


ಸಿದ್ದಾಪುರ; ಬೆಂಕಿಯ ಅನಾಹುತಗಳು ಘಟಿಸಿದಾಗ ತಕ್ಷಣದಲ್ಲಿ ತೆಗೆದುಕೊಳ್ಳುವ ಕ್ರಮ ತೀರಾ ಮುಖ್ಯವಾಗುತ್ತದೆ. ಎಲ್ಲಾ ಬೆಂಕಿಯನ್ನು ಕೇವಲ ನೀರಿನಿಂದ ಆರಿಸಲು ಸಾಧ್ಯವಿಲ್ಲ.ಅವುಗಳಲ್ಲಿಯೂ ನಾಲ್ಕು ವಿಧಗಳಿವೆ. ಬೆಂಕಿ ಅವಘಡದ ಸಂದರ್ಭದಲ್ಲಿ ಅದನ್ನು ಆರಿಸುವಾಗ ಎಚ್ಚರಿಕೆ ಅಗತ್ಯ ಎಂದು ಸ್ಥಳೀಯ ಅಗ್ನಿಶಾಮಕದಳದ ಠಾಣಾಧಿಕಾರಿ ಗುರುನಾಥ ಐ.ನಾಯ್ಕ ಹೇಳಿದರು.
ಅವರು ತಾಲೂಕಿನ ಕೋಲಶಿರ್ಸಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ತಾಲೂಕ ಬಾಲಭವನ ಸೊಸೈಟಿ, ಶಿಶು ಅಭಿವೃದ್ಧಿ ಯೋಜನೆ ಕಚೇರಿ, ಆಧಾರ ಸಂಸ್ಥೆ(ರಿ) ಸಿದ್ದಾಪುರ, ಇವುಗಳ ಆಶ್ರಯದಲ್ಲಿ ನಡೆಯುತ್ತಿರುವ ಮಕ್ಕಳ ಬೇಸಿಗೆ ಶಿಬಿರದಲ್ಲಿ ಮಾಹಿತಿಯನ್ನು ನೀಡಿ ಮಾತನಾಡಿದರು.ಎಲ್ಲಾ ಬೆಂಕಿಗಳನ್ನು ನೀರನ್ನು ಸುರಿದು ಆರಿಸಲು ಸಾಧ್ಯವಾಗುವುದಿಲ್ಲ. ಕೆಲವೊಮ್ಮೆ ನೀರನ್ನು ಹಾಕಿದರೆ ಬೆಂಕಿ ಸಿಡಿಯುತ್ತದೆ. ಎಣ್ಣೆ ಬಂಡಿಯಂತಹ ಅಡಿಗೆ ಪಾತ್ರಗೆ ಬೆಂಕಿ ಬಿದ್ದಾಗ ನೀರನ್ನು ಹಾಕಿದರೆ ಬೆಂಕಿ ಮೇಲಕ್ಕೆ ಬರುತ್ತದೆ. ಹಾಗೆ ವಿದ್ಯತ್ ಅವಘಡವಾದಾಗ ನೀರನ್ನು ಹಾಕುವಂತಿಲ್ಲ. ಅದಕ್ಕೆಲ್ಲ ಅದರದೇ ಆದ ರೀತಿಯಲ್ಲಿ ಬೇರೆಯ ಕ್ರಮಗಳನ್ನು ಬಳಸಿ ಬೆಂಕಿ ಆರಿಸಬೇಕು ಎಂದರು.

ಆಧಾರ ಸಂಸ್ಥೆಯ ಅಧ್ಯಕ್ಷ ನಾಗರಾಜ ನಾಯ್ಕ ಮಾಳ್ಕೋಡ ಮಾತನಾಡಿ ದೊಡ್ಡ ಬೆಂಕಿಯ ಅನಾಹುತಗಳು ಚಿಕ್ಕ ಕಿಡಿಯಿಂದಲ್ಲೆ ಹುಟ್ಟಿಕೊಳ್ಳುತ್ತವೆ. ಅದನ್ನು ಗಮನಿಸಿದ ತಕ್ಷಣದಲ್ಲಿ ಆರಿಸುವಂತಾಗಬೇಕು. ಆ ಕುರಿತು ನಮ್ಮಲ್ಲಿ ಅಗತ್ಯ ಜ್ಞಾನವನ್ನು ಮಾಹಿತಿಯ ಮೂಲಕ ಪಡೆದುಕೊಳ್ಳಬೇಕು. ಅಗತ್ಯ ಮುನ್ನೆಚ್ಚರಿಕೆ ಕ್ರಮಗಳನ್ನು ಬೇಸಿಗೆಯ ಕಾಲದಲ್ಲಿ ತೆಗೆದುಕೊಂಡರೆ ನಮ್ಮ ಸುತ್ತ ಆಗಬಹುದಾದ ದೊಡ್ಡ ಬೆಂಕಿ ಅನಾಹುತ ತಪ್ಪಿಸಲು ಸಾಧ್ಯ ಎಂದರು.
