

ಪಶ್ಚಿಮ ಶಿಕ್ಷಕ ಮತದಾರರ ವಿಧಾನಪರಿಷತ್ ಚುನಾವಣೆಯ ನೀತಿಸಂಹಿತೆ ನಡುವೆ ಶಿರಸಿ-ಸಿದ್ದಾಪುರಗಳ ಶಾಲಾ-ಕಾಲೇಜು ಶಿಕ್ಷಕರು ಬಿ.ಜೆ.ಪಿ. ಅಭ್ಯರ್ಥಿ ಬಸವರಾಜ್ ಹೊರಟ್ಟಿಯವರ ಚುನಾವಣಾ ಪ್ರಚಾರದ ಸಂವಾದ ಸಭೆಯಲ್ಲಿ ಪಾಲ್ಗೊಂಡು ಮಾದರಿ ನೀತಿ ಸಂಹಿತೆ ಉಲ್ಲಂಘಿಸಿರುವ ಪ್ರಕರಣ ನಡೆದಿದೆ.

ಜೂನ್‌೧೩ ರಂದು ನಡೆಯಲಿರುವ ಚುನಾವಣೆಯ ಪ್ರಚಾರದ ಸಭೆಗಳು ಇಂದು ಶಿರಸಿ-ಸಿದ್ದಾಪುರಗಳಲ್ಲಿ ನಡೆದವು. ಮುಂಜಾನೆ ಹತ್ತು ಗಂಟೆಯ ಸಮಯಕ್ಕೆ ಸಿದ್ಧಾಪುರ ಹಾಳದಕಟ್ಟಾ ಶಾಲೆ ಕಾಲೇಜುಗಳಿಗೆ ಭೇಟಿ ನೀಡಿದ ನಿಕಟಪೂರ್ವ ವಿಧಾನಪರಿಷತ್ ಸಭಾಪತಿ ಹೊರಟ್ಟಿ ಮತಯಾಚನೆ ಮಾಡಿದರು. ನಂತರ ಸಿದ್ದಾಪುರ ಎಂಜಿಸಿ ಕಾಲೇಜಿನಲ್ಲಿ ನೂರಾರು ಶಿಕ್ಷಕರನ್ನು ಸೇರಿಸಿ ಚುನಾವಣಾ ಪ್ರಚಾರದ ಸಂವಾದ ಸಭೆಯನ್ನು ನಡೆಸಲಾಯಿತು. ಎರಡು ತಾಸುಗಳಿಗೂ ಹೆಚ್ಚು ಸಮಯ ನಡೆದ ಈ ಪ್ರಚಾರ ಸಭೆಗೆ ಸಿದ್ದಾಪುರ ತಾಲೂಕಿನ ಗ್ರಾಮೀಣ ಭಾಗದಿಂದ ಬಂದ ನೂರಾರು ಶಿಕ್ಷಕರು ಸೇರಿ ಸಭೆ, ಸಂವಾದ ನಡೆಸಿದರು. ಇದೇ ರೀತಿ ಶಿರಸಿಯಲ್ಲಿ ಕೂಡಾ ಬಸವರಾಜ್ ಹೊರಟ್ಟಿ ಶಿಕ್ಷಕರ ಸಭೆ-ಸಂವಾದ ನಡೆಸಿರುವ ಮಾಹಿತಿ ಬಂದಿದೆ.
ಬೆಳಗಾವಿ ಪ್ರಾದೇಶಿಕ ಕಾರ್ಯಾಲಯದಿಂದ ಮತ ಯಾಚನೆಯ ಅನುಮತಿ ಪತ್ರ ಪಡೆದಿದ್ದ ಬಸವರಾಜ್ ಹೊರಟ್ಟಿ ಸಭೆ-ಸಂವಾದ ಕಾರ್ಯಕ್ರಮಗಳಿಗೆ ಪರವಾನಗಿ ಪಡೆದಿರಲಿಲ್ಲ. ಈ ಚುನಾವಣಾ ಪ್ರಚಾರ ಸಭೆಯ ಚತ್ರೀಕರಣ ಮಾಡಿದ ತಾಲೂಕಾ ಚುನಾವಣಾತಂಡ ಶಿಕ್ಷಕರು, ಅಭ್ಯರ್ಥಿ ಚುನಾವಣೆ ನೀತಿ ಸಂಹಿತೆ ಉಲ್ಲಂಘಿಸಿದ ಬಗ್ಗೆ ಕ್ರಮ ಜರುಗಿಸಿದ ಮಾಹಿತಿ ಇಲ್ಲ.

ಇತ್ತೀಚೆಗೆ ಬಿ.ಜೆ.ಪಿ. ಸೇರಿ ಪಶ್ಚಿಮ ಶಿಕ್ಷಕರ ಕ್ಷೇತ್ರದ ಅಭ್ಯರ್ಥಿಯಾಗಿರುವ ಬಸವರಾಜ್ ಹೊರಟ್ಟಿ ಸ್ಥಳಿಯ ಜೆ.ಡಿ.ಎಸ್. ಮುಖಂಡ ಶಶಿಭೂಷಣ ಹೆಗಡೆಯವರ ಕಾಲೇಜಿನ ಆವರಣದಲ್ಲಿ ಪ್ರಚಾರ ನಡೆಸಿ ಚುನಾವಣಾ ನೀತಿ ಸಂಹಿತೆ ಉಲ್ಲಂಘಿಸಿರುವ ಬಗ್ಗೆ ಆಕ್ಷೇಪಗಳಿದ್ದು ಬಿ.ಜೆ.ಪಿ. ಅಭ್ಯರ್ಥಿ ಜೆ.ಡಿ.ಎಸ್. ಮುಖಂಡರ ನೇತೃತ್ವದ ಸಂಸ್ಥೆಯಲ್ಲಿ ಸ್ಥಳಾವಕಅಶ ಪಡೆದು ಕಾರ್ಯಕ್ರಮ ಮಾಡಿ ಚುನಾವಣಾ ನೀತಿ ಸಂಹಿತೆ ಉಲ್ಲಂಘಿಸುತ್ತಾರೆಂದರೆ ಅದರ ಹಿಂದಿನ ಹೊಂದಾಣಿಕೆ ಏನು? ಎನ್ನುವ ಪ್ರಶ್ನೆ ಎದ್ದಿದೆ.
ಚುನಾವಣೆ ನೀತಿ ಸಂಹಿತೆ ಸಮಯದಲ್ಲಿ ಶಾಲಾ ಅವಧಿಯಲ್ಲಿ ಶಿಕ್ಷಕರು ಚುನಾವಣಾ ಪ್ರಚಾರ ಸಭೆಯಲ್ಲಿ ಭಾಗವಹಿಸುವಂತಿಲ್ಲ ಆದರೆ ಕೆಲವು ಅನುದಾನಿತ ಸಂಸ್ಥೆಗಳ ಶಿಕ್ಷಕರು, ಉಪನ್ಯಾಸಕರು ಹೊರಟ್ಟಯವರ ಚುನಾವಣಾ ಪ್ರಚಾರ ಸಭೆಯಲ್ಲಿ ಪಾಲ್ಗೊಂಡು ನೀತಿ ಸಂಹಿತೆ ಉಲ್ಲಂಘಿಸಿರುವ ಬಗ್ಗೆ ಇಲಾಖೆಯಿಂದ ಶಿಸ್ತು ಕ್ರಮವಾಗುವ ಬಗ್ಗೆ ಮಾಹಿತಿ ಲಭಿಸಿದೆ.
