ಕನ್ನಡದ ವಿಮರ್ಶಕ, ಪ್ರಖರ ಚಿಂತಕ ಡಿ. ಎಸ್. ನಾಗಭೂಷಣ ನಿಧನ ಹೊಂದಿದ್ದಾರೆ. ಬೆಂಗಳೂರು ಗ್ರಾಮಾಂತರ ಜಿಲ್ಲೆ ಹೊಸಕೋಟೆ ತಾಲ್ಲೂಕು ತಿಮ್ಮಸಂದ್ರದ ನಾಗಭೂಷಣ ಅವರು ಗಣಿಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದರು.
ಶಿವಮೊಗ್ಗ: ಕನ್ನಡದ ವಿಮರ್ಶಕ, ಪ್ರಖರ ಚಿಂತಕ ಡಿ. ಎಸ್. ನಾಗಭೂಷಣ ನಿಧನ ಹೊಂದಿದ್ದಾರೆ.
ಬೆಂಗಳೂರು ಗ್ರಾಮಾಂತರ ಜಿಲ್ಲೆ ಹೊಸಕೋಟೆ ತಾಲ್ಲೂಕು ತಿಮ್ಮಸಂದ್ರದ ನಾಗಭೂಷಣ ಅವರು ಗಣಿಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದರು. ಆಕಾಶವಾಣಿಯ ವಿವಿಧ ಹುದ್ದೆಗಳಲ್ಲಿ 30 ವರ್ಷ ಕಾರ್ಯ ನಿರ್ವಹಿಸಿದ್ದರು. ಸ್ವಯಂ ನಿವೃತ್ತಿ ಪಡೆದ ನಂತರ ಶಿವಮೊಗ್ಗದ ಕಲ್ಲಹಳ್ಳಿಯಲ್ಲಿ ನೆಲೆಸಿದ್ದರು.
ಸಾಹಿತ್ಯ ವಿಮರ್ಶೆ, ಸಮಾಜವಾದಿ ಚಿಂತನೆ ಅವರ ಆಸಕ್ತಿಯ ಕ್ಷೇತ್ರಗಳು. ಗಮನ, ಅನೇಕ, ಈ ಭೂಮಿಯಿಂದ ಈ ಆಕಾಶದವರೆಗೆ, ಕುವೆಂಪು ಸಾಹಿತ್ಯ ದರ್ಶನ, ಲೋಹಿಯಾ ಸಮಾಜವಾದದ ದರ್ಶನ, ಬೇರು ಬಿಳಿಲು, ಇದು ಭಾರತ ಇದು ಭಾರತ, ಇಲ್ಲಿ ಯಾವುದೂ ಮುಖ್ಯವಲ್ಲ ಕನ್ನಡ–ಕರ್ನಾಟಕದ ಕಥಾ ಸಂಕಲನಗಳು ಅವರ ಪ್ರಮುಖ ಕೃತಿಗಳು.
ಅವರ ‘ಗಾಂಧಿ ಕಥನ ಕೃತಿ’ ಈಚೆಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿಗೆ ಪುರಸ್ಕೃತವಾಗಿತ್ತು. ಕೆ.ರಾಮದಾಸ್, ಕಡಿದಾಳು ಶಾಮಣ್ಣ ಸೇರಿದಂತೆ ಹಲವರ ಅಭಿನಂದನಾ ಗ್ರಂಥ ಹೊರತಂದಿದ್ದಾರೆ. ರಸಿಕ ರುದ್ರ ತಪಸ್ವಿ ಲೋಹಿಯಾ, ಸಮಾಜವಾದದ ಸಾಲುದೀಪಗಳು ಸೇರಿದಂತೆ ಹಲವು ಕೃತಿಗಳನ್ನು ಸಂಪಾದಿಸಿದ್ದಾರೆ.
ಅವರ ಸಂಪಾದಕತ್ವದಲ್ಲಿ ಸಮಾಜವಾದಿ ಮಾಸಿಕ ‘ಹೊಸ ಮನುಷ್ಯ’ ಪ್ರಕಟಗೊಳ್ಳುತ್ತಿತ್ತು. ಲೋಹಿಯಾ ಜನ್ಮಶತಾಬ್ಧಿ ಪ್ರತಿಷ್ಠಾನದ ಅಧ್ಯಕ್ಷರಾಗಿ ಸಮಾಜವಾದಿ ಚಿಂತನೆಯ ಹಲವು ಕಾರ್ಯಾಗಾರಗಳನ್ನು ಆಯೋಜಿಸಿದ್ದರು. ಅವರಿಗೆ ಪತ್ನಿ, ಕವಯತ್ರಿ ಸವಿತಾ ನಾಗಭೂಷಣ ಇದ್ದಾರೆ. ಮೃತರ ಅಂತ್ಯ ಸಂಸ್ಕಾರ ಗುರುವಾರ ಸಂಜೆ 4ಕ್ಕೆ ಶಿವಮೊಗ್ಗದ ರೋಟರಿ ಚಿತಾಗಾರದಲ್ಲಿ ನೆರವೇರಲಿದೆ.
ರಾಜಕೀಯ ಗ್ರಹಿಕೆ ಮಾತ್ರವಲ್ಲ ಸಾಹಿತ್ಯ ಕೃತಿಗಳ ಸೂಕ್ಷ್ಮ ಓದುಗರಾಗಿದ್ದ ಇವರು ಎಂಥ ಅನಾರೋಗ್ಯದಲ್ಲಿಯೂ ‘ಹೊಸ ಮನುಷ್ಯ’ ಪತ್ರಿಕೆಯನ್ನು ನಿರಂತರವಾಗಿ ಹೊರತಂದಿದ್ದು ಅವರ ಬದ್ಧತೆಗೆ ಸಾಕ್ಷಿ. ಸಮಕಾಲೀನ ಚಿಂತನೆಗಳಿಗೆ ಸಂಬಂಧಿಸಿದ ಯಾವುದೇ ಗಂಭೀರ ವಿಷಯವನ್ನೂ ಕನ್ನಡದ ಜನರಿಗೆ ಓದಿಸಲೇಬೇಕು ಎಂದು ಹಟ ತೊಟ್ಟು ಅನುವಾದ ಮಾಡಿಸುತ್ತಿದ್ದರು. (kpc)