

ಕಾಂಗ್ರೆಸ್ ಗೆ ದೇಶದಲ್ಲಿ ಸ್ವಾತಂತ್ರ್ಯ ಹೋರಾಟದ ಹಿನ್ನೆಲೆ,ಚರಿತ್ರೆಗಳ ಮಹತ್ವವಿದೆಯೋ ಹಾಗೆಯೇ ಉತ್ತರ ಕನ್ನಡದಲ್ಲಿ ಕಾಂಗ್ರೆಸ್ ಗೆ ತನ್ನದೇ ಆದ ಮಹತ್ವ-ಪ್ರಾಮುಖ್ಯತೆಗಳಿವೆ. ದೇಶದಲ್ಲಿ ಸ್ವಾತಂತ್ರ್ಯಾ ನಂತರ ಅಂದಿನ ಜಮೀನ್ಧಾರರು, ಶ್ರೀಮಂತರು,ಶಿಕ್ಷಿತರು ಹೇಗೆ ನಾಯಕರಾದರೋ ಹಾಗೆಯೇ ಉತ್ತರ ಕನ್ನಡ ಜಿಲ್ಲೆಯಲ್ಲಿ ಸ್ವಾತಂತ್ರ್ಯ ಹೋರಾಟ, ಶ್ರೀಮಂತಿಕೆ,ಜಾತಿ,ನಾಯಕತ್ವಗಳ ಹಿನ್ನೆಲೆಯಲ್ಲಿ ಬಾಳಿಗಾ,ರಾಮಕೃಷ್ಣ ಹೆಗಡೆ ಸೇರಿದಂತೆ ಅನೇಕರ ನಾಯಕತ್ವವಿತ್ತು.
ಆದರೆ ಬರಬರುತ್ತಾ ಕಾಂಗ್ರೆಸ್ ಮೇಲ್ವರ್ಗದ ನಾಯಕರ ಭಾರದಿಂದ ಕುಸಿಯುವ ಅಪಾಯದ ಸಂದರ್ಭದಲ್ಲಿ ನೆಹರೂ ಕಾಂಗ್ರೆಸ್ ಗೆ ಸಮಾಜವಾದದ ಕಸಿ ಮಾಡಿ ಕಾಂಗ್ರೆಸ್ ನ ಭವಿಷ್ಯ ಫಲವಂತಿಕೆಯನ್ನು ಹೆಚ್ಚಿಸಿದರು. ನಂತರ ಕಾಂಗ್ರೆಸ್ ಮುಖಂಡರಾದ ಇಂದಿರಾಗಾಂಧಿ ಭೂಸುಧಾರಣೆ ಮಸೂದೆ ಜಾರಿ ಮಾಡಿ ಶ್ರೀಮಂತರು, ಪಟ್ಟಭದ್ರರ ವಿರೋಧ ಕಟ್ಟಿಕೊಂಡರು. ( ಮೇಲ್ಜಾತಿ, ಮೇಲ್ವರ್ಗಗಳು ಕಾಂಗ್ರೆಸ್ ದ್ವೇಶಿಸುವ ಹಿಂದೆ ಇಂಥ ಅನೇಕ ಕಾರಣಗಳಿವೆ.)
ಆ ಅವಧಿಯಿಂದ ಕಾಂಗ್ರೆಸ್ ನಲ್ಲಿರುವ ಮೇಲ್ಜಾತಿ ಮನಸ್ಥಿತಿಯ ಪಟ್ಟಭದ್ರರು,ಮೇಲ್ವರ್ಗದ ನಾಯಕರು ಸಮಾಜವಾದಿಯಾಗಿದ್ದ ಕಾಂಗ್ರೆಸ್ ಪಕ್ಷವನ್ನು ಸಿದ್ಧಾಂತವನ್ನು ಕೋಮುವಾದಿ ಮಾಡಲು ಪ್ರಯತ್ನಿಸಿ ಕಾಂಗ್ರೆಸ್ ಗೇ ಕೈ ಕೊಟ್ಟಿವೆ. ಈಗಲೂ ಕಾಂಗ್ರೆಸ್ ನಲ್ಲಿರುವ ಮೃಧು ಹಿಂದುತ್ವವಾದಿ ನಯವಂಚಕರು ಮತೀಯವಾದಿ ಅಜೆಂಡಾ ಒಪ್ಪುತ್ತಲೇ ಕಾಂಗ್ರೆಸ್ ಬುಡ ಅಲುಗಾಡಿಸುತ್ತಿವೆ.
