

ಸಿದ್ದಾಪುರ: ಸ್ವಾತಂತ್ರ್ಯ ಅಮೃತ ಮಹೋತ್ಸವದ ಹಿನ್ನೆಲೆಯಲ್ಲಿ
ಅಮೃತ ಭಾರತಿಗೆ ಕನ್ನಡದಾರತಿ ಅಭಿಯಾನದಡಿಯಲ್ಲಿ ಸ್ವಾತಂತ್ರ್ಯ ಹೋರಾಟದ ಗಟ್ಟಿ ನೆಲವಾದ ಸಿದ್ದಾಪುರ ತಾಲೂಕು ಆಯ್ಕೆಯಾಗಿದ್ದು, ಜೂನ್ ೨೫ ರಂದು ಪಟ್ಟಣದ ಶಂಕರಮಠದಲ್ಲಿ ಅದ್ಧೂರಿ ಕಾರ್ಯಕ್ರಮ ಆಯೋಜಿಸಲಾಗಿದೆ.
ಈ ಕುರಿತು ತಾಲೂಕಾ ಆಡಳಿತ ಸೌಧದಲ್ಲಿ ಶಿರಸಿ ಉಪವಿಭಾಗಾಧಿಕಾರಿ ದೇವರಾಜ ಆರ್ ಪೂರ್ವಭಾವಿ ಸಭೆ ನಡೆಸಿ ಮಾತನಾಡಿ, ಸ್ವಾತಂತ್ರ್ಯ ಹೋರಾಟದಲ್ಲಿ ಅತಿ ಹೆಚ್ಚು ಜನರು ಪಾಲ್ಗೊಂಡ ಜಿಲ್ಲೆಯ ಸಿದ್ದಾಪುರ, ಅಂಕೋಲಾ ಹಾಗೂ ಜಿಲ್ಲಾ ಕೇಂದ್ರವಾಗಿರುವ ಕಾರವಾರವನ್ನು ಆಯ್ಕೆ ಮಾಡಲಾಗಿದೆ. ಜೂನ್ ೨೫ ರಂದು ಸಿದ್ದಾಪುರದಲ್ಲಿ ಒಂದು ದಿನದ ಕಾರ್ಯಕ್ರಮ ನಡೆಯಲಿದೆ. ಬೆಳಿಗ್ಗೆ ೯.೩೦ಕ್ಕೆ ಪಟ್ಟಣದ ಚಂದ್ರಘಟಗಿ ಪಟಾಂಗಣದಿಂದ ಮೆರವಣಿಗೆ ಆರಂಭವಾಗಲಿದೆ. ಸ್ವಾತಂತ್ರ್ಯ ಹೋರಾಟ ಬಿಂಬಿಸುವ ಸ್ತಬ್ಧಚಿತ್ರ, ಕಲಾ ತಂಡಗಳ ಪ್ರದರ್ಶನ ಮೆರವಣಿಗೆಯಲ್ಲಿ ಪಾಲ್ಗೊಂಡು ಪಟ್ಟಣದ ವಿವಿದೆಡೆ ಸಂಚರಿಸಿ ಸಭಾ ಕಾರ್ಯಕ್ರಮ ನಡೆಯಲಿರುವ ಶಂಕರಮಠಕ್ಕೆ ತಲುಪಲಿದೆ.
ಸಭಾ ಕಾರ್ಯಕ್ರಮದಲ್ಲಿ ಸ್ವಾತಂತ್ರ್ಯ ಹೋರಾಟ ಬಿಂಬಿಸುವ ಕಿರುಚಿತ್ರ, ನಾಟಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ. ಇದೇ ವೇಳೆ ಅಮೃತ ಭಾರತಿಗೆ ಕನ್ನಡದಾರತಿ ಎಂಬ ಶಿಲಾಫಲಕ ಅನಾವರಣಗೊಳಿಸಲಾಗುವುದು ಎಂದರು.
ಈ ವೇಳೆ ತಹಶೀಲ್ದಾರ ಸಂತೋಷ ಭಂಡಾರಿ, ತಾಲೂಕಾ ಪಂಚಾಯ್ತಿ ಇಓ ಪ್ರಶಾಂತ ರಾವ್
ಕನ್ನಡ ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ನರೇಂದ್ರ ನಾಯ್ಕ ಉಪಸ್ಥಿತರಿದ್ದರು.

