

ಇಂದು ವಿಶ್ವ ಪರಿಸರ ದಿನ ಪರಿಸರ,ಅರಣ್ಯ ರಕ್ಷಣೆ ಬಗ್ಗೆ ಇಂದು ವ್ಯಕ್ತವಾಗುವ ಕಾಳಜಿ ಉಳಿದ ದಿಗಳಲ್ಲಿಅಪರೂಪ. ಆದರೆ ನೀವು ಇಲ್ಲೊಬ್ಬ ಅಪರೂಪದ ವ್ಯಕ್ತಿಯ ಬಗ್ಗೆ ಓದುತಿದ್ದೀರಿ ಇವರಿಗೆ ನಿತ್ಯವೂ ಪರಿಸರ ದಿನ. ಉತ್ತರ ಕನ್ನಡ ಜಿಲ್ಲೆಯ ಸಿದ್ಧಾಪುರದ ವಡ್ನಗದ್ದೆಯ ಗಣಪತಿ ಹೆಗಡೆ ವೃತ್ತಿಯಿಂದ ವಿದ್ಯುತ್ ಸಂಬಂಧಿ ಕೆಲಸ ಮಾಡುವ ಕೃಷಿಕ ಆದರೆ ಇವರ ಸಮಯ ಹೆಚ್ಚು ಬಳಕೆಯಾಗುವುದು ಪರಿಸರ ಸಂರಕ್ಷಣೆಗೆ.

ಕಳೆದ ಇಪ್ಪತ್ತಕ್ಕೂ ಹೆಚ್ಚು ವರ್ಷಗಳಿಂದ ಕಾಡಿನ ಬೀಜ ಬಿತ್ತುವ ಕೆಲಸ ಮಾಡುವ ಇವರು ಈ ವರೆಗೆ ಲಕ್ಷಾಂತರ ಬೀಜಗಳನ್ನು ಭೂಮಿಯಲ್ಲಿ ನೆಟ್ಟು ಸಾಕಿ,ಸಲಹುತಿದ್ದಾರೆ. ಹಾಗೆಂದು ಇವರು ಬಿತ್ತಿದ ಬೀಜಗಳು ಇವರ ಸ್ವಂತ ಆಸ್ತಿ-ಜಮೀನಿನಲ್ಲಿಲ್ಲ ಯಾಕೆಂದರೆ ಇವರು ಕಾಡಿನಲ್ಲಿ ಅಪರೂಪದ ಕಾಡು ಬೀಜಗಳನ್ನು ಸಂಗ್ರಹಿಸಿ ಅವುಗಳಿಗೆ ಅಗತ್ಯ ಸಂಸ್ಕಾರ ನೀಡಿ ಕಾಡಿನಲ್ಲಿ ಬಿತ್ತುತ್ತಾರೆ.
ಕಳೆದ ೨೦ ವರ್ಷಗಳಿಂದ ಇದನ್ನು ಹವ್ಯಾಸವಾಗಿಸಿಕೊಂಡಿರುವ ಗಣಪತಿ ಹೆಗಡೆ ಕಾಡಿನ ಮತ್ತಿ, ಆಲ, ಅಂಜೂರ, ನೇರಳೆ ಜೊತೆಗೆ ವಿನಾಶದ ಅಂಚಿನಲ್ಲಿರುವ ಸಸ್ಯಪ್ರಭೇದಗಳನ್ನು ರಕ್ಷಿಸುತಿದ್ದಾರೆ. ಸಾರ್ವಜನಿಕರು ಅರಣ್ಯ ಇಲಾಖೆಯ ನೆರವಿನೊಂದಿಗೆ ಬೀಜಬಿತ್ತನೆ, ಸಸಿ ವಿತರಣೆ ಮಾಡುವ ಹವ್ಯಾಸದ ಗಣಪತಿ ಹೆಗಡೆ ಪ್ರತಿವರ್ಷ ವಿಶ್ವಪರಿಸರ ದಿನವನ್ನು ಆಚರಿಸಿ ಬೀಜಬಿತ್ತನೆ ಮಾಡಿ ಸಾರ್ವಜನಿಕರಿಗೆ ಗಿಡ ವಿತರಿಸುತ್ತಾರೆ.