ಅಗ್ನಿಶಾಮಕ ಪ್ರಸಾದ ಎನ್.ನಾಯ್ಕ ಬೆಂಕಿಯ ಕುರಿತು ಮತ್ತು ಅದರ ವಿಭಾಗಗಳ ಕುರಿತಾಗಿ ವಿವರಿಸಿದರು. ಅಗ್ನಿಶಾಮಕದಳದ ಕಾರ್ಯ ಚಟುವಟಿಕೆಗಳ ಕುರಿತು ಮಾಹಿತಿಯನ್ನು ಪ್ರಾತ್ಯಕ್ಷಿಕೆಯ ಮೂಲಕ ನೀಡಿದರು. ಶಿಬಿರದ ಮಕ್ಕಳೊಂದಿಗೆ ಸಂವಾದ ನಡೆಸಿದರು.
ವೇದಿಕೆಯಲ್ಲಿ ಶಾಲಾ ಮುಖ್ಯ ಶಿಕ್ಷಕಿ ಸ್ಮೀತಾ, ಜಾನಪದ ಕಲಾವಿದ ಗೋಪಾಲ ಕಾನಳ್ಳಿ, ಅಗ್ನಿಶಾಮಕ ಸಿಬ್ಬಂದಿಗಳಾದ ಮಾಸ್ತಿ ಎಂ.ಗೊಂಡ, ಚಂದ್ರ ನಾಯ್ಕ ಎಂ, ಬಾಳೇಶ ತಳವಾರ, ಬಸವಂತ ಜಗತಾಪ, ಜಗದೀಶ ಕಾಮತ ಉಪಸ್ಥಿತರಿದ್ದರು.
ಮಕ್ಕಳ ಸೃಜನಾತ್ಮಕ ಚಟುವಟಿಕೆಗಳಿಗೆ ಬೇಸಿಗೆ ಶಿಬಿರ ಪೂರಕ
ಸಿದ್ದಾಪುರ; ಇಂದಿನ ಮಕ್ಕಳು ಹೆಚ್ಚು ಕ್ರಿಯಾಶೀಲರಾಗಿರುತ್ತಾರೆ.ಪ್ರತಿಯೊಂದು ಮಗುವಿನಲ್ಲಿಯೂ ಒಂದು ಯಾವುದಾದರೂ ಪ್ರತಿಭೆ ಅಡಗಿರುತ್ತದೆ.ಅದನ್ನು ಬೆಳಕಿಗೆ ತರುವ ಕಾರ್ಯ ಆಗಬೇಕು. ಬೇಸಿಗೆ ಶಿಬಿರಗಳು ಮಕ್ಕಳ ಸೃಜನಾತ್ಮಕ ಚಟುವಟಿಕೆಗಳ ಬೆಳವಣಿಗೆಗಳಿಗೆ ಪೂರಕವಾಗುತ್ತದೆ ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಸುಶೀಲಾ ಮೊಗೆರ ಹೇಳಿದರು.
ಅವರು ತಾಲೂಕಿನ ಕೋಲಶಿರ್ಸಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ತಾಲೂಕ ಬಾಲಭವನ ಸೊಸೈಟಿ, ಶಿಶು ಅಭಿವೃದ್ಧಿ ಯೋಜನೆ ಕಚೇರಿ, ಆಧಾರ ಸಂಸ್ಥೆ(ರಿ) ಸಿದ್ದಾಪುರ, ಇವುಗಳ ಸಂಯುಕ್ತ ಆಶ್ರಯದಲ್ಲಿ ನಡೆಯುತ್ತಿರುವ ಮಕ್ಕಳ ಬೇಸಿಗೆ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದರು.ಕಳೆದ ಎರಡು ವರ್ಷಗಳಿಂದ ಇಲಾಖೆ ಕೋವಿಡ್ ಕಾರಣಕ್ಕೆ ಬೇಸಿಗೆ ಶಿಬಿರವನ್ನು ನಡೆಸಿರಲಿಲ್ಲ.ಶಿಬಿರದ ಪ್ರಯೋಜನವನ್ನು ಈ ಭಾಗದ ಮಕ್ಕಳು ಪಡೆದುಕೊಳ್ಳಬೇಕು. ಅಂಗಡಿಯ ತಿನಿಸುಗಳಿಗೆ ಆಕರ್ಷಿತರಾಗಿರದೆ ಪೌಷ್ಠಿಕ ಆಹಾರವನ್ನು ಹೆಚ್ಚು ಸೇವಿಸಬೇಕು. ಸದೃಢ ಆರೋಗ್ಯವನ್ನು ಹೊಂದುವಂತಾಗಬೇಕು ಎಂದರು.
