

ಉತ್ತರ ಕನ್ನಡ ಜಿಲ್ಲೆಯಾದ್ಯಂತ ಕಳೆದ ಎರಡು ದಿವಸಗಳಿಂದ ಭರ್ಜರಿ ಮಳೆ ಸುರಿಯುತ್ತಿದೆ. ಮುಂಗಾರು ಮಳೆ ಜನಜೀವನ ಅಸ್ತವ್ಯಸ್ತಮಾಡುವ ಮೂಲಕ ಜನರನ್ನು ಚಿಂತೆಗೀಡು ಮಾಡಿದೆ. ಕಳೆದ ಮೂರ್ನಾಲ್ಕು ವರ್ಷಗಳಿಂದ ಜಿಲ್ಲೆಯ ಅಂಕೋಲಾ, ಹೊನ್ನಾವರ, ಸಿದ್ಧಾಪುರ ಶಿರಸಿಗಳಲ್ಲಿ ಮಳೆ,ಪ್ರವಾಹದಿಂದ ಅಪಾರ ತೊಂದರೆಗಳಾಗಿವೆ. ಮಳೆ ಬಂತೆಂದರೆ ಮೈಜುಮ್ಮೆನ್ನುವಂತೆ ಮಾಡಿರುವ ಪ್ರವಾಹ ಸಂತ್ರಸ್ತರನ್ನು ಆತಂಕಕ್ಕೀಡುಮಾಡಿದೆ.

೨೦೧೯-೨೦ ರಲ್ಲಿ ನಿರಂತರ ಸುರಿದ ಮಳೆಯಲ್ಲಿ ನೂರಾರು ಮನೆಗಳು ಕುಸಿದುಬಿದ್ದು ಜನ ಸಮಸ್ಯೆಗೆ ಸಿಲುಕಿದ್ದರು. ಅಲ್ಲಿಂದ ಮೂರು ವರ್ಷಗಳ ಈಚೆಗೆ ಪ್ರತಿವರ್ಷವೆಂಬಂತೆ ಮಳೆ ಸುರಿದು ಪ್ರವಾಹದ ತೊಂದರೆಗಳಾಗಿವೆ. ಆದರೆ ಪ್ರವಾಹ ಪೀಡಿತರಿಗೆ ನೆರವು ನೀಡುವ ವಿಚಾರದಲ್ಲಿ ಉತ್ತರ ಕನ್ನಡ ಜಿಲ್ಲಾಡಳಿತದ ತಾರತಮ್ಯ ನೀತಿ ಎದ್ದುಕಾಣುವಂತಾಗಿದೆ. ಶಿರಸಿಯ ಮೊಗವಳ್ಳಿ,ಸಿದ್ಧಾಪುರದ ಗುಂಜಗೋಡಿನ ಕೆಲವು ಮನೆಗಳಿಗೆ ಸಂತ್ರಸ್ತರಿಗೆ ೫ ಲಕ್ಷ ರೂಪಾಯಿಗಳ ವರೆಗೆ ಪರಿಹಾರ ನೀಡಿರುವ ಜಿಲ್ಲಾಡಳಿತ ಸಿದ್ಧಾಪುರದ ಹೆಮ್ಮನಬೈಲ್, ಅಕ್ಕುಂಜಿಗಳ ಸಂತ್ರಸ್ತರಿಗೆ ಈ ವರೆಗೆ ಒಂದು ಲಕ್ಷ ರೂಪಾಯಿ ಪರಿಹಾರವನ್ನೂ ನೀಡಿಲ್ಲ.

