


ಮೂಲ ಸೌಕರ್ಯಗಳಿಂದ ವಂಚಿತ ಕುಮಟಾದ ಮೇದಿನಿ ಗ್ರಾಮ.. ಸೂಕ್ತ ರಸ್ತೆಗೆ ಗ್ರಾಮಸ್ಥರ ಮನವಿ
ಕುಮಟಾ ತಾಲೂಕಿನ ಮೇದಿನಿ ಗ್ರಾಮ ಮೂಲ ಸೌಕರ್ಯಗಳಿಂದ ವಂಚಿತವಾಗಿದ್ದು, ನಮಗೆ ಅತಿ ಅಗತ್ಯವಿರುವ ರಸ್ತೆ ನಿರ್ಮಿಸಿಕೊಡಿ ಎಂದು ಸ್ಥಳಿಯರು ಮನವಿ ಮಾಡಿದ್ದಾರೆ.

ಕಾರವಾರ(ಉತ್ತರಕನ್ನಡ): ಜಿಲ್ಲೆಯ ಕುಮಟಾ ತಾಲೂಕಿನ ಮೇದಿನಿ ಗ್ರಾಮ ಮೂಲ ಸೌಕರ್ಯಗಳಿಂದ ವಂಚಿತವಾಗಿದೆ. ಕುಮಟಾ – ಸಿದ್ದಾಪುರ ಮುಖ್ಯ ರಸ್ತೆಯಿಂದ ಕೇವಲ 8 ಕಿ.ಮೀ ದೂರದಲ್ಲಿರುವ ಈ ಗ್ರಾಮಕ್ಕೆ ಸೂಕ್ತ ರಸ್ತೆ ಇಲ್ಲದ ಕಾರಣ ಅನಾರೋಗ್ಯಕ್ಕೆ ಒಳಗಾದವರನ್ನು ಒಳಗೊಂಡಂತೆ ಮನೆಗೆ ಬೇಕಾದ ಅಗತ್ಯ ವಸ್ತುಗಳನ್ನು ತಲೆಯ ಮೇಲೆಯೇ ಹೊತ್ತು ನಡೆಯಬೆಕಾದ ಪರಿಸ್ಥಿತಿ ಇದೆ.
ರಸ್ತೆ ಸಮಸ್ಯೆ ಕಾರಣಕ್ಕೆ ಗ್ರಾಮದ ಬಹುತೇಕ ಮಕ್ಕಳು ಅರ್ಧಕ್ಕೆ ಶಿಕ್ಷಣ ಮೊಟಕುಗೊಳಿಸುತ್ತಿದ್ದಾರೆ. ಈ ಎಲ್ಲ ಸಮಸ್ಯೆಗಳಿಂದ ಬೇಸತ್ತು ಹೋರಾಟ ನಡೆಸಿದ ಹಿನ್ನೆಲೆ, 2019ರಲ್ಲಿ ಅಂದಿನ ಜಿಲ್ಲಾಧಿಕಾರಿ ಹರೀಶ್ ಕುಮಾರ್ ಗ್ರಾಮ ವಾಸ್ತವ್ಯ ನಡೆಸಿ ಸ್ಥಳೀಯರ ಸಮಸ್ಯೆ ಆಲಿಸಿದ್ದರಾದರೂ ಕೂಡ ಯಾವುದೇ ಪ್ರಯೋಜನವಾಗಿರಲಿಲ್ಲ. ಪಿಂಚಣಿ, ಶಾಲೆಗೆ ಸುಣ್ಣ ಬಣ್ಣ ಹೀಗೆ ಸಣ್ಣಪುಟ್ಟ ಸಮಸ್ಯೆಗಳು ಮಾತ್ರ ಬಗೆಹರಿದಿತ್ತು.
ಮೇದಿನಿ ಗ್ರಾಮದ ರಸ್ತೆ ಸಮಸ್ಯೆ!
ಈ ಬಾರಿ ಮತ್ತೆ ಈಗಿನ ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ತೆರಳಿ ಗ್ರಾಮಸ್ಥರ ಸಮಸ್ಯೆ ಆಲಿಸಿದ್ದರು. ಒಂದಿಷ್ಟು ಸಮಸ್ಯೆಗಳಿಗೆ ಮುಕ್ತಿ ದೊರಕಿಸಿದ್ದರು. ಅಲ್ಲದೇ ಮೂಲ ಸಮಸ್ಯೆಯಾಗಿರುವ ರಸ್ತೆ ಹಾಗೂ ವಿದ್ಯುತ್ ಸಮಸ್ಯೆ ಬಗೆಹರಿಸುವ ನಿಟ್ಟಿನಲ್ಲಿ ಪ್ರಾಮಾಣಿಕ ಪ್ರಯತ್ನ ನಡೆಸುವುದಾಗಿ ಭರವಸೆ ನೀಡಿದ್ದರು. ಆದರೆ, ಇದೀಗ ಮಳೆಗಾಲ ಆರಂಭವಾಗುತ್ತಿದ್ದು, ಈವರೆಗೂ ಯಾವುದೇ ಯೋಜನೆ ಜಾರಿಯಾಗಿಲ್ಲ. ಸರ್ಕಾರ, ಜನಪ್ರತಿನಿಧಿಗಳು, ಅಧಿಕಾರಿಗಳು ಈ ಬಗ್ಗೆ ಗಮನ ಹರಿಸಿ ನಮಗೆ ಅತಿ ಅಗತ್ಯವಿರುವ ರಸ್ತೆ ನಿರ್ಮಿಸಿಕೊಡಿ ಎಂದು ಸ್ಥಳಿಯರು ಮನವಿ ಮಾಡಿದ್ದಾರೆ.
