


ನದಿ ನೀರು ಜೋಡಣೆ ಹೆಸರಿನಲ್ಲಿ ಉತ್ತರಕನ್ನಡ ಜಿಲ್ಲೆಯ ನದಿಯ ನೀರನ್ನು ತುಂಗಭದ್ರಾ ನದಿ ಕಾಲುವೆಗಳಿಗೆ ಹರಿಸುವ ಸರ್ಕಾರದ ಪ್ರಸ್ತಾಪಕ್ಕೆ ವಿರೋಧ ವ್ಯಕ್ತವಾಗಿದೆ..

ಶಿರಸಿ (ಉತ್ತರಕನ್ನಡ) : ಉತ್ತರಕನ್ನಡ ಜಿಲ್ಲೆಯ ಯಲ್ಲಾಪುರ ತಾಲೂಕಿನ ಬೇಡ್ತಿ ನದಿ ನೀರು ಹಾಗೂ ಶಿರಸಿಯ ಹೊಳೆ ನೀರನ್ನು ವರದಾ ನದಿಗೆ ಜೋಡಿಸಿ ಅದನ್ನು ಪಂಪ್ ಮಾಡಿ ತುಂಗಭದ್ರಾ ನದಿಯ ಎಡದಂಡೆ ಕಾಲುವೆ ಪ್ರದೇಶಗಳಿಗೆ ಹರಿಸುವ ಯೋಜನೆಗೆ ಭಾರೀ ವಿರೋಧ ವ್ಯಕ್ತವಾಗಿದೆ. ಸ್ವರ್ಣವಲ್ಲಿ ಸ್ವಾಮೀಜಿ ನೇತೃತ್ವದಲ್ಲಿ ಜನಾಂದೋಲನ ನಡೆಸಲು ನಿರ್ಧರಿಸಲಾಗಿದೆ.
ಎತ್ತಿನಹೊಳೆ ಯೋಜನೆ ಕೈಗೊಂಡು ಹಲವು ವರ್ಷಗಳೇ ಕಳೆದರೂ ಒಂದು ಹನಿ ನೀರನ್ನೂ ಹರಿಸಲು ಸಾಧ್ಯವಾಗದಿರುವಾಗ ಅದೇ ರೀತಿಯ ಯೋಜನೆ ತಂದು ಇಲ್ಲಿನ ನಿಸರ್ಗಕ್ಕೂ ಹೊಡೆತ ನೀಡುವುದಕ್ಕೆ ಪಶ್ಚಿಮಘಟ್ಟದ ಜನರಿಂದ ವಿರೋಧ ವ್ಯಕ್ತವಾಗಿದೆ. ಇದರಿಂದ ಜನಾಂದೋಲನದ ಮೂಲಕ ಶಿರಸಿಯ ಸೋಂದಾ ಸ್ವರ್ಣವಲ್ಲೀ ಸ್ವಾಮೀಜಿಯವರ ನೇತೃತ್ವದಲ್ಲಿ ವಿರೋಧಿಸಬೇಕು ಎಂಬ ನಿರ್ಧಾರಕ್ಕೆ ಬರಲಾಗಿದೆ.
ನದಿ ತಿರುವು ಜೋಡಣೆ ಹೆಸರಿನಲ್ಲಿ ರೂಪಿಸಿರುವ ಯೋಜನೆಯನ್ನು ತರಲು ಸರ್ಕಾರ ತಯಾರಿ ನಡೆಸಿದ್ದು, ಸ್ವಾಮೀಜಿಗಳು ಸೇರಿದಂತೆ ಜಿಲ್ಲೆಯ ಪರಿಸರವಾದಿಗಳು, ಪ್ರಮುಖರಿಂದ ತೀವ್ರ ವಿರೋಧ ವ್ಯಕ್ತವಾಗಿದೆ. ಎತ್ತಿನಹೊಳೆ ರೀತಿ ಇದು ಕೂಡ ಹಣ ಮಾಡುವ ಯೋಜನೆಯಾಗಿದೆ ಎಂಬ ಆಕ್ರೋಶ ವ್ಯಕ್ತವಾಗುತ್ತಿದೆ.