ಪ್ರತಿವರ್ಷ ಮಳೆಗಾಲದಲ್ಲಿ ತೊಂದರೆಗೆ ಸಿಲುಕುವ ಅಂಕೋಲಾ,ಹೊನ್ನಾವರ,ಯಲ್ಲಾಪುರ, ಸಿದ್ದಾಪುರ ಶಿರಸಿ ತಾಲೂಕುಗಳ ಜನರು ಸರ್ಕಾರದ ತಾರತಮ್ಯ ನೀತಿ, ಆಡಳಿತಶಾಹಿಗಳ ನಿರ್ಲಕ್ಷಗಳಿಗೆ ಗುರಿಯಾಗುವಂತಾಗಿದೆ. ಈ ವರ್ಷ ಮೇ ತಿಂಗಳಲ್ಲೇ ಪ್ರಾರಂಭವಾಗಿರುವ ಮುಂಗಾರು ಮಳೆ ಜನರ ಆತಂಕ, ಅನುಮಾನಗಳನ್ನು ಹೆಚ್ಚಿಸಿದೆ.ಜಿಲ್ಲೆಯಲ್ಲಿ ಕಳೆದ ಮೂರು ವರ್ಷಗಳಿಂದ ನಿರಾಶ್ರಿತರಾದವರಿಗೆ ಪ್ರಕೃತಿ ವಿಕೋಪದಿಂದ ಬಾಧಿರಾದವರಿಗೆ ಮನೆ ನಿರ್ಮಾಣಕ್ಕೆ ಸಹಾಯಧನ ನೀಡಿಲ್ಲ. ಬಡವರು ನಿರ್ಗತಿಕರಿಗೆ ಆಶ್ರಯ ಮನೆಗಳು ಸಿಗದೆ ತೊಂದರೆಯಾಗಿದೆ. ರಾಜ್ಯದ ವಿಧಾನಸಭೆಯ ಅಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿಯವರ ಕ್ಷೇತ್ರದಲ್ಲಿ ಕಳೆದ ಮೂರು ವರ್ಷಗಳಿಂದ ವಸತಿ ಯೋಜನೆಗಳ ನೆರವು ಸಿಕ್ಕಿಲ್ಲ. ಪ್ರವಾಹದಿಂದ ಬಾಧಿತರಾದ ಅನೇಕರಿಗೆ ಸಿಗಬೇಕಾದ ೫ ಲಕ್ಷಗಳ ಪರಿಹಾರ ಧನದಲ್ಲಿ ಈವರೆಗೆ ಒಂದು ಲಕ್ಷ ರೂಪಾಯಿಗಳೂ ಕೈಗೆ ಸಿಕ್ಕಿಲ್ಲ. ಕಳೆದ ಮೂರ್ನಾಲ್ಕು ವರ್ಷಗಳ ಸ್ಥಿತಿ ಹೀಗಿರುವುದರಿಂದ ಸಹಜವಾಗಿ ಈ ವರ್ಷದ ಮಳೆ, ಪ್ರವಾಹದ ಭೀತಿ ಜನಸಾಮಾನ್ಯರನ್ನು ಕಂಗೆಡೆಸಿದೆ. ಮಳೆಗಾಲದ ಮೂರುತಿಂಗಳು ದುಡಿಮೆ, ಆದಾಯ ಇಲ್ಲದ ಜಿಲ್ಲೆಯ ಶ್ರಮಿಕರು ಸರ್ಕಾರದ ನಿರ್ಲಕ್ಷ, ತಾರತಮ್ಯ ನೀತಿಯಿಂದ ಕಂಗೆಟ್ಟಂತಿದ್ದಾರೆ. ಆಡಳಿತ ವ್ಯವಸ್ಥೆ, ಸರ್ಕಾರ ಇಂಥ ಆಪತ್ತಿನ ವೇಳೆಯಲ್ಲಿ ನೆರವಿಗೆ ಬಾರದಿದ್ದರೆ ಅಂಥ ಸರ್ಕಾರದಿಂದ ಜನರಿಗೆ ಏನು ಉಪಯೋಗ ಎನ್ನುವ ಪ್ರಶ್ನೆ ಎದ್ದಿದೆ.
ಈ ಬಗ್ಗೆ ಸಮಾಜಮುಖಿ ಡಾಟ್ ನೆಟ್ ಪ್ರತಿನಿಧಿ ಜೊತೆ ಮಾತನಾಡಿದ ಸೋವಿನಕೊಪ್ಪ ಗ್ರಾಮ ಪಂಚಾಯತ್ ಅಧ್ಯಕ್ಷ ಮೋಹನ ಗೌಡ ಈಗಿನ ಸರ್ಕಾರ ಅಭಿವೃದ್ಧಿಯ ಬಗ್ಗೆ ಪ್ರಚಾರ ಮಾಡುತ್ತಿದೆ. ಆದರೆ ಕಳೆದ ಮೂರುವರ್ಷಗಳಿಂದ ಗ್ರಾಮೀಣ ಬಡ ಜನರಿಗೆ ನೀಡುವ ಸೌಲಭ್ಯಗಳನ್ನೇ ನೀಡಿಲ್ಲ ನಮ್ಮ ಗ್ರಾ.ಪಂ.ವ್ಯಾಪ್ತಿ, ತಾಲೂಕು, ಕ್ಷೇತ್ರ ಜಿಲ್ಲೆಗಳಲ್ಲಿ ಪ್ರವಾಹ ಪೀಡಿತರಿಗೆ ನೀಡಬೇಕಾದ ಪರಿಹಾರ ಧನ, ವಸತಿ ಯೋಜನೆಯ ಸಹಾಯಧನಗಳನ್ನು ನೀಡಿಲ್ಲ ಭಾರತದ ಅಭಿವೃದ್ಧಿಯೆಂದರೆ ನಗರಗಳು,ಶ್ರೀಮಂತರಿಗೆ ಅನುಕೂಲ ಮಾಡುವುದಲ್ಲ ಗ್ರಾಮೀಣ ಪ್ರದೇಶಗಳ ಜನ ಜೀವನ,ಸಂರಚನೆ ಸುಧಾರಿಸಿದರೆ ಆ ವ್ಯವಸ್ಥೆ, ಸರ್ಕಾರಕ್ಕೆ ಗೌರವ ಎಂದಿದ್ದಾರೆ.