ಈ ವರ್ತಮಾನದ ನಡುವೆ ಹಿಂದೆ ಸಾಂಪ್ರದಾಯಿಕ ಕಾಂಗ್ರೆಸ್ ಗೆ ವಿರುದ್ಧವಾಗಿ ಉತ್ತರ ಕನ್ನಡ ಜಿಲ್ಲೆಯ ರಾಜಕೀಯವನ್ನು ಬುಗುರಿಯಂತೆ ತಿರಿಗಿಸುತಿದ್ದ ಸಾರೆಕೊಪ್ಪ ಬಂಗಾರಪ್ಪ ಮೇಲ್ವರ್ಗದ ಜಮೀನ್ಧಾರಿಶಾಹಿ ಕಾಂಗ್ರೆಸ್ ನಾಯಕತ್ವದ ವಿರುದ್ಧ ಸಿಟ್ಟಾಗುತಿದ್ದರು. ಬಹುಸಂಖ್ಯಾತರಿಗೆ ಅಧಿಕಾರ ವಂಚಿಸಿ ಉಳ್ಳವರಿಗೆ ಅಧಿಕಾರ ನೀಡುವ ಉತ್ತರ ಕನ್ನಡ ಜಿಲ್ಲೆಯ ಕಾಂಗ್ರೆಸ್ ಪಟ್ಟಭದ್ರರ ರಾಜಕೀಯ ರಾಷ್ಟ್ರಮಟ್ಟದಲ್ಲಿ ಬೆಳೆಯತೊಡಗಿದಾಗ ಉತ್ತರ ಕನ್ನಡಕ್ಕೆ ಎಂಟ್ರಿಕೊಟ್ಟವರು ಮಾರ್ಗರೇಟ್ ಆಳ್ವ,
ಆಳ್ವ ಉತ್ತರ ಕನ್ನಡ ಕಾಂಗ್ರೆಸ್ ನೇತೃತ್ವದ ಪಾಲು ಕೇಳುವ ಮೊದಲೇ ಮಾರ್ಗರೇಟ್ ಮಾವ ಜೋಂಕಿಂ ಆಳ್ವ ಅಂದಿನ ಕನ್ನಡ ಜಿಲ್ಲೆಯ ಸಂಸದರಾಗಿದ್ದರು ಎನ್ನುವುದನ್ನು ಬಿಟ್ಟರೆ ಆಳ್ವ ಉತ್ತರ ಕನ್ನಡ ಪ್ರವೇಶಿಸಲು ಪ್ರಮುಖ ಕಾರಣ ದೇವರಾಯ ನಾಯ್ಕ!
ಆಗತಾನೇ ಚುನಾವಣೆಯ ರೀತಿ-ನೀತಿ ಬದಲಾಗುತ್ತಾ ರಾಜಕೀಯ ದುಬಾರಿ ಎನಿಸತೊಡಗಿದಾಗ ದೇವರಾಯ ನಾಯ್ಕ ಉತ್ತರ ಕನ್ನಡದಿಂದ ಕಾಂಗ್ರೆಸ್ ನಿಂದ ಸಂಸತ್ ಚುನಾವಣೆ ಎದುರಿಸಲು ಹಿಂದೇಟು ಹಾಕಿದರು. ಈ ಸಮಯಕ್ಕೆ ಸರಿಯಾಗಿ ಜನತಾಪರಿವಾರದಲ್ಲಿದ್ದ ಆರ್. ವಿ. ದೇಶಪಾಂಡೆ ಕಾಂಗ್ರೆಸ್ ಗೆ ಮರಳಿದ್ದರು. ಹಳೆ ಕಾಂಗ್ರೆಸ್ಸಿಗರು, ದೇಶಪಾಂಡೆಯವರ ವಲಸೆ ಜನತಾ ಪರಿವಾರ, ಇವರ ಮಧ್ಯೆ ಮಾರ್ಗರೇಟ್ ಆಳ್ವರ ಪ್ರಭಾವಿ ರಾಜಕಾರಣ,
ಇವರ ಹಗ್ಗ ಜಗ್ಗಾಟದಲ್ಲಿ ಬಲಿಪಶುವಾಗಿದ್ದು ಉತ್ತರ ಕನ್ನಡ ಜಿಲ್ಲೆಯ ಬಹುಸಂಖ್ಯಾತರ ರಾಜಕಾರಣ ಇದರ ಲಾಭ ಪಡೆದವರು ಮತಾಂಧ ಪರಿವಾರದ ಸೋಗಲಾಡಿಗಳು. ಉತ್ತರ ಕನ್ನಡ ಜಿಲ್ಲೆಯ ಇತ್ತೀಚಿನ ಕಾಲುಶತಮಾನದ ರಾಜಕಾರಣದಲ್ಲಿ ಅನಾಯಾಸ ಲಾಭ ಪಡೆದವರು ವಿಶ್ವೇಶ್ವರ ಹೆಗಡೆ ಕಾಗೇರಿ, ಅನಂತಕುಮಾರ್ ಹೆಗಡೆ ಮತ್ತು ಆರ್.ವಿ.ದೇಶಪಾಂಡೆ ಇದೇ ಮೇಲ್ಜಾತಿ ರಾಜಕಾರಣದ ಒಳ ಒಪ್ಪಂದ ಕಾಂಗ್ರೆಸ್ ವಿಘಟನೆಗೂ ಕಾರಣವಾಯಿತು. ಜಿಲ್ಲೆಯ ಮೂಲನಿವಾಸಿ ಬಹುಸಂಖ್ಯಾತರ ನಾಯಕತ್ವಕ್ಕೂ ಕೊಡಲಿ ಏಟು ಕೊಟ್ಟಿತು. ಈಗ ಅಪಾಯದ ಹಂತಕ್ಕೆ ಬಂದು ಮುಟ್ಟಿರುವ ಕಾಂಗ್ರೆಸ್ ನಲ್ಲಿ ಯಾವ, ಯಾರ ಮೇಲಾಟ ನಡೆಯುತ್ತಿದೆ ಎನ್ನುವುದೇ ಮುಂದಿನ ಕಂತಿನ ಹೂರಣ……
