

ಪರಿಷತ್ ಚುನಾವಣೆಗೆ ಬಿಜೆಪಿ ಅಭ್ಯರ್ಥಿಗಳ ಲಿಸ್ಟ್ ಫೈನಲ್: ವಿಜಯೇಂದ್ರಗೆ ಹೈಕಮಾಂಡ್ ಬಿಗ್ ಶಾಕ್; ಲಕ್ಷ್ಮಣ ಸವದಿಗೆ ಲಕ್!
ವಿಧಾನ ಪರಿಷತ್ ಚುನಾವಣೆಗೆ ಬಿಜೆಪಿ ತನ್ನ ಅಭ್ಯರ್ಥಿಗಳ ಪಟ್ಟಿಯನ್ನು ಅಧಿಕೃತವಾಗಿ ಪ್ರಕಟಿಸಿದೆ. ಮಾಜಿ ಉಪ ಮುಖ್ಯಮಂತ್ರಿ ಲಕ್ಷ್ಮಣ ಸವದಿಗೆ ಲಿಂಗಾಯತರ ಕೋಟದಡಿಯಲ್ಲಿ ಪರಿಷತ್ ಟಿಕೆಟ್ ದೊರೆತಿದೆ.

ಬೆಂಗಳೂರು: ವಿಧಾನ ಪರಿಷತ್ ಚುನಾವಣೆಗೆ ಬಿಜೆಪಿ ತನ್ನ ಅಭ್ಯರ್ಥಿಗಳ ಪಟ್ಟಿಯನ್ನು ಅಧಿಕೃತವಾಗಿ ಪ್ರಕಟಿಸಿದೆ. ಮಾಜಿ ಉಪ ಮುಖ್ಯಮಂತ್ರಿ ಲಕ್ಷ್ಮಣ ಸವದಿಗೆ ಲಿಂಗಾಯತರ ಕೋಟದಡಿಯಲ್ಲಿ ಪರಿಷತ್ ಟಿಕೆಟ್ ದೊರೆತಿದೆ.
ಮಹಿಳಾ ಕೋಟದಡಿಯಲ್ಲಿ ಕೊಪ್ಪಳ ಮೂಲದ ಲಂಬಾಣಿ ಸಮುದಾಯದ ಹೇಮಲತಾ ನಾಯಕ್, ಹಿಂದುಳಿದ ವರ್ಗ ಕೋಟಾದಲ್ಲಿ ಪಕ್ಷದ ಕಚೇರಿ ಕಾರ್ಯದರ್ಶಿಯಾಗಿದ್ದ ಕೇಶವ ಪ್ರಸಾದ್, ದಲಿತರ ಕೋಟದಲ್ಲಿ ಎಸ್ಸಿ ಘಟಕದ ರಾಜ್ಯಾಧ್ಯಕ್ಷ ಛಲವಾದಿ ನಾರಾಯಣಸ್ವಾಮಿ ಅವರಿಗೆ ಟಿಕೆಟ್ ನೀಡಲಾಗಿದೆ.
ಇದೇ ವೇಳೆ ವಿಧಾನ ಪರಿಷತ್‌ನ ಪಶ್ಚಿಮ ಶಿಕ್ಷಕರ ಕ್ಷೇತ್ರಕ್ಕೆ ಬಿಜೆಪಿ ತನ್ನ ಅಭ್ಯರ್ಥಿಯನ್ನು ಪ್ರಕಟಿಸಿದ್ದು, ಮಾಜಿ ಸಭಾಪತಿ ಬಸವರಾಜ್ ಹೊರಟ್ಟಿಗೆ ಟಿಕೆಟ್ ನೀಡಲಾಗಿದೆ. ಇತ್ತೀಚೆಗೆ ಜೆಡಿಎಸ್ ತೊರೆದು ಬಿಜೆಪಿ ಸೇರಿದ್ದ ಹೊರಟ್ಟಿ ಅವರಿಗೆ ಹೈಕಮಾಂಡ್ ನೀಡಿದ ಭರವಸೆಯಂತೆ ಟಿಕೆಟ್ ದೊರಕಿದೆ.
ಪ್ರಧಾನಿ ನರೇಂದ್ರ ಮೋದಿ ಯಾವುದೇ ಕಾರಣಕ್ಕೂ ಕುಟುಂಬ ರಾಜಕಾರಣಕ್ಕೆ ಮನ್ನಣೆ ನೀಡುವುದಿಲ್ಲ ಎಂಬುದನ್ನು ಮೇ 20ರಂದೇ ಸುಳಿವು ನೀಡಿದ್ದರು. ಆದರೆ ಇದು ಯಾವುದರ ಪರಿವೇ ಇಲ್ಲದೆ ರಾಜ್ಯ ನಾಯಕರು ಬಿಎಸ್‌ವೈ ಪುತ್ರನಿಗೆ ರಾಜಕೀಯ ಭವಿಷ್ಯ ಕಲ್ಪಿಸಲು ತೆರೆ ಮರೆಯ ಕಸರತ್ತನ್ನು ಮುಂದುವರಿಸಿದ್ದರು. ವಿಧಾನ ಪರಿಷತ್‌ಗೆ ಬಿಜೆಪಿ ಅಭ್ಯರ್ಥಿಗಳ ಪಟ್ಟಿಯನ್ನು ಹೈಕಮಾಂಡ್ ಘೋಷಿಸಿದೆ. ಪರಿಷತ್ ಪ್ರವೇಶ ಪಡೆದು ಸಂಪುಟದಲ್ಲಿ ಅವಕಾಶ ಗಿಟ್ಟಿಸಿಕೊಳ್ಳಬೇಕೆಂಬ ಬಿ.ವೈ.ವಿಜಯೇಂದ್ರ ಅವರ ಕನಸು ನುಚ್ಚುನೂರಾಗಿದೆ.
