
ಶೋಭಾ ಕರಂದ್ಲಾಜೆ, ಪ್ರತಾಪ್ ಸಿಂಹ ಮತ್ತು ಅನಂತ್ ಕುಮಾರ್ ಹೆಗಡೆ ಸೇರಿದಂತೆ ತನ್ನ ೩೮ ನಾಯಕರನ್ನು ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದಿರುವವರೆಂದು ಬಿಜೆಪಿ ಗುರುತಿಸಿದೆ ಎಂದು ದೈನಿಕ್ ಭಾಸ್ಕರ್ ವರದಿ ಮಾಡಿವೆ. ಈ ಪೈಕಿ ೨೭ ಚುನಾಯಿತ ನಾಯಕರಿಗೆ ಇಂತಹ ಹೇಳಿಕೆ ನೀಡದಂತೆ ಸೂಚನೆ ನೀಡಲಾಗಿದ್ದು, ಧಾರ್ಮಿಕ ವಿಚಾರಗಳ ಕುರಿತು ಹೇಳಿಕೆ ನೀಡುವ ಮುನ್ನ ಪಕ್ಷದಿಂದ ಅನುಮತಿ ಪಡೆಯುವಂತೆ ಸೂಚಿಸಲಾಗಿದೆ.
ಪ್ರವಾದಿ ಮೊಹಮ್ಮದ್ ಅವರ ಬಗ್ಗೆ ವಿವಾದಾತ್ಮಕ ಹೇಳಿಕೆಗಳನ್ನು ನೀಡಿದ್ದ ಬಿಜೆಪಿ ರಾಷ್ಟ್ರೀಯ ವಕ್ತಾರೆ ನೂಪುರ್ ಶರ್ಮಾ ಮತ್ತು ದೆಹಲಿ ಬಿಜೆಪಿ ಮಾಧ್ಯಮ ಮುಖ್ಯಸ್ಥ ನವೀನ್ ಕುಮಾರ್ ಅವರ ವಿರುದ್ಧ ಕ್ರಮ ಕೈಗೊಂಡ ಅನಂತರ ಪಕ್ಷವು ಈ ಬಗ್ಗೆ ಕಾರ್ಯಪ್ರವೃತ್ತವಾಗಿದೆ.
ಕಳೆದ ೮ ವರ್ಷಗಳಿಂದ (ಸೆಪ್ಟೆಂಬರ್ ೨೦೧೪ ರಿಂದ ಮೇ ೩, ೨೦೨೨ ರವರೆಗೆ) ನಾಯಕರ ಹೇಳಿಕೆಗಳನ್ನು ಐಟಿ ತಜ್ಞರ ಸಹಾಯದಿಂದ ಕೂಲಂಕಷವಾಗಿ ಪರಿಶೀಲಿಸಲಾಗಿದ್ದು, ಸುಮಾರು ೫,೨೦೦ ಹೇಳಿಕೆಗಳು ಅನಗತ್ಯವೆಂದು ಕಂಡುಬಂದಿದೆ. ೨,೭೦೦ ಹೇಳಿಕೆಗಳ ಪದಗಳು ಸೂಕ್ಷ್ಮವಾಗಿರುವುದು ಕಂಡುಬಂದಿದೆ. ೩೮ ನಾಯಕರ ಹೇಳಿಕೆಗಳನ್ನು ಧಾರ್ಮಿಕ ನಂಬಿಕೆಗಳಿಗೆ ನೋವುಂಟು ಮಾಡುವ ವರ್ಗದಲ್ಲಿ ಇರಿಸಲಾಗಿದೆ.
ಆಕರ : ನಾನು ಗೌರಿ.ಕಾಂ ೮.೬.೨೦೨೨