ಗ್ರಾಮದಲ್ಲಿ ಸುಮಾರು 56 ಮನೆಗಳಿದ್ದು ಬಹುತೇಕರು ರೈತರಾಗಿದ್ದಾರೆ. ಹೆಚ್ಚಿನವರಲ್ಲಿ ಸ್ವಂತ ಗಾಡಿಯೂ ಇಲ್ಲ. ಮಳೆಗಾಲದಲ್ಲೂ ನಡೆದೇ ಸಾಗಬೇಕು. ಅದೇಷ್ಟೋ ಮನೆಗಳಲ್ಲಿ ಸಂಬಂಧ ಬೆಳೆಸಲು ಯಾರೂ ಮುಂದೆ ಬಾರದ ಹಿನ್ನೆಲೆಯಲ್ಲಿ ಮದುವೆಗೆ ಬಂದ ಮಕ್ಕಳ ಮದುವೆ ಮಾಡಲಾಗದ ಪರಿಸ್ಥಿತಿ ಇದೆ.
ಗ್ರಾಮ 7 ಕಿ.ಮೀ ವಿಸ್ತಾರದಲ್ಲಿದ್ದರೂ ತುರ್ತಾಗಿ 3 ಕಿ.ಮೀ ರಸ್ತೆ ನಿರ್ಮಾಣ ಮಾಡಿದರೆ ಗ್ರಾಮಸ್ಥರು ಸುಲಭವಾಗಿ ಸಂಚಾರ ಮಾಡಲು ಸಾಧ್ಯವಿದೆ. ಇಷ್ಟಾದರೂ ಜನಪ್ರತಿನಿಧಿಗಳು ಅನುದಾನ ಮಂಜೂರು ಮಾಡಿಸಲು ಮುಂದಾಗುತ್ತಿಲ್ಲ ಎನ್ನುವುದು ಗ್ರಾಮಸ್ಥರ ಅಸಮಾಧಾನ. ಈ ಬಗ್ಗೆ ಸ್ಥಳೀಯ ಶಾಸಕರಾದ ದಿನಕರ ಶೆಟ್ಟಿ ಬಳಿ ಕೇಳಿದ್ರೆ, ಗ್ರಾಮ ಅರಣ್ಯ ಪ್ರದೇಶದಲ್ಲಿದ್ದು ಈಗಾಗಲೇ ಸ್ವಲ್ಪ ಅನುದಾನ ನೀಡಿದ್ದೇನೆ. ಮುಂದೆ ಈ ಬಗ್ಗೆ ಪ್ರಯತ್ನ ನಡೆಸುವುದಾಗಿ ತಿಳಿಸಿದ್ದಾರೆ. (etbk)
_______________________________________________________________
ಮಾನ್ಯರೆ, ನಮ್ಮ ಮಾಧ್ಯಮ ಕ್ಷೇತ್ರದ ಸಮಾಜಮುಖಿ ನಡೆ ಈಗ ಕಾಲು ಶತಮಾನ ದಾಟಿದೆ. ಈ ಪಯಣದಲ್ಲಿ samajamukhi.net ನ್ಯೂಸ್ ಪೋರ್ಟಲ್ samaajamukhi & samajamukhinews ಯೂಟ್ಯೂಬ್ ಚಾನೆಲ್ ಗಳು ಹಾಗೂ ಸಮಾಜಮುಖಿ & samaajamukhi.net ಫೇಸ್ಬುಕ್ ಪೇಜ್ ಗಳು ಸೇರಿವೆ. ಈ ಎಲ್ಲಾ ಘಟಕಗಳ ನಿರ್ವಹಣೆ & ನಿರಂತರತೆಗೆ ನಿಮ್ಮ ಸಹಕಾರ ಮುಖ್ಯ. ನಮ್ಮ ಸುದ್ದಿ, ವಿಡಿಯೋ, ಸ್ಟೋರಿ ಗಳನ್ನು like, share ಹಾಗೂ subscribe ಮಾಡಿ ಸಹಕರಿಸುತ್ತಾ ನಮ್ಮ ಈ ಮಾಧ್ಯಮ ಸಮೂಹದ ಸಿದ್ಧಾಪುರ ಕೆನರಾ ಬ್ಯಾಂಕ್ ಖಾತೆ samajamukhi 03082200081658 ಅಕೌಂಟ್‌ಗೆ ಮತ್ತು ನಮ್ಮ gpay & phone pay Acc No 9740598884 ಗೆ ಆರ್ಥಿಕ ನೆರವು ನೀಡುತ್ತಾ ನಮ್ಮ ಜೊತೆಯಾಗಲು ಕಳಕಳಿಯ ವಿನಂತಿ…….. ಇಂತಿ ನಿಮ್ಮ Kannesh Kolsirsi
_______________________________________________________________