ಈ ಹಿಂದೆ ನದಿ ಜೋಡಣೆಯ ಯೋಜನೆಗೆ ಸಂಬಂಧಿಸಿ ಸಮೀಕ್ಷೆ ನಡೆಸಲು ಇಲ್ಲಿನ ಕೊಳ್ಳ ಸಂರಕ್ಷಣಾ ಸಮಿತಿ ಅವಕಾಶ ನೀಡಿರಲಿಲ್ಲ. 22 ಮೆಗಾ ವ್ಯಾಟ್ ನೀರನ್ನು ಬೇಡ್ತಿ ವರದಾ ನದಿಯಿಂದ ಕೊಂಡೊಯ್ಯುವ ಪ್ರಸ್ತಾಪ ಇರಿಸಲಾಗಿದೆ. ಬೇಡ್ತಿಯಿಂದ ವರದಾ, ಧರ್ಮಾ ಜಲಾಶಯಕ್ಕೆ ನೀರು ಹರಿಸುವ ಯೋಜನೆಯಿದೆ. ಯೋಜನೆಗೆ ಸಂಬಂಧಿಸಿ ಪೂರ್ಣ ಮಾಹಿತಿಯುಳ್ಳ ಡಿಪಿಆರ್ (ವಿಸ್ತ್ರತ ಯೋಜನಾ ವರದಿ) ತಯಾರಿಸಿಲ್ಲ. ಇದು ಸಂಪೂರ್ಣ ಸುಳ್ಳಿನಿಂದ ಕೂಡಿದ ಯೋಜನೆಯಾಗಿದ್ದು, ಇದರ ಅಗತ್ಯತೆ ಇಲ್ಲ ಎಂಬುದು ಸ್ಥಳೀಯರ ವಾದವಾಗಿದೆ.
ಯೋಜನೆ ಅನುಷ್ಠಾನಕ್ಕೆ ಈಗಾಗಲೇ ಸಾಕಷ್ಟು ವಿರೋಧ ವ್ಯಕ್ತವಾಗಿದೆ. ಯಲ್ಲಾಪುರದ ಮಂಚಿಕೇರಿಯಲ್ಲಿ ಯೋಜನೆ ವಿರುದ್ಧ ಬೃಹತ್ ಸಮಾವೇಶ ನಡೆಸಿ ನಿರ್ಣಯ ಕೈಗೊಳ್ಳಲಾಗಿದೆ. ಅಲ್ಲದೇ ಸರ್ಕಾರದ ಭಾಗವಾಗಿರುವ ಸಚಿವ ಶಿವರಾಮ ಹೆಬ್ಬಾರ್ ಮತ್ತು ಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು ಪ್ರತಿನಿಧಿಸುವ ಕ್ಷೇತ್ರ ಇದಾಗಿದ್ದು, ಯಾವ ಕಾರಣಕ್ಕೂ ಯೋಜನೆ ಅನುಷ್ಠಾನಕ್ಕೆ ಬಾರದಂತೆ ತಡೆಯಲು ಸರ್ಕಾರ ಮಟ್ಟದಲ್ಲಿ ಪ್ರಯತ್ನಿಸಬೇಕು ಎಂಬ ಆಗ್ರಹ ವ್ಯಕ್ತವಾಗಿದೆ. (ಈಟಿಬಿಕೆ)
_______________________________________________________________
ಮಾನ್ಯರೆ, ನಮ್ಮ ಮಾಧ್ಯಮ ಕ್ಷೇತ್ರದ ಸಮಾಜಮುಖಿ ನಡೆ ಈಗ ಕಾಲು ಶತಮಾನ ದಾಟಿದೆ. ಈ ಪಯಣದಲ್ಲಿ samajamukhi.net ನ್ಯೂಸ್ ಪೋರ್ಟಲ್ samaajamukhi & samajamukhinews ಯೂಟ್ಯೂಬ್ ಚಾನೆಲ್ ಗಳು ಹಾಗೂ ಸಮಾಜಮುಖಿ & samaajamukhi.net ಫೇಸ್ಬುಕ್ ಪೇಜ್ ಗಳು ಸೇರಿವೆ. ಈ ಎಲ್ಲಾ ಘಟಕಗಳ ನಿರ್ವಹಣೆ & ನಿರಂತರತೆಗೆ ನಿಮ್ಮ ಸಹಕಾರ ಮುಖ್ಯ. ನಮ್ಮ ಸುದ್ದಿ, ವಿಡಿಯೋ, ಸ್ಟೋರಿ ಗಳನ್ನು like, share ಹಾಗೂ subscribe ಮಾಡಿ ಸಹಕರಿಸುತ್ತಾ ನಮ್ಮ ಈ ಮಾಧ್ಯಮ ಸಮೂಹದ ಸಿದ್ಧಾಪುರ ಕೆನರಾ ಬ್ಯಾಂಕ್ ಖಾತೆ samajamukhi 03082200081658 ಅಕೌಂಟ್‌ಗೆ ಮತ್ತು ನಮ್ಮ gpay & phone pay Acc No 9740598884 ಗೆ ಆರ್ಥಿಕ ನೆರವು ನೀಡುತ್ತಾ ನಮ್ಮ ಜೊತೆಯಾಗಲು ಕಳಕಳಿಯ ವಿನಂತಿ…….. ಇಂತಿ ನಿಮ್ಮ Kannesh Kolsirsi
_______________________________________________________________
