

ಕರ್ನಾಟಕ ಸರ್ಕಾರ ನಾಚಿಕೆ ಇಲ್ಲದೇ ಪಠ್ಯ ಪುಸ್ತಕ ಪರಿಷ್ಕರಣೆ ಸಮಿತಿಯನ್ನು ಮತ್ತು ಅದು ಮಾಡಿದ ಪರಿಷ್ಕರಣಾ ಪಠ್ಯ ಕ್ರಮಗಳನ್ನು ಕೈ ಬಿಡದೇ ಮುಂದುವರೆಸುತ್ತಿದೆ. ಕೂಡಲೇ ಇದನ್ನು ರದ್ದುಪಡಿಸಬೇಕೆಂದು ಭಾರತ ಕಮ್ಯುನಿಸ್ಟ್ ಪಕ್ಷ ಒತ್ತಾಯಿಸಿದೆ.
ಬೆಂಗಳೂರು: ಪರಿಷ್ಕರಿಸಿದ ಪಠ್ಯ ಕ್ರಮಗಳನ್ನು ಹಾಗೂ ಪಠ್ಯ ಪುಸ್ತಕ ಪರಿಷ್ಕರಣೆ ಸಮಿತಿಯನ್ನು ಈ ಕೂಡಲೇ ರದ್ದುಪಡಿಸಬೇಕೆಂದು ಭಾರತ ಕಮ್ಯುನಿಸ್ಟ್ ಪಕ್ಷ ( ಮಾರ್ಕ್ಸ್ವಾದಿ) ಕರ್ನಾಟಕ ರಾಜ್ಯ ಸಮಿತಿಗೆ ಒತ್ತಾಯಿಸಿದೆ.
ಈ ಸಂಬಂಧ ಮಾಧ್ಯಮ ಪ್ರಕಟಣೆ ಬಿಡುಗಡೆ ಮಾಡಿರುವ ಕಮ್ಯುನಿಸ್ಟ್ ಪಕ್ಷ, ನಾಡಿನ ಗಣ್ಯ ಸಾಹಿತಿಗಳು, ಪ್ರಗತಿಪರರು, ಸಂಘ ಸಂಸ್ಥೆಗಳು ರಾಜ್ಯಾದ್ಯಂತ ತೀವ್ರ ಪ್ರತಿರೋಧ ವ್ಯಕ್ತಪಡಿಸುತ್ತಿದ್ದರೂ, ಕರ್ನಾಟಕ ಸರ್ಕಾರ ನಾಚಿಕೆ ಇಲ್ಲದೇ ಪಠ್ಯ ಪುಸ್ತಕ ಪರಿಷ್ಕರಣೆ ಸಮಿತಿಯನ್ನು ಮತ್ತು ಅದು ಮಾಡಿದ ಪರಿಷ್ಕರಣಾ ಪಠ್ಯ ಕ್ರಮಗಳನ್ನು ಕೈ ಬಿಡದೆ ಮುಂದುವರೆಸುತ್ತಿದೆ. ಕೂಡಲೇ ಇದನ್ನು ರದ್ದುಪಡಿಸಬೇಕೆಂದು ಒತ್ತಾಯಿಸಿದೆ.
ಮೊದಲ ಜ್ಞಾನಪೀಠ ಪ್ರಶಸ್ತಿ ಪಡೆದ, ನಾಡಿನ ಗಣ್ಯರಾದ ಡಾ. ಕುವೆಂಪು ಕುರಿತಂತೆ ಮತ್ತು ಅವರ ನಾಡಗೀತೆಯ ಕುರಿತಂತೆ ನಿಂದನೆ ಹಾಗೂ ಅಪಮಾನ ಮಾಡುವುದೆಂದರೆ ನಾಡಿಗೆ ಅಪಮಾನ ಮಾಡಿದಂತೆ, ಇಂತಹವರನ್ನು ಪಠ್ಯ ಪುಸ್ತಕ ಪರಿಷ್ಕರಣೆ ಸಮಿತಿಯ ಅಧ್ಯಕ್ಷರನ್ನಾಗಿಸುವುದು ಮತ್ತು ನಿಂದಿಸಿದವರ ಮೇಲೆ ಯಾವುದೇ ಕಾನೂನು ಕ್ರಮ ತೆಗೆದುಕೊಳ್ಳದಿರುವುದು ದುರಾದೃಷ್ಟಕರ.
ರಾಜ್ಯ ಬಿಜೆಪಿ ಪಕ್ಷ, ಪಠ್ಯ- ಪುಸ್ತಕ ಪರಿಷ್ಕರಣ ಸಮಿತಿಗೆ ಮತ್ತು ಪಠ್ಯಕ್ರಮಕ್ಕೆ ಬೆಂಬಲ ವ್ಯಕ್ತಪಡಿಸಿರುವುದು ನಾಡಿನ ಗಣ್ಯರನ್ನು ದುರುದ್ದೇಶದಿಂದಲೇ ಅಪಮಾನ ಮಾಡಲಾಗಿದೆ ಎಂಬುದನ್ನ ತೋರಿಸುತ್ತದೆ ಎಂದು ಸಿಪಿಐಎಂ ತೀವ್ರ ಪ್ರತಿರೋಧ ವ್ಯಕ್ತಪಡಿಸಿದೆ.
ರೈತ ನಾಯಕರ ಮೇಲಿನ ದಾಳಿ ಖಂಡನೆ: ಬೆಂಗಳೂರಿನ ಗಾಂಧಿ ಭವನದಲ್ಲಿ ಸುದ್ದಿಗೋಷ್ಠಿಗೆ ಮುಂದಾಗುತ್ತಿದ್ದ ಸಂಯುಕ್ತ ಕಿಸಾನ್ ಮೋರ್ಚಾದ ಪ್ರಮುಖ ನಾಯಕರಾದ ರಾಕೇಶ್ ಸಿಂಗ್ ಟಿಕಾಯತ್ ಹಾಗೂ ಯಧುವೀರ ಸಿಂಗ್ ಮುಂತಾದವರ ಮೇಲೆ ಕೆಲ ಬಿಜೆಪಿ ಹಾಗೂ ಆರ್ಎಸ್ಎಸ್ ಮೂಲದ ಗುಂಡಾಗಳು ದಾಳಿ ನಡೆಸಿ, ಹಲ್ಲೆ ಮಾಡಿರುವುದನ್ನು ಸಿಪಿಐಎಂ ಕರ್ನಾಟಕ ರಾಜ್ಯ ಸಮಿತಿ ಬಲವಾಗಿ ಖಂಡಿಸಿದ್ದು, ಕೂಡಲೇ ದಾಳಿಯಲ್ಲಿ ತೊಡಗಿದ ಗುಂಡಾಗಳನ್ನು ಬಂಧಿಸಿ, ಕಾನೂನು ಕ್ರಮ ಕೈಗೊಳ್ಳಲು ಒತ್ತಾಯಿಸಿದೆ. (etbk)
