಯ್ಕ ಕರಸೇಬೈಲ್, ಧ್ವನಿ ಮತ್ತು ಬೆಳಕಿನ ವ್ಯವಸ್ಥೆಯಲ್ಲಿ, ವಿನಾಯಕ ಕೊಡಿಯಾ ವಂದಾನೆ ಉತ್ತಮವಾಗಿ ಸಹಕಾರ ನೀಡಿದರು. ಕಳೂರು ದೇವಾಲಯ ಕಮಿಟಿಯ ಸದಸ್ಯರು ಹಾಗೂ ಊರನಾಗರಿಕರು ಸಹಕಾರ ನೀಡಿದರು. ಕೇಶವ ಹೆಗಡೆ ಕಿಬ್ಳೆ ವಂದಿಸಿದರು.