ಮುಖ್ಯ ಅತಿಥಿಗಳಾಗಿ ಭಾಗವಹಿಸಿದ ಶಿಕ್ಷಣ ಇಲಾಖೆಯ ಸಿ.ಆರ್.ಪಿ ರಾಮನಾಥ ನಾಯ್ಕ ಮಾತನಾಡಿ ಮಕ್ಕಳಿಗೆ ಪಠ್ಯದಿಂದ ಸಿಗುವುದು ಕೆಲವು ಮಾತ್ರ. ಇಂತಹ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಾಗ ವಿವಿಧ ವಿಚಾರಗಳನ್ನು ಹೆಚ್ಚು ಅರಿಯಲು ಸಾಧ್ಯವಾಗುತ್ತದೆ. ಮಕ್ಕಳಲ್ಲಿಯ ಸೂಪ್ತ ಪ್ರತಿಭೆ ಹೊರಬುರುವುದಕ್ಕೆ ವೇದಿಕೆಯಾಗುತ್ತದೆ ಎಂದರು. ಶಿಕ್ಷಕಿ ಸವಿತಾ ಹೆಗಡೆ ಮಾತನಾಡಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಫೇವಾರ್ಡ ಉತ್ತರ ಕನ್ನಡ ಅಧ್ಯಕ್ಷರಾದ ನಾಗರಾಜ ನಾಯ್ಕ ಮಾಳ್ಕೋಡ ಮಾತನಾಡಿ ಮಗುವಿನ ಮನಸ್ಸಿನಲ್ಲಿ ಕ್ರೀಯಾತ್ಮಕ ಸೃಜನಾತ್ಮಕ ಭಾವನೆಗಳನ್ನು ಬಿತ್ತುವ ಶಿಬಿರಗಳು ಮುಂದಿನ ಸರ್ವತೋಮುಖ ಬೆಳವಣಿಗೆಗಳಿಗೆ ಕಾರಣವಾಗುತ್ತದೆ. ವಾಸ್ತವ ಪ್ರಪಂಚದ ಅರಿವು ಮೂಡುವುದಕ್ಕೆ ಸಹಕಾರಿಯಾಗುತ್ತದೆ. ಅವರ ವ್ಯಕ್ತಿತ್ವ ವಿಕಸನಗೊಂಡು ಪಠ್ಯೇತರ ಚಟುವಟಿಕೆಗಳಲ್ಲಿ ಆಸಕ್ತಿಯನ್ನು ಹೆಚ್ಚಿಸುತ್ತದೆ ಎಂದರು.
ವೇದಿಕೆಯಲ್ಲಿ ಕರಾಠೆ ತರಬೇತಿ ಕೇಂದ್ರದ ಮುಖ್ಯಸ್ಥರಾದ ಆನಂದ ಕೆ.ನಾಯ್ಕ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಶಿಶು ಅಭಿವೃದ್ಧಿ ಯೋಜನಾ ಕಚೇರಿ ಮೇಲ್ವಿಚಾರಕಿ ನಾಗರತ್ನ ನಾಯ್ಕ ಉಪಸ್ಥಿತರಿದ್ದರು.
ಶಿಬಿರಾರ್ಥಿಗಳಾದ ಕು.ಮಾನ್ಯ, ಪ್ರಾರ್ಥನಾ, ಹರ್ಷಿತ ಪ್ರಾರ್ಥಿಸಿದರು. ಕು.ಭುವನ ಹಾಗೂ ಕು. ಪ್ರಥಮ ನಾಡಗೀತೆ ಹಾಡಿದರು. ಕು.ಸುವಾಸ್ ಸ್ವಾಗತಿಸಿದರು. ಕು.ಹರ್ಷಿಣಿ ಕಾರ್ಯಕ್ರಮ ನಿರ್ವಹಿಸಿದರು.ಕು.ರಾಜೇಶ ವಂದಿಸಿದರು.