ಅಪರೂಪದ ಮರಗಳ ಕಷಿ ಗಿಡ ಮಾಡುವ ಅಭ್ಯಾಸದ ಇವರು ಅನೇಕ ಜಾತಿಯ ಕಷಿಗಿಡಗಳನ್ನು ಮಾಡಿ ವಿತರಿಸುತ್ತಾರೆ. ಕೋಲಾರ, ಬೆಂಗಳೂರು, ಚಿಂತಾಮಣಿ ಕಡೆ ಬೆಳೆಯುವ ದೊಡ್ಡ ನೇರಳೆ ಹಣ್ಣುಗಳನ್ನು ತಂದು ಸಸಿ ಬೆಳೆಸಿರುವ ಗಣಪತಿ ಅವುಗಳನ್ನು ಸಾರ್ವಜನಿಕರು ಮತ್ತು ಅರಣ್ಯ ಇಲಾಖೆಗೆ ನೀಡಿದ್ದಾರೆ.ಅಪರೂಪದ ಬೀಜ,ಸಸ್ಯಗಳನ್ನು ಕಾಪಾಡಿ ಪೋಶಿಸುವ ಇವರ ಕೆಲಸದಿಂದಾಗಿ ಮಲೆನಾಡಿನ ಕಷಿಮಾವಿನ ಗಿಡಗಳು, ಬಯಲುಸೀಮೆಯ ನೇರಳೆ,ಕರಾವಳಿ ಮಲೆನಾಡಿನ ನೈಸರ್ಗಿಕ ಹಣ್ಣಿನ ಗಿಡಗಳನ್ನು ಸಂರಕ್ಷಿಸಿದ್ದಾರೆ.
ರುದ್ರಾಕ್ಷಿ,ಬರ್ಕಬಾಳೆ,ದೇವದಾರು,ಏಕನಾಯಕ ʼ ದಾರುಹರಿದ್ರ ಸೇರಿದಂತೆ ಅನೇಕ ವನಗಳನ್ನು ಸೃಷ್ಟಿಸಿರುವ ಗಣಪತಿ ಬೇರೆ,ಬೇರೆ ಕಾಲ, ಪ್ರದೇಶ, ವಾತಾವರಣದಲ್ಲಿ ಹೂ,ಹಣ್ಣುಬಿಡುವ ಮರಗಳು ಉದುರಿಸುವ ಬೀಜ ಬೇರೆ ಬೇರೆ ಕಾಲದಲ್ಲಿ ಸಸಿಗಳಾಗುತ್ತವೆ. ಕೆಲವು ಪ್ರಭೇದಗಳಿಗೆ ನೀರಿನಲ್ಲಿ ಕೊಳೆಸಿ ನಂತರ ಮೊಳಕೆ ತರಿಸಬೇಕಾಗುತ್ತದೆ. ನೆಲ್ಲಿ ಗಣಪೇಕಾಯಿ ಯಂಥ ಕೆಲವು ಸಸ್ಯಗಳಿಗೆ ಈ ಸಂಸ್ಕಾರವಿಲ್ಲದೆ ಅವುಗಳ ಸಂತತಿ ಬೆಳೆಯುವುದಿಲ್ಲ. ಇಂಥ ಸಸ್ಯಗಳು ಈಗ ನಾಶವಾಗುತ್ತಿವೆ. ನಮ್ಮ ಬಾಲ್ಯದಲ್ಲಿ ಕಂಡು ತಂದು ತಿಂದ ಹಣ್ಣುಗಳುನಮ್ಮ ಮುಂದಿನ ಪೀಳಿಗೆಗೂ ಸಿಗಬೇಕೆಂಬ ಆಸೆಯಿಂದ ಈ ಕೆಲಸವನ್ನು ನಿಸ್ವಾರ್ಥದಿಂದ ಮಾಡುತ್ತೇನೆ ಎನ್ನುತ್ತಾರೆ.

