

ಕೆಲವು ಮಾಧ್ಯಮಗಳು,ಮಾಧ್ಯಮ ಪ್ರತಿನಿಧಿಗಳು ಬಿ.ಜೆ.ಪಿ. ಪರವಾಗಿ ವಕ್ತಾರಿಕೆ ಮಾಡುತ್ತಿವೆ ಎಂದು ಬೇಸರಿಸಿದ ರಾಜ್ಯ ವಿಧಾನಸಭೆಯ ವಿರೋಧ ಪಕ್ಷದ ನಾಯಕ ಸಿದ್ಧರಾಮಯ್ಯ ಬಿ.ಜೆ.ಪಿ.ಯವರು ಹಾಗೆಂದರು, ಹೀಗೆಂದರು ಎನ್ನುವುದರ ಬದಲು ಮಾಧ್ಯಮ ಪ್ರತಿನಿಧಿಗಳು ರಾಜ್ಯದ ಒಳಿತು ಕೆಡುಕಿನ ಬಗ್ಗೆ ಚರ್ಚಿಸಬೇಕು ಎಂದು ತಿಳಿ ಹೇಳಿದ್ದಾರೆ.

ಉತ್ತರ ಕನ್ನಡ ಜಿಲ್ಲೆ ಶಿರಸಿಯಲ್ಲಿ ನಡೆದ ಖಾಸಗಿ ಹೋಟೆಲ್ ಉದ್ಘಾಟನಾ ಸಮಾರಂಭದಲ್ಲಿ ಪಾಲ್ಗೊಂಡ ನಂತರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಸಿದ್ಧರಾಮಯ್ಯ ಮಕ್ಕಳಿಗೆ ಪ್ರೇರಣೆ ನೀಡುವ ಉತ್ತಮ ವ್ಯಕ್ತಿಗಳಾಗುವ ಮಾದರಿ ವ್ಯಕ್ತಿತ್ವಗಳನ್ನು ಪರಿಚಯಿಸಬೇಕು. ಬಿ.ಜೆ.ಪಿ.ಯವರಿಗೆ ಆರೋಪಿಸುವುದು, ಸುಳ್ಳು ಹೇಳುವುದು ಬಿಟ್ಟರೆ ಬೇರೆ ಕೆಲಸವಿಲ್ಲ. ಮಾಧ್ಯಮಗಳೂ ಬಿ.ಜೆ.ಪಿ.ಯ ವಕ್ತಾರಿಕೆ ಮಾಡುವುದರಲ್ಲಿ ಯಾವ ಪುರುಷಾರ್ಥವಿದೆ. ರಾಜ್ಯದ ಆಗು ಹೋಗುಗಳ ಬಗ್ಗೆ ಚರ್ಚಿಸಬೇಕಾದ ಕೆಲವು ಮಾಧ್ಯಮಗಳು ಬಿ.ಜೆ.ಪಿ. ಪರವಾಗಿ ವಕಾಲತ್ತು ವಹಿಸುತ್ತಾ ವಕ್ತಾರಿಕೆ ಮಾಡುತ್ತಿವೆ ಇದು ಉತ್ತಮ ಸಮಾಜದ ಗುಣಲಕ್ಷಣವಲ್ಲ ಎಂದರು.

ಶಿರಸಿ ಪತ್ರಕರ್ತರು ಆರೆಸ್ಸೆಸ್ ಮೈಂಡಾ ದೇಶಪಾಂಡೆ….. ಮಾಧ್ಯಮಗೋಷ್ಠಿಯಲ್ಲಿ ದೇಶ,ರಾಜ್ಯದ ವಿದ್ಯಮಾನ, ಪ್ರಸ್ತುತ ವಿದ್ಯಮಾನಗಳಿಗಿಂತ ಹೆಚ್ಚಾಗಿ ಮಂದಿರ, ಮಸೀದಿಗಳ ಬಗ್ಗೆ ಕೆಲವು ಪತ್ರಕರ್ತರು ಸಿದ್ಧರಾಮಯ್ಯ ನವರನ್ನು ಪ್ರಶ್ನಿಸಿದರು. ಈ ಬಗ್ಗೆ ಅಸಮಾಧಾನದಿಂದಲೇ ಪ್ರತಿಕ್ರೀಯಿಸಿದ ಸಿದ್ಧರಾಮಯ್ಯ ಮಾಧ್ಯಮಗೋಷ್ಠಿ ಮೊಟಕುಗೊಳಿಸಿ ತೆರಳುವ ಸಂದರ್ಭದಲ್ಲಿ ಮಾಜಿ ಸಚಿವ ದೇಶಪಾಂಡೆಯವರನ್ನು ಉದ್ದೇಶಿಸಿ ಇದೇನು ದೇಶಪಾಂಡೆ ಶಿರಸಿಯ ಪತ್ರಕರ್ತರು ಆರೆಸ್ಸೆಸ್ ಮೈಂಡಾ ಎಂದರು. ಹೌದು ಎಂಬಂತೆ ದೇಶಪಾಂಡೆ ನಕ್ಕು ಸುಮ್ಮನಾದರು.
