

ಸಿದ್ದಾಪುರ ಕ್ಯಾದಗಿ ಪಂಚಾಯತ್ ಹೆಗ್ಗೇರಿ ಗ್ರಾ.ಪಂ. ಕೇಂದ್ರದಿಂದ ಕೂಗಳತೆಯ ದೂರದ ಗ್ರಾಮ ಆದರೆ ಆ ಊರಿಗೆ ಅಭಿವೃದ್ಧಿಯೇ ಶಾಪವಾಗಿ ಪರಿಣಮಿಸಿದೆ.
ಸಿದ್ಧಾಪುರ, ಉತ್ತರ ಕನ್ನಡ ಜಿಲ್ಲೆಗೆ ನಿಗದಿತ ಸಮಯಕ್ಕಿಂತ ಮೊದಲೇ ಕಾಲಿಟ್ಟಿರುವ ಮಳೆ ಹಲವು ತೊಂದರೆಗಳಿಗೆ ಕಾರಣವಾಗಿದೆ. ರೈತರ ಕೆಲಸಗಳಾಗದೆ, ಕಾರು ಭತ್ತ ಮನೆ ಸೇರದೆ ರೈತರು ಚಿಂತೆಗೀಡಾಗಿರುವ ನಡುವೆ ಅಲ್ಲಲ್ಲಿ ನಿಗದಿತ ಸಮಯದಲ್ಲಿ ಪೂರ್ಣಗೊಳ್ಳದ ಕಾಮಗಾರಿಗಳಿಂದ ಜನರು ಗೋಳಾಡುವಂತಾಗಿದೆ.
ಕ್ಯಾದಗಿ ಗ್ರಾಮ ಪಂಚಾಯತ್ ಬೇಗಾರಿನಲ್ಲಿ ಕಾಲು ಸೇತುವೆ ನೆಲಕ್ಕುರುಳಿದ್ದು ಆ ಬಗ್ಗೆ ಸಂಬಂಧಿಸಿದವರು ಗಮನ ಹರಿಸಿಲ್ಲ. ಕಳೆದ ಮಳೆಗಾಲದಲ್ಲಿ ಪ್ರವಾಹಕ್ಕೆ ಕೊಚ್ಚಿಹೋದ ಸಣ್ಣ ಸೇತುವೆ ಆಶ್ರಯಿಸಿದ್ದ ಜನರಿಗೆ ಈ ವರ್ಷದ ಮಳೆಗಾಲ ಶಾಪವಾಗಲಿದೆ.
ಕ್ಯಾದಗಿ ಗ್ರಾಮ ಪಂಚಾಯತ್ ಅಗಸರ ಹೊಳೆಗೆ ಸೇತುವೆ ನಿರ್ಮಿಸಿ ಕ್ಯಾದಗಿ ಮತ್ತು ಹೆಗ್ಗೇರಿಗೆ ಸಂಪರ್ಕ ಸುಗಮಗೊಳಿಸುವ ಉದ್ದೇಶದಿಂದ ಪ್ರಾರಂಭವಾದ ಲೋಕೋಪಯೋಗಿ ಇಲಾಖೆಯ ೩೩ ಲಕ್ಷ ವೆಚ್ಚದ ಸೇತುವೆ ನಿರ್ಮಾಣ ಕಾಮಗಾರಿ ಮುಗಿಯದೆ ಹೆಗ್ಗೇರಿ ಜನರು ಸಂಪರ್ಕ ಕೊರತೆ ಅನುಸರಿಸುತಿದ್ದಾರೆ. ಕಳೆದ ಮೂರು ತಿಂಗಳ ಹಿಂದೆ ವಿಳಂವಾಗೇ ಪ್ರಾರಂಭವಾದ ಕಾಮಗಾರಿ ಮುಗಿಯದೆ ಸ್ಥಳಿಯರಿಗೆ ವಾಹನ ಸಾಗಾಟಕ್ಕೆ ತೊಂದರೆ ಆಗಿದೆ. ಸ್ಥಳಿಯ ಗ್ರಾಮ ಪಂಚಾಯತ್ ಆಟಕ್ಕುಂಟು ಲೆಕ್ಕಕ್ಕಿಲ್ಲ, ತಾಲೂಕಾ ಪಂಚಾಯತ್ ಮತ್ತು ಜಿ.ಪಂ. ಗಳಿಗೆ ಪ್ರತಿನಿಧಿಗಳೇ ಇಲ್ಲ, ಶಾಸಕ- ಸಂಸದರಂತೂ ಅಪರೂಪವಾಗಿದ್ದಾರೆ ಎನ್ನುವ ಸ್ಥಳೀಯರು ಈ ಕಾಮಗಾರಿ ವಿಳಂಬದಿಂದ ತಮ್ಮ ಸಂಪರ್ಕ ವ್ಯವಸ್ಥೆ ಸ್ಥಗಿತವಾಗಿದೆ ಎಂದು ದೂರಿದ್ದಾರೆ.
ಈ ಬಗ್ಗೆ ಸಮಾಜಮುಖಿ ಡಾಟ್ ನೆಟ್ ಪ್ರತಿನಿಧಿಗೆ ಮಾಹಿತಿ ನೀಡಿದ ಇಲಾಖೆಯ ಮೂಲಗಳು ಈ ಕಾಮಗಾರಿ ವಿಳಂಬಕ್ಕೆ ಗುತ್ತಿಗೆದಾರರ ಅಸಹಕಾರ ಕಾರಣ ಸದ್ಯದಲ್ಲೇ ಸೂಕ್ತ ವ್ಯವಸ್ಥೆಗೆ ಪ್ರಯತಿಸುತ್ತೇವೆ ಎಂದು ಭರವಸೆ ನೀಡಿದ್ದಾರೆ.